ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ರಾಮ ಮಂದಿರದ ಸಮ್ಮೋಹನ, ಜ್ವಲಂತ ಸಮಸ್ಯೆಗಳು ಗೌಣ: ಡಾ. ಪರಕಾಲ ಪ್ರಭಾಕರ್

Published 27 ಜನವರಿ 2024, 23:30 IST
Last Updated 27 ಜನವರಿ 2024, 23:30 IST
ಅಕ್ಷರ ಗಾತ್ರ

ಡಾ.ಪರಕಾಲ ಪ್ರಭಾಕರ್ ರಾಜಕೀಯ ಅರ್ಥಶಾಸ್ತ್ರಜ್ಞ, ರಾಜಕಾರಣಿ ಹಾಗೂ ರಾಜಕೀಯ ವ್ಯಾಖ್ಯಾನಕಾರ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿಯೂ ಆಗಿರುವ ಅವರು ಬಿಜೆಪಿ ಸರ್ಕಾರದ ನೀತಿ, ಆರ್ಥಿಕತೆ ಮತ್ತು ರಾಜಕೀಯವನ್ನು ನಿರಂತರವಾಗಿ ಟೀಕಿಸುತ್ತಾ ಬಂದಿದ್ದಾರೆ. ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಮನಗರ ಜಿಲ್ಲೆಯ ಮಾಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಂದಿದ್ದ ಅವರು, ‘ಭಾನುವಾರ ಪುರವಣಿ’ ಜೊತೆ ದೇಶದ ರಾಜಕೀಯ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅದರ ಆಯ್ದ ಭಾಗ ಇಲ್ಲಿದೆ.

ಪ್ರ

ರಾಮ ಮಂದಿರ ಉದ್ಘಾಟನೆ ಸುತ್ತಲಿನ ಚುನಾವಣಾ ರಾಜಕಾರಣವನ್ನು ಹೇಗೆ ವಿಶ್ಲೇಷಿಸುತ್ತೀರಿ?

ಲೋಕಸಭಾ ಚುನಾವಣೆಗೆ ಮಂದಿರವೇ ಬಿಜೆಪಿಯ ಅಸ್ತ್ರ. ದೇಶದ ಜ್ವಲಂತ ಸಮಸ್ಯೆಗಳನ್ನು ಗೌಣವಾಗಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಚುನಾವಣೆ ಹೊಸ್ತಿಲಲ್ಲಿ ಮಂದಿರ ಉದ್ಘಾಟನೆ ಮಾಡಿದ್ದಾರೆ. ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಏದುಸಿರು ಬಿಡುತ್ತಿರುವ ಆರ್ಥಿಕತೆ, ಚೀನಾದಿಂದ ಭೂಮಿ ಅತಿಕ್ರಮಣ, ಕಪ್ಪುಹಣ ವಾಪಸ್‌ಗೆ ಕ್ರಮ ಸೇರಿದಂತೆ ದೇಶದ ಸಮಸ್ಯೆಗಳಿಗೆ ಇವರು ಮಾಡಿದ್ದೇನು ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ಹತ್ತು ವರ್ಷಗಳ ಹಿಂದೆ ಭಾರತವು ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಈಗ ಅವರೆಲ್ಲರೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಮತದಾರರು ಬಿಜೆಪಿಯ ಮಂದಿರ ಸಾಧನೆಗೆ ಮಣೆ ಹಾಕುತ್ತಾರೊ ಅಥವಾ ಸಮಸ್ಯೆಗಳ ಕಡೆಗಣನೆಗೆ ಬುದ್ಧಿ ಕಲಿಸುತ್ತಾರೊ ಕಾದು ನೋಡಬೇಕು.

ಪ್ರ

ದೇಶದ ಆರ್ಥಿಕ ಸ್ಥಿತಿ ಯಾವ ಹಾದಿಯಲ್ಲಿದೆ?

ದೇಶದ ಆರ್ಥಿಕ ವ್ಯವಸ್ಥೆ ಕೆಟ್ಟ ಸ್ಥಿತಿಯಲ್ಲಿದೆ. ಆದರೆ, ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಸರ್ಕಾರ ಬಿಂಬಿಸುತ್ತಿದೆ. ದೇಶದಲ್ಲಿ ಶೇ 24ರಷ್ಟು ನಿರುದ್ಯೋಗವಿದೆ. ಅದರಲ್ಲೂ ಯುವಜನರಲ್ಲಿ ಹೆಚ್ಚಾಗಿದೆ. ನೆರೆಯ ಬಾಂಗ್ಲಾದೇಶದಲ್ಲಿ ನಿರುದ್ಯೋಗ ಪ್ರಮಾಣ ಕೇವಲ ಶೇ 12ರಷ್ಟಿದೆ. ಡಾಲರ್ ಎದುರು ನಮ್ಮ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಕೃಷಿ ವಲಯ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ತೈಲ ಬೆಲೆ ಹೆಚ್ಚಾಗಿದ್ದು, ದೇಶಿಯ ಉಳಿತಾಯ ಸಾರ್ವಕಾಲಿಕ ಕುಸಿತ ಕಂಡಿದೆ. ಖಾಸಗಿ ವಲಯದಲ್ಲಿ ಹೂಡಿಕೆ ಪ್ರಮಾಣ ಏಳೆಂಟು ವರ್ಷದಲ್ಲಿ ಶೇ 19ರಷ್ಟು ಇಳಿಕೆಯಾಗಿದೆ. ಕಳೆದ 70 ವರ್ಷಗಳಲ್ಲಿ ₹50 ಲಕ್ಷ ಕೋಟಿ ಇದ್ದ ದೇಶದ ಸಾಲವು, ಕಳೆದ ಹತ್ತು ವರ್ಷಗಳಲ್ಲೇ ₹100 ಲಕ್ಷ ಕೋಟಿ ತಲುಪಿದೆ. ನಿರುದ್ಯೋಗ, ಭ್ರಷ್ಟಾಚಾರ, ಬಡತನ, ಲಿಂಗ ಅಸಮಾನತೆ, ಕಾರ್ಮಿಕರ ಪಾಲ್ಗೊಳ್ಳುವಿಕೆಯ ಅನುಪಾತ ಕುಸಿತ, ಬಿಲಿಯನೇರ್‌ಗಳ ಹೆಚ್ಚಳಕ್ಕೆ ದೇಶ ಸಾಕ್ಷಿಯಾಗಿದೆ. ಆರ್ಥಿಕತೆ ವೃದ್ಧಿಸಬಲ್ಲ ಎಲ್ಲಾ ಕ್ಷೇತ್ರಗಳು ಏದುಸಿರು ಬಿಡುತ್ತಿವೆ. ಈ ಕುರಿತ ನೈಜ ದತ್ತಾಂಶ ಮತ್ತು ಅಂಕಿಅಂಶಗಳನ್ನು ಮರೆಮಾಚುತ್ತಿರುವ ಸರ್ಕಾರ, ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಿ, ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ದೇಶದ ಸುಮಾರು 24 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. 2020–21ರಲ್ಲಿ ಕೋವಿಡ್‌ನಿಂದಾಗಿ ಭಾರತ ಸೇರಿದಂತೆ ಇಡೀ ವಿಶ್ವದ ಆರ್ಥಿಕತೆ ಎರಡು ವರ್ಷ ತೀರಾ ಹದಗೆಟ್ಟಿತ್ತು. ದೇಶದಲ್ಲಿ ಅದಕ್ಕೂ ಮುಂಚೆ ನೋಟು ಅಮಾನ್ಯೀಕರಣದಿಂದಾಗಿ ಆರ್ಥಿಕತೆ ನೆಲ ಕಚ್ಚಿತ್ತು. ಕೃಷಿ, ಅಸಂಘಟಿತ ವಲಯ ಸೇರಿದಂತೆ ಹಲವು ಕ್ಷೇತ್ರಗಳು ಇಂದಿಗೂ ಚೇತರಿಸಿಕೊಂಡಿಲ್ಲ. ಇದರ ನಡುವೆಯೇ ಕೋವಿಡ್ ಎದುರಾಯಿತು. ಇವೆರಡರಿಂದ ತಕ್ಷಣ ಚೇತರಿಸಿಕೊಂಡು ಪ್ರಗತಿಯತ್ತ ದಾಪುಗಾಲು ಹೇಗೆ ಸಾಧ್ಯ? ಸರ್ಕಾರ ಅಂಕಿಅಂಶಗಳನ್ನು ತಿರುಚುತ್ತಿದೆ. ಕೇವಲ ಸಂಘಟಿತ ವಲಯದ ಅಂಕಿಅಂಶಗಳನ್ನು ಇಟ್ಟುಕೊಂಡಿರುವ ಸರ್ಕಾರ, ಅಸಂಘಟಿತ ಮತ್ತು ಗ್ರಾಮೀಣ ವಲಯದ ದತ್ತಾಂಶ ಸಂಗ್ರಹಿಸದೆ ಸುಳ್ಳು ಹೇಳುತ್ತಿದೆ.


ಪ್ರ

ಬಿಜೆಪಿ ಸವಾಲನ್ನು ಇಂಡಿಯಾ ಮೈತ್ರಿಕೂಟ ಎದುರಿಸಬಲ್ಲದೆ?

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2014ರಲ್ಲಿ ಪಡೆದ ಮತ ಪ್ರಮಾಣ ಶೇ 33 ಇದ್ದರೆ, 2019ರಲ್ಲಿ ಶೇ 37ಕ್ಕೆ ಏರಿಕೆಯಾಯಿತು. ಇದಕ್ಕೆ ಅದರ ಮಿತ್ರಪಕ್ಷಗಳ ಕಾಣಿಕೆ ಬಹಳ ಇದೆ. ಎನ್‌ಡಿಎ ವಿರುದ್ಧ ಇಂಡಿಯಾ ಮೈತ್ರಿಕೂಟ ತಲೆ ಎತ್ತಿರುವುದು ಉತ್ತಮ ಬೆಳವಣಿಗೆ. ಅಲ್ಲಿರುವ ಪಕ್ಷಗಳು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಿದರೆ, ಯಶಸ್ಸು ಕಾಣಬಲ್ಲರು.

ಪ್ರ

ಕರ್ನಾಟಕದ ಗ್ಯಾರಂಟಿ ಯೋಜನೆಗಳ ಪರಿಣಾಮ ಕುರಿತು ನಿಮ್ಮ ಅಭಿಪ್ರಾಯವೇನು?

ಕರ್ನಾಟಕದ ಸೋಲು ಬಿಜೆಪಿಗೆ ದಿಗ್ಬ್ರಮೆಯನ್ನುಂಟು ಮಾಡಿದೆ. ಪ್ರಧಾನಿಯೇ ರಾಜ್ಯದಲ್ಲಿ ರೋಡ್ ಶೋ ಮತ್ತು ಸಮಾವೇಶ ನಡೆಸಿದರೂ ಗೆಲ್ಲಲು ಆಗಲಿಲ್ಲ. ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ ಪ್ರಯೋಗಿಸಿದ ಗ್ಯಾರಂಟಿ ಯೋಜನೆಗಳು ಬಿಜೆಪಿಯನ್ನು ವಿಚಲಿತಗೊಳಿಸಿವೆ. ಅದರ ಪರಿಣಾಮವನ್ನು ಬೇಗನೆ ಅರಿತ ಬಿಜೆಪಿ, ಕೇಂದ್ರ ಮತ್ತು ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಗ್ಯಾರಂಟಿ ಅನುಕರಣೆ ಮಾಡತೊಡಗಿದೆ. ಇದಾದ ಬಳಿಕವೇ ಕೇಂದ್ರ ಸರ್ಕಾರ ದೇಶದ 81 ಕೋಟಿ ಜನರಿಗೆ ಉಚಿತ ಆಹಾರ–ಧಾನ್ಯ ವಿತರಣೆಯನ್ನು ವಿಸ್ತರಿಸಿತು. ಜನರ ಅಗತ್ಯಕ್ಕೆ ಸ್ಪಂದಿಸಿದರೆ ಅಧಿಕಾರ ಎಂಬ ಸ್ಪಷ್ಟ ಸಂದೇಶವನ್ನು ಕರ್ನಾಟಕದ ಜನ ಬಿಜೆಪಿಗೆ ಕೊಟ್ಟರು.

ಪ್ರ

ಖಾಸಗೀಕರಣ ಸೃಷ್ಟಿಸುವ ಬಿಕ್ಕಟ್ಟುಗಳೇನು?

ಖಾಸಗೀಕರಣವನ್ನು ಸರ್ಕಾರ ಸುಧಾರಣೆ ಎನ್ನುತ್ತಿದೆ. ಸರ್ಕಾರಿ ವಲಯದ ಸಂಸ್ಥೆಗಳನ್ನು ಮತ್ತು ಆಸ್ತಿಯನ್ನು ಮಾರಾಟ ಮಾಡುವುದು ಸುಧಾರಣೆಯಲ್ಲ. ಬದಲಿಗೆ, ಸುಧಾರಣೆ ಮಾಡುವುದು ಸರ್ಕಾರಕ್ಕೆ ಗೊತ್ತಿಲ್ಲ ಮತ್ತು ಅದಕ್ಕಾಗಿ ಯಾವುದೇ ಯೋಜನೆಗಳಿಲ್ಲ ಎಂಬುದನ್ನು ಸರ್ಕಾರಕ್ಕೆ ಒಪ್ಪಿಕೊಂಡಂತೆ. ಕಡಿಮೆ ಮೊತ್ತಕ್ಕೆ ಈ ಸಂಸ್ಥೆಗಳನ್ನು ಪ್ರಧಾನಿ ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ. ಬಡವರಿಗೆ ಉಚಿತ ಆಹಾರ, 2–3 ಅಡುಗೆ ಅನಿಲ ಸಿಲಿಂಡರ್ ಕೊಟ್ಟಿದ್ದೇವೆ ಎಂದು ಹೇಳುತ್ತಲೇ, ಮತ್ತೊಂದೆಡೆ ವಿಮಾನ ನಿಲ್ದಾಣ, ಬಂದರು ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಭಾರೀ ಮೊತ್ತದ ಟೆಂಡರ್‌ಗಳನ್ನು ತಮ್ಮವರಿಗೆ ಕೊಡುತ್ತಿದ್ದಾರೆ. ಇದು ಮುಂದೊಂದು ದಿನ ದೊಡ್ಡ ಬಿಕ್ಕಟ್ಟು ಉದ್ಭವಿಸಲು ಕಾರಣವಾಗುತ್ತದೆ.

ಪ್ರ

ಸಮಾಜದ ಸ್ವಾಸ್ಥ್ಯ ಕದಡುವಂತಹ ಘಟನೆಯನ್ನು ನೀವು ಹೇಗೆ ನೋಡುತ್ತೀರಿ?

ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ನಡೆಯುತ್ತಿರುವ ಇಂತಹ ಘಟನೆಗಳಿಗೆ ರಾಜಕೀಯ ಪಕ್ಷಗಳ ನಿರ್ಲಕ್ಷ್ಯವೇ ಕಾರಣ. ಪಕ್ಷಗಳು ಚುನಾವಣೆ ಗೆಲ್ಲಲ್ಲು ಏನು ಬೇಕಾದರೂ ಮಾಡುತ್ತವೆ. ಹಾಗಾಗಿ, ನಾಗರಿಕ ಸಮಾಜ ಆತಂಕದಲ್ಲಿದೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಅದು ನಮ್ಮ ಸಮಸ್ಯೆ ಅಲ್ಲವೆಂದು ಉಳಿದವರು ಸುಮ್ಮನಿದ್ದಾರೆ. ಗುಜರಾತ್‌ನಲ್ಲಿ 20 ವರ್ಷಗಳ ಹಿಂದೆಯೂ ಇಂತಹದ್ದೇ ಘಟನೆ ನಡೆದಿತ್ತು. ಇದಾದ 20 ವರ್ಷಗಳ ನಂತರ ಮಣಿಪುರ ಅಂತಹದ್ದೇ ಘಟನೆಗೆ ಸಾಕ್ಷಿಯಾಗಿದೆ. ಮುಂದೆ ಇಂತಹದ್ದೇ ಸ್ಥಿತಿ ಬೇರೆ ರಾಜ್ಯಗಳಲ್ಲಿ ಉದ್ಭವಿಸಲು ಹೆಚ್ಚು ವರ್ಷಗಳು ಹಿಡಿಯುವುದಿಲ್ಲ. ಸಮಸ್ಯೆ ನಮ್ಮ ಮನೆ ಬಾಗಿಲಿಗೆ ಬರುವುದಕ್ಕೆ ಮುಂಚೆ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.

ಪ್ರ

ಒಡೆದಾಳುವ ರಾಜಕಾರಣ ಸೃಷ್ಟಿಸುತ್ತಿರುವ ಅಪಾಯಗಳೇನು?

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೊಡ್ಡ ಮಟ್ಟದಲ್ಲಿ ವಿಭಜನೆ ನಡೆಯುತ್ತಿದೆ. ಮುಖ್ಯವಾಗಿ ಜಾತಿ– ಧರ್ಮದ ವಿಷಯದಲ್ಲಿ ಜನರನ್ನು ವಿಭಜಿಸಿಯೇ ಚುನಾವಣೆ ಗೆಲ್ಲುತ್ತಿದ್ದಾರೆ. ಸರ್ಕಾರವೇ ಒಂದು ಧರ್ಮದ ಪರ ನಿಂತಿದೆ. ಮತ್ತೊಂದು ಧರ್ಮ ಮತ್ತು ದೇಶವನ್ನು ದ್ವೇಷಿಸುವಂತೆ ಮಾಡುತ್ತಿದೆ. ಧರ್ಮ ಎಂಬುದು ವೈಯಕ್ತಿಕ. ಸರ್ಕಾರದ ಭಾಗವಾಗಿರುವವರು ಒಂದು ಧರ್ಮದ ಪರ ಕೆಲಸ ಮಾಡಬಾರದು. ಆದರೆ, ದೇಶದ ಚಿತ್ರಣ ವ್ಯತಿರಿಕ್ತವಾಗಿದೆ. ಧರ್ಮ ದ್ವೇಷವನ್ನು ಸಾರ್ವತ್ರಿಕಗೊಳಿಸಲಾಗುತ್ತಿದೆ. ಸಂವಿಧಾನದ ಮೌಲ್ಯ ಮತ್ತು ವೈವಿಧ್ಯತೆ ಕಾಪಾಡಲು ನಾಗರಿಕ ಸಮಾಜವು ಇಂತಹ ಶಕ್ತಿಗಳ ವಿರುದ್ಧ ದನಿ ಎತ್ತಬೇಕಿದೆ.

ಪ್ರ

ಇತ್ತೀಚೆಗೆ ಸನಾತನ ಧರ್ಮದ ವಿಷಯ ಮುನ್ನೆಲೆಗೆ ಬಂದಿದೆಯಲ್ಲಾ?

ಬಿಜೆಪಿ ಮತ್ತು ಪರಿವಾರದವರು ವರ್ಣ ವ್ಯವಸ್ಥೆ ಪೋಷಿಸುವ ಸನಾತನ ಧರ್ಮದ ಆರಾಧಕರು. ಅಸ್ಪೃಶ್ಯತೆ, ಅಸಮಾನತೆ, ದೇವಾಲಯ ಪ್ರವೇಶ ನಿಷೇಧ, ಶಿಕ್ಷಣ ನಿರಾಕರಣೆ, ಹೆಣ್ಣಿನ ಸ್ವಾತಂತ್ರ್ಯಕ್ಕೆ ನಿರ್ಬಂಧದಂತಹ ಸನಾತನ ಮೌಲ್ಯಗಳಿಗೆ ಅವರು ಕಟಿಬದ್ಧರಾಗಿದ್ದಾರೆ. ಅವುಗಳನ್ನು ಮತ್ತೆ ಜಾರಿಗೆ ತರುವುದೇ ಅವರ ರಹಸ್ಯ ಅಜೆಂಡಾ. ಎಂದಾದರೂ ಬಹುತ್ವ, ಸಮಾನತೆ, ಸಹಿಷ್ಣುತೆ, ಜಾತ್ಯತೀತ, ಪ್ರಜಾಪ್ರಭುತ್ವದ ಮೌಲ್ಯಗಳ ಪರವಾಗಿ ನಿಂತಿದ್ದಾರೆಯೇ? ಜನರಿಗೆ ಉದ್ಯೋಗ ಕೊಟ್ಟು ದೇಶ ಕಟ್ಟುವುದರಲ್ಲಿ ನಂಬಿಕೆ ಇಲ್ಲದಿರುವುದರಿಂದಲೇ, ಮಂದಿರ ಕಟ್ಟಿದರು. ಅವರಿಗೆ ಭೂತದಲ್ಲಿ ನಂಬಿಕೆ ಇದೆಯೇ ಹೊರತು, ವರ್ತಮಾನ ಮತ್ತು ಭವಿಷ್ಯದಲ್ಲಲ್ಲ.

ಡಾ. ಪರಕಾಲ ಪ್ರಭಾಕರ್
ಡಾ. ಪರಕಾಲ ಪ್ರಭಾಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT