ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview : ಸರ್ವಜ್ಞ ನಗರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

Published 3 ಮೇ 2023, 21:41 IST
Last Updated 3 ಮೇ 2023, 21:41 IST
ಅಕ್ಷರ ಗಾತ್ರ
ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಸ್ಪರ್ಧಿಗಳ ನಡುವೆ ಆರೋಪ–ಪ್ರತ್ಯಾರೋಪ ಬಿರುಸಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಆದ್ಯತೆ ಕುರಿತಂತೆ ಅಭ್ಯರ್ಥಿಗಳ ಜೊತೆ ಎಸ್‌.ರವಿಪ್ರಕಾಶ್,ರಾಜೇಶ್‌ ರೈ ಚಟ್ಲ ಅವರು ನಡೆಸಿದ ಕಿರು ಸಂದರ್ಶನಗಳು ಇಲ್ಲಿವೆ.

ಮಾಡಿದ ಅಭಿವೃದ್ಧಿ, ಗಳಿಸಿದ ಜನಪ್ರೀತಿ ಕೈಹಿಡಿಯಲಿದೆ: ಕಾಂಗ್ರೆಸ್‌ ಅಭ್ಯರ್ಥಿ ಕೆ.ಜೆ ಜಾರ್ಜ್‌

ಪುನರಾಯ್ಕೆ ಬಯಸಿ ಕಣದಲ್ಲಿದ್ದೀರಿ. ನಿಮ್ಮ ಸಾಧನೆಗಳನ್ನು ಪಟ್ಟಿ ಮಾಡಬಹುದೇ?

ಕ್ಷೇತ್ರ ಮರುವಿಂಗಡಣೆ (2008ರಲ್ಲಿ) ನಂತರ ಹೊಸದಾಗಿ ರಚನೆಯಾದ ಸರ್ವಜ್ಞನಗರ ಕ್ಷೇತ್ರದಿಂದ ಕಳೆದ ಮೂರು ಬಾರಿ ಆಯ್ಕೆಯಾಗಿರುವ ನಾನು, ಮಾಡಿದ ಅಭಿವೃದ್ಧಿ ಕೆಲಸಗಳೆಲ್ಲವೂ ಕಣ್ಣಿಗೇ ಕಾಣುತ್ತದೆ. ರಸ್ತೆ ಅವ್ಯವಸ್ಥೆ, ಚರಂಡಿ ದುರವಸ್ಥೆ, ಬೀದಿದೀಪ, ಸಿ.ಸಿ.ಟಿ.ವಿ ಕ್ಯಾಮೆರಾ, ಅಸಮರ್ಪಕ ಕಸ ವಿಲೇವಾರಿಗೆ ಪರಿಹಾರ ಒದಗಿಸಿದ್ದೇನೆ. ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಿದ್ದೇನೆ. ಕ್ಷೇತ್ರದಲ್ಲಿ ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಗವಾರ, ಎಚ್‌ಬಿಆರ್‌ ಬಡಾವಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ ಹಾಗೂ ಮಾರುತಿ ಸೇವಾನಗರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳು. ಪ್ರಮುಖ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರದಿಂದ ಸಿಕ್ಕಿದ ಅನುದಾನ‌ಕ್ಕಿಂತ ನನ್ನ ಒಡೆತನದ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ಇದಕ್ಕಾಗಿ ಹೆಚ್ಚು ಬಳಸಿದ್ದೇನೆ.

ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದೀರಿ ಎಂಬ ಮಾತಿದೆ. ನಿಜವೇ?

ಸರ್ವಜ್ಞ ಹೆಲ್ತ್‌ ಕೇರ್‌ ಇನ್‌ಸ್ಟಿಟ್ಯೂಟ್‌, ಸರ್ವಜ್ಞ ಕೌಶಲ ಅಭಿವೃದ್ಧಿ ಕೇಂದ್ರ, ಸರ್ಕಾರಿ ಶಾಲೆಗಳಿಗೆ ಹೊಸ ರೂಪ, ಜೊತೆಗೆ ಸ್ಮಾರ್ಟ್‌ ಕ್ಲಾಸ್‌ ರೂಂ, ಅಂಗನವಾಡಿಗಳ ಉನ್ನತೀಕರಣ, ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಗಳನ್ನು ಸಿಎಸ್‌ಆರ್‌ ನಿಧಿಯಿಂದ ಮಾಡಿದ್ದೇನೆ. ಕ್ಷೇತ್ರದ ಎಲ್ಲ 28 ಸರ್ಕಾರಿ ಶಾಲೆಗಳು, ಅಂಗನವಾಡಿಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ‘ಸ್ಮಾರ್ಟ್‌‘ ಮಾಡಿದ್ದೇನೆ. ಎಚ್‌ಬಿಆರ್‌ ಲೇಔಟ್‌ನಲ್ಲಿ ಉರ್ದು ಶಾಲೆ ತಲೆ ಎತ್ತಿದೆ. ಇಲ್ಲಿ ಶೀಘ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೂ ನಿರ್ಮಾಣವಾಗಲಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮೊದಲ ಪದವಿ ಕಾಲೇಜು
ಲಿಂಗರಾಜಪುರದಲ್ಲಿ ಆರಂಭವಾಗಿದೆ. ಯುವ ಸಮೂಹಕ್ಕೆ  ಸ್ವಉದ್ಯೋಗಕ್ಕೆ ಅವಕಾಶ ಕಲ್ಪಿಸಲು ಕೆ.ಜಿ. ಹಳ್ಳಿ ಮತ್ತು  ಜೀವನಹಳ್ಳಿಯಲ್ಲಿ ಕೌಶಲ ತರಬೇತಿ ಕೇಂದ್ರಗಳನ್ನು ತೆರೆದಿದ್ದೇನೆ. ಇಲ್ಲಿ ಮೊಬೈಲ್‌ ದುರಸ್ತಿ, ಎಲೆಕ್ಟ್ರೀಷಿಯನ್‌, ಡಾಟಾ ಎಂಟ್ರಿ ಆಪರೇಟರ್‌ ಕೋರ್ಸ್‌ಗಳನ್ನು ಕಲಿಸಲಾಗುತ್ತಿದೆ.

ಜನರ ಅಹವಾಲು ಆಲಿಸಲು ವ್ಯವಸ್ಥೆ ಏನಿದೆ?

ಜನರ ಜೊತೆ ನಿರಂತರ ಬೆರೆಯುತ್ತಿದ್ದೇನೆ. ಸಾರ್ವಜನಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಬೇಕೆಂಬ ಕಾರಣಕ್ಕೆ ಎಲ್ಲ ವಾರ್ಡ್‌ಗಳಲ್ಲಿ ಜನಸ್ಪಂದನ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ. ಈ ಕಾರ್ಯಕ್ರಮದಲ್ಲಿ ಬಿಬಿಎಂಪಿ ಅಧಿಕಾರಿಗಳನ್ನೂ ಸೇರಿಸಿಕೊಂಡು, ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದ್ದೇನೆ. 

ಮೂಲಸೌಲಭ್ಯ ಒದಗಿಸಲು ಏನೇನು ಮಾಡಿದ್ದೀರಿ?

ಗೋವಿಂದಪುರ, ನಾಗವಾರ, ಎಚ್‌ಬಿಆರ್‌ ಲೇಔಟ್‌ 3 ಮತ್ತು 5ನೇ ಬ್ಲಾಕ್‌ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ನೀರು ಪೂರೈಸಲು ಎಚ್‌ಬಿಆರ್‌ ಲೇಔಟ್‌ನಲ್ಲಿ ₹ 11 ಕೋಟಿ ವೆಚ್ಚದಲ್ಲಿ ಐದು ಎಂಎಲ್‌ಡಿ (50 ಲಕ್ಷ ಲೀಟರ್) ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್‌ (ಜಿಎಲ್‌ಆರ್‌) ನಿರ್ಮಿಸಲಾಗಿದೆ. ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿದ್ದೇನೆ. ಜೀವನಹಳ್ಳಿಯಲ್ಲಿ ವಿಶ್ವದರ್ಜೆಯ ಸೌಲಭ್ಯದ ಫುಟ್‌ಬಾಲ್‌ ಕ್ರೀಡಾಂಗಣ ಶೀಘ್ರದಲ್ಲಿಯೇ ಪೂರ್ಣವಾಗಲಿದೆ. ಬಾಣಸವಾಡಿಯಲ್ಲಿ ಭುವನಗಿರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಿರ್ಮಾಣವಾಗಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಕ್ಷೇತ್ರ ವ್ಯಾಪ್ತಿಯ ಮೂಲಕ ‘ನಮ್ಮ ಮೆಟ್ರೊ’ ಕೂಡಾ ಶೀಘ್ರದಲ್ಲಿ ಸಾಕಾರವಾಗಲಿದೆ. 

ನಿಮ್ಮ ಪ್ರತಿಸ್ಪರ್ಧಿ ಬಗ್ಗೆ ಏನು ಹೇಳುತ್ತೀರಿ?

ಪ್ರತಿಸ್ಪರ್ಧಿ ಬಗ್ಗೆ ನಾನೂ ಏನನ್ನೂ ಹೇಳಲು ಬಯಸುವುದಿಲ್ಲ. ರಾಜಕೀಯವಾಗಿ ಅವರು ಎದುರಾಳಿ ಅಷ್ಟೆ. ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಗಳು, ಗಳಿಸಿದ ಜನಪ್ರೀತಿ ನನ್ನ ನೆರವಿಗೆ ಬರುವ ವಿಶ್ವಾಸವಿದೆ.

ಈ ಬಾರಿ ಆರಿಸಿ ಬರುವ ವಿಶ್ವಾಸವಿದೆ: ಪದ್ಮನಾಭ ರೆಡ್ಡಿ

ಈ ಬಾರಿಯಾದರೂ ಗೆಲ್ಲಲೇ ಬೇಕೆಂದು ಕಣದಲ್ಲಿದ್ದೀರಿ. ಮತದಾರರು ನಿಮಗೆ ಯಾಕೆ ಮತ ಹಾಕಬೇಕು?

ಹದಿನೈದು ವರ್ಷಗಳಿಂದ ಕ್ಷೇತ್ರವನ್ನು ಆಳುತ್ತಿರುವ ಕಾಂಗ್ರೆಸ್‌ ಶಾಸಕರು ಏನೂ ಅಭಿವೃದ್ಧಿ ಮಾಡಿಲ್ಲ. ಅವರ ಆಡಳಿತ ವೈಫಲ್ಯದಿಂದ ಜನ ಬೇಸತ್ತಿದ್ದಾರೆ. ಅವರ ಜೊತೆಯಲ್ಲಿದ್ದ ಶೇ 70ರಷ್ಟು ಕಾಂಗ್ರೆಸ್ಸಿಗರು ಈಗ ನನ್ನ ಜೊತೆಗಿದ್ದಾರೆ. ನಾನೇ ಕಣಕ್ಕಿಳಿಯಬೇಕೆಂಬುವುದು ಅವರೂ ಸೇರಿದಂತೆ ಎಲ್ಲ ಮತದಾರರು ಒತ್ತಾಸೆಯಾಗಿತ್ತು. ಹೀಗಾಗಿ ಅಖಾಡಕ್ಕೆ ಇಳಿದಿದ್ದೇನೆ. ಈ ಬಾರಿ ಆರಿಸಿ ಬರುವ ವಿಶ್ವಾಸವೂ ಇದೆ.

ನಿಮ್ಮ ಪ್ರಚಾರ ಹೇಗಿದೆ?

ಆರು ತಿಂಗಳುಗಳಿಂದ ಕ್ಷೇತ್ರದಾದ್ಯಂತ ಮನೆ ಮನೆಗೆ ಹೋಗುತ್ತಿದ್ದೇನೆ. ಎಲ್ಲ ಎಂಟು ವಾರ್ಡ್‌ಗಳಲ್ಲಿ ಜನ ಸಂಪರ್ಕ ಸಾಧಿಸಿದ್ದೇನೆ. ಅವರ ನಾಡಿ ಮಿಡಿತ ಅರಿತಿದ್ದೇನೆ. ನಾನು ಸ್ಥಳೀಯ ನಿವಾಸಿ. ಕಾಚರಕನಹಳ್ಳಿ ವಾರ್ಡ್‌ನವನು. ಈ ವಾರ್ಡ್‌ನಿಂದ ಮೂರು ಬಾರಿ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ನನ್ನ ವಾರ್ಡ್‌ನಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿದ ಜನ, ಅದೇ ರೀತಿಯ ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕೆಂದು ಹೇಳುತ್ತಿದ್ದಾರೆ.

ಮತದಾರರಿಗೆ ಏನು ಭರವಸೆ ನೀಡುತ್ತಿದ್ದೀರಿ?

ನನ್ನನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಭರವಸೆ ನೀಡುತ್ತೇನೆ. ಕ್ಷೇತ್ರದ ಎಲ್ಲ ಸಮಸ್ಯೆಗಳಿಗೆ ಐದು ವರ್ಷಗಳ ಅವಧಿಯಲ್ಲಿ ಪರಿಹಾರ ಒದಗಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT