ಭಾನುವಾರ, ಮೇ 29, 2022
20 °C
ಮನುಷ್ಯನ ಬುದ್ಧಿವಂತಿಕೆಯನ್ನು ಮೀರಿಸಬಹುದಾದ ರೊಬೋಟ್‌ಗಳನ್ನು ನಿಯಂತ್ರಿಸುವವರು ಯಾರು?

ವಿಶ್ಲೇಷಣೆ | ಕೃತಕ ಬುದ್ಧಿಮತ್ತೆಯ ವಿಶ್ವರೂಪ!

ವೆಂಕಿ ರಾಘವೇಂದ್ರ, ಭಾರತಿ ಮಣೂರ್ Updated:

ಅಕ್ಷರ ಗಾತ್ರ : | |

Prajavani

ಇ– ಮೇಲ್ ಬರೆಯಲು ಕಂಪ್ಯೂಟರ್ ಕೀಪ್ಯಾಡ್‌ನಲ್ಲಿ ‘ಹಲೋ’ ಎಂಬ ಪದವನ್ನು ಟೈಪ್ ಮಾಡುವಷ್ಟರಲ್ಲಿ, ಸ್ಕ್ರೀನ್ ಮೇಲೆ ಸರ್/ಮ್ಯಾಡಮ್ ಎಂಬ ಪದ ಮೂಡುತ್ತದೆ. ಇದನ್ನು ನೋಡಿದ ತಕ್ಷಣ, ಈ ಯಂತ್ರ ನಿಜವಾಗಿ ನನ್ನನ್ನು ಅರ್ಥಮಾಡಿಕೊಂಡಿದೆಯಾ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಒಂದು ರೊಮ್ಯಾಂಟಿಕ್ ಹಾಡನ್ನು ಸವಿದರೆ, ಸ್ವಲ್ಪ ಹೊತ್ತಿನಲ್ಲಿ ಅಂತಹುದೇ ಹಾಡುಗಳನ್ನು ನನಗೋಸ್ಕರ ಹುಡುಕಿಕೊಡುವ ಯುಟ್ಯೂಬ್ ನನ್ನ ಆತ್ಮೀಯ ಎಂದೆನಿಸುತ್ತದೆ. ನನ್ನನ್ನು ನನಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ಒಂದು ಯಂತ್ರ ಇದೆ ಮತ್ತು ಅದು ಯೋಚಿಸಬಲ್ಲದು ಎಂದರೆ ನಿಜವಾಗಿಯೂ ಆಶ್ಚರ್ಯ ಮಾತ್ರವಲ್ಲದೆ ಅದ್ಭುತವೂ ಎನಿಸುತ್ತದೆ. ಯಂತ್ರದ ಈ ನಡವಳಿಕೆಗೆ ಕಾರಣ, ಅದರಲ್ಲಿ ಅಳವಡಿಸಲಾದ ಕೃತಕ ಬುದ್ಧಿಮತ್ತೆ.

ಈ ಜಾಣ್ಮೆಯ ಪರಿಧಿ ಎಷ್ಟು ದೊಡ್ಡದೆಂದರೆ, ಅಮೆರಿಕದ ಟುನೈಟ್ ಶೋಬೊಟಿಕ್ಸ್‌ ಟಿ.ವಿ. ಕಾರ್ಯಕ್ರಮದಲ್ಲಿ, ನಿರೂಪಕ ಜಿಮ್ಮಿ ಫಾಲೊನ್ ಅವರು ಅತಿಥಿಯಾಗಿ ಆಹ್ವಾನಿಸಿದ ಸೋಫಿಯಾ ತನ್ನ ಹಾಸ್ಯದಿಂದ ವೀಕ್ಷಕರನ್ನು ನಗೆಯ ಸಾಗರದಲ್ಲಿ ತೇಲಿಸುತ್ತಾರೆ. ಇಷ್ಟಕ್ಕೂ ಯಾರು ಈ ಸೋಫಿಯಾ? ಸೌದಿ ಅರೇಬಿಯಾದ ಗೌರವ ಪ್ರಜೆಯಾಗಿರುವ ಸೋಫಿಯಾ ಒಂದು ಸಾಮಾಜಿಕ ರೊಬೋಟ್. ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ರೊಬೋಟ್, ದೃಶ್ಯ ದತ್ತಾಂಶಗಳನ್ನು ಪರಿಷ್ಕರಿಸಬಲ್ಲದು, ಸಂಭಾಷಣೆ ಮತ್ತು ಭಾವನಾತ್ಮಕ ದತ್ತಾಂಶಗಳನ್ನು ಸಂಸ್ಕರಿಸಬಲ್ಲದು, ಅಲ್ಲದೆ ಜನರೊಡನೆ ಸಂಬಂಧಗಳನ್ನು ಬೆಳೆಸಬಲ್ಲದು.

ಕೃತಕ ಬುದ್ಧಿಮತ್ತೆಯು ವಿಜ್ಞಾನಿಗಳು, ಸಂಶೋಧಕರ ಸಾಕು ಮಗುವಷ್ಟೇ ಅಲ್ಲದೆ, ಇದು ಭಾವನೆಗಳ ಬೆನ್ನೇರಿ, ತರ್ಕಗಳ ಮೆಟ್ಟಿಲುಗಳನ್ನು ಹತ್ತಿ, ಕಲ್ಪನಾಲೋಕದಲ್ಲಿ ವಿಹರಿಸಿ, ಯೋಚನೆಗಳನ್ನು ನಿಜರೂಪಕ್ಕೆ ತರುವ ಸಾಧ್ಯತೆಗಳನ್ನು ಸೃಷ್ಟಿಸಿದ ಕವಿ, ತತ್ವಜ್ಞಾನಿ ಹಾಗೂ ಕತೆಗಾರರ ಕನಸಿನ ಕೂಸು ಸಹ. 1726ರಲ್ಲಿ ಪ್ರಕಟವಾದ ಗಲಿವರ್‌ನ ‘ಟ್ರಾವೆಲ್ಸ್‌’ ಎಂಬ ಇಂಗ್ಲಿಷ್ ಸಾಹಿತ್ಯದ ಪ್ರಥಮ ಪುಸ್ತಕ ಇದಕ್ಕೆ ಸಾಕ್ಷಿ. ಇದರಲ್ಲಿ ಬಳಸಲಾದ ಪದ ‘ಎಂಜಿನ್’ ಈಗಿನ ಕಂಪ್ಯೂಟರ್ ಪದಕ್ಕೆ ಸಂವಾದಿಯಾಗಿ ಉಲ್ಲೇಖವಾಗಿದೆ.

1921ರಲ್ಲಿ ತೆರೆಕಂಡ ‘ರೋಸ್ಸುಮ್ಸ್ ಯೂನಿವರ್ಸಲ್ ರೊಬೋಟ್ಸ್‌’ ಎಂಬ ವೈಜ್ಞಾನಿಕ ನಾಟಕವು ವೈಜ್ಞಾನಿಕ ಕಾದಂಬರಿಗಳಿಗೆ ಮಾತ್ರವಲ್ಲದೆ ಇಂಗ್ಲಿಷ್‌ ಭಾಷೆಗೂ ಒಂದು ಹೊಸ ಪದವನ್ನು ನೀಡಿತು. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕಾರ್ಥಿ ಅವರನ್ನು ಕೃತಕ ಬುದ್ಧಿಮತ್ತೆಯ (ಎ.ಐ) ಪಿತಾಮಹ ಎಂದು ಕರೆಯಲಾಗಿದೆ ಮತ್ತು ಕೃತಕ ಬುದ್ಧಿಮತ್ತೆ ಎಂಬ ಪದ ಬಳಸಿದ ಕೀರ್ತಿ, ಮಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ವಿಜ್ಞಾನಿ ಮಾರ್ವಿನ್ ಮಿನ್ಸ್ಕಿಅವರಿಗೆ ಸಲ್ಲುತ್ತದೆ.

ಈ ಯಂತ್ರವು ಮಾನವಕುಲಕ್ಕೆ ಒಂದೆಡೆ ಭರವಸೆಯಾದರೆ, ಇನ್ನೊಂದೆಡೆ ವಿನಾಶದ ಬಿರುಗಾಳಿಯನ್ನು ಎಬ್ಬಿಸುವಂಥದ್ದು. ಇದರ ಸದ್ಬಳಕೆಯನ್ನು ಹೇಗೆ ಮಾಡಬೇಕು ಎಂಬುದು ಮನುಷ್ಯನ ಬುದ್ಧಿವಂತಿಕೆಯನ್ನು ಅವಲಂಬಿಸಿದೆ.

ಕಂಪ್ಯೂಟರ್ ತಂತ್ರಜ್ಞಾನದ ಅನಭಿಷಿಕ್ತ ದೊರೆ ಗೂಗಲ್‌ನ ಹೊಸ ವೈಶಿಷ್ಟ್ಯಗಳಾದ ಭಾಷೆ, ಭಾಷಾಂತರ, ಭಾವಚಿತ್ರ ಗುರುತಿಸುವುದು ಇವೆಲ್ಲವೂ ಕೃತಕ ಬುದ್ಧಿಮತ್ತೆಯ ಕೊಡುಗೆಗಳೇ. ಅಲ್ಲದೆ ಗೂಗಲ್ ವಿಡಿಯೊ ವಿಶ್ಲೇಷಣೆ, ಭಾಷೆ ಸಂಸ್ಕರಣೆ ಮುಂತಾದವು ಇದರ ಬ್ರೇನ್ ಪ್ರಾಜೆಕ್ಟುಗಳು. ಗೂಗಲ್‌ನ ಆಳ ಕಲಿಕೆಯನ್ನು ಬಳಸಿದ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆ ಎಂದರೆ, ಯುಟ್ಯೂಬ್ ಬಳಕೆದಾರರಿಗೆ ಅವರ ಬಳಕೆಯ ಅನುಭವವನ್ನು ಆಧರಿಸಿ ವಿಡಿಯೊಗಳನ್ನು ಶಿಫಾರಸು ಮಾಡುವುದು. ಅಷ್ಟೇ ಅಲ್ಲದೆ, ಯುಟ್ಯೂಬ್‌ನಲ್ಲಿ ತಮ್ಮ ವಿಷಯಗಳನ್ನು ಪ್ರಕಟಿಸುವ ಸಮೂಹಕ್ಕೆ ರಕ್ಷಣೆ, ಪ್ರಸಾರವಾಗುತ್ತಿರುವ ಕಾರ್ಯಕ್ರಮವನ್ನು ಆಧರಿಸಿ ಜಾಹೀರಾತುಗಳನ್ನು ಪ್ರದರ್ಶಿಸಿ ಆರ್ಥಿಕ ವಹಿವಾಟು ಮತ್ತು ವ್ಯಾಪಾರದ ಒಂದು ಸಾಮ್ರಾಜ್ಯವನ್ನೇ ನಿರ್ಮಾಣ ಮಾಡಲಾಗುತ್ತಿದೆ. ಐಪ್ಯಾಡ್‌ನಲ್ಲಿರುವ ‘ಸಿರಿ’, ಅಮೆಜಾನ್‌ನ ‘ಅಲೆಕ್ಸಾ’ ಮತ್ತು ಮೈಕ್ರೊಸಾಫ್ಟ್‌ನ ‘ಕೊರ್ಟಾನಾ’ ಮುಂತಾದವರು, ಆಗಲೇ ವರ್ಣಿಸಿರುವ ಸೋಫಿಯಾರ ಗುಣಗಳನ್ನು ಒಳಗೊ೦ಡಿರುವ ಸಂಬಂಧಿಗಳು. ಈ ಬೆಳವಣಿಗೆಗಳ ಮಧ್ಯೆ ವೈಯಕ್ತಿಕ ಮಾಹಿತಿ ಮತ್ತು ಗೋಪ್ಯತೆಯ ಕಡೆಯೂ ಗಮನ ಹರಿಸಬೇಕಿದೆ.

ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆಯನ್ನು ಪ್ರಗತಿಪರ ಕಾರ್ಯಗಳಿಗೆ ಬಳಸಿಕೊಳ್ಳಲು ಮುಂದಾದ ಉದ್ಯಮಿಗಳ ಪಟ್ಟಿಯಲ್ಲಿ ಎಲಾನ್ ಮಸ್ಕ್‌ ಅವರ ಹೆಸರು ಮೊದಲನೆಯ ಸ್ಥಾನದಲ್ಲಿದೆ. ಇವರು ಕೃತಕ ಬುದ್ಧಿವಂತಿಕೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳ ಸ್ಥಾಪನೆಯಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ನ್ಯೂರಾ-ಲಿಂಕ್ ಕಂಪನಿಯು ಮೆದುಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಅಧ್ಯಯನ ಮಾಡುತ್ತದೆ. ಪ್ರಸ್ತುತ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯನ್ನು ಗಮನಿಸಿದರೆ, ಮುಂದೊಂದು ದಿನ ಇದು ಮನುಷ್ಯನ ಬುದ್ಧಿಮತ್ತೆಯನ್ನು ಮೀರಿಸುವಲ್ಲಿ ಯಾವುದೇ ಸಂಶಯ ಇಲ್ಲ. ಹಾಗಾದ ಸಂದರ್ಭದಲ್ಲಿ, ಈ ರೊಬೋಟ್‌ಗಳನ್ನು ನಿಯಂತ್ರಿಸುವವರು ಯಾರು? ಅದಕ್ಕಾಗಿ ಮಾನವನ ತಯಾರಿ ಏನು? ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವಲ್ಲಿ ಈ ಸಂಸ್ಥೆ ಆಸಕ್ತಿ ವಹಿಸುತ್ತದೆ.

ಇವರ ಇನ್ನೊಂದು ಸಂಸ್ಥೆ ಟೆಸ್ಲಾ ಮೋಟರ್ಸ್‌, ಚಾಲಕರಹಿತ ವಿದ್ಯುತ್ ಕಾರುಗಳನ್ನು ತಯಾರಿಸುವಲ್ಲಿ ನಿರತವಾಗಿದೆ. ವಾಹನದ ಪೂರ್ತಿ ಕಾರ್ಯವಿಧಾನವನ್ನು ನಿಯಂತ್ರಿಸುವ ಜವಾಬ್ದಾರಿ ಕೃತಕ ಬುದ್ಧಿಮತ್ತೆಯ ಮೇಲಿರುವುದು ಇಲ್ಲಿ ವಿಶೇಷ. ಅಮೆರಿಕದಲ್ಲಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾದ ‘ಸೈಬರ್ ಟ್ರಕ್’ ಹೆಸರಿನ ಕಾರುಗಳು ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲಾ ದೇಶಗಳ ಮಾರುಕಟ್ಟೆಗಳಿಗೆ ಲಗ್ಗೆಯಿಡಬಹುದು.

ಇಸ್ರೇಲ್‌ನ ಇತಿಹಾಸಕಾರ, ‘ಸೆಪಿಯನ್ಸ್‌’ ಎಂಬ ಜನಪ್ರಿಯ ಪುಸ್ತಕದ ಕರ್ತೃ ಪ್ರೊಫೆಸರ್ ಯುವಾಲ್ ನೊಹ ಹರಾರಿಯವರು ಕೃತಕ ಬುದ್ಧಿಮತ್ತೆಯ ಘಾತೀಯ ಬೆಳವಣಿಗೆ ಕುರಿತು ಹೀಗೆ ಹೇಳುತ್ತಾರೆ: 2035ರ ಆಸುಪಾಸಿನಲ್ಲಿ ನಮ್ಮ ಜನಸಂಖ್ಯೆಯ ಬಹುಭಾಗ ತಾಂತ್ರಿಕವಾಗಿ ಅಪ್ರಯೋಜಕವಾಗುತ್ತದೆ. ಅಲ್ಲದೆ ಕೆಲವೇ ವರ್ಷಗಳಲ್ಲಿ ಬಹಳಷ್ಟು ವೈದ್ಯರು ಮತ್ತು ಚಾಲಕರು ನಿರುದ್ಯೋಗಿಗಳಾಗುತ್ತಾರೆ. ಏಕೆಂದರೆ ಇವರ ಕೌಶಲಗಳನ್ನು ಕೃತಕ ಬುದ್ಧಿಮತ್ತೆಯ ರೊಬೋಟ್ ಯಂತ್ರಗಳು ಹೊಂದಿರುತ್ತವೆ. ಜೊತೆಗೆ ಜನ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮಾನವನಿಗಿಂತ ಯಂತ್ರಗಳ ನಿಖರತೆಯನ್ನು ನಂಬುತ್ತಾರೆ.

ಇದಕ್ಕೆ ಪರಿಹಾರಗಳನ್ನು ಕಾದು ನೋಡಬೇಕು ಎಂಬ ಆಯ್ಕೆಯ ಮೇಲೆ ಬಿಟ್ಟರೂ, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಮಾನಸಿಕ ಸಮತೋಲನದ ಕೌಶಲ ಕಲಿಯುವ, ಬದಲಾಗುವ ಮತ್ತು ಮರುಶೋಧಿಸುವ ಪ್ರಕ್ರಿಯೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂಬ ಸುಳಿವನ್ನು ನೀಡುತ್ತಾರೆ.

ಕೃತಕ ಬುದ್ಧಿಮತ್ತೆಯ ಸಂಶೋಧನೆಯಲ್ಲಿ ದಾಪುಗಾಲಿಡುತ್ತಿರುವ ಮೈಕ್ರೊಸಾಫ್ಟ್‌ ಸಂಸ್ಥೆಯಲ್ಲಿ ಲೀಡ್ ಕ್ಲೌಡ್ ಆರ್ಕಿಟೆಕ್ಟ್‌ ಆಗಿರುವ ಬಾಸ್ಟನ್ ನಗರವಾಸಿ ಶ್ರಿನಿ ಅಂಬಾತಿ ಹೀಗೆ ಹೇಳುತ್ತಾರೆ, ‘ಕೃತಕ ಬುದ್ಧಿಮತ್ತೆ ಎಲ್ಲಾ ಹಂತಗಳಲ್ಲಿ ಮನುಷ್ಯನನ್ನು ಬೆಳೆಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ಅವರ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಇದರಿಂದ ಉಳಿತಾಯವಾದ ಸಮಯವನ್ನು ಮಾನವ ತನ್ನ ಯೋಗಕ್ಷೇಮವನ್ನು ಹೆಚ್ಚಿಸಿಕೊಳ್ಳಲು ಮತ್ತು ಜವಾಬ್ದಾರಿಯಿಂದ ಬದುಕಲು ಬಳಸಿಕೊಳ್ಳಬಹುದು’.

ಪ್ರಸ್ತುತ ಜನಾಂಗವು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಆಳ ಕಲಿಕೆ ಇವೆಲ್ಲವನ್ನೂ ಕಲಿಯುವಲ್ಲಿ ಬಹಳ ಆಸಕ್ತಿ ತೋರಿಸುತ್ತಿದೆ. ಆದರೆ ಇವೆಲ್ಲವನ್ನೂ ಕಲಿಯಲು ಕೇವಲ ತಾಂತ್ರಿಕ ಕೋರ್ಸ್‌ಗಳ ಮೊರೆ ಹೋಗುತ್ತಿರುವುದು ವಿಪರ್ಯಾಸ. ಯಾವುದೇ ಒಂದು ಆಲೋಚನೆ ಮೊದಲು ಮೊಳಕೆಯೊಡೆಯುವುದು ಮನುಷ್ಯನ ಮೆದುಳಿನಲ್ಲಿ. ನಂತರ ಅದು ಅರಿವಿನ ಪರಿಧಿಯಲ್ಲಿ ಒಂದು ಸ್ಪಷ್ಟ ಆಕಾರವನ್ನು ಪಡೆಯುತ್ತದೆ. ಈ ಎಲ್ಲ ಪ್ರಕ್ರಿಯೆಗಳ ಕೀಲಿಕೈ ಮನುಷ್ಯನ ಕಲ್ಪನಾಶಕ್ತಿ. ಈ ಕಲ್ಪನಾಶಕ್ತಿ ಬೆಳೆಯಬೇಕಾದರೆ, ಮನುಷ್ಯನು ಜೀವನವನ್ನು ಅದರ ನೈಜರೂಪದಲ್ಲಿ ಅನುಭವಿಸುವುದು ಮೊದಲ ಹಂತವಾಗುತ್ತದೆ. ಅದಕ್ಕಾಗಿಯೇ ಕಥೆ, ಕವಿತೆ, ಕಾದಂಬರಿ, ಚಿತ್ರಕಲೆ ಮುಂತಾದವುಗಳ ಅರಿವು ಮೂಲಭೂತವೆನಿಸುತ್ತದೆ. ಆಶ್ಚರ್ಯವೆಂದರೆ, ಕಲಾವಿದ ಮತ್ತು ಸಂಶೋಧಕ ಇಬ್ಬರೂ ನಮ್ಮ ಮೆದುಳಿನಲ್ಲಿ ವಾಸಿಸುತ್ತಾರೆ. ಅವರಿಬ್ಬರನ್ನು ತಾರತಮ್ಯವಿಲ್ಲದೇ ಬಳಸಿಕೊಂಡಾಗ ಪ್ರತಿಯೊಬ್ಬರಲ್ಲೂ ಒಬ್ಬ ಲಿಯೊನಾರ್ಡೊ ಡ ವಿಂಚಿ ಅಥವಾ ಒಬ್ಬಳು ಮೇರಿ ಕ್ಯೂರಿ ಉದಯಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು