ಬುಧವಾರ, ಆಗಸ್ಟ್ 4, 2021
23 °C
ಎಂಎಸ್ಎಂಇಗಳಿಗೆ ಈಗ ಸಾಲ ಪಡೆಯುವ ಧೈರ್ಯವೇ ಇಲ್ಲ, ಯಾಕೆ ಗೊತ್ತೇ?

ವಿಶ್ಲೇಷಣೆ | ಸಣ್ಣ ಉದ್ಯಮಗಳಿಗೆ ಅಸ್ತಿತ್ವದ ಸವಾಲು

ಜಿ.ವಿ.ಜೋಶಿ Updated:

ಅಕ್ಷರ ಗಾತ್ರ : | |

prajavani

‘ಸ್ಮಾಲ್‌ ಈಸ್‌ ಬ್ಯೂಟಿಫುಲ್’ (ಸಣ್ಣದು ಸುಂದರವಾಗಿರುತ್ತದೆ) ಎನ್ನುವ ಶೀರ್ಷಿಕೆಯನ್ನು ಹೊಂದಿದ ತಮ್ಮ ಸಣ್ಣ ಪುಸ್ತಕದಲ್ಲಿ (1973) ಆರ್ಥಿಕ ತಜ್ಞ ಇ.ಎಫ್.ಶೂಮಾಕರ್‌, ಆಧುನಿಕ ತಂತ್ರಜ್ಞಾನದ ಬದಲಾಗಿ ಸಣ್ಣ ಅಥವಾ ಸೂಕ್ತವಾದ ತಂತ್ರಜ್ಞಾನಕ್ಕೆ ಒತ್ತು ನೀಡಿದ್ದರು. ಈ ಶೀರ್ಷಿಕೆಯನ್ನು ಇತ್ತೀಚಿನ ವರ್ಷಗಳಲ್ಲಿ ಅಪರೂಪವಾಗಿ ಬಳಸುವುದು ವಾಡಿಕೆಯಲ್ಲಿದೆ.

ಭಾರತದಲ್ಲಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಸ್ವಾತಂತ್ರ್ಯಪೂರ್ವದಲ್ಲೇ ತಮ್ಮ ‘ಸೌಂದರ್ಯ’ ಕಳೆದು ಕೊಳ್ಳಲು ಪ್ರಾರಂಭಿಸಿದ್ದನ್ನು 1948ರ ಉದ್ದಿಮೆ ನೀತಿ ತಿಳಿಸಿತ್ತು. 1956 ಮತ್ತು 1977ರಲ್ಲಿ ರಾಷ್ಟ್ರ ಸಾರಿದ ಉದ್ದಿಮೆ ನೀತಿಗಳು, ಸಣ್ಣ ಕೈಗಾರಿಕೆಗಳು ಎದುರಿಸು
ತ್ತಿರುವ ಸಂಕಷ್ಟಗಳಿಗೆ ಪುರಾವೆ ಒದಗಿಸಿದವೇ ವಿನಾ ಸೂಕ್ತ ಪರಿಹಾರ ನೀಡಲಿಲ್ಲ. 1980ರ ಉದ್ದಿಮೆ ನೀತಿಯು ಸಮಗ್ರ ಕೈಗಾರಿಕಾಭಿವೃದ್ಧಿಯ ಪರಿಕಲ್ಪನೆಯನ್ನು ಪ್ರಚುರಪಡಿಸುವಾಗ, ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಪರಸ್ಪರ ಪ್ರತಿಸ್ಪರ್ಧಿಗಳೆಂಬ ಬಹಳ ದಿನಗಳಿಂದ ಬೆಳೆದು ಬಂದ ಭಾವನೆ ಸಮಾಜಕ್ಕೆ ಪೂರಕವಲ್ಲವೆಂದು ಸ್ಪಷನೆ ನೀಡಿತು. ಆದರೂ ನಂತರದ ವರ್ಷಗಳಲ್ಲಿ ಗಮನಾರ್ಹವಾದ ಯಾವುದೇ ಸುಧಾರಣೆ ಆಗಲಿಲ್ಲ.

ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ರಾಜ್ಯದ 39 ತಾಲ್ಲೂಕುಗಳನ್ನು ತೀರಾ ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಿ 18 ವರ್ಷಗಳು ಕಳೆದುಹೋಗಿವೆ. ಪ್ರಾದೇಶಿಕ ಅಸಮಾನತೆ ಕಡಿಮೆಯಾಗಬೇಕಾದರೆ, ಸಂಕಷ್ಟಕ್ಕೀಡಾದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಂಜುಂಡಪ್ಪ ಸಮಿತಿಯ ನಿರೀಕ್ಷೆಯಂತೆ ಅಭಿವೃದ್ಧಿಯಾಗಬೇಕು ಎನ್ನುವುದು ರಾಜ್ಯದಲ್ಲಿ ವಿಕಸನ ಹೊಂದಿದ ‘ಕೈಗಾರಿಕಾ ವಿಕಾಸ’ ಯೋಜನೆಯ ಗುರಿ. ಈ ಗುರಿಯೂ ಸೋಲು ಕಂಡಿದೆ.

1991ರ ನಂತರ ದೊಡ್ಡ ಪ್ರಮಾಣದ ಉತ್ಪಾದನೆಯ ಲಾಭಗಳನ್ನು ಕೊಂಡಾಡುವ ಆರ್ಥಿಕ ಸುಧಾರಣೆಗಳು ಜಾರಿಯಾದಂತೆ, ಕಿರು ಮತ್ತು ಸಣ್ಣ ಕೈಗಾರಿಕೆಗಳ ಸಮಸ್ಯೆಗಳು ಇನ್ನಷ್ಟು ತೀವ್ರವಾದವು. ಕೆಲವು ಷರತ್ತುಗಳೊಂದಿಗೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ
ಅವಕಾಶಗಳನ್ನು ಬೃಹತ್ ಉದ್ಯಮಗಳು ಸಹ ಪಡೆದು ಕೊಂಡುಬಿಟ್ಟವು. ಈಗ ಕೊರೊನಾ ಅಬ್ಬರಿಸುತ್ತಿರುವಾಗ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಮಾರುಕಟ್ಟೆಯಲ್ಲಿ ತಮ್ಮ ಹುಟ್ಟುವಳಿ ಗಳಿಗೆ ಬೇಡಿಕೆಯಿಲ್ಲದೆ ಬೊಬ್ಬೆಹಾಕುವಂತಾಗಿದೆ. ಕರ್ನಾಟಕದಲ್ಲಿ ನೂತನ ಉದ್ದಿಮೆ ನೀತಿಯ ಮೂಲಕ ಅವುಗಳಿಗೆ ನೆರವಾಗುವ ವಚನವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೆಲವೇ ದಿನಗಳ ಹಿಂದೆ ನೀಡಿದ್ದಾರೆ. ‘ನವೋದ್ಯಮಗಳ ತವರು’ ಎಂದೇ ದೇಶ ಮಟ್ಟದಲ್ಲಿ ಕರ್ನಾಟಕ ಪ್ರಖ್ಯಾತವಾಗಿದೆ. ಇಲ್ಲೂ ಈ ಉದ್ಯಮಗಳಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಸದ್ಯಕ್ಕಂತೂ ಸವಾಲಾಗಿಯೇ ಕಾಣುತ್ತಿದೆ.

ಅರ್ಥಶಾಸ್ತ್ರದಲ್ಲಿ ಸೈದ್ಧಾಂತಿಕವಾಗಿ ಖ್ಯಾತಿ ಪಡೆದ ‘ಒಳಗೊಳ್ಳುವಿಕೆ ಅಭಿವೃದ್ಧಿ’ಯ ಸಿದ್ಧಾಂತಗಳು, ರಾಜಕೀಯ ಮತ್ತು ಆರ್ಥಿಕ ಒತ್ತಡಗಳು ಹೆಚ್ಚಿದಂತೆ ಬದಿಗೆ ಸರಿಯುತ್ತವೆ. ಉದ್ಯೋಗ ಸೃಷ್ಟಿಯ ಹಿನ್ನೆಲೆಯಲ್ಲಿ ಒಳಗೊಳ್ಳುವಿಕೆಯ ಅವಕಾಶ ಒದಗಿಸಬಲ್ಲ, ಸುಪ್ತ ಸಂಪನ್ಮೂಲಗಳ ವಿನಿಯೋಗಕ್ಕೆ ನೆರವಾಗಬಲ್ಲ ಮತ್ತು ಭಾರಿ ನಗರೀಕರಣದ ಒತ್ತಡ ಸೃಷ್ಟಿಸದ ಶೇ 74ರಷ್ಟು ಎಂಎಸ್ಎಂಇಗಳು ಇರುವುದು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ, ಬಿಹಾರ, ಆಂಧ್ರಪ್ರದೇಶ, ಗುಜರಾತ್‌, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮಾತ್ರ. ಉಳಿದ ರಾಜ್ಯಗಳಲ್ಲಿ ಈ ಕೈಗಾರಿಕೆಗಳು ಸಾಧಿಸಿದ ಪ್ರಗತಿ ಅಷ್ಟಕ್ಕಷ್ಟೆ. ದೇಶ ಈವರೆಗೆ ಕಂಡಿದ್ದು ಸೀಮಿತವಾದ ಆರ್ಥಿಕ ವಿಕೇಂದ್ರೀಕರಣ, ನಗಣ್ಯವಾದ ಒಳಗೊಳ್ಳುವಿಕೆಯ ಅಭಿವೃದ್ಧಿ.

1969ಕ್ಕಿಂತ ಮೊದಲೇ ಆದ್ಯತಾ ರಂಗವೆಂದು ಗುರುತಿಸಿಕೊಂಡ ಸಣ್ಣ ಕೈಗಾರಿಕೆಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಪೂರೈಸುವ ಗುರಿ ತಲುಪಲಾರದೆ, ಸರ್ಕಾರವು ಟೀಕೆಯಿಂದ ಪಾರಾಗಲು ಆದ್ಯತಾ ರಂಗದ ವ್ಯಾಪ್ತಿಯನ್ನೇ ಹಿಗ್ಗಿಸಿಬಿಡಬೇಕೆ? ಇಂಥ ಕಸರತ್ತು
ಗಳಿಂದಾಗಿ 1999ರ ಡಿಸೆಂಬರ್ ಹೊತ್ತಿಗೆ ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ತಮ್ಮ ಒಟ್ಟು ನಿವ್ವಳ ಪತ್ತಿನ ಶೇ 40ರಷ್ಟು ಭಾಗವನ್ನು ಆದ್ಯತಾ ರಂಗಕ್ಕೆ ನೀಡಿವೆ ಎಂದು ಮುಖವಾಡ ಹಾಕುವುದು ಕಷ್ಟವಾಗ ಲಿಲ್ಲ. ಇದನ್ನು ಆರ್‌ಬಿಐ ಮಾಜಿ ಗವರ್ನರ್ ವೈ.ವಿ.ರೆಡ್ಡಿ ಒಪ್ಪಿಕೊಂಡಿದ್ದಾರೆ. ಈ ತಂತ್ರದಿಂದ, ಪಾರಂಪರಿಕ ಆದ್ಯತಾ ರಂಗಗಳಾದ ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ಬವಣೆಯನ್ನು ಮುಚ್ಚಿಡುವುದು ಸಾಧ್ಯವಾಯಿತು. ಸಾಲದುದಕ್ಕೆ, ಕೊರೊನಾ ಹಾವಳಿಯಿಂದ ತತ್ತರಿಸುತ್ತಿರುವ ಮಹಾರಾಷ್ಟ್ರದಲ್ಲಿ ತೀರ ಸಾಮಾನ್ಯ ಉದ್ಯೋಗಿ ಗಳ ಸಂಪಾದನೆಯಲ್ಲಿ ಶೇ 20ರಿಂದ 50ರಷ್ಟು ಇಳಿಕೆ ಯಾದ ಇನ್ನೊಂದು ಬವಣೆಯನ್ನು ಎಂಎಸ್ಎಂಇ ರಂಗಕ್ಕೆ ಸಂಬಂಧಿಸಿದ 2020ರ ಮಹತ್ವಪೂರ್ಣ ಅಧ್ಯಯನವು ವರದಿ ಮಾಡಿದೆ. ಕೊರೊನಾದಿಂದ ತೀರಾ ಬಳಲಿದ ಉಳಿದ ರಾಜ್ಯಗಳೂ ಹೆಚ್ಚು ಕಡಿಮೆ ಇದೇ ಸ್ಥಿತಿ ಅನುಭವಿಸುತ್ತಿವೆ.

ಎಂಎಸ್ಎಂಇಗಳ ಅಭಿವೃದ್ಧಿಗೆ ಸಂಬಂಧಿಸಿದ ಪ್ರತ್ಯೇಕ ಕಾನೂನು ರಾಷ್ಟ್ರ ಮಟ್ಟದಲ್ಲಿ ಜಾರಿಯಾಗಿದ್ದು 2006ರಲ್ಲಿ. 2016ರ ಮೇ ತಿಂಗಳಲ್ಲಿ, ಆಗ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಂ ರಾಜನ್ ಅವರು ಭುವನೇಶ್ವರದಲ್ಲಿ ನವೋದ್ಯಮಗಳ ಸಮ್ಮೇಳನ ದಲ್ಲಿ ಮಾತನಾಡುತ್ತ, ಭಾರತದಲ್ಲಿ ಎಂಎಸ್ಎಂಇಗಳ ಪ್ರಗತಿ ಕುಂಠಿತಗೊಳ್ಳಲು ಇದ್ದ ಕಾರಣಗಳನ್ನು ವಿಶ್ಲೇಷಿಸಿದ್ದರು. ದೇಶದಲ್ಲಿ ಪರವಾನಗಿಯ ಆಳ್ವಿಕೆ ಮುಗಿದಿದ್ದರೂ ತಪಾಸಣೆಯ ಹಾವಳಿ ಮುಂದುವರಿದಿದ್ದರಿಂದ ಆದ ತೊಂದರೆಯನ್ನು ಮಾರ್ಮಿಕವಾಗಿ ವಿವರಿಸಿದ್ದರು. ಇಟಲಿಯಲ್ಲಿ ಸರ್ಕಾರದ ನಿಯಂತ್ರಣ ವಿಪರೀತವಾದ್ದ ರಿಂದ ನವೋದ್ಯಮಗಳು ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸಿಲ್ಲ, ಇಂಗ್ಲೆಂಡಿನಲ್ಲಿ ನಿಯಂತ್ರಣ ಕಡಿಮೆಯಾಗಿದ್ದರಿಂದ ಅವು ಭರದಲ್ಲಿ ಮುನ್ನಡೆದಿವೆ ಎಂದು ರಾಜನ್ ಹೇಳಿದ್ದು ಭಾರತದ ಪಾಲಿಗೆ ಒಂದು ಎಚ್ಚರಿಕೆ ಆಗಿತ್ತು. ರಾಜನ್ ಅವರನ್ನು ಬೇಗ ಬೀಳ್ಕೊಟ್ಟ ಕೇಂದ್ರ ಸರ್ಕಾರಕ್ಕೆ ಆ ಎಚ್ಚರಿಕೆಯ ಗಂಟೆಯು ಇನ್ನೂ ಕೇಳಿಸಿಲ್ಲ. ರಾಷ್ಟ್ರದಲ್ಲಿ ಎಂಎಸ್ಎಂಇಗಳ ಕಷ್ಟ ಸಹಜವಾಗಿ ಮುಂದುವರಿದಿದೆ.

ಎಂಎಸ್ಎಂಇಗಳಿಗೆ ಸಂಬಂಧಿಸಿದ ಹೆಚ್ಚಿನ ವಿಷಯಗಳು ಸಂವಿಧಾನದ ರಾಜ್ಯ ಯಾದಿಯಲ್ಲಿರುವುದರಿಂದ, ನೋಟುಗಳ ರದ್ದತಿ ಮತ್ತು ಜಿಎಸ್‌ಟಿಯಿಂದ ಉದ್ಭವಿಸಿದ ಸಮಸ್ಯೆಗಳಲ್ಲೂ ವೈವಿಧ್ಯ ಇದೆ. ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ 2018-19ನೇ ಸಾಲಿನ ಬಜೆಟ್ ಭಾಷಣದಲ್ಲಿ, ಎಂಎಸ್ಎಂಇಗಳು ಅನುಭವಿಸಬೇಕಾದ ನಿಷ್ಕ್ರಿಯ ಸ್ವತ್ತು ಮತ್ತು ಒತ್ತಡಕ್ಕೊಳಗಾದ ವ್ಯವಹಾರದ ಸಮಸ್ಯೆಗಳನ್ನು ಬಹಳ ನಾಜೂಕಾಗಿ ವಿವರಿಸಿ, ಆಡಳಿತಾರೂಢ ಸದಸ್ಯರಿಂದ ಸೈ ಎನಿಸಿಕೊಂಡಿದ್ದರು. ಆದರೆ ಅವೇ ಸಮಸ್ಯೆಗಳು ಎಂಎಸ್ಎಂಇಗಳ ಜೀವ ಹಿಂಡುವುದು ಅಬಾಧಿತವಾಗಿ ಮುಂದುವರಿಯಿತು. ಅವುಗಳನ್ನು ನಿವಾರಿಸಲು ಆಗಲಿಲ್ಲ!

ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಎಂಎಸ್ಎಂಇಗಳು ಕೊರೊನಾ ಹಾವಳಿ, ಲಾಕ್‌ಡೌನ್‌ ನಿಂದಾಗಿ ತತ್ತರಿಸುತ್ತಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇ ತಿಂಗಳು ನವದೆಹಲಿ ಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಕೊರೊನಾ ಬಾಧಿತ ಆರ್ಥಿಕತೆಗೆ ಚೇತರಿಕೆ ನೀಡಲು ₹ 6 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸುತ್ತ, ಇದರ ಶೇ 50 ರಷ್ಟು ಭಾಗವನ್ನು ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ ನೀಡಲು ಬಳಸಲಾಗುವುದು ಎಂದು ಭರವಸೆ ನೀಡಿದರು. 45 ಲಕ್ಷ ಸಣ್ಣ ಉದ್ಯಮಗಳಿಗೆ ಇದರಿಂದ ಹಿತವಾಗಲಿದೆ ಎನ್ನುವುದು ಅವರ ಅಂದಾಜು.

ಆರ್ಥಿಕ ಸಂಕಷ್ಟದಿಂದ ಸುಸ್ತಿದಾರರಾದ ಎಂಎಸ್ಎಂಇ ಗಳಿಗೆ ನೆರವಾಗಲು ₹ 20 ಸಾವಿರ ಕೋಟಿಯನ್ನು ಒದಗಿಸುವುದರಿಂದ ಎರಡು ಲಕ್ಷ ಉದ್ಯಮಗಳಿಗೆ ಅನುಕೂಲವಾಗಲಿದೆ ಎನ್ನುವುದು ನಿರ್ಮಲಾ ಅವರ ಲೆಕ್ಕಾಚಾರ. ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಟುವಾಗಿ ಟೀಕಿಸುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೂಡ ನಿರ್ಮಲಾ ಅವರ ಹೇಳಿಕೆಗಳನ್ನು ಮೆಚ್ಚಿದ್ದಾರೆ. ಇಷ್ಟಾದರೂ ಎಂಎಸ್ಎಂಇಗಳಿಗೆ ಸಾಲ ಮಾಡಲು ಈಗ ಧೈರ್ಯವೇ ಬರುತ್ತಿಲ್ಲ. ಸ್ಟೇಟ್ ಬ್ಯಾಂಕ್‌ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಕರ್ನಾಟಕದಲ್ಲಿ ಸಾಲ ಪಡೆಯಲು ಎಂಎಸ್ಎಂಇಗಳನ್ನು ಹುರಿದುಂಬಿಸಲಾರದೆ ಪರದಾಡುವುದನ್ನು ನೋಡಿದರೆ, ಕೊರೊನಾ ಸೋಂಕು ಹೆಚ್ಚಳದಿಂದ ಅಧಿಕಗೊಂಡ ಅವುಗಳ ಸಂಕಷ್ಟ ಸುಲಭವಾಗಿ ಗೋಚರವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು