ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗೆ ಶಾಪ ರೂಪದ ವರ!

ಪಕ್ಷವನ್ನು ತಳಮಟ್ಟದಿಂದ ಪ್ರಜಾಸತ್ತಾತ್ಮಕವಾಗಿ ಕಟ್ಟಲು ಅವಕಾಶ ಒದಗಿಬಂದಿದೆ
Last Updated 1 ಆಗಸ್ಟ್ 2019, 19:39 IST
ಅಕ್ಷರ ಗಾತ್ರ

ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ನಂಬಿಕೆಗಳ ಕಾರಣದಿಂದಾಗಿ ಬಹುತೇಕ ಸಮುದಾಯಗಳು ಕೆಲವು ಸಂಕೇತಗಳನ್ನು ನೆಚ್ಚಿಕೊಳ್ಳುತ್ತವೆ. ಕಾಂಗ್ರೆಸ್ಸಿನ ಪಾಲಿಗೆ ಪರಂಪರೆ, ಅಂದರೆ ಗಾಂಧಿ- ನೆಹರೂ ಕುಟುಂಬವು ಅಂತಹ ಸಂಕೇತ.

ಈ ಸಂಕೇತದ ಸುತ್ತ ಹೆಜ್ಜೆ ಹಾಕಿದ ಹೊಗಳುಭಟರು, ಆಸ್ಥಾನಿಕರು ಕಾಂಗ್ರೆಸ್ ಕಾರ್ಯಕರ್ತರ ಮನಸ್ಸಿನಲ್ಲಿ ವರ್ಷಗಳಿಂದಲೂ ಒಂದು ಮಾಯೆ ಸೃಷ್ಟಿಸಿದ್ದಾರೆ. ಪಕ್ಷದ ಬಹುತೇಕ ಹಿಂಬಾಲಕರು ಅಧಿಕಾರ ಮತ್ತು ಸಂಪತ್ತನ್ನು ಗಾಂಧಿಗಳಿಂದ ಪಡೆದಿದ್ದಾರೆ. ‘ಗಾಂಧಿ ತಾಯಿತ’ವು ಅವರ ಅಸ್ತಿತ್ವಕ್ಕೆ, ಪಕ್ಷವನ್ನು ಒಟ್ಟಾಗಿ ಇರಿಸಲಿಕ್ಕೆ ಮತ್ತು ಅಧಿಕಾರ ಹಿಡಿದಿಟ್ಟುಕೊಳ್ಳಲು ಅಗತ್ಯವಾಗಿತ್ತು. ಅದೃಷ್ಟದ ಈ ಹರಳನ್ನು ಬಿಟ್ಟುಬಿಟ್ಟರೆ ಪಕ್ಷ ಅವಸಾನದ ಹಾದಿ ಹಿಡಿಯುತ್ತದೆ ಎಂಬ ಅಂತರ್ಗತ ಸಂದೇಶ ಅವರ ಕ್ರಿಯೆಗಳಲ್ಲಿ ಇತ್ತು. ಪಕ್ಷವನ್ನು ಆಳುವ ಕುಟುಂಬವು ಇದನ್ನು ಒಪ್ಪಿಕೊಂಡಿತ್ತು.

ಈಗ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಭಕ್ತರಿಗೆ ಏನೋ ಕಳೆದುಕೊಂಡಂತೆ ಆಗಿದೆ. ತಾವು ನಂಬಿದ್ದ ದೇವಮಾನವ ತಮ್ಮಂತಹ ನರಮನುಷ್ಯರು ಮಾತ್ರ ಎಸಗಬಹುದು ಎನ್ನುವಂತಹ ಆರೋಪಕ್ಕೆ ಸಿಲುಕಿ ಜೈಲು ಪಾಲಾದಾಗ ಭಕ್ತರಲ್ಲಿ ಮೂಡುವ ಅನಾಥಭಾವ ಇವರಲ್ಲೂ ಮೂಡಿದೆ. ಆದರೆ, ತಮ್ಮ ನಿರ್ಧಾರ ಅಚಲ ಎನ್ನುವ ಮೂಲಕ ರಾಹುಲ್ ಅವರು ಸರಿಯಾದ, ಧೈರ್ಯದ ನಡೆ ಪ್ರದರ್ಶಿಸಿದ್ದಾರೆ. ಸೋಲಿನ ಹೊಣೆ ಹೊತ್ತುಕೊಂಡು, ತಮ್ಮನ್ನೇ ಉತ್ತರದಾಯಿ ಆಗಿಸಿ ಅವರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಭಾರತದ ಹಳೆಯ ರಾಜಕೀಯ ಪಕ್ಷಕ್ಕೆ ಈ ನಡೆಯಲ್ಲಿ ‘ವ್ಯಕ್ತಿ ಪೂಜೆಗೆ ಜಾಗವಿಲ್ಲ’ ಎಂಬ ಸಂದೇಶ ಇದೆ. ಉತ್ತರದಾಯಿತ್ವದಿಂದ ಯಾರೂ ನುಣುಚಿಕೊಳ್ಳುವಂತೆ ಇಲ್ಲ ಎಂಬ ಸಂದೇಶವಿದೆ. ಇದನ್ನು ಹೇಳಲು ರಾಹುಲ್ ಸಮಯ ತೆಗೆದುಕೊಂಡರು ಎಂಬುದು ನಿಜ. ಕೆಲವು ವರ್ಷಗಳ ಹಿಂದೆ ಅವರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಯತ್ನ ನಡೆಸಿದ್ದರು. ಪಕ್ಷದ ವಿವಿಧ ಹುದ್ದೆಗಳಿಗೆ ಚುನಾವಣೆ ಮೂಲಕ ಅರ್ಹರನ್ನು ಆಯ್ಕೆ ಮಾಡಿದ್ದರು. ಆದರೆ, ರಾಹುಲ್ ಅವರ ಸ್ಥಾನವು ಚುನಾವಣೆಯ ಪರಿಧಿಯಲ್ಲಿ ಇರಲಿಲ್ಲ. ಅವರ ತಾಯಿ ಸೋನಿಯಾ ಗಾಂಧಿ ಹೊಂದಿದ್ದ ಸ್ಥಾನಕ್ಕೆ, ಅವರ ಸುತ್ತ ಇರುವ ವಂದಿಮಾಗಧರ ಸ್ಥಾನಗಳಿಗೆ ಚುನಾವಣೆ ಇರಲಿಲ್ಲ.

ರಾಹುಲ್ ಅವರು ಮೊದಲೇ ರಾಜೀನಾಮೆ ಸಲ್ಲಿಸಬೇಕಿತ್ತು. ಈಗ ಕೂಡ ತಡವಾಗಿಲ್ಲ. ಸಿಂಹಾಸನ ಬಿಟ್ಟು ಇಳಿಯುವುದು ಸುಲಭದ ಕೆಲಸವೇನೂ ಅಲ್ಲ. ಹಿಂಬಾಲಕರು ಅಂಗಲಾಚಿ ಬೇಡಿಕೊಳ್ಳುವ ಮೂಲಕ ಆ ಕೆಲಸವನ್ನು ಅಸಾಧ್ಯವಾಗಿಸಿಬಿಡುತ್ತಾರೆ. ಆದರೂ ರಾಹುಲ್ ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿರುವುದನ್ನು ಮೆಚ್ಚಬೇಕು. ರಾಹುಲ್ ಈ ಸಂದರ್ಭದಲ್ಲಿ ಬರೆದಿರುವ ಪತ್ರ ಹೊಸ ಕೆಲಸದ ಆರಂಭಕ್ಕೆ ಮುನ್ನುಡಿ. ಪಕ್ಷದ ವಿವಿಧ ಹುದ್ದೆಗಳಿಗೆ ಚುನಾವಣೆ ನಡೆಸಿ, ನಿಷ್ಪ್ರಯೋಜಕರನ್ನು ಕೆಳಗಿಳಿಸಬೇಕು. ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ಪಟೇಲ್‌ ಅವರಂತಹ ಹಿರಿಯರ ನಂಬಿಕೆಗಳಲ್ಲಿ ಬದ್ಧತೆ ಇರುವವರನ್ನು, ಪಕ್ಷವನ್ನು ಕಟ್ಟುವ ಕೆಲಸಕ್ಕೆ ಹೆಗಲು ಕೊಡುವವರನ್ನು ಸೆಳೆಯಬೇಕು. ಇದು ಸುದೀರ್ಘ ಅವಧಿಯ ಕೆಲಸ. ಆದರೆ, ಕಾಂಗ್ರೆಸ್ಸನ್ನು ಉಳಿಸಲು ಇರುವ ಮಾರ್ಗ ಇದೊಂದೇ. ನೆಚ್ಚಿಕೊಳ್ಳುವಂತಹ ಬೇರೆ ವಿರೋಧ ಪಕ್ಷವೇ ಇಲ್ಲದಿರುವಾಗ, ಪ್ರಜಾತಂತ್ರ ಗಟ್ಟಿಯಾಗಿ ಉಳಿಯಲು ಕಾಂಗ್ರೆಸ್ ಅಗತ್ಯ.

ಪಾಠ ಕಲಿಯಲು ಕಾಂಗ್ರೆಸ್ ಪಕ್ಷವು ತೀರಾ ಹಿಂದಕ್ಕೆ ಹೋಗುವ ಅಗತ್ಯವಿಲ್ಲ. ಅದು ತನ್ನ ಇತಿಹಾಸದಿಂದಲೇ ಪಾಠ ಕಲಿತುಕೊಳ್ಳಬಹುದು. ತಮ್ಮ ಕಾಲಘಟ್ಟದಲ್ಲಿ ದಿಗ್ಗಜರೇ ಆಗಿದ್ದ ಹಲವರು ಈ ಪಕ್ಷದ ಅಧ್ಯಕ್ಷ ಪದವಿ ಅಲಂಕರಿಸಿದ್ದರು. ಅವರಲ್ಲಿ ವಿದೇಶಿಯರೂ ಇದ್ದರು. ಹುಟ್ಟಿದ ದಿನದಿಂದಲೂ ಈ ಪಕ್ಷವು ನೈಜ ಪ್ರಜಾತಂತ್ರ, ಆಲೋಚನೆ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಬಹುತ್ವ ಎಂಬ ಮೌಲ್ಯಗಳಲ್ಲಿ ನಂಬಿಕೆ ಇಟ್ಟುಕೊಂಡಿತ್ತು. ಪಕ್ಷವು ಮಹಾನ್ ವ್ಯಕ್ತಿಗಳನ್ನು ಹಾಗೂ ಜನಸಾಮಾನ್ಯರನ್ನು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸಿದ್ದು ಇದೇ ಕಾರಣಕ್ಕೆ. ರಾಜಕೀಯ ವಿಶ್ಲೇಷಕ ಸುಹಾಸ್ ಪಾಲ್ಶಿಕರ್ ಅವರು, ‘ನೆಹರೂ ಅವರು ಕಾಂಗ್ರೆಸ್ಸಿನಲ್ಲಿ ಬಹಳ ದೊಡ್ಡ ವ್ಯಕ್ತಿಯಾಗಿದ್ದರೂ, ನಿರ್ಧಾರಗಳನ್ನು ಕೈಗೊಳ್ಳುವಾಗ ರಾಜಿ ಮಾಡಿಕೊಳ್ಳುತ್ತಿದ್ದರು’ ಎಂದು ಹೇಳುತ್ತಾರೆ. ‘ನೆಹರೂ ಅವರು ನಾಯಕತ್ವದಲ್ಲಿ ಬಹುತ್ವಕ್ಕೆ ಅವಕಾಶ ನೀಡಿದ್ದರು. ಇಂದಿರಾ ಅವರು ಬಂದ ನಂತರವೇ ಕಾಂಗ್ರೆಸ್ಸಿನಲ್ಲಿ ವಂಶಪಾರಂಪರ್ಯ ರಾಜಕಾರಣ ನೆಲೆಯೂರಿತು’ ಎನ್ನುತ್ತಾರೆ ಅವರು.

ಪಕ್ಷದ ಉನ್ನತ ಮೌಲ್ಯಗಳು ಹಾಗೂ ಪರಂಪರೆಯಲ್ಲಿ ನಂಬಿಕೆ ಇರಿಸಿ, ಆತ್ಮಾವಲೋಕನ ಮಾಡಿಕೊಂಡು, ಪಕ್ಷವನ್ನು ಪುನಃ ಕಟ್ಟಲು ಪ್ರಾಮಾಣಿಕವಾಗಿ ಮುಂದಾಗುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಜವಾಬ್ದಾರಿ. ವಂಶಪಾರಂಪರ್ಯದ ಆಡಳಿತ ನಡೆಸುವವರು ಎಂಬ ಆರೋಪಕ್ಕೆ ಗುರಿಯಾಗಿರುವ ಕುಟುಂಬವು ಪಕ್ಷವನ್ನು ಸರಿಪಡಿಸುತ್ತದೆ ಎಂದು ನಂಬಿಕೊಂಡು ಕೂರಬೇಕಿಲ್ಲ.

ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಂಡ ಸೋಲು ಒಂದು ರೀತಿಯ ವರ ಎಂದು ಭಾವಿಸಬೇಕು. ಬಿಜೆಪಿ ಸೇರಿದಂತೆ ಭಾರತದ ಇತರ ಯಾವ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬುದನ್ನು ಗುರುತಿಸಬೇಕು. ಪಕ್ಷದಲ್ಲಿ ಸರ್ವಾಧಿಕಾರ ಆರಂಭವಾದ ದಿನದಿಂದಲೇ ಪಕ್ಷದ ಕುಸಿತದ ಬೀಜ ಬಿತ್ತನೆ ಆದಂತಾಯಿತು ಎಂಬುದನ್ನು ಕಾಂಗ್ರೆಸ್ಸಿನ ಇತಿಹಾಸವೇ ಹೇಳುತ್ತದೆ. ಯಾವ ಪಕ್ಷವೂ, ತನ್ನ ಯಾವುದೇ ಸ್ಥಾನಕ್ಕೂ ರಹಸ್ಯ ಮತದಾನದ ಮೂಲಕ ಅರ್ಹರನ್ನು ಆಯ್ಕೆ ಮಾಡುತ್ತಿಲ್ಲ. ಆದರೆ, ಸಂಸ್ಥಾಪನೆ ಆದ ದಿನದಿಂದ ನೆಹರೂ ಇರುವವರೆಗೆ ಕಾಂಗ್ರೆಸ್ಸಿನಲ್ಲಿ ಅಂಥದ್ದೊಂದು ಸಂಪ್ರದಾಯ ಇತ್ತು. ಬಿಜೆಪಿಯಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ ಎಂಬುದು ನಿಜ. ಆದರೆ ಅದರ ಅರ್ಥ ಆ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂದಲ್ಲ. ಅಲ್ಲಿ ತೀರ್ಮಾನಗಳನ್ನು ತೆರೆಯ ಹಿಂದೆ ಪಕ್ಷದ ಕಚೇರಿಗಳಲ್ಲಿ, ಪಂಚತಾರಾ ಹೋಟೆಲ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ರಾಜಕೀಯೇತರ ಎನ್ನಲಾದ ಆರ್‌ಎಸ್‌ಎಸ್‌ ಕೂಡ ಅಧಿಕಾರ ಚಲಾಯಿಸುತ್ತದೆ. ಈ ವಿಚಾರದಲ್ಲಿ ಪ್ರಾದೇಶಿಕ ಪಕ್ಷಗಳ ಬಗ್ಗೆಯಂತೂ ಹೇಳುವುದೇ ಬೇಡ.

ಎಲ್ಲ ಪ್ರಾದೇಶಿಕ ಪಕ್ಷಗಳನ್ನೂ ಅತ್ಯಂತ ಕಡಿಮೆ ವಿಶ್ವಾಸಾರ್ಹತೆ ಹೊಂದಿರುವ ಅಧಿಕಾರದಾಹಿ ಸರ್ವಾಧಿಕಾರಿಗಳು ನಡೆಸುತ್ತಿದ್ದಾರೆ. ಅವರು ತೃತೀಯ ಜಗತ್ತಿನ ಕೆಲವು ಸರ್ವಾಧಿಕಾರಿಗಳಂತೆ ಕಾಣುತ್ತಾರೆ. ಕೆಲವು ಪ್ರಾದೇಶಿಕ ಪಕ್ಷಗಳು ನಿರ್ಲಜ್ಜೆಯಿಂದ ವಂಶಪಾರಂಪರ್ಯ ರಾಜಕಾರಣ ನಡೆಸುತ್ತಿವೆ.

ಪಕ್ಷಗಳ ಒಳಗೆ ನೈಜ ಪ್ರಜಾತಂತ್ರ ಇಲ್ಲದಿದ್ದರೆ ನಾವು ನಿಜವಾದ ಪ್ರಜಾತಂತ್ರ ಹೊಂದಲು ಸಾಧ್ಯವೇ? ನಾವಿರುವುದು ಜ್ಞಾನದ ಕಾಲಘಟ್ಟದಲ್ಲಿ. ನಾವು ಅನುಭವಿಸುತ್ತಿರುವ ಪ್ರಜಾತಂತ್ರವನ್ನು ರೂಪಿಸಲು ಹಿಂದಿನವರಿಗೆ ಸಾಧ್ಯವಾಗಿದ್ದು ‘ಜ್ಞಾನದ ಕಾಲಘಟ್ಟ’ದ ಆಲೋಚನೆಯ ಕಾರಣದಿಂದಾಗಿ. ಸರ್ಕಾರವೊಂದನ್ನು ಹೇಗೆ ನಡೆಸುವುದು ಎಂಬುದು ವ್ಯಕ್ತಿಗತವಾಗಿ ಯಾರಿಗೂ ಗೊತ್ತಿಲ್ಲ ಎನ್ನುವ ಆಲೋಚನೆಯೇ, ನಾವೆಲ್ಲರೂ ಸೇರಿ ಒಂದು ವ್ಯವಸ್ಥೆಯನ್ನು ರೂಪಿಸಿ, ಹೊಸ ಆಲೋಚನೆಗಳನ್ನು ಕಟ್ಟಬೇಕು ಎನ್ನುವುದಕ್ಕೆ ದಾರಿಯಾಯಿತು.

ಕೇಂದ್ರದಲ್ಲಿಯಾಗಲೀ, ರಾಜ್ಯಗಳ ಮಟ್ಟದಲ್ಲಿಯಾಗಲೀ, ಭಾರತದಲ್ಲಿ ಯಾವ ಪಕ್ಷವೂ ಚರ್ಚೆಯನ್ನು ಪ್ರೋತ್ಸಾಹಿಸುತ್ತಿಲ್ಲ, ಭಿನ್ನ ದನಿಯನ್ನು ಸಹಿಸುತ್ತಿಲ್ಲ. ‘ಅಭಿಪ್ರಾಯಭೇದ ಎನ್ನುವ ಅಪರಾಧವನ್ನು ಮಹಾರಾಜರು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಎಮರ್ಸನ್ ಒಮ್ಮೆ ಹೇಳಿದ್ದ. ಆದರೆ, ಇಂತಹ ಧೋರಣೆಗಳು ದೇಶಕ್ಕೆ ಅಥವಾ ಯಾವುದೇ ಪಕ್ಷಕ್ಕೆ ಒಳಿತು ಮಾಡುವುದಿಲ್ಲ. ಕಾಂಗ್ರೆಸ್ಸಿಗೆ ಒಳ್ಳೆಯ ಅವಕಾಶವೊಂದು ಈಗ ಸಿಕ್ಕಿದೆ. ಗೋಖಲೆ, ಗಾಂಧಿ, ಬೋಸ್‌, ನೆಹರೂ, ಪಟೇಲ್‌ ಅವರಂತಹ ಮಹಾನ್ ನಾಯಕರ ಆದರ್ಶಗಳ ನೆಲೆಗಟ್ಟಿನಲ್ಲಿ ಪಕ್ಷವನ್ನು ದೃಢವಾಗಿ ಕಟ್ಟಬೇಕು.

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್
ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT