ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚುನಾವಣೆ: ನೆಲಕಚ್ಚಿದ ಕಾಂಗ್ರೆಸ್‌ನ ಕಳಪೆ ಸಾಧನೆಗೆ ಕಾರಣವಾದ 10 ಅಂಶಗಳು

ಫಲಿತಾಂಶ ವಿಶ್ಲೇಷಣೆ
Last Updated 11 ಫೆಬ್ರುವರಿ 2020, 10:20 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಗಮನ ಸೆಳೆದಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ಪಡೆಯುವ ಮೂಲಕ ಹಳೆಯ ಬೇರುಗಳನ್ನು ಹರಡಿಕೊಂಡಿದ್ದ ಕಾಂಗ್ರೆಸ್‌ಗೆ ಬಿಗ್‌ಶಾಕ್‌ ಕೊಟ್ಟಿದೆ.

ದೆಹಲಿಯಲ್ಲಿ ಮತ್ತೆ ಚಿಗುರುವಕಾಂಗ್ರೆಸ್‌ ಕನಸು ಕಮರಿ ಹೋಗಿದೆ.ದೆಹಲಿ ಮತದಾರರು ಮರಳಿ ಚೈತನ್ಯ ತುಂಬಲಿದ್ದಾರೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್‌ ಹೊಂದಿತ್ತು. ಆದರೆ ಮತದಾರ ಪ್ರಭುಗಳು ಕಾಂಗ್ರೆಸ್‌ ಅನ್ನು ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಹಾಗೂ ಸ್ಟಾರ್‌ ಪ್ರಚಾರಕರು ನಡೆಸಿದ ಕಾರ್ಯತಂತ್ರಗಳು ಕನಿಷ್ಠ ಪಕ್ಷ ಒಂದೂ ಸ್ಥಾನವನ್ನು ತಂದುಕೊಡಲು ಸಾಧ್ಯವಾಗಲಿಲ್ಲ.

2015ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳಿಕೆ ಪ್ರಮಾಣ ಶೇ 9 ರಷ್ಟಿತ್ತು. ಆದರೆ ಈ ಬಾರಿ ಶೇ 4.30ಕ್ಕೆ ಕುಸಿತವಾಗಿದೆ. ಎಎಪಿ ಮತ್ತು ಬಿಜೆಪಿ ನಡುವಿನ ಪ್ರಬಲ ಪೈಪೋಟಿಯಲ್ಲಿ ಕಾಂಗ್ರೆಸ್‌ ಚೇತರಿಸಿಕೊಳ್ಳಲೇ ಇಲ್ಲ. ಅದರ ಸಾಂಪ್ರದಾಯಿಕ ಮತಗಳು ಈ ಬಾರಿಯೂ ಎಎಪಿ ಪಾಲಾದವು.

ಕಾಂಗ್ರೆಸ್‌ ವೈಫಲ್ಯಕ್ಕೆ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಫಲಿತಾಂಶದ ದಿನ ಕಾಂಗ್ರೆಸ್‌ ಹಿನ್ನಡೆಯಲ್ಲಿದೆ ಎಂಬ ಟ್ರೆಂಡ್‌ ತಿಳಿಯುತ್ತಿದ್ದಂತೆ ರಾಜಕೀಯ ವಿಶ್ಲೇಷಕರು ಚೇತರಿಕೆಯಾಗದಿರುವುದಕ್ಕೆ ಕಾರಣಗಳು ಏನು ಎಂಬುದನ್ನು ಪಟ್ಟಿ ಮಾಡಿದ್ದಾರೆ.

* ಎಎಪಿ ಪಾಲಾದ ಸಾಂಪ್ರದಾಯಿಕ ಮತಗಳು...

ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‌ ಕೈ ಹಿಡಿಯಲಿವೆ ಎಂಬುದು ದೇಶದ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ಸಾಂಪ್ರದಾಯಿಕ ಮಾತು. ಆದರೆ ದೆಹಲಿಯಲ್ಲಿ ಕಳೆದ 15 ವರ್ಷಗಳಿಂದ ಈ ಮಾತು ಹುಸಿಯಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದ ನಾಯಕರು ತಮ್ಮ ಹಳೇ ಪ್ರಚಾರ ತಂತ್ರಕ್ಕೆ ಮೊರೆ ಹೋಗಿದ್ದೇ ಸೋಲಿನ ಒಂದು ಭಾಗ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಉತ್ತರಪ್ರದೇಶ, ಬಿಹಾರದಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಎಸ್‌ಪಿ, ಬಿಎಸ್‌ಪಿ ಜೆಡಿಯು ಹಾಗೂ ಆರ್‌ಜೆಡಿಗೆ ವರ್ಗಾವಣೆಯಾದಂತೆ ದೆಹಲಿಯಲ್ಲೂ ಕೂಡ ಕಾಂಗ್ರೆಸ್‌ ಮತಗಳು ಎಎಪಿಗೆ ಶಿಫ್ಟ್‌ ಆಗಿದ್ದು ಕಾಂಗ್ರೆಸ್‌ ಸೋಲಿನ ಮತ್ತೊಂದು ಭಾಗ.

* ಮತದಾರರ ಮನಮುಟ್ಟುವಲ್ಲಿ ವಿಫಲ...

ಚುನಾವಣೆ ಪ್ರಚಾರ ಸಮಯದಲ್ಲಿ ಕಾಂಗ್ರೆಸ್‌ಗೆ ಮತದಾರರ ನಾಡಿಮಿಡಿತ ಅರಿಯುವುದು ಸಾಧ್ಯವಾಗಲಿಲ್ಲ. ಆಡಳಿತ ಪಕ್ಷವಾದಎಎಪಿಯ ವೈಫಲ್ಯಗಳು ಹಾಗೂ ಬಿಜೆಪಿಯ ಕೋಮುವಾದ ತಂತ್ರವನ್ನು ಜನರಿಗೆ ಹೇಳುವಲ್ಲಿ ವಿಫಲವಾಯಿತು. ಎದುರಾಳಿ ಪಕ್ಷಗಳು ರಾಜಕೀಯ ಪ್ರಚಾರ ತಂತ್ರಕ್ಕಿಂತ ಭಿನ್ನವಾದ ಹಾದಿಯಲ್ಲಿ ಹೋಗಿದ್ದರೆ ಬಹುಶಃ ಮತಗಳಿಕೆ ಪ್ರಮಾಣವು ಹೆಚ್ಚುತ್ತಿತ್ತು ಎನ್ನಲಾಗಿದೆ.

* ತಡವಾಗಿ ಎಚ್ಚೆತ್ತುಕೊಂಡಿದ್ದು...

ಈ ಬಾರಿಯ ಚುನಾವಣೆಯಲ್ಲೂಸಾಂಪ್ರದಾಯಿಕ ಮತಗಳ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದ ಕಾಂಗ್ರೆಸ್‌ ಪ್ರಚಾರ ಕಣಕ್ಕೆ ತಡವಾಗಿ ಎಂಟ್ರಿ ಕೊಡುವ ಮೂಲಕ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದು ಈ ಶೋಚನೀಯ ಸ್ಥಿತಿಗೆ ಕಾರಣ. ಮತದಾನಕ್ಕೆ ಒಂದು ವಾರ ಇದೆ ಎನ್ನುವಾಗ ಎರಡು, ಮೂರು ದೊಡ್ಡ ಸಭೆಗಳನ್ನು ಆಯೋಜಿಸಿ ಸ್ಟಾರ್‌ ಪ್ರಚಾರಕರಿಂದ ಭಾಷಣ ಮಾಡಿಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಅಭ್ಯರ್ಥಿಗಳು ಕೂಡ ತಡವಾಗಿ ಪ್ರಚಾರ ಕಣಕ್ಕೆ ಧುಮಿಕಿದ್ದು ಹಾಗೂ ತಳಮಟ್ಟದಲ್ಲಿ ಸರಿಯಾಗಿ ಕೆಲಸ ಮಾಡದೇ ಇರುವುದು ಸೋಲಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

* ಗಿಮಿಕ್‌ ಮಾಡದಸ್ಟಾರ್‌ ಪ್ರಚಾರ ತಂತ್ರ...

ಕಾಂಗ್ರೆಸ್‌ ಪಕ್ಷದ ಸ್ಟಾರ್‌ ಪ್ರಚಾರ ತಂತ್ರ ಮತದಾರರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ, ಮನಮೋಹನ್‌ ಸಿಂಗ್‌, ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌, ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಗೇಲ್‌ಪ್ರಚಾರ ಮತದಾರನ ಮೇಲೆ ಯಾವುದೇ ಪರಿಣಾಮ ಉಂಟುಮಾಡಲಿಲ್ಲ. ಸಿಖ್‌ ಮತಗಳ ಮೇಲೆ ಕಣ್ಣಿಟ್ಟುಮನಮೋಹನ್‌ ಸಿಂಗ್‌,ಅಮರೀಂದರ್‌ ಸಿಂಗ್‌ ಮೂಲಕ ಪ್ರಚಾರ ಮಾಡಲಾಗಿತ್ತು. ಪ್ರಚಾರ ಸಭೆಯಲ್ಲಿ ಜನ ಸೇರುತ್ತಿದ್ದರೂ ಅವು ಮತಗಳಾಗಿ ಪರಿವರ್ತನೆಯಾಗಲಿಲ್ಲ.

* ತಡವಾಗಿ ಟಿಕೆಟ್‌ ನೀಡಿದ್ದು...

ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಗಳಿಗೆ ತಡವಾಗಿ ಟಿಕೆಟ್‌ ನೀಡಿದ್ದು ಸೋಲಿಗೆ ಮುಖ್ಯ ಕಾರಣ ಎಂಬುದು ಅಭ್ಯರ್ಥಿಗಳ ಆರೋಪ. ಕಾಂಗ್ರೆಸ್‌ ವಿಳಂಬ ನೀತಿಯಿಂದಾಗಿ ಅಭ್ಯರ್ಥಿಗಳು ತಳ ಮಟ್ಟದಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಚಾಣಕ್ಯಪುರಿ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತ ಹಿತೇಶ್‌ ಶರ್ಮಾ ಹೇಳಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಐದಾರು ಜನ ಟಿಕೆಟ್‌ ಆಕಾಂಕ್ಷಿಗಳು ಇರುತ್ತಾರೆ, ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಗೊಂದಲದಲ್ಲಿ ಸ್ಥಳೀಯವಾಗಿ ಯಾರೂ ಕೂಡ ಸರಿಯಾಗಿ ಪ್ರಚಾರ ಅಥವಾ ಕೆಲಸ ಮಾಡುವುದಿಲ್ಲ. ಕನಿಷ್ಠ 1 ತಿಂಗಳಾದರೂ ಅವಕಾಶ ಸಿಕ್ಕರೆ ಜನರ ಮನಸ್ಸನ್ನು ತಲುಪಬಹದಾಗಿತ್ತು ಎಂದು ಶರ್ಮಾ ಹೇಳುತ್ತಾರೆ.

*ಕೈಹಿಡಿಯದ ಮುಸ್ಲಿಂ, ಸಿಖ್‌ ಮತಗಳು...

ನಿರ್ಣಯಕ ಮತದಾರರಾಗಿರುವ ಮುಸ್ಲಿಂ ಮತ್ತು ಸಿಖ್‌ ಮತಗಳು ಕಾಂಗ್ರೆಸ್‌ ಕೈಹಿಡಿಯಲಿಲ್ಲ. ಈ ಮತಗಳು ಸಂಪೂರ್ಣವಾಗಿ ಎಎಪಿಗೆ ಹೋದ ಕಾರಣ ಆಮ್‌ಆದ್ಮಿ 50ರ ಗಡಿ ದಾಟಲು ಸಾಧ್ಯವಾಯಿತು. ಬಿಜೆಪಿ ಎದುರಿಸಲು ಕಾಂಗ್ರೆಸ್‌ಗೆ ಪರ್ಯಾಯವಾಗಿ ನಿಲ್ಲುವ ಶಕ್ತಿ ಇರುವುದು ಎಎಪಿಗೆ ಮಾತ್ರ ಎಂಬ ಸಂದೇಶ ಮತದಾರರಲ್ಲಿ ಮನೆ ಮಾಡಿರುವುದು ಕಾಂಗ್ರೆಸ್‌ ಹಿನ್ನಡೆಗೆ ಕಾರಣ.

* ನಾಯಕತ್ವ ಕೊರತೆ ಹಾಗೂ ಆಂತರಿಕ ಕಲಹ

ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರು ಹಾಕಿ ಕೊಟ್ಟಿದ್ದ ಭದ್ರ ಬುನಾದಿಯನ್ನು ನಂತರ ಬಂದ ನಾಯಕರು ಉಳಿಸಿಕೊಂಡು ಹೋಗಲಿಲ್ಲ. ಈ ಸಲದ ಚುನಾವಣೆ ಉಸ್ತುವಾರಿಯನ್ನು ಸುಭಾಶ್‌ ಚೋಪ್ರಾ ಅವರಿಗೆ ನೀಡಲಾಗಿತ್ತು. ಇದು ಕೆಲ ದೆಹಲಿ ಕಾಂಗ್ರೆಸಿಗರಿಗೆ ಇಷ್ಟವಿರಲಿಲ್ಲ. ಹಿರಿಯ ನಾಯಕ ಅಜಯ್‌ ಮಾಕೇನ್‌ ಮತ್ತು ಜೆ.ಪಿ. ಅಗರ್‌ವಾಲ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಕೆಲ ನಾಯಕರುಸುಭಾಶ್‌ ಚೋಪ್ರಾ ಅವರಿಗೆ ಸಾಥ್‌ ನೀಡಲಿಲ್ಲ ಎಂಬ ಆರೋಪಗಳು ಇವೆ. ಅಜಯ್‌ ಮಾಕೇನ್‌, ಅಗರ್‌ವಾಲ್‌, ಲಿಲೋಥಿಯಾ, ಅರವಿಂದರ್‌ ಸಿಂಗ್‌ ಅವರನ್ನು ಸುಭಾಶ್‌ ಚೋಪ್ರಾ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲಿಲ್ಲ ಎಂಬ ಮಾತುಗಳು ಇವೆ. ಸಾಂಘಿಕ ಹೋರಾಟ ಇಲ್ಲದೇ ಇರುವುದು ಮತ್ತು ಅಂತರಿಕ ಕಲಹ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

* ರಾಹುಲ್‌ ಗಾಂಧಿಯ ನಿರಾಸಕ್ತಿ

ದೇಶದ ರಾಜಧಾನಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಇಚ್ಛಾ ಶಕ್ತಿ ರಾಹುಲ್‌ ಗಾಂಧಿ ಅವರಲ್ಲಿ ಈ ಬಾರಿ ಕಂಡುಬರಲಿಲ್ಲ. ಈ ಕಾರಣದಿಂದ ಅವರು ಹಲವು ಪ್ರಚಾರ ಸಭೆಗಳಿಗೆ ಗೈರಾಗಿದ್ದರು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಳಮಟ್ಟದಲ್ಲಿ ಕೆಲಸ ಮಾಡುವಂತೆ ಅವರು ದೆಹಲಿ ನಾಯಕರಿಗೆ ಸೂಚನೆ ನೀಡಲಿಲ್ಲ ಅಥವಾ ಈ ಕುರಿತಂತೆ ಪಕ್ಷದಲ್ಲಿ ಯಾವುದೇ ಸಭೆಗಳನ್ನು ಅವರು ನಡೆಸಲಿಲ್ಲ.

* ಮುನ್ನೆಲೆಗೆ ಬಾರದ ಸ್ಥಳೀಯ ನಾಯಕತ್ವ...

ಈ ಸಲದ ದೆಹಲಿ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ತೋರಿದ ಕಾಂಗ್ರೆಸ್‌ನ ಸಾಂಘಿಕ ಪ್ರಯತ್ನ ಈ ಬಾರಿ ಕಂಡು ಬರಲಿಲ್ಲ. ಸ್ಥಳೀಯ ನಾಯಕರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಚರ್ಚೆಯೂ ಕೂಡ ಮುನ್ನಲೆಗೆ ಬರಲಿಲ್ಲ. ಶೀಲಾ ದೀಕ್ಷಿತ್‌ಗೆ ಸರಿಸಾಟಿಯಾಗಿ ನಿಲ್ಲುವಂತಹ ನಾಯಕರು ಕಾಂಗ್ರೆಸ್‌ನಲ್ಲಿ ಕಾಣಲಿಲ್ಲ.

* ಪ್ರಭಾವಿ ನಾಯಕರ ವಲಸೆ ಮತ್ತು ಸಂಘಟನೆ ಕೊರತೆ

ಕಾಂಗ್ರೆಸ್‌ ಶಕ್ತಿ ಕಳೆದುಕೊಳ್ಳುತ್ತಿದೆ ಎಂಬ ಭಾವನೆ ಹಲವು ನಾಯಕರಲ್ಲಿ ಇತ್ತು. ಈ ಹಿನ್ನೆಲೆಯಲ್ಲಿ ಕಳೆದ ಐದಾರು ವರ್ಷಗಳಲ್ಲಿ ಪ್ರಭಾವಿ ಕಾಂಗ್ರೆಸ್‌ ನಾಯಕರು ಬೇರೆ ಪಕ್ಷಗಳಿಗೆ ವಲಸೆ ಹೋದರು. ಪಕ್ಷ ಸ್ಥಳೀಯವಾಗಿ ಸಂಘಟನೆಯಾಗದಿರುವುದೇ ಹಿನ್ನಡೆಗೆ ಮೂಲ ಕಾರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT