ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತನೆಗೂ ಸರ್ಕಾರದ ಮರ್ಜಿ ಬೇಕೇ?

ಸಂವಾದಕ್ಕೆ ಎಲ್ಲಿ ಆಸ್ಪದ ಇರುವುದಿಲ್ಲವೋ ಅಲ್ಲಿ ಅಸಹನೆ, ದಬ್ಬಾಳಿಕೆ ರಾರಾಜಿಸುತ್ತವೆ
Last Updated 7 ಜನವರಿ 2020, 19:46 IST
ಅಕ್ಷರ ಗಾತ್ರ

18ನೇ ಶತಮಾನದ ಫ್ರೆಂಚ್ ತತ್ವಜ್ಞಾನಿ ವೋಲ್ಟೇರ್ ‘ನಿನ್ನ ಅಭಿಪ್ರಾಯವನ್ನು ವಿರೋಧಿಸುತ್ತೇನೆ. ಆದರೆ ಅಭಿಪ್ರಾಯ ವ್ಯಕ್ತಪಡಿಸುವ ನಿನ್ನ ಸ್ವಾತಂತ್ರ್ಯವನ್ನು ಸಂರಕ್ಷಿಸಲು ಪ್ರಾಣವಿರುವವರೆಗೂ ನಾನು ಬದ್ಧನಾಗಿರುತ್ತೇನೆ’ ಎಂದಿದ್ದ. ಯಾವ ಭಿನ್ನಾಭಿಪ್ರಾಯವಿದ್ದರೂ ಸಂವಾದ ಮಾತ್ರ ಎಂದಿಗೂ ಸ್ಥಗಿತವಾಗಬಾರದು ಎಂಬ ನಿಷ್ಠೆ, ಪಶ್ಚಿಮ ದೇಶಗಳ ಜ್ಞಾನವನ್ನು ಅಗಾಧವಾಗಿ ಬೆಳೆಸಿತು. ಆದರೆ ಇಂದು ನಮಗಿಂತ ಭಿನ್ನವಾಗಿ ನುಡಿಯುವವನೊಂದಿಗೆ ಸಂವಾದ ಹಾಗಿರಲಿ, ಅಂತಹವನ ಸದ್ದನ್ನು ಪೂರ್ತಿಯಾಗಿ ಅಡಗಿಸಿಬಿಡಬೇಕು ಎಂಬ ಪ್ರವೃತ್ತಿ ಕಾಣಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.

ಸಂವಾದಾತ್ಮಕ ತತ್ವಜ್ಞಾನದ (ಡಯಲೆಕ್ಟಿಕಲ್‌ ಫಿಲಾಸಫಿ) ತವರೂರೆನಿಸಿದ ಶೃಂಗೇರಿಯ ನೆಲದಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಸೈದ್ಧಾಂತಿಕ ಕಾರಣಕ್ಕಾಗಿ ವಿವಾದಗ್ರಸ್ತವಾಗಿರುವುದು ದುರದೃಷ್ಟಕರ. ಇಷ್ಟು ದಿನ, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ’ ಎಂಬ ಎಡಪಂಥೀಯರ ಅಭಿಪ್ರಾಯವನ್ನು ನಿರಾಕರಿಸುತ್ತಿದ್ದ ಇವರು ಈಗ ಆ ಮಾತನ್ನು ನಿಜ ಮಾಡಲು ಹೊರಟರೇ?

ನಮ್ಮ ಮತದ, ನಮ್ಮ ಸಿದ್ಧಾಂತದ ವ್ಯಾಪ್ತಿಗೆ ಒಳಪಡದ ಅದೆಷ್ಟೋ ಸಂಗತಿಗಳು ಲೋಕದಲ್ಲಿ ಮೊದಲಿನಿಂದಲೂ ಇವೆ ಮತ್ತು ಸದಾಕಾಲ ಇದ್ದೇ ಇರುತ್ತವೆ ಎಂಬ ವಿನಯ ಮತ್ತು ತಿಳಿವಳಿಕೆಯು ಜ್ಞಾನಾರ್ಜನೆಗೆ ಬಹಳ ಅಗತ್ಯ. ಏಕೆಂದರೆ ಆ ತಿಳಿವಳಿಕೆ ನಮ್ಮ ಮತ, ಸಿದ್ಧಾಂತಗಳನ್ನು ಪರಿಪೂರ್ಣತೆಯ ಕಡೆಗೆ ಸಾಗಿಸಬಲ್ಲದು. ಹಾಗಲ್ಲದೆ ಹಾಲಿ ಇರುವ ನಮ್ಮ ಸಿದ್ಧಾಂತವೇ ಪರಿಪೂರ್ಣ ಎಂಬ ಭ್ರಮೆ ಬೆಳೆಸಿಕೊಂಡಲ್ಲಿ ಆ ನಂಬಿಕೆಗೆ ವ್ಯತಿರಿಕ್ತವಾದ ಸಂಗತಿಗಳು ದುಃಸ್ವಪ್ನದ ಅನುಭವ ನೀಡುತ್ತವೆ, ಅವನ್ನು ನಾಶ ಮಾಡಬೇಕೆಂಬ ಹಿಂಸಾಬುದ್ಧಿ ಜನಿಸುತ್ತದೆ. ಲೋಕದಲ್ಲಿ ಮೂಲಭೂತವಾದ ಬೆಳೆಯಲು ಈ ಭ್ರಮೆಯೇ ಮೂಲಕಾರಣವಾಗಿದೆ.

ಸಿದ್ಧನಂಬಿಕೆಯನ್ನು ಅವಲಂಬಿಸಿದ ಬಲಪಂಥೀಯ ಚಿಂತನೆ ಎಂದಿಗೂ ಎಡಪಂಥದ ಚಿಂತನೆಯೊಂದಿಗೆ ಸರಿಗಟ್ಟಲಾರದು ಎಂದು ಪ್ರಗತಿಪರರು ತೀರ್ಮಾನಿಸುತ್ತಾರೆ. ಆದರೆ ಈ ತೀರ್ಮಾನವನ್ನು ಬಲಪಂಥೀಯರು ಒಪ್ಪುವುದಿಲ್ಲ, ಬಲಪಂಥದಲ್ಲೂ ಪ್ರಖರವಾದ ಚಿಂತನೆಗಳಿವೆ ಎಂದು ವಾದಿಸುವ ಅವರು ಆನಂದ ಕುಮಾರ ಸ್ವಾಮಿ, ದೀನದಯಾಳ್ ಉಪಾಧ್ಯಾಯ, ಸೀತಾರಾಮ ಗೋಯಲ್, ರಾಜೀವ್ ಮಲ್ಹೋತ್ರ ಮುಂತಾದ ಹೆಸರುಗಳನ್ನು ಉಲ್ಲೇಖಿಸುವುದಲ್ಲದೆ, ‘ಪ್ರಗತಿಪರರು ನೆಹರೂ ಕಾಲದಿಂದಲೂ ದೇಶದ ಎಲ್ಲ ವಿಶ್ವವಿದ್ಯಾಲಯಗಳನ್ನು ಮತ್ತು ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳನ್ನು ಆಕ್ರಮಿಸಿಕೊಂಡು ಬಂದಿರುವ ಕಾರಣ, ಎಡಪಂಥದ ಚಿಂತನೆಗೆ ದೊರೆತಷ್ಟು ಪ್ರಚಾರ, ಪ್ರತಿಷ್ಠೆಗಳು ನಮಗೆ ದೊರೆತಿಲ್ಲ’ ಎಂದು ಆಪಾದಿಸುತ್ತಾರೆ.

ನಮ್ಮ ಚಿಂತನೆಗೆ ಕ್ಷಾಮವಿಲ್ಲ, ಆದರೆ ಪ್ರಚಾರದ ಕೊರತೆ ಇದೆ ಎಂದು ಇವರು ವಾದಿಸುವುದಾದಲ್ಲಿ, ವಿಚಾರದ ಪ್ರಚಾರಕ್ಕೆ ಸಮ್ಮೇಳನದಂತಹ ವೇದಿಕೆಗಳನ್ನೇ ನೆವವಾಗಿಸಿಕೊಳ್ಳಬೇಕಲ್ಲವೇ? ನಮಗಿಂತಲೂ ಭಿನ್ನವಾದ ಸಿದ್ಧಾಂತ ಹೊಂದಿರುವ ಸಾಹಿತಿಯನ್ನು ಅಧ್ಯಕ್ಷನನ್ನಾಗಿಸಿದರೇನಂತೆ, ಎರಡು ದಿನ ನಡೆಯುವ ಸಮ್ಮೇಳನದಲ್ಲಿ ಆ ಭಿನ್ನ ಸಿದ್ಧಾಂತದೊಂದಿಗೆ ಸಂವಾದ ನಡೆಸಬಹುದ
ಲ್ಲವೇ? ಸ್ವವಿಚಾರದ ‘ಮಹತ್ವ’ವನ್ನು ಮತ್ತು ಪರವಿಚಾರದ ‘ಪೊಳ್ಳುತನ’ವನ್ನು ಸಾರ್ವಜನಿಕವಾಗಿಯೇ ಬಯಲು ಮಾಡಬಹುದಲ್ಲವೇ? (ಒಬ್ಬ ನಿಜವಾದ ವಿಚಾರವಾದಿ ಪರವಿಚಾರವನ್ನೂ ಆದರಭಾವದಿಂದ ಕಾಣುತ್ತಾನೆಂದು ಕವಿರಾಜಮಾರ್ಗಕಾರ ಹೇಳುತ್ತಾನೆ). ಅಧಿಕಾರ ವಹಿಸಿಕೊಂಡವರು ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವು ದನ್ನು ಬಿಟ್ಟು ಸಮ್ಮೇಳನವನ್ನೇ ಮುಂದೂಡಿರಿ, ಅಧ್ಯಕ್ಷರನ್ನೇ ಬದಲಾಯಿಸಿರಿ ಎಂದೆಲ್ಲ ಒತ್ತಡ ಹೇರಿದರೆ, ಅವರ ವೈಚಾರಿಕತೆಯಲ್ಲಿ ಸತ್ವವಿಲ್ಲ ಎಂದು ಅವರೇ ರುಜುವಾತು ಮಾಡಿಕೊಂಡಂತಾಗುತ್ತದೆ.

ಎಲ್ಲ ಸಿದ್ಧಾಂತಗಳೂ ಎಲ್ಲ ಕಾಲದಲ್ಲೂ ಲೋಪದೋಷಗಳಿಂದ ಕೂಡಿವೆ. ಪರಿಪೂರ್ಣತೆಗಾಗಿ ಹಂಬಲಿಸುವ ಒಬ್ಬ ವಿಚಾರವಾದಿಯಲ್ಲಿ ಎಲ್ಲ ದ್ವಂದ್ವಾತ್ಮಕ (ಡಯಲೆಕ್ಟಿಕಲ್) ಸಿದ್ಧಾಂತಗಳ ಸತ್ವ ಮೇಳೈಸಿರುತ್ತದೆ. ಟಾಲ್‌ಸ್ಟಾಯ್, ಗಾಂಧಿ, ಕುವೆಂಪು, ವಿವೇಕಾನಂದ ಮುಂತಾದವರಲ್ಲಿ ಪರಂಪರೆಯ ಆರಾಧನೆಯನ್ನೂ ಕಾಣಬಹುದು, ಹಾಗೆಯೇ ಪರಂಪರೆಯ ಕಟುವಿಮರ್ಶೆಯನ್ನೂ ಕಾಣಬಹುದು. ಇವರುಗಳದ್ದು ಸಿದ್ಧಹಾದಿಗಳನ್ನು ಬಯಸದ ಅಸಲಿ ಹುಡುಕಾಟವಾಗಿತ್ತು. ಆದ್ದರಿಂದಲೇ ಒಬ್ಬ ಪರಿಪೂರ್ಣ ವಿಚಾರವಾದಿ ತನ್ನ ಸಮಕಾಲೀನ ರಾಜಕಾರಣಕ್ಕೆ ಎಂದಿಗೂ ಅಪಥ್ಯನಾಗಿರುತ್ತಾನೆ.

ವಾಸುದೇವಮೂರ್ತಿ

ನಾನು ನಂಬಿದ ಹಾದಿಯಲ್ಲಿ ನಡೆದಾಗಲಷ್ಟೇ ಸತ್ಯದರ್ಶನವಾಗುತ್ತದೆ ಎಂದು ತೀರ್ಮಾನಿಸಿ
ಕೊಳ್ಳುವವನು ಅಂತಿಮವಾಗಿ ಸತ್ಯವನ್ನಲ್ಲ, ತನ್ನದೇ ಅಹಮಿಕೆಗೆ ಬಲಿಯಾಗುತ್ತಾನೆ. ಈ ಹಿನ್ನೆಲೆಯಲ್ಲೇ ಅಲ್ಲಮಪ್ರಭು ‘ಕುಲಮದ ಛಲಮದ ವಿದ್ಯಾಮದದವರ ಎನಗೆ ತೋರದಿರಾ’ ಎಂದು ಬೇಡಿಕೊಳ್ಳುವುದು. ಕುಲ, ಛಲ, ವಿದ್ಯೆಗಳು ಖಂಡಿತವಾಗಿ ಕೇಡಲ್ಲ. ಆದರೆ ಅವನ್ನು ಮದವನ್ನಾಗಿ, ಅಂತಿಮ ಸಿದ್ಧಾಂತವನ್ನಾಗಿ ಮಾಡಿಕೊಂಡಾಗ ಅನಾಹುತಗಳಾಗುತ್ತವೆ.

ತಾನು ನಂಬಿದ ಸಿದ್ಧಾಂತ ಪರಿಪೂರ್ಣವಲ್ಲ ಎಂಬ ವಿವೇಕ ಮೂಡಿಸಿಕೊಳ್ಳುವ ವ್ಯಕ್ತಿ ಅದನ್ನು ಪರಿಪೂರ್ಣವಾಗಿಸಲು ಬಯಸುತ್ತಾನೆ, ಅನ್ಯರೊಂದಿಗಿನ ಸಂವಾದ ದಿಂದಲಾದರೂ ಆ ಪರಿಪೂರ್ಣತೆ ಸಿದ್ಧಿಸಲಿ ಎಂದು ಹಂಬಲಿಸುತ್ತಾನೆ. ಅಸಲಿಗೆ ಸಂವಾದದ ಉದ್ದೇಶ ನಮ್ಮ ಮತವನ್ನು ಸಮರ್ಥಿಸಿಕೊಳ್ಳುವುದಲ್ಲ, ಅನ್ಯಮತದ ಖಂಡನೆಯೂ ಅಲ್ಲ. ಬದಲಾಗಿ ನಮ್ಮ ಮತದ ಓರೆಕೋರೆಗಳನ್ನು ಕಾಣುವುದಾಗಿರುತ್ತದೆ. ತನ್ನ ಮತದ ಲೋಪದೋಷಗಳನ್ನು ಮನಗಾಣುವ ವ್ಯಕ್ತಿ ತನ್ನ ಮತದ ಮೇಲಿನ ವ್ಯಾಮೋಹವನ್ನು ಕಳೆದುಕೊಂಡು ಸುಲಭವಾಗಿ ಅದರ ಪ್ರಭಾವದಿಂದ ಹೊರಬರುತ್ತಾನೆ. ಹಾಗೆ ಹೊರಬರಲು ನೆರವಾದ ತನ್ನ ಎದುರಾಳಿಯನ್ನು ವೈರಿಯಂತೆ ಕಾಣದೆ ಅವನಿಗೆ ಕೃತಜ್ಞನಾಗುತ್ತಾನೆ. ಎಲ್ಲೆಲ್ಲಿ ಸಂವಾದಕ್ಕೆ ಆಸ್ಪದವಾಗುವುದಿಲ್ಲವೋ ಅಲ್ಲೆಲ್ಲ ಹಿಂಸೆ, ಅಸಹನೆ, ದಬ್ಬಾಳಿಕೆಯೇ ರಾರಾಜಿಸುತ್ತದೆ. ಇದಕ್ಕೆ ಸದರಿ ವಿದ್ಯಮಾನವೇ ಸಾಕ್ಷಿಯಾಗಿದೆ.

ಸರ್ಕಾರ ಪಾರುಪತ್ಯ ನಡೆಸಿ, ಹಳೆಯ ಸರ್ಕಾರ ನೀಡಿದ ಪ್ರಶಸ್ತಿಯನ್ನು ಹಿಂಪಡೆದು ಅದಕ್ಕೆ ಹೊಸಬರನ್ನು ಆಯ್ಕೆ ಮಾಡುವುದು, ಅನುದಾನ ಬಿಡುಗಡೆ ಮಾಡುವುದಿಲ್ಲವೆಂದು ಹೆದರಿಸಿ ತನ್ನಿಚ್ಛೆಯಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯಂತ್ರಿಸುವುದು ಇವೆಲ್ಲ ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಬೆಳವಣಿಗೆಗಳಾಗಿವೆ.

ಒಂದು ಜೀವಂತ ಸಂಸ್ಕೃತಿಯಲ್ಲಿ ಸಹಜವಾಗಿಯೇ ಕಾಣಸಿಗುವ ವೈಚಾರಿಕ ಭಿನ್ನಾಭಿಪ್ರಾಯವು ರಾಜಕಾರಣಿಗಳ ಆಡುಂಬೊಲವಾಗಲು ಸಾಹಿತಿಗಳು ಆಸ್ಪದ ನೀಡಬಾರದು. ನಾನು ನಿಷ್ಠೆ ತೋರಿಸಬೇಕಾದುದು ಅಧಿಕಾರಾರೂಢ ರಾಜಕಾರಣಿಗಲ್ಲ, ನನ್ನೊಂದಿಗೆ ವಾಗ್ವಾದ ನಡೆಸುವ ನನ್ನ ಸಂಗಡಿಗನಿಗೆ ಎಂಬ ವೈಚಾರಿಕ ಬದ್ಧತೆ ಇಂದಿನ ಎಲ್ಲ ಪಂಥದ ಸಾಹಿತಿಗಳಿಗೆ ಅತ್ಯಗತ್ಯ.

ಈ ಹಿನ್ನೆಲೆಯಲ್ಲಿ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು ‘ಸಮ್ಮೇಳನಾಧ್ಯಕ್ಷರ ಆಯ್ಕೆ ಕಾರ್ಯಕಾರಿಣಿ ನಿರ್ಧಾರ. ಇದಕ್ಕೆ ಸಾರ್ವಜನಿಕರ, ಸಚಿವರ ಅಭಿಪ್ರಾಯ ಕೇಳಬೇಕಿಲ್ಲ. ಆಯ್ಕೆಗೆ ಬದ್ಧರಾಗಿದ್ದೇವೆ. ವೆಚ್ಚಗಳನ್ನು ತಗ್ಗಿಸಿ ಸರಳವಾಗಿ ಸಮ್ಮೇಳನ ಮಾಡಲು ನಿರ್ಧರಿಸಿದ್ದೇವೆ’ ಎಂದು ಹೇಳಿರುವುದು ಅತ್ಯಂತ ಸ್ವಾಗತಾರ್ಹ.

ಪರಿಷತ್ತು ಇನ್ನು ಮುಂದಾದರೂ ರಾಜಕಾರಣಿಗಳನ್ನು ಮತ್ತು ಅವರು ‘ನೀಡುವ’ ಅನುದಾನವನ್ನು ತಿರಸ್ಕರಿಸಿ ಸರಳವಾಗಿ ಸಣ್ಣಮಟ್ಟದಲ್ಲೇ ಸಮ್ಮೇಳನಗಳನ್ನು ನಡೆಸಬೇಕಾಗಿದೆ. ಅಧಿಕಾರಶಾಹಿಯ ನಿಯಂತ್ರಣದಿಂದ ಹೊರಬಂದಾಗಲಷ್ಟೇ ಸಾಹಿತ್ಯ ಸಂವೇದನೆ ಜೀವಂತವಾಗಿರಬಲ್ಲದು. ನಮ್ಮಹಿಂದಿನವರು ಹೊಸ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದರು. ಅಂದಿನಿಂದ ಇಂದಿನವರೆಗೆ ಕನ್ನಡ ಸಾಹಿತ್ಯ ವಿಪುಲವಾಗಿಯೇ ಬೆಳೆದಿದೆ. ಇನ್ನೇನಿದ್ದರೂ ಕನ್ನಡವನ್ನು ಶೈಕ್ಷಣಿಕವಾಗಿ ಬೆಳೆಸಬೇಕಾದ ಸವಾಲು ನಮ್ಮ ಮುಂದಿದೆ. ಸಾಹಿತಿಗಳ ನಡುವೆ ನಡೆಯುವ ಚರ್ಚೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು, ಈ ನಿಟ್ಟಿನಲ್ಲಿ ದಿಟ್ಟತನದ ನಿರ್ಧಾರ ಕೈಗೊಳ್ಳಬೇಕಿದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT