ಮಂಗಳವಾರ, ಜೂನ್ 2, 2020
27 °C
ಆರ್ಥಿಕ ಅನಕ್ಷರಸ್ಥ ಮಕ್ಕಳು, ಭವಿಷ್ಯದಲ್ಲಿ ವ್ಯವಹಾರಗಳನ್ನು ನಿಭಾಯಿಸುವುದಾದರೂ ಹೇಗೆ?

ವಿಶ್ಲೇಷಣೆ | ಕೂಸಿಗೂ ಕಲಿಸಿ ಕಾಸಿನಾಟ

ವೆಂಕಿ ರಾಘವೇಂದ್ರ - ಭಾರತಿ ಮಣೂರ್ Updated:

ಅಕ್ಷರ ಗಾತ್ರ : | |

ಒಂದು ಕ್ಷಣ ಯೋಚಿಸಿ, ಆಫರ್‌ಗಳ ಹೆಸರಿನಲ್ಲಿ ನಿಮ್ಮ ಮಕ್ಕಳು ಒಂದು ಜೊತೆ ಬಟ್ಟೆಯ ಬದಲು ಹಲವು ಜೊತೆಗೆ ಹಣ ಕಟ್ಟಿ ಕೊಂಡಿರುವುದನ್ನು ನೋಡಿರುತ್ತೀರಿ. ಇದು ಕೊಳ್ಳುಬಾಕತನವೋ ಅಥವಾ ಜಾಣತನವೋ ಎಂಬ ಯೋಚನೆ ಮನಸ್ಸಿಗೆ ಬಂದರೂ ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕೆಂದು ನಿಮಗೆ ನೀವೇ ಸಮಾಧಾನ ಮಾಡಿಕೊಂಡು ಸುಮ್ಮನಾಗಿರುತ್ತೀರಿ. ಆದರೆ ಇದು ಆರ್ಥಿಕ ಅನಕ್ಷರತೆ ಎಂಬುದನ್ನು ಊಹಿಸುವುದೇ ಇಲ್ಲ.

ನಮ್ಮ ಮಕ್ಕಳನ್ನು ನಾವೇ ದಡ್ಡರೆನ್ನುವುದೇ? ಛೇ, ಬಟ್ಟೆ ಕೊಳ್ಳುವುದು ಸಣ್ಣ ವಿಚಾರ ಎನಿಸಿರಲೂಬಹುದು. ಒಂದು ಜೊತೆ ಬಟ್ಟೆಯ ವಿಚಾರದಲ್ಲೇ ಎಡವುವ ನಮ್ಮ ಮಕ್ಕಳು ಭವಿಷ್ಯದಲ್ಲಿ ತಮ್ಮದೇ ಆದ ವ್ಯಾಪಾರ ಪ್ರಾರಂಭಿಸುವುದು, ಮನೆ ಕೊಳ್ಳುವುದು, ವಾಹನ ಕೊಳ್ಳುವಂತಹ ವ್ಯವಹಾರಗಳನ್ನು ಹೇಗೆ ನಿಭಾಯಿಸುತ್ತಾರೆ?

ಉದ್ಯೋಗ ಸಿಕ್ಕ ಹೊಸತರಲ್ಲೇ ಇವರ ಕೈಗೆ ಸಿಗುವ ‘ಕ್ರೆಡಿಟ್ ಕಾರ್ಡ್‌’ ಮಾನವ ಬಾಂಬ್ ಆಗಿ ಬದಲಾಗುತ್ತದೆ. ಸಾಲದ ಸುಳಿಗೆ ಸಿಲುಕಿ ಬಡ್ಡಿ, ಚಕ್ರಬಡ್ಡಿ ಎಂದೆಲ್ಲಾ ಹಣ ಕಟ್ಟಿ ಸದ್ದಿಲ್ಲದೇ ದಿವಾಳಿಯಾಗುವವರು ಕಡಿಮೆಯೇನಿಲ್ಲ. ಹಾಗಾದರೆ, ಇವರು ಆರ್ಥಿಕವಾಗಿ ಸದೃಢ ಮತ್ತು ಸುಸ್ಥಿರ ಗುರಿಗಳನ್ನು ಸಾಧಿಸುವಂತೆ ಮಾಡಲು ಯಾವ ರೀತಿಯ ಆರ್ಥಿಕ ವಿದ್ಯೆಯನ್ನು ಕಲಿಸಬೇಕು ಎಂಬುದು ನಮ್ಮ ಮುಂದಿರುವ ಶತಕೋಟಿ ರೂಪಾಯಿ ಪ್ರಶ್ನೆ.

ಮಕ್ಕಳನ್ನು ಆರ್ಥಿಕವಾಗಿ ಸಾಕ್ಷರರನ್ನಾಗಿ ಮಾಡುವ ಕಾರ್ಯ ಚಿಕ್ಕವಯಸ್ಸಿನಲ್ಲಿಯೇ ಪ್ರಾರಂಭವಾಗಬೇಕು. ಮನೆ ಮತ್ತು ಶಾಲೆ ಈ ಎರಡು ಸಂಸ್ಥೆಗಳ ಮೇಲೆ ಜವಾಬ್ದಾರಿ ಇರುತ್ತದೆ. ಆದರೆ, ಈ ಸಾಮಾಜಿಕ ಘಟಕಗಳ ಮೇಲೆ ಪ್ರಭಾವ ಬೀರುವ ನಂಬಿಕೆಗಳು ಅನೇಕ. ಉದಾಹರಣೆಗೆ, ಇವು ಆರ್ಥಿಕ ಸಾಕ್ಷರತೆಯನ್ನು ಲೆಕ್ಕಾಚಾರ ಅಥವಾ ಅಕೌಂಟೆನ್ಸಿ ಎಂದು ತಪ್ಪಾಗಿ ಅರ್ಥೈಸುತ್ತವೆ. ಶಿಕ್ಷಣ ನೀತಿಯಲ್ಲಿ ಹಣಕಾಸಿಗೆ ಸಂಬಂಧಿಸಿದ ಪಠ್ಯಕ್ರಮವೇ ಇಲ್ಲದಿದ್ದ ಮೇಲೆ ಅದನ್ನು ಕಲಿಸುವುದಾದರೂ ಹೇಗೆ?

ಇನ್ನು ಮಗುವಿನ ಮೊದಲ ಪಾಠಶಾಲೆ ಎನಿಸಿದ ಮನೆಯಲ್ಲಿ ಹಣಕಾಸಿನ ಚರ್ಚೆಗಳು ನಡೆಯುವುದು ಅಪರೂಪ. ಚಿಕ್ಕಮಕ್ಕಳೊಂದಿಗೆ ಕುಟುಂಬದ ಹಣಕಾಸಿನ ವಿಷಯವನ್ನು ಚರ್ಚಿಸಿದರೆ, ಆರ್ಥಿಕ ಗುಟ್ಟನ್ನು ಅರಿತ ಅವರು ಸ್ವೇಚ್ಛಾಚಾರಿಗಳಾದಾರು ಎಂಬ ಭಯ ಒಂದೆಡೆಯಾದರೆ, ಹಣಕಾಸು ವ್ಯವಹಾರ ಕುಟುಂಬದ ಮುಖ್ಯಸ್ಥನಿಗೆ ‘ಶ್ರೇಯ’ ಎಂಬುದು ಇನ್ನೊಂದು ತರ್ಕ. ಹ್ಞಾಂ! ಹಣ ಗಿಡದಲ್ಲಿ ಬೆಳೆಯುವುದಿಲ್ಲ ಎಂಬ ಬುದ್ಧಿಮಾತು ಮಾತ್ರ ಹಲವಾರು ಸಲ ಪೋಷಕರಿಂದ ಪಠಿಸಲ್ಪಡುತ್ತದೆ. ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಎಂಬ ಅತ್ಯುತ್ತಮ ಪುಸ್ತಕದ ಕರ್ತೃ ರಾಬರ್ಟ್‌ ಕಿಯೋಸ್ಕಿ ‘ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗಲು ಈ ಆರ್ಥಿಕ ಅನಕ್ಷರತೆಯೇ ಕಾರಣ’ ಎನ್ನುತ್ತಾರೆ. ಏಕೆಂದರೆ ಶ್ರೀಮಂತರು ತಮ್ಮ ಆರ್ಥಿಕ ಗುರಿ ಮತ್ತು ನಿರ್ಧಾರಗಳನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಇದು ಉಳಿದ ಸ್ತರಗಳಲ್ಲಿ ಚರ್ಚೆಯ ವಿಷಯವೇ ಅಲ್ಲ.

ಕೆಲವು ಸಮುದಾಯಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ದುಡ್ಡಿನ ಹರಿವಿನ ಆಟವನ್ನು ಮಕ್ಕಳಿಗೆ ಕಲಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ, ಗುಜರಾತ್‌ ಮತ್ತು ರಾಜಸ್ಥಾನದ ವ್ಯಾಪಾರಿ ವರ್ಗ. ಇವರು, ಹಣದ ಹೊಸ ಆಟಗಳನ್ನು ಆಡಲು ಹಳೆಯ ನಿಯಮಗಳು ಸರಿ ಹೊಂದುವುದಿಲ್ಲ ಎಂಬುದನ್ನು ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಮನದಟ್ಟು ಮಾಡಿಸುತ್ತಾರೆ. ಸ್ವಂತ ಪ್ರದೇಶಗಳಿಂದ ವಲಸೆ ಹೋಗಿ ಇನ್ನೊಂದೆಡೆ ನೆಲೆಸಿ, ಆ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಿ ವ್ಯವಹಾರ ಮಾಡುವ ಇವರ ಕಲೆ ನಿಜಕ್ಕೂ ಶ್ಲಾಘನೀಯ.

ಆರ್ಥಿಕ ಸಾಕ್ಷರತೆ ಎಂಬುದು ಹಣದ ಹರಿವನ್ನು ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಸಾಮರ್ಥ್ಯ ಅಷ್ಟೇ ಅಲ್ಲ; ಹಣವನ್ನು ಗಳಿಸುವುದು, ಖರ್ಚು ಮಾಡುವುದು, ಉಳಿತಾಯ ಮಾಡುವುದು ಮತ್ತು ಹೂಡಿಕೆಯ ಮೂಲ ಪರಿಕಲ್ಪನೆಯೂ ಆಗಿರುತ್ತದೆ. ಈ ಸಾಮರ್ಥ್ಯವನ್ನು ಬೇರೆ ಕೌಶಲಗಳಂತೆಯೇ ಮಕ್ಕಳಲ್ಲಿ ಬೆಳೆಸಬಹುದು. ಸೋಜಿಗದ ವಿಷಯವೆಂದರೆ, ಇದು ಭಾರತದ ಸಮಸ್ಯೆಯಷ್ಟೇ ಅಲ್ಲ, ಆರ್ಥಿಕತೆಯಲ್ಲಿ ಮೂಂಚೂಣಿಯಲ್ಲಿರುವ ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್‌ನಂತಹ ದೇಶಗಳಲ್ಲೂ ಇದೇ ಸ್ಥಿತಿ ಇದೆ.

ಅಮೆರಿಕದ ‘ಪರ್ಸನಲ್ ಫೈನಾನ್ಸ್’ನಲ್ಲಿ ಹಿರಿಯ ಸಂಪಾದಕರಾಗಿರುವ ಸುಸಾನ್ಹ ಸ್ನೀಡರ್ ಅವರ ಪ್ರಕಾರ, ಅಮೆರಿಕದಲ್ಲಿ ಪ್ರತಿ ಐವರು ಮಕ್ಕಳಲ್ಲಿ ಒಂದು ಮಗುವಿಗೆ ಆರ್ಥಿಕ ಕೌಶಲದ ಮೂಲಜ್ಞಾನವೂ ಇಲ್ಲ. ಈ ವಿಷಯವನ್ನು ಪಿಸಾ (ಪ್ರೋಗ್ರಾಂ ಫಾರ್ ಇಂಟರ್‌ನ್ಯಾಷನಲ್ ಸ್ಟೂಡೆಂಟ್ ಅಸೆಸ್‌ಮೆಂಟ್) ಸಂಸ್ಥೆ ಕೂಡಾ ಎತ್ತಿಹಿಡಿದಿದೆ. ಇದಕ್ಕೂ ಹೆಚ್ಚಾಗಿ ಶೇ 54ರಷ್ಟು ಯುವಕರಿಗೆ ತಮ್ಮ ವಿದ್ಯಾಭ್ಯಾಸಕ್ಕಾಗಿ ಪಡೆದ ಸಾಲದ ತಿಂಗಳ ಕಂತಿನ ಮೊತ್ತದ ಅರಿವೂ ಇಲ್ಲದಿರುವುದು. ಇವೆಲ್ಲವೂ ಮಕ್ಕಳಲ್ಲಿ ಆರ್ಥಿಕ ಕೌಶಲವನ್ನು ಚಿಕ್ಕ ವಯಸ್ಸಿನಿಂದಲೇ ಬೆಳೆಸುವ ಅವಶ್ಯಕತೆಯನ್ನು ಸಾರಿ ಹೇಳುತ್ತಿವೆ.

ಚಾಣಕ್ಯನ ಮಾತಿನಂತೆ ‘ಈ ಭೂಮಿಯ ಮೇಲೆ ಪ್ರತಿಯೊಂದು ಸೇವೆಗೂ ಬೆಲೆಯಿದೆ. ಬೆಲೆ ಹೊಂದಿದ ಪ್ರತಿಯೊಂದು ವಸ್ತುವೂ ಸಂಪತ್ತೇ ಆಗಿದೆ’. ಇದನ್ನು ಕೆಲವೇ ಕೆಲವು ಆರ್ಥಿಕ ವಿದ್ಯಾವಂತರು ಅರ್ಥ ಮಾಡಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಇದಕ್ಕೆ, ಅವರ ಸೇವೆಗಳನ್ನು ಆಧರಿಸಿದ ಸ್ಟಾರ್ಟ್ಅಪ್‌ಗಳೇ ಸಾಕ್ಷಿ. ಇವುಗಳನ್ನು ಪ್ರಾರಂಭಿಸಿದವರು ಯಾರೂ ಅಕೌಂಟೆನ್ಸಿ ಪ್ರವೀಣರಲ್ಲ, ಕೇವಲ ಹಣದ ಹರಿವನ್ನು ತಮಗೆ ಅನುಕೂಲವಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ನಿಸ್ಸೀಮರು ಅಷ್ಟೆ.

ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಬೆಳೆಸುವುದು ಕಷ್ಟವೇನಲ್ಲ. ಆರ್ಥಿಕ ಸಾಕ್ಷರತೆಯ ಪಠ್ಯವನ್ನು ಕಲಿಸಲು ರಚನಾತ್ಮಕ ಅಥವಾ ಅಂತರ್-ಪಠ್ಯಕ್ರಮ ವಿಧಾನವನ್ನು ಬಳಸುವುದು ಸೂಕ್ತ. ಇದಕ್ಕಾಗಿ ಸರ್ಕಾರ ಅನುಸರಿಸುವ ನೀತಿ ನಿಯಮಗಳು ಮಾತ್ರ ವಿಶೇಷವಾಗಿರಬೇಕು. ಒಂದು ಪ್ರತ್ಯೇಕ ಪಠ್ಯಕ್ರಮವನ್ನು ತಯಾರಿಸಿ ಚಿಕ್ಕತರಗತಿಗಳಿಂದಲೇ ಅದನ್ನು ಬೋಧಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಇರುವ ಗಣಿತ ಅಥವಾ ಅಕೌಂಟೆನ್ಸಿ ಶಿಕ್ಷಕರನ್ನು ಬಳಸಿಕೊಳ್ಳುವುದರ ಜೊತೆಗೆ ಆರ್ಥಿಕ ಸಾಕ್ಷರತೆಯನ್ನು ಗುಣಮಟ್ಟದಲ್ಲಿ ಬೋಧಿಸುವ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಪಠ್ಯದಲ್ಲಿ ಬರಬಹುದಾದ ಪ್ರಾಜೆಕ್ಟ್‌ಗಳನ್ನು ನಿಜಜೀವನದ ಕೌಶಲಗಳಾಗಿ ಬದಲಾಯಿಸಲು ಪ್ರಯತ್ನಿಸಬೇಕು. ಮೊನೊ‍ಪೊಲಿ, ಕ್ಯಾಷ್ ಫ್ಲೋನಂತಹ ಆಟಗಳನ್ನು ಶಾಲಾ ಪಂದ್ಯಾಟಗಳಾಗಿ ಬಳಸಬೇಕು. ಮನೆಗಳಲ್ಲಿ ಸಂಪತ್ತಿಗೆ ಸಂಬಂಧಿಸಿದ ವಿಚಾರಗಳನ್ನು ಮಕ್ಕಳೊಂದಿಗೆ ಚರ್ಚಿಸಲು ಪೋಷಕರನ್ನು ಪ್ರೋತ್ಸಾಹಿಸಬೇಕು.

ಈ ಆರ್ಥಿಕ ಸಾಕ್ಷರತೆಯನ್ನು ಬಲಪಡಿಸಲು 2013ರಲ್ಲಿ ಎನ್.ಸಿ.ಎಫ್.ಇ (ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್‌) ಸಂಸ್ಥೆಯನ್ನು ಸ್ಥಾಪಿಸಲಾಗಿದೆಯಾದರೂ ಎಲ್ಲಾ ಮಕ್ಕಳಿಗೆ ಇದರ ಲಾಭ ಸಿಗುತ್ತಿಲ್ಲ. ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಆರ್ಥಿಕ ಸಾಕ್ಷರತೆಯನ್ನು ಹೊಂದಿ ದೇಶದ ಪ್ರಗತಿಗೆ ತಮ್ಮ ಕೊಡುಗೆಯನ್ನು ನೀಡಲು ಅವರಿಗೆ ವಿಶೇಷ ಕಲಿಕೆಯ ವ್ಯವಸ್ಥೆಯಾಗಬೇಕು. ಇವೆಲ್ಲವನ್ನೂ ಮೀರಿ ನಮ್ಮ ಮಕ್ಕಳೂ ಆರ್ಥಿಕವಾಗಿ ಸಾಕ್ಷರರಾಗಬೇಕು ಎಂಬ ಮನೋಭಾವ ನಮ್ಮ ನಾಗರಿಕರಲ್ಲಿ ಮೂಡಬೇಕು.

ಸಂಪತ್ತಿನ ನಿಯಮಗಳನ್ನು ಕಲಿತ ವಿದ್ಯಾರ್ಥಿಗಳು ಮುಂದೆ ನೌಕರಿಯಿಂದ ಸುರಕ್ಷತೆ, ನಿವೃತ್ತಿ ಯೋಜನೆ, ಭವಿಷ್ಯನಿಧಿ, ಷೇರು ಮಾರುಕಟ್ಟೆ, ಬಂಡವಾಳ ಹೂಡಿಕೆ ಮುಂತಾದ ಕಾರ್ಯಗಳನ್ನು ಕ್ಷಮತೆಯಿಂದ ನಿಭಾಯಿಸುತ್ತಾರೆ. ತಮ್ಮದೇ ಆದ ಆರ್ಥಿಕ ಗುರಿಗಳನ್ನು ಹೊಂದಿ ಹೂಡಿಕೆದಾರರು, ವ್ಯಾಪಾರಸ್ಥರು ಆಗುತ್ತಾರೆ. ಸಮಯ ಬದಲಾಗಿದೆ. ಇನ್ನು ಶಿಕ್ಷಣ ಕ್ರಮ ಕೂಡ ಬದಲಾಗಬೇಕು. ಜಾಗತೀಕರಣ ಮತ್ತು ಮಾಹಿತಿ ತಂತ್ರಜ್ಞಾನದಿಂದ ಒಂದು ಹಳ್ಳಿಯಾಗಿ ಬದಲಾಗಿರುವ ನಮ್ಮ ಪ್ರಪಂಚದ ಎಲ್ಲಾ ಕಡೆಯೂ ಹೋಗಿ ವ್ಯವಹರಿಸಲು ಅವರು ಸಶಕ್ತರಾಗುತ್ತಾರೆ. ಹೀಗೆ ನಮ್ಮ ಮಕ್ಕಳ ಆರ್ಥಿಕ ಭವಿಷ್ಯ ಉಜ್ವಲವಾದರೆ ದೇಶ ಸುರಕ್ಷಿತವಲ್ಲವೇ?


ಲೇಖಕರು: ಹಿರಿಯ ಉಪಾಧ್ಯಕ್ಷ, ಸೇಫ್‌ ವಾಟರ್‌ ನೆಟ್‌ವರ್ಕ್‌, ನ್ಯೂಯಾರ್ಕ್ ಮತ್ತು ಶಿಕ್ಷಕಿ, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು