ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಒಪ್ಪಾಗಿರುವ ದುರಿತ ಕಾಲದಲಿ...

ನಮ್ಮದೇ ಚಾಟಿ ನಮಗೇ ಏಟು ಎಂಬುದು ತಿಳಿಯದ ಸಮಾಜವೊಂದರಲ್ಲಿ ಆದ್ಯತೆಗಳ ಪಲ್ಲಟ
Last Updated 18 ಜುಲೈ 2019, 19:45 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಎಂಬ ‘ರಾಷ್ಟ್ರ’ದೊಳಗೆ ನಡೆಯುತ್ತಿರುವ ಘಟನೆಗಳಲ್ಲಿ ಯಾವುದು ಸ್ಥಳೀಯ ಸುದ್ದಿ? ಯಾವುದು ರಾಜ್ಯ ಸುದ್ದಿ? ಈ ಅನುಮಾನಕ್ಕೆ ಕಾರಣ– ಸಮಾಜವೊಂದು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿಗಳು ಕೇವಲ ಸ್ಥಳೀಯ ಸುದ್ದಿಯಾಗಿ ಮರೆಗೆ ಸರಿಯುತ್ತಾ, ಶಾಸಕರ ರೆಸಾರ್ಟ್‍ವಾಸವೆಂಬುದು ಗಳಿಗೆ ಗಳಿಗೆಗೂ ಬ್ರೇಕಿಂಗ್ ಎನಿಸಿ ರೋಚಕಗೊಳಿಸುವ ಮತ್ತು ಜನರು ಕೂಡ ಅದನ್ನು ಕಡ್ಲೆಮಿಠಾಯಿ ತರ ಸವಿಯುತ್ತಾ ನೋಡುತ್ತಿರುವುದೇ ಆಗಿದೆ.

ಒಂದೆಡೆ ಮಲೆನಾಡಿಗರು ಶರಾವತಿಯ ಮೇಲೆ ರಾಜಧಾನಿಯ ಕಣ್ಣು ಬಿದ್ದಿರುವುದನ್ನು ಆತಂಕದಿಂದ ಪ್ರತಿಭಟಿಸುತ್ತಿದ್ದರೆ, ಅದು ಶಿವಮೊಗ್ಗದ ಆವೃತ್ತಿಗಳಲ್ಲಿ ದೊಡ್ಡ ಸುದ್ದಿಯಾಗಿ ರಾಜ್ಯ ಪುಟದಲ್ಲಿ ‘ಒಂದು ಸುದ್ದಿ’ಯಷ್ಟೇ ಆಗಿದೆ. ಇನ್ನೊಂದೆಡೆ ಭದ್ರಾವತಿಯ ವಿ.ಐ.ಎಸ್.ಎಲ್ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಹೊರಟಿದೆ ಎಂದು ಅದರ ವಿರುದ್ಧ ದಿನನಿತ್ಯ ಪ್ರತಿಭಟಿಸುತ್ತಿರುವ ಜನರ ನಿಟ್ಟುಸಿರು ರಾಜ್ಯಕ್ಕೆ ಬೇಕಾಗಿಯೇ ಇಲ್ಲ. ಹಿಂದೆ ನೇತ್ರಾವತಿ ನದಿ ತಿರುವು ಯೋಜನೆಯನ್ನು ಕರಾವಳಿಯ ಜನ ವಿರೋಧಿಸಿದಾಗ, ಮಹದಾಯಿಗಾಗಿ ವರ್ಷಾನುಗಟ್ಟಲೆ ಹೋರಾಟ ನಡೆದಾಗ ರಾಜ್ಯದ ಇತರ ಭಾಗದವರು ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಪುತ್ತೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅವಳದೇ ಸಹಪಾಠಿಗಳು ನಡೆಸಿದ್ದಾರೆ ಎನ್ನಲಾದ ಅತ್ಯಾಚಾರ ಪ್ರಕರಣದೆಡೆಗೂ ಅಂತಹುದೇ ನಿರ್ಲಕ್ಷ್ಯ ಕಾಣುತ್ತಿದೆ.

ಇಂತಹ ಪ್ರಕರಣಗಳಾದಾಗ, ಮನುಕುಲವೇ ಈ ಕುರಿತು ಅತ್ಯಂತ ತೀವ್ರವಾಗಿ ಆಲೋಚಿಸಬೇಕಾಗುತ್ತದೆ. ಮನುಷ್ಯರು ಪರಸ್ಪರ ನಂಬಿಕೆಯಿಂದಲೇ ವ್ಯವಹರಿಸಬೇಕಾದ ಸಾವಿರ ಸಂಗತಿಗಳಿರುತ್ತವೆ. ಆರ್ದ್ರವಾದ ಭಾವಗಳಿರುತ್ತವೆ. ಇವುಗಳನ್ನು ಕಳೆದುಕೊಳ್ಳುತ್ತೇವೆಂದರೆ ಆಮೇಲೆ ಉಳಿಯುವುದಾದರೂ ಏನು? ಹೈಸ್ಕೂಲಿನ ಅರೆಮುಗ್ಧತೆ ಹಾಗೂ ಪಿಯುಸಿಯ ಗೊಂದಲದ ಕಣ್ಣುಗಳನ್ನು ದಾಟಿ ಕಾಲೇಜು ಹಂತಕ್ಕೆ ಬಂದ ಮೇಲೇ ಸಹಪಾಠಿ ಹುಡುಗರ ಜೊತೆಗೊಂದು ತಿಳಿಯಾದ ಸ್ನೇಹ ಹುಟ್ಟುವುದು. ಬಹುಶಃ ಕಾಲೇಜಿನ ಆಚೆಗೆ ಓಡಾಡುವಾಗ ಸುತ್ತಮುತ್ತ ಎಲ್ಲೋ ಒಂದೆಡೆ ನಮ್ಮದೇ ತರಗತಿಯ ಹುಡುಗರು ಇದ್ದರೆ ಏನೋ ಒಂದು ನಿರಾಳ ಭಾವ ಹುಡುಗಿಯರಿಗಿರುತ್ತದೆ. ಅಷ್ಟರ ಮಟ್ಟಿಗೆ ಅವರು ಮನೆಯ ಆಚೆಗಿನ ‘ಮನೆಯ’ ಸದಸ್ಯರು. ಕಾಲೇಜು ದಿನಗಳ ನೆನಪೆಂದರೆ ಇವೆಲ್ಲ ಜೊತೆಯಾಗಿ ಮುನ್ನುಗ್ಗುವುದು ಎಲ್ಲರ ಅನುಭವ.

‘ಅವರು ನಮ್ಮ ಸಹಪಾಠಿಗಳು’ ಎಂಬ ಆತ್ಮೀಯ ಭಾವ ನಮ್ಮೊಳಗಿರುತ್ತದೆ. ಇಂತಹ, ಜೀವನದಲ್ಲಿ ಅತಿ ಕಡಿಮೆ ಅವಧಿಯವರೆಗೆ ಮಾತ್ರ ಲಭಿಸುವ ಪುಟ್ಟ ಖುಷಿಯನ್ನು, ನಂಬಿಕೆಯ ಲೋಕ ವನ್ನು ಛಿದ್ರಗೊಳಿಸುವುದೆಂದರೆ ನಿಂತ ನೆಲೆಯನ್ನೇ ಸ್ಫೋಟಿಸಿದಂತೆ. ಪುತ್ತೂರು ಕಾಲೇಜಿನ ಹುಡುಗರು ತಮ್ಮದೇ ಸಹಪಾಠಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪವು ನಿಜವೇ ಆಗಿದ್ದರೆ, ಅದಾದ ನಂತರವೂ ಆರೋಪಿಗಳು ನಿರ್ಬಿಢೆಯಿಂದ ಅದೇ ಕಾಲೇಜಿನಲ್ಲಿ ಓಡಾಡಿಕೊಂಡಿದ್ದರೆಂದರೆ, ಅದೆಲ್ಲದಕ್ಕಿಂತ ಅಸಹ್ಯವಾಗಿ, ಆ ಅತ್ಯಾಚಾರದ ವಿಡಿಯೊ ಮಾಡಿಟ್ಟುಕೊಂಡು ಬೆದರಿಸುತ್ತಿದ್ದರೆಂದರೆ- ಇವೆಲ್ಲ ನಿರ್ಲಕ್ಷಿಸುವ ಸಂಗತಿಗಳು ಅಲ್ಲವೇ ಅಲ್ಲ. ಅದೂ ಎಲ್ಲರೂ ಹತ್ತೊಂಬತ್ತರ ಹರೆಯದವರು. ಈ ಘಟನೆಯನ್ನು ಹೇಗೆ ಸಮಾಜವೊಂದು ಪರಿಭಾವಿಸಬೇಕು, ನಿರ್ವಹಿಸಬೇಕು ಎಂಬುದು ಸಮಾಜವೊಂದರ ಭವಿಷ್ಯದ ದೃಷ್ಟಿಯಿಂದ ಅತ್ಯಂತ ತುರ್ತಾಗಿ ಚಿಂತಿಸಬೇಕಾದ ವಿಷಯವಾಗಿತ್ತು.

ಆದರೆ ನಿರಾಶೆಯಾಗುತ್ತದೆ. ಸಮಾಜ ನಿದ್ರಿಸುತ್ತಿದೆಯೋ, ನಿದ್ರಿಸಿದಂತೆ ನಾಟಕವಾಡುತ್ತಿದೆಯೋ ಅರ್ಥವಾಗುತ್ತಿಲ್ಲ. ಈ ಘಟನೆಗೆ ಸಂಬಂಧಿಸಿ ಯೂಟ್ಯೂಬ್‌ನಲ್ಲಿ ಜಾಲಾಡಿದರೆ, ಅಲ್ಲಿ ದಕ್ಷಿಣ ಕನ್ನಡದ ಸ್ಥಳೀಯ ಚಾನೆಲ್‍ಗಳಲ್ಲಿ ಪ್ರಸಾರವಾದ ಕೆಲವು ನಿಮಿಷಗಳ ತುಣುಕುಗಳು ಸಿಗುತ್ತವೆ. ಪತ್ರಿಕೆಗಳು ಇದನ್ನು ಒಂದು ದಿನದ ಸುದ್ದಿಯಾಗಿ ಪ್ರಕಟಿಸಿವೆ. ಆದರೆ, ಸಣ್ಣ ಸಣ್ಣ ಸಂಗತಿಗಳನ್ನೂ ದಿನಗಟ್ಟಲೆ ಚರ್ಚಿಸುವ ರಾಜ್ಯದ ಕೆಲವು ಜನಪ್ರಿಯ ದೃಶ್ಯಮಾಧ್ಯಮಗಳನ್ನು ಇದು ಕಾಡಿದಂತೆ ಕಾಣುವುದಿಲ್ಲ. ನಾಲ್ಕಾರು ವರ್ಷಗಳ ಹಿಂದಿನ, ತೀರ್ಥಹಳ್ಳಿಯ ಪ್ರಕರಣವೊಂದು ನೆನಪಾಗುತ್ತದೆ. ಆ ಪುಟ್ಟ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುದು ಆನಂತರ ಸಾಬೀತಾಯಿತು. ಆದರೆ ಕೆಲವು ದೃಶ್ಯಮಾಧ್ಯಮಗಳು ಅದನ್ನು ಅತ್ಯಾಚಾರ ಮತ್ತು ಕೊಲೆ ಎಂಬಂತೆ ರೋಚಕಗೊಳಿಸಿ, ಇಡೀ ರಾಜ್ಯಕ್ಕೇ ಸುದ್ದಿಯ ಝಳದ ಬೆಂಕಿ ಹಚ್ಚತೊಡಗಿದವು. ಇದಕ್ಕೆ ರಾಜಕೀಯ ಪಕ್ಷಗಳು ಕೈಜೋಡಿಸಿದವು. ಸಣ್ಣ ಹಳ್ಳಿ ಮೂಲೆಗಳಲ್ಲಿ ಎಂದೂ ಯಾವ ವಿಷಯಕ್ಕೂ ಗಲಾಟೆಯೇ ಆಗದಲ್ಲೂ ಪ್ರತಿಭಟನೆಗಳು ನಡೆದಿದ್ದವು. ಇಲ್ಲಿ ಆ ಹುಡುಗಿಗಾದ ಅನ್ಯಾಯಕ್ಕೆ ನ್ಯಾಯ ಕೇಳುವುದಕ್ಕಿಂತಲೂ ಯಾರನ್ನೋ ಟಾರ್ಗೆಟ್ ಮಾಡುವುದೇ ಮುಖ್ಯ ಆಗಿತ್ತು. ನಿಜ ಹೊರಗೆ ಬಿದ್ದ ಮೇಲೆ ಈ ಮಾಧ್ಯಮಗಳು ಕನಿಷ್ಠ ಕ್ಷಮೆಯನ್ನೂ ಕೇಳಲಿಲ್ಲ. ಅಂದು ಆವೇಶದಿಂದ ಹೋರಾಟದ ಮಾತಾಡಿದ್ದ ಶೋಭಾ ಕರಂದ್ಲಾಜೆಯವರ ನೆನಪು, ಈಗ ಪುತ್ತೂರಿನ ಅನಾಹುತಕಾರಿ ಪ್ರಸಂಗದಿಂದ ಸಹಜವಾಗಿ ಆಯಿತು. ಇದು, ಅವರ ತವರಿಗೆ ಹತ್ತಿರದ ಊರು. ಆದರೂ ಅವರ ಸೊಲ್ಲು ಕೇಳಿಸಲಿಲ್ಲ. ಟಿ.ವಿ ಚರ್ಚೆಗಳಲ್ಲಿ ಉತ್ಸಾಹದಿಂದ ವಾದಿಸುವ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಯವರ ಧ್ವನಿಯೂ ಕೇಳಿಸಲಿಲ್ಲ. ನಮ್ಮ ಏಕೈಕ ಸಚಿವೆ ಜಯಮಾಲಾ ಅವರಂತೂ ಎಲ್ಲೂ ಕಾಣಿಸುವುದೇ ಇಲ್ಲ. ಇನ್ನು ಹಲವು ಹಾಲಿ, ಮಾಜಿ ನಾಯಕಿಯರು ಎಲ್ಲಿದ್ದಾರೋ ವಿಳಾಸವೇ ಇಲ್ಲ. ಶಕುಂತಲಾ ಶೆಟ್ಟಿಯವರನ್ನುಳಿದು ಇನ್ನಾವುದೇ ರಾಜಕೀಯ ನಾಯಕಿಯರು ಮುನ್ನೆಲೆಯಲ್ಲಿ ಕಾಣಿಸಲಿಲ್ಲ. ಅಂದಮೇಲೆ ಶಾಸನಸಭೆಗಳಲ್ಲಿ ಮಹಿಳೆಯರ ಶೇಕಡಾವಾರು ಪ್ರಾತಿನಿಧ್ಯ ಎಷ್ಟಿದ್ದರೂ ಏನು ಫಲ?

ಇನ್ನು ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮತ್ತು ಕೆಲವರು ಪ್ರತಿಭಟನೆಯ ವೇಳೆ ಮಾತನಾಡಿರುವ ರೀತಿಯೂ ನಮ್ಮ ಮನಃಸ್ಥಿತಿಗಳ ಕನ್ನಡಿಯಂತಿದೆ. ಕೆಲವರು ‘ಅದು ರೇಪ್ ಅಲ್ಲ’ ಎಂದು ಕಮೆಂಟಿಸಿದರೆ, ಇನ್ನು ಕೆಲವರು ‘ಬುದ್ಧಿವಂತರ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಇಂತಹ ಘಟನೆ ಆಗುವುದಕ್ಕೇ ಸಾಧ್ಯವಿಲ್ಲ, ಆದರೆ ಈಗ ಹೀಗೆ ಆಗಿರುವುದು ಕಪ್ಪುಚುಕ್ಕಿ’ ಎಂದಿದ್ದಾರೆ. ಉಜಿರೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದ ಹಿಡಿದು, ಅಲ್ಪಸಂಖ್ಯಾತರನ್ನು ಕಂಬಕ್ಕೆ ಕಟ್ಟಿ ಥಳಿಸಿದ, ಕೈಮುಗಿದು ಬೇಡಿದರೂ ಬಿಡದೆ, ತನ್ನದೇ ಸಂಘಟನೆಯವನಾದರೂ ಗೋವನ್ನು ಸಾಗಿಸುತ್ತಿದ್ದಾನೆಂಬ ನೆಪದಲ್ಲಿ ಹೊಡೆದು ಕೊಂದ... ದಶಕಗಳಿಂದ ಇಂತಹ ಅಸಂಖ್ಯ ಹಿಂಸೆಗಳನ್ನು ನೋಡಿಯೂ ನೋಡದೇ ಇರುವ ಅಲ್ಲಿನ ಎಲ್ಲಾ ಕ್ಷೇತ್ರಗಳ ‘ದೊಡ್ಡವರು’ ಮತ್ತು ಪ್ರಜೆಗಳು ಇನ್ನೂ ತಮ್ಮದು ಬುದ್ಧಿವಂತರ ಜಿಲ್ಲೆ ಎನ್ನುತ್ತಿರುವುದು ಒಂದು ವ್ಯಂಗ್ಯವಲ್ಲದೆ ಇನ್ನೇನು? ಹಲವು ಹಿಂಸೆಗಳಿಗೆ ನೀಡಿದ ಮೌನ ಸಮ್ಮತಿಯ ಮುಂದುವರಿಕೆಯಾಗಿಯೇ ಇದನ್ನು ಗ್ರಹಿಸಬೇಕು. ಬೇರೆ ಧರ್ಮದವರು ಮಾಡಿದಾಗ ಸಿಡಿದಿರಿ. ಈಗ ನಿಮ್ಮವರೇ, ಮುಂದೆ ನಿಮ್ಮ ಮನೆ ಬಾಗಿಲಿಗೇ– ಎಂಬುದೇಕೆ ಅರ್ಥವಾಗುತ್ತಿಲ್ಲ?

ಯಾರೇ ಮಾಡಿದರೂ ತಪ್ಪನ್ನು ತಪ್ಪು ಎನ್ನದಿರುವುದೇ ನೈತಿಕ ಅಧಃಪತನ. ಈ ರೋಗವು ಜನಸಾಮಾನ್ಯರನ್ನೂ ಬಾಧಿಸುತ್ತಿದೆ. ತಮ್ಮ ನಾಯಕರು–ಜಾತಿ–ಧರ್ಮದವರು ಏನು ಮಾಡಿದರೂ ಸರಿ ಎಂದು ಸಮರ್ಥಿಸುವ ಗೀಳಿಗೆ ಒಳಗಾದವರು, ಅವರ ತಪ್ಪುಗಳನ್ನು ಮುಚ್ಚಿಡಲು ಒಪ್ಪುಗಳನ್ನು ಹುಡುಕಿಕೊಡುತ್ತಿದ್ದಾರೆ. ಪರಿಣಾಮವಾಗಿ ಸರಿಯಾದದ್ದನ್ನು ಹೇಳುವವರ ಮೇಲೆ ಮುಗಿಬೀಳುವ, ಅವರ ಮೇಲೆ ಕೇಸುಗಳನ್ನು ಹಾಕುವ ಪರಿಪಾಟಕ್ಕೆ ಸಾಮಾಜಿಕ ಸಮ್ಮತಿ ದೊರೆಯತೊಡಗುತ್ತದೆ. ನಮ್ಮದೇ ಚಾಟಿ ನಮಗೇ ಏಟು ಎಂಬುದು ತಿಳಿಯದ ಸಮಾಜವೊಂದರಲ್ಲಿ ಜನರ ಆಹಾರ, ಉದ್ಯೋಗ ಮತ್ತು ಮಾನಕ್ಕೆ ಸಂಬಂಧಿಸಿದ ಸಂಗತಿಗಳು ಅನಾದ್ಯತೆಯಾಗಿ ಉಳ್ಳವರ ಮೋಜು ಆದ್ಯತೆಯಾಗುತ್ತದೆ.

ಲೇಖಕಿ: ಕನ್ನಡ ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT