ಬುಧವಾರ, ಸೆಪ್ಟೆಂಬರ್ 18, 2019
28 °C
ಕಮ್ಯುನಿಸ್ಟ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಹಾಂಗ್‌ಕಾಂಗ್‌ ಪ್ರತಿಭಟನಕಾರರು

ಹಾಂಗ್‌ಕಾಂಗ್‌ ಪ್ರತಿಭಟನೆ; ಷಿ ಆಡಳಿತಕ್ಕೆ ಎದುರಾದ ಪ್ರತಿರೋಧ

Published:
Updated:

ಹಾಂಗ್‌ಕಾಂಗ್‌ನಲ್ಲಿ ಸರ್ಕಾರದ ವಿರೋಧಿ ಪ್ರತಿಭಟನೆ ಗಳು ತೀವ್ರವಾಗುತ್ತಿವೆ. ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷ ಹಾಗೂ ಪ್ರತಿಭಟನಕಾರರು ತಳೆದಿರುವ ನಿಲುವಿನಿಂದಾಗಿ, ಎರಡೂ ಗುಂಪುಗಳು ರಾಜಿ ಆಗುವ ಸಾಧ್ಯತೆ ಕ್ಷೀಣಿಸುತ್ತಿದೆ. ಹಾಂಗ್‌ಕಾಂಗ್‌ನ ನಿವಾಸಿಗಳ ವಿರುದ್ಧ ಆರೋಪ ಎದುರಾದಾಗ, ಅವರನ್ನು ಚೀನಾಕ್ಕೆ ಹಸ್ತಾಂತರ ಮಾಡಲು ಅವಕಾಶ ಕೊಡಲಿದ್ದ ಮಸೂದೆಯೊಂದರ ವಿರುದ್ಧ ಆರಂಭವಾದ ಪ್ರತಿಭಟನೆಯು ಮುಕ್ತ ಚುನಾವಣೆಗೆ ಒತ್ತಾಯಿಸುವ ವಿಸ್ತೃತ ನೆಲೆಯ ಚಳವಳಿಯಾಗಿ ಪರಿವರ್ತನೆ ಕಂಡಿದೆ.

ಚೀನಾ ಪಾಲಿಗೆ ಇದು ತನ್ನ ನಾಯಕತ್ವಕ್ಕೆ ಎದುರಾದ ನೇರ ಸವಾಲು, ಅಂದರೆ ಹಾಂಗ್‌ಕಾಂಗ್‌ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದಕ್ಕೆ ಸಮ. ಹಿಂದೆ ಶಾಂತಿಯುತವಾಗಿದ್ದ ಪ್ರತಿಭಟನೆಗಳು ಈಗ ತೀವ್ರ ಸ್ವರೂಪ ಪಡೆದುಕೊಂಡಿವೆ. ಹಾಂಗ್‌ಕಾಂಗ್‌ ವಿಮಾನ ನಿಲ್ದಾಣಕ್ಕೆ ಈಚೆಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಕಾರರು, ಅಲ್ಲಿನ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದರು.

ಚೀನಾ ಕೂಡ ತನ್ನ ಬಲವನ್ನು ಹೆಚ್ಚೆಚ್ಚು ಪ್ರದರ್ಶಿಸುತ್ತಿದೆ, ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆಗಳು ನಡೆಯುವ ಸಾಧ್ಯತೆ ಹೆಚ್ಚಬಹುದು ಎಂಬ ಸೂಚನೆಯನ್ನು ಇದು ನೀಡಿದೆ. ಹಾಂಗ್‌ಕಾಂಗ್‌ನಲ್ಲಿ ಕಳೆದ ವಾರ ನಡೆದಿದ್ದು ‘ಭಯೋತ್ಪಾದನೆ’ಯ ಮೊದಲ ಸೂಚನೆ ಎಂದು ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಚೀನಾ ಪೊಲೀಸರು, ಹಾಂಗ್‌ಕಾಂಗ್‌ ಗಡಿಗೆ ಸಮೀಪದಲ್ಲಿ ಇರುವ ಶೆಂಜೆನ್‌ ನಗರದಲ್ಲಿ ಈಚೆಗೆ ಪಥಸಂಚಲನ ನಡೆಸಿದ್ದಾರೆ.

ಚೀನಾವು 1997ರಲ್ಲಿ ಹಾಂಗ್‌ಕಾಂಗ್‌ ಅನ್ನು ಬ್ರಿಟಿಷರಿಂದ ಪುನಃ ಪಡೆದುಕೊಂಡ ನಂತರದ ರಾಜಕೀಯ ಪ್ರಯೋಗದಲ್ಲಿ ಅಡಕವಾಗಿರುವ ಬಿಕ್ಕಟ್ಟನ್ನು ಈ ಸಂಘರ್ಷ ವಿಶದೀಕರಿಸುತ್ತಿದೆ. 1997ರ ನಂತರ ನಡೆದಿದ್ದು ನಾಗರಿಕ ಹಕ್ಕುಗಳು ಇರುವ ನಾಡನ್ನು ಚೀನಾದ ಸರ್ವಾಧಿಕಾರದ ಜೊತೆ ಜೋಡಿಸುವ ಯತ್ನ. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರಿಗೆ ಹಾಂಗ್‌ಕಾಂಗ್‌ ಅನ್ನೂ ಚೀನಾದ ಇತರ ನಗರಗಳಂತೆಯೇ ಮಾಡುವ ಉದ್ದೇಶವಿದೆ– ತಮ್ಮ ಆಡಳಿತ ವ್ಯವಸ್ಥೆ ಪರವಾಗಿ ಅಲ್ಲಿ ಪ್ರಚಾರಾಂದೋಲನ ನಡೆಸಿ, ಅಲ್ಲಿನ ಜನರ ನಿಷ್ಠೆ ಗೆದ್ದುಕೊಳ್ಳುವ ಬಯಕೆ ಇದೆ. ಸರ್ಕಾರವು ಚೀನಾದ ಹಿತಾಸಕ್ತಿಗಳನ್ನು ಮಾತ್ರವೇ ಅಲ್ಲದೆ, ತಮ್ಮ ಹಿತಾಸಕ್ತಿಗಳನ್ನೂ ರಕ್ಷಿಸಬೇಕು, ಮನೆಗಳ ಬೆಲೆ ಆಕಾಶ ಮುಟ್ಟಿದ್ದು, ಆ ಸಮಸ್ಯೆ ಬಗೆಹರಿಸಬೇಕು, ಕಡಿಮೆ ವೇತನದ ಸಮಸ್ಯೆ ಪರಿಹರಿಸಬೇಕು ಎಂಬುದು ಪ್ರತಿಭಟನೆ ಮಾಡುತ್ತಿರುವವರ ಬಯಕೆ.

ಎರಡೂ ಕಡೆಯವರು ಇನ್ನೊಬ್ಬರ ಕಳಕಳಿ ಏನು ಎಂಬುದನ್ನು ಗಮನಿಸುವ ಸ್ಥಿತಿಯಲ್ಲಿ ಇದ್ದಂತಿಲ್ಲ. ಸ್ವಾತಂತ್ರ್ಯದ ಪರವಾದ ಧೋರಣೆ ಇರುವ ಘೋಷಣೆಯನ್ನು ಪ್ರತಿಭಟನಕಾರರು ಈಚೆಗೆ ತಮ್ಮದಾಗಿಸಿಕೊಂಡಿದ್ದಾರೆ: ‘ಹಾಂಗ್‌ಕಾಂಗ್‌ಗೆ ಮುಕ್ತಿ, ನಮ್ಮ ಕಾಲದ ಕ್ರಾಂತಿ’. ಅವರು ಇದನ್ನು ಬಳಸುತ್ತಿರುವುದು ರಾಜಕೀಯ ದನಿ ಬೇಕು ಎಂಬ ಹಂಬಲದಿಂದ ಎಂದು ಹಲವರು ಹೇಳುತ್ತಾರೆ. ಪ್ರತಿಭಟನಕಾರರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದಕ್ಕೆ ಈ ಘೋಷಣೆ ಸಾಕ್ಷಿ ಎಂದು ಚೀನಾ ಹೇಳುತ್ತಿದೆ.

ಹತ್ತು ಲಕ್ಷ ಜನ ಸೇರಿ ರ್‍ಯಾಲಿ ನಡೆಸಿ ದರೂ ಹಾಂಗ್‌ಕಾಂಗ್‌ ನಾಯಕಿ ಕ್ಯಾರಿ ಲ್ಯಾಮ್ ಅವರು ಆರೋಪಿಗಳ ಹಸ್ತಾಂತರ ಮಸೂದೆಯನ್ನು ಕಾನೂನಾಗಿಸಲು ಮುಂದಾದಾಗ ಜನರು ಮತ್ತು ಚೀನಾ ಪ್ರಭುತ್ವದ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಚೀನಾಕ್ಕೆ ಉತ್ತರದಾಯಿ ಆಗಿರುವ ನಾಯಕರ ಮಿತಿಗಳು ಲ್ಯಾಮ್ ಅವರ ನಡೆಗಳಲ್ಲಿ ವ್ಯಕ್ತವಾಗುತ್ತವೆ ಎಂಬುದು ಹಲವು ಪ್ರತಿಭಟನಕಾರರ ನಿಲುವು. ಲ್ಯಾಮ್ ಅವರು ನಂತರ ಈ ಮಸೂದೆಯನ್ನು ಅಮಾನತಿನಲ್ಲಿ ಇರಿಸಿದರೂ, ಅದನ್ನು ಅಧಿಕೃತವಾಗಿ ಹಿಂಪಡೆಯಲಿಲ್ಲ. ಇದು, ಪ್ರತಿಭಟನಕಾರರನ್ನು ಮತ್ತಷ್ಟು ಕೆರಳಿಸಿತು, ಅವರು ದೊಡ್ಡ ಸಂಖ್ಯೆಯಲ್ಲಿ ರಸ್ತೆಗಿಳಿಯುವಂತಾಯಿತು. ಅದಾದ ನಂತರದ ವಾರಗಳಲ್ಲಿ, ಪ್ರತಿಭಟನಕಾರರನ್ನು ಪೊಲೀಸರು ನಡೆಸಿಕೊಂಡ ಬಗೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವುದೂ ಸೇರಿದಂತೆ ಯಾವುದೇ ಬೇಡಿಕೆಗೆ ಲ್ಯಾಮ್ ಮಣಿದಿಲ್ಲ.

‘ಅವರು ಚೀನಾದ ಆಡಳಿತ ನಡೆಸುವ ಮಾದರಿಯಲ್ಲೇ ಹಾಂಗ್‌ಕಾಂಗ್‌ನ ಆಡಳಿತ ನಡೆಸಲು ಯತ್ನಿಸುತ್ತಿದ್ದಾರೆ. ಮುಕ್ತ ಸಮಾಜದಲ್ಲಿ ಅದು ಸರಿಬರುವುದಿಲ್ಲ’ ಎನ್ನುತ್ತಾರೆ ವಾಷಿಂಗ್ಟನ್‌ನ ವಿಲ್ಸನ್‌ ಸೆಂಟರ್‌ನ ಫೆಲೊ ಮೈಕೇಲ್ ಸಿ. ಡೇವಿಸ್. ‘ಹಾಂಗ್‌ಕಾಂಗ್‌ನಲ್ಲಿ ಜನರನ್ನು ಹತ್ತಿಕ್ಕಲು, ಅವರನ್ನು ನಿರ್ಲಕ್ಷಿಸಲು ಮುಂದಾದರೆ ಅವರು ತಿರುಗಿಬೀಳುತ್ತಾರೆ’ ಎಂದು ಡೇವಿಸ್ ಹೇಳುತ್ತಾರೆ. ಚೀನಾಕ್ಕೆ ಸವಾಲು ಹಾಕಿರುವ ಪ್ರತಿಭಟನಕಾರರು ಅಲ್ಲಿನ ಕಮ್ಯುನಿಸ್ಟ್‌ ಪಕ್ಷವನ್ನು ಸಂದಿಗ್ಧಕ್ಕೆ ಸಿಲುಕಿಸಿದ್ದಾರೆ. ಈಚಿನ ದಿನಗಳಲ್ಲಿ ಅವರು ಹೆಚ್ಚು ಪ್ರತಿರೋಧ ತೋರುತ್ತಿದ್ದಾರೆ, ಬೆಂಕಿ ಹಚ್ಚುತ್ತಿದ್ದಾರೆ, ಇಟ್ಟಿಗೆ ಎಸೆಯುತ್ತಿದ್ದಾರೆ, ಚೀನಾದ ಆಡಳಿತವನ್ನು ಪ್ರತಿನಿಧಿಸುವ ಸಂಕೇತಗಳನ್ನು ವಿರೂಪಗೊಳಿಸುತ್ತಿದ್ದಾರೆ.

ಈ ಹೋರಾಟವು ಷಿ ಅವರ ಆಡಳಿತಕ್ಕೆ ಎದುರಾ ಗಿರುವ ಅತಿದೊಡ್ಡ ಸಾರ್ವಜನಿಕ ಪ್ರತಿರೋಧವಾಗಿ ಬದಲಾಗಿದೆ. ಇದರ ಎದುರು ದುರ್ಬಲವಾಗಿ ಕಾಣಿಸಿಕೊಳ್ಳುವುದು ಕಮ್ಯುನಿಸ್ಟ್‌ ಪಕ್ಷಕ್ಕೆ ಇಷ್ಟವಿಲ್ಲ. ಪ್ರತಿಭಟನೆ ಸ್ಥಗಿತಗೊಳಿಸಲು ಮಿಲಿಟರಿ ಬಳಸಬೇಕಾಗಬಹುದು ಎಂಬ ಪರೋಕ್ಷ ಬೆದರಿಕೆಯನ್ನು ಚೀನಾ ಸರ್ಕಾರ ಒಡ್ಡಿದೆ. ಅಮೆರಿಕದ ನೆರವು ಪಡೆದು ಇವರು ‘ಕಲರ್ ರೆವಲ್ಯೂಷನ್’ (ಕಮ್ಯುನಿಸ್ಟ್‌ ವಿರೋಧಿ, ಪ್ರಜಾಪ್ರಭುತ್ವ ಪರ) ನಡೆಸುವ ಪಿತೂರಿ ರೂಪಿಸಿದ್ದಾರೆ ಎಂದೂ ಆರೋಪಿಸಿದೆ.

ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ವಿಶ್ವವಿದ್ಯಾಲಯವೊಂದರ 20 ವರ್ಷ ವಯಸ್ಸಿನ ವಿದ್ಯಾರ್ಥಿನಿ ಕ್ರಿಸ್ಟಲ್ ಯಿಪ್ ಮೌನವಾಗಿ ಕುಳಿತಿದ್ದರು. ರಸ್ತೆಗಳಲ್ಲಿ ಪ್ರತಿಭಟನೆ ನಡೆಯುವಾಗ ಇವರು ಸಾಮಾನ್ಯವಾಗಿ ಮುಂದಿನ ಸಾಲಿನಲ್ಲಿ ಇರುತ್ತಾರೆ. ಸಮಾಜದ ವಿವಿಧ ಗುಂಪುಗಳಿಗೆ ಸೇರಿದ ಲಕ್ಷಾಂತರ ಜನ, ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಹುತೇಕ ಶಾಂತಿಯುತ ಮಾರ್ಗ ಅನುಸರಿಸುತ್ತಿದ್ದಾರೆ. ಆದರೆ, ಯಿಪ್‌ ಅವರಂತಹ ಸಂಘರ್ಷವಾದಿ ಯುವಜನರ ಗುಂಪು, ಆ ಮಾರ್ಗ ಅನುಸರಿಸುತ್ತಿಲ್ಲ. ‘ನನ್ನ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದ್ದೇನೆ ಎಂಬುದು ನನಗೆ ಗೊತ್ತಿದೆ. ಆದರೆ, ಇಂತಹ ಮಾತುಗಳನ್ನು ನಾನು ನಿರ್ಲಕ್ಷಿಸಿದ್ದೇನೆ’ ಎಂದು ಯಿಪ್ ಹೇಳುತ್ತಾರೆ. 2014ರಲ್ಲಿ ನಡೆದ ಪ್ರಜಾತಂತ್ರದ ಪರ ಹೋರಾಟದಲ್ಲಿ ಯಿಪ್ ಅವರು ಪ್ರಭುತ್ವವನ್ನು ಎದುರುಹಾಕಿಕೊಳ್ಳಲು ಹೆದರುತ್ತಿದ್ದರು. ಆದರೆ, ಉಕ್ರೇನ್‌ನಲ್ಲಿ ನಡೆದ ರಷ್ಯಾ ವಿರೋಧಿ ಹೋರಾಟ, ಆರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಸ್ವಾತಂತ್ರ್ಯ ಹೋರಾಟಗಾರ ಎಡ್ವರ್ಡ್‌ ಲ್ಯೂಂಗ್ ಕುರಿತ ಸಾಕ್ಷ್ಯಚಿತ್ರಗಳನ್ನು ನೋಡಿದ ನಂತರ ಯಿಪ್ ಅವರ ಧೋರಣೆ ಬದಲಾಯಿತು. ‘ಶಾಂತಿಯುತ ಹೋರಾಟಗಳಿಂದಪ್ರಯೋಜನವಿಲ್ಲ. ಹಿಂಸಾತ್ಮಕ ಪ್ರತಿರೋಧದಿಂದ ಕೆಲಸ ಆಗುತ್ತದೆ ಎಂದಾದರೆ ಅದನ್ನು ಏಕೆ ಬಳಸಬಾರದು’ ಎಂದು ಅವರು ಕೇಳುತ್ತಾರೆ.

ಈ ಪ್ರತಿಭಟನೆಗಳ ವಿರುದ್ಧ ಷಿ ಅವರು ಭಾರಿ ಕ್ರಮ ಜರುಗಿಸುವ ಸಾಧ್ಯತೆ ಇಲ್ಲ. ಇದರ ಪರಿಣಾಮಗಳು ವ್ಯಾಪಕವಾಗಿರಬಹುದು ಎಂಬ ಭೀತಿ ಅವರಲ್ಲಿದೆ. ತೀರಾ ಕಠಿಣ ಕ್ರಮಕ್ಕೆ ಮುಂದಾದರೆ ಷಿ ಅವರ ಟೀಕಾಕಾರರಿಗೆ ಇನ್ನಷ್ಟು ಬಲ ಬಂದಂತೆ ಆಗುತ್ತದೆ. ತೈವಾನ್‌ನಲ್ಲಿ ಸ್ವಾತಂತ್ರ್ಯ ಪರ ಹೋರಾಟಗಾರರಿಗೆ ಕೂಡ ಹೊಸ ಬಲ ಬರಬಹುದು ಎಂಬ ಆತಂಕ ಅವರಲ್ಲಿದೆ. ‘ಕಠಿಣ ಕ್ರಮಕ್ಕೆ ಮುಂದಾದರೆ ಅದಕ್ಕೆ ತೆರಬೇಕಾದ ಬೆಲೆಯೂ ದೊಡ್ಡದಾಗಿಯೇ ಇರುತ್ತದೆ. ಅಂತಹ ಕ್ರಮವನ್ನು ಇನ್ನೊಂದು ಟಿಯನಾನ್ಮೆನ್‌ ಘಟನೆಯಾಗಿ ಇತರರು ಗ್ರಹಿಸಬಹುದು. ತಮ್ಮ ಪ್ರತಿಷ್ಠೆಗೆ ಕುತ್ತು ತರುವ ಕೆಲಸಕ್ಕೆ ಅವರು ಮುಂದಾಗಲಿಕ್ಕಿಲ್ಲ’ ಎನ್ನುತ್ತಾರೆ ಲಂಡನ್ನಿನ ಕಿಂಗ್ಸ್‌ ಕಾಲೇಜಿನಲ್ಲಿ ಚೀನಾ ರಾಜಕೀಯ ಬೋಧಿಸುವ ಕೆರ್‍ರಿ ಬ್ರೌನ್.

ದಿ ನ್ಯೂಯಾರ್ಕ್‌ ಟೈಮ್ಸ್‌

Post Comments (+)