ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೌರ್ಯವನ್ನು ಮೆಟ್ಟುವುದು ಹೇಗೆ?

ಯಾವುದೇ ಸಂದರ್ಭದಲ್ಲೂ ಕ್ರೂರಿಯಾಗದಿರುವುದು ಹೇಗೆ ಎನ್ನುವುದು ಪ್ರತಿಯೊಬ್ಬರಿಗೂ ಸಂಬಂಧಿಸಿದ ಪ್ರಶ್ನೆ
Last Updated 5 ಜೂನ್ 2020, 22:36 IST
ಅಕ್ಷರ ಗಾತ್ರ
ADVERTISEMENT
"ಅರವಿಂದ ಚೊಕ್ಕಾಡಿ"

ಗರ್ಭಿಣಿ ಆನೆಗೆ ಅನಾನಸು ಹಣ್ಣಿನೊಳಗೆ ಪಟಾಕಿ ಇರಿಸಿ ತಿನ್ನಿಸಿ ಸಾಯಿಸಿದರಂತೆ ಎನ್ನುವುದು ಬರಿಯ ಸುದ್ದಿಯಷ್ಟೇ ಅಲ್ಲ; ಮಾನವ ಕ್ರೌರ್ಯದ ಪರಾಕಾಷ್ಠೆಯ ಅಭಿವ್ಯಕ್ತಿಯೂ ಹೌದು. ಕ್ರೌರ್ಯಕ್ಕೆ ಅನಂತ ಮುಖಗಳು. ಆನೆಯನ್ನು ಕೊಂದ ಕ್ರೌರ್ಯವೇ ರೂಪ ಬದಲಾಯಿಸಿದಾಗ, ಅತ್ಯಾಚಾರದ ಪ್ರವೃತ್ತಿಯಾಗಿ, ಜನಾಂಗೀಯ ಹತ್ಯೆಯ ಪ್ರವೃತ್ತಿಯಾಗಿ, ಕಪ್ಪುವರ್ಣೀಯರ ಮೇಲಿನ ದೌರ್ಜನ್ಯವಾಗಿ, ಶೋಷಿತ ಸಮುದಾಯಗಳ ದಮನವಾಗಿ, ದುರ್ಬಲನ ಮೇಲಿನ ಆಕ್ರಮಣವಾಗಿ, ಭಯೋತ್ಪಾದನೆಯಾಗಿ ಅನಂತ ರೂಪದಲ್ಲಿ ವ್ಯಕ್ತವಾಗುತ್ತದೆ.

ಮನುಷ್ಯನ ಕ್ರೌರ್ಯವನ್ನು ನಿಯಂತ್ರಿಸುವುದು ಧರ್ಮ, ಜೀವನಮೌಲ್ಯ, ನೈತಿಕತೆಯ ಮುಖ್ಯ ಉದ್ದೇಶಗಳಲ್ಲೊಂದು. ಮನುಷ್ಯನ ಕ್ರೌರ್ಯ ಕೆಲವು ಸಂದರ್ಭಗಳಲ್ಲಿ ಮಾತ್ರ ಹೊರಗೆ ಬರುವುದು. ಇತರೇ ಸಂದರ್ಭಗಳಲ್ಲಿ ಅವನೇ ದಯಾಳುವಾಗಿಯೂ ವರ್ತಿಸಿರುತ್ತಾನೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಕ್ರೂರಿಯಾಗದೆ ಬಾಳುವುದು ಹೇಗೆ ಎನ್ನುವುದು ಪ್ರತಿಯೊಬ್ಬರಿಗೂ ಸಂಬಂಧಿಸಿದ ಪ್ರಶ್ನೆಯಾಗಿದೆ.

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿಧಾನವು ಮೌಲ್ಯಗಳನ್ನು ಜೀವನ ಪದ್ಧತಿಯಾಗಿ ರೂಪಿಸುವುದರಲ್ಲಿದೆ. ಅಂತಹ ಪ್ರಯತ್ನಗಳು ಬಹಳಷ್ಟು ಆಗಿವೆ. ಜೈನ ಧರ್ಮದ ಸಮವಸರಣದ ಪರಿಕಲ್ಪನೆಯಲ್ಲಿ ಸೃಷ್ಟಿಯ ಎಲ್ಲ ಜೀವಿಗಳೂ ಇಂದ್ರ ಸಭೆಯಲ್ಲಿ ಒಟ್ಟಾಗಿಯೇ ಪಾಲ್ಗೊಳ್ಳುತ್ತವೆ. ಪ್ರಾಣಿಗಳು ಮಾತನಾಡುವ, ಮೌಲ್ಯಗಳನ್ನು ಸಾಧಿಸುವ ಕತೆಗಳು ರೂಪಕಾತ್ಮಕವಾಗಿ ಭೂಮಿಯ ಮೇಲಿನ ಎಲ್ಲ ಜೀವಿಗಳನ್ನೂ ಭೂಮಿಗೆ ಹಕ್ಕುದಾರರನ್ನಾಗಿ ಮಾಡುವ ತತ್ವವನ್ನು ಹೇಳುತ್ತವೆ.

ಆದರೆ ಈ ಜೀವನದೃಷ್ಟಿಯನ್ನು ಸಾಧಿಸುವುದು ಹೇಗೆ? ಯಾವುದೇ ಜೀವಿ ಕನಿಷ್ಠ ಆಹಾರಕ್ಕಾಗಿ ಯಾದರೂ ಏನನ್ನೂ ಬಳಸದೆ ಇರಲು ಸಾಧ್ಯವಿಲ್ಲ. ಆವಾಗ ಸಾಧ್ಯವಾದಷ್ಟೂ ಕಡಿಮೆ ತಿನ್ನಬೇಕು. ಕಂದಮೂಲಗಳನ್ನು, ಗೆಡ್ಡೆ ಗೆಣಸುಗಳನ್ನು ತಿನ್ನಬೇಕು; ಅವುಗಳನ್ನು ತೆಗೆಯುವಾಗಲೂ ಎಲ್ಲವನ್ನೂ ತೆಗೆಯ ಬಾರದು; ಬೆಳೆಯಲು ಇರುವ ಭಾಗವನ್ನು ಬಿಡಬೇಕು ಎಂಬ ಚಿಂತನೆಗಳು ಬಂದವು. ತಾನಾಗಿ ಸತ್ತು ಹೋದ ಪ್ರಾಣಿಯನ್ನು ತಿನ್ನಬಾರದು ಎನ್ನಲಿಲ್ಲ ಗೌತಮ ಬುದ್ಧ. ಅಹಿಂಸೆಯ ವಿಚಾರದಲ್ಲಿ ಜಗತ್ತಿನ ಯಾವುದೇ ಧರ್ಮದ ತತ್ವಜ್ಞಾನವೂ ಜೈನ ಧರ್ಮದಷ್ಟು ಆಳವಾದ ಶೋಧನೆಗೆ ಇಳಿಯಲಿಲ್ಲ. ಸಸ್ಯಾಹಾರವೂ ಹಿಂಸೆಯೇ. ಆದರೆ ಸಸ್ಯಗಳಿಗೆ ಮತ್ತೆ ಚಿಗುರುವ ಶಕ್ತಿ ಇರುವುದರಿಂದ ಸಸ್ಯಾಹಾರವನ್ನು ಬಳಸಬಹುದು ಎಂದು ಜೈನ ತತ್ವಜ್ಞಾನವು ಹೇಳಿತು. ‘ದಯವೇ ಬೇಕು ಸಕಲಪ್ರಾಣಿಗಳೆಲ್ಲರಲಿ’ ಎಂದು ಬಸವಣ್ಣ ಬೋಧಿಸಿದರು.

ಆದರೆ ಜಗತ್ತಿನ ಎಲ್ಲ ಮನುಷ್ಯರು ಸಸ್ಯಾಹಾರವನ್ನೇ ಹೊಂದುವುದು ಕಾರ್ಯಸಾಧ್ಯವಲ್ಲ ಮತ್ತು ಅದು ಮನುಷ್ಯನ ಪ್ರವೃತ್ತಿಯಾಗುವುದೂ ಕಷ್ಟ. ಏಕೆಂದರೆ ಬೇಟೆ ಮನುಷ್ಯನ ಮೂಲ ವೃತ್ತಿ. ಆವಾಗ ಆಹಾರಕ್ಕಾಗಿ ಮಾತ್ರ ಪ್ರಾಣಿಗಳನ್ನು ಬಳಸಿಕೊಳ್ಳಬಹುದು ಎಂಬ ಚಿಂತನೆ ಬಂದಿತು. ಆಗಲೂ ಪ್ರಾಣಿಗಳಿಗೆ ಹೆಚ್ಚು ಹಿಂಸೆಯಾಗದಂತೆ ಕೊಲ್ಲಬೇಕು ಎನ್ನುವುದು ವರ್ತಮಾನದ ನಂಬಿಕೆ. ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುವಾಗಲೂ ಚಿತ್ರಹಿಂಸೆ ಕೊಡುವುದನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ನಿಷೇಧಿಸಿವೆ. ಹಾಗಿರುವಾಗ ತಪ್ಪೇ ಮಾಡದ ಜೀವಿಗೆ ಯಾವ ಉದ್ದೇಶವೂ ಇಲ್ಲದೆ ಚಿತ್ರಹಿಂಸೆ ಕೊಟ್ಟು ಸಾಯಿಸುವುದು ಘೋರವಾದ ಅಕ್ಷಮ್ಯ ನಡವಳಿಕೆಯಾಗಿದೆ.

ಅರವಿಂದ ಚೊಕ್ಕಾಡಿ

ಯುದ್ಧ ತಂತ್ರಗಳಲ್ಲಿ ವಿಷಪ್ರಾಶನವು ಬಳಸಬಾರದ ತಂತ್ರ. ಏಕೆಂದರೆ ಕೊಟ್ಟದ್ದನ್ನು ತಿನ್ನುವವನಿಗೆ ಕೊಟ್ಟವನ‌ ಮೇಲೆ ನಂಬಿಕೆ ಇರುತ್ತದೆ. ಒಬ್ಬನಿಗೆ ನಮ್ಮ ಮೇಲಿರುವ ನಂಬಿಕೆಯನ್ನು ಅವನ ವಿರುದ್ಧವಾಗಿ ಬಳಸುವುದು ಅಧರ್ಮ. ಅಂಥಾದ್ದರಲ್ಲಿ ಆನೆ ಒಂದು ಪ್ರಾಣಿ. ಮನುಷ್ಯನಂತೆ ಯೋಚಿಸುವ ಶಕ್ತಿ ಇಲ್ಲ. ಜನ ಕೊಟ್ಟ ಅನಾನಸನ್ನು ‘ನನಗಿವರು ತಿನ್ನಲು ಕೊಟ್ಟರು’ ಎಂಬ ಪ್ರೀತಿ ಮತ್ತು ಕೃತಜ್ಞತಾ ಭಾವದಿಂದ ತಿಂದಿರುತ್ತದೆ. ಒಂದು‌ ಮುಗ್ಧ ಪ್ರಾಣಿಯ ಪ್ರೇಮವನ್ನು ಕಾರಣವಿಲ್ಲದೆ ಅದಕ್ಕೆ ಚಿತ್ರಹಿಂಸೆ ಕೊಟ್ಟು ಕೊಲ್ಲಲು ಬಳಸುವ ಕ್ರೌರ್ಯವನ್ನು ಅರ್ಥಮಾಡಿಕೊಳ್ಳಲು, ವಿವರಿಸಲು ಪದಗಳಿಲ್ಲ. ಆದರೂ ದೇಶದ ಉದ್ದಗಲಕ್ಕೆ ಧರ್ಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ!

ಧಾರ್ಮಿಕ ಚರ್ಚೆಗಳು ನಿಜವಾಗಿ ಒಳ್ಳೆಯದೇ. ಆದರೆ ಅವು ಧಾರ್ಮಿಕ ಮೌಲ್ಯಗಳ ಚರ್ಚೆಯಾಗಬೇಕು. ಯಾವ ಸಂದರ್ಭದಲ್ಲಿ ತನ್ನೊಳಗಿನ ಕ್ರೌರ್ಯ ಹೊರಗೆ ಬರುತ್ತದೆ ಎಂದು ಮನುಷ್ಯ ತನ್ನನ್ನು ತಾನು ಅಭ್ಯಾಸಕ್ಕೆ ಒಳಪಡಿಸಲು ಧಾರ್ಮಿಕ ಚರ್ಚೆಗಳು ಪ್ರೇರಕವಾಗುತ್ತವೆ. ಕಾಡುಗಳ ನಾಶಕ್ಕೂ- ಜನಸಂಖ್ಯಾ ಸ್ಫೋಟಕ್ಕೂ– ಆಡಳಿತಕ್ಕೂ ನಡುವೆ ಸಂಬಂಧವಿದೆ. ಊರುಗಳಿಗೆ ಪ್ರಾಣಿಗಳು ಬಂದು ಜನ ಭಯಪಡುವುದಕ್ಕೂ– ಅರಣ್ಯ ಇಲಾಖೆಯ ನಿರ್ವಹಣೆಗೂ ಸಂಬಂಧವಿದೆ. ಆಡಳಿತದಲ್ಲಿ ಹಿನ್ನಡೆ ಆದಾಗ ಕಾನೂನಿನ ರಕ್ಷಣೆ ಕಡಿಮೆ ಇರುವ ಪ್ರಾಣಿಗಳ ಮೇಲೆ ಜನರು ಸುಲಭವಾಗಿ ಆಕ್ರಮಣಕ್ಕೆ ಇಳಿಯುತ್ತಾರೆ. ಮನುಷ್ಯರ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವ ಆಡಳಿತ ಇಲ್ಲಿನ ತುರ್ತಾಗಿದೆ.

ಆದರೆ ಇದು ಅಷ್ಟಕ್ಕೇ ಸೀಮಿತವಲ್ಲ. ತನಗಿಂತ ದುರ್ಬಲವಾದುದನ್ನು ಕಂಡಾಗ ಅದು ಪ್ರಾಣಿಯೇ ಇರಲಿ, ಮನುಷ್ಯನೇ ಇರಲಿ; ಅದಕ್ಕೆ ಹಿಂಸೆ ಕೊಟ್ಟು ರಂಜನೆಯನ್ನು ಪಡೆಯುವ ಹಿಂಸಾನಂದದ ಒಂದು ಪ್ರವೃತ್ತಿ ಮನುಷ್ಯರಲ್ಲಿದೆ. ಇದನ್ನು ಆಡಳಿತವು ನೇರವಾಗಿ ಸುಧಾರಿಸಲು ಆಗುವುದಿಲ್ಲ. ಆದರೆ ಶಿಕ್ಷಣದಿಂದ ಸುಧಾರಿಸಲು ಆಗುತ್ತದೆ. ಧರ್ಮಗಳಲ್ಲಿರುವ ಮೌಲ್ಯಗಳು ಮತ್ತು ನೀತಿಯ ಚಿಂತನೆಗಳು ನೈತಿಕ ಶಿಕ್ಷಣವಾಗಿ ಮೈಗೂಡಿದಾಗ ಮನುಷ್ಯ ತನ್ನ ಮೃಗೀಯ ಕ್ರೌರ್ಯದಿಂದ ಹೊರ ಬರಬಲ್ಲ.

ಕ್ರೂರಿಗಳಾಗಿ ವರ್ತಿಸುವವರು ಎಲ್ಲ ಸಂದರ್ಭಗಳಲ್ಲೂ ಕ್ರೂರಿಗಳೇ ಆಗಿರುವುದಿಲ್ಲ. ತಾನು ಯಾವ ಸಂದರ್ಭದಲ್ಲಿ ಕ್ರೂರಿಯಾಗುತ್ತೇನೆಂದು ತನಗೆ ಗೊತ್ತಾಗಬೇಕಾದ ಅಗತ್ಯ ಹೆಚ್ಚಾಗಿರುತ್ತದೆ. ಇದು ಗೊತ್ತಾಗಬೇಕಾದರೆ ಎಲ್ಲರಲ್ಲೂ ತಮ್ಮ ನಡವಳಿಕೆಗಳನ್ನು ತಾವೇ ಮೌಲ್ಯಮಾಪನಕ್ಕೆ ಒಳಪಡಿಸುವ ಆತ್ಮಾವ ಲೋಕನದ ಶಕ್ತಿ ಇರಬೇಕು. ಧಾರ್ಮಿಕ ಚರ್ಚೆಗಳು ಇದನ್ನು ಮಾಡಬಲ್ಲವು. ಏಕೆಂದರೆ ಕ್ರೌರ್ಯವು ಹೇಗೆ ಮನುಷ್ಯನಲ್ಲಿರುವ ಪ್ರಜ್ಞೆಯೋ ಹಾಗೆಯೇ ಧರ್ಮವೂ ಮನುಷ್ಯನಲ್ಲಿರುವ ಪ್ರಜ್ಞೆಯ ಒಂದು ಭಾಗವೇ ಆಗಿದೆ. ಪ್ರಾಣಿಗಳಿಗೆ ಹಿಂಸೆ ಕೊಡಲು ಹೋದವನಿಗೆ ‘ಜಗತ್ತಿನ ಪ್ರತಿಯೊಂದು ಜೀವಿಯನ್ನೂ ನಿನ್ನ ಆತ್ಮವೆಂದೇ ತಿಳಿ’ ಎನ್ನುವ ಈಶಾವಾಸೋಪನಿಷತ್ ನೆನಪಾದರೆ ಅವನು ಅದನ್ನು ಮಾಡುವುದಿಲ್ಲ. ಪ್ರವಾದಿ ಮಹಮ್ಮದರ ಬೋಧನೆಯನ್ನು ಸಂಗ್ರಹಿಸಲು ಹೊರಟವರು, ದನಕ್ಕೆ ಆಹಾರ ಕೊಡುವಂತೆ ನಟಿಸಿ ಆಹಾರ ಕೊಡದೆ ವಂಚಿಸಿ ದವನನ್ನು ಕಾಣುತ್ತಾರೆ. ಆಗ, ಇವನು ನಂಬಿಕೆಗೆ ಅನರ್ಹ ಎನಿಸಿ ಅವನಿಂದ ಪ್ರವಾದಿಯವರ ಬೋಧನೆ ಪಡೆಯುವುದನ್ನು ತಿರಸ್ಕರಿಸುತ್ತಾರೆ. ಇದು, ಮೋಸ ಮಾಡಲು ಹೊರಟವನ ಅರಿವಿಗೆ ಬಂದರೆ ಅವನು ಮೋಸವನ್ನು ಮಾಡುವುದಿಲ್ಲ. ಆದರೆ ಧರ್ಮವನ್ನು ಈ ರೀತಿಯ ಮೌಲ್ಯಗಳ ಚರ್ಚೆಯಾಗಿ ಬೆಳೆಸಲು ಸಾಧ್ಯವೇ ಎನ್ನುವುದು ಸರಿಹೊತ್ತಿನ ಸವಾಲಾಗಿದೆ.

ಮಹಾತ್ಮ ಗಾಂಧಿ ಒಮ್ಮೆ ಕುಡಿಯಲು ಬಿಸಿ ನೀರು ಕೇಳಿದರಂತೆ. ಆಶ್ರಮದಲ್ಲಿದ್ದ ಹುಡುಗಿ ಒಂದು ಲೋಟ ನೀರು ತಂದುಕೊಟ್ಟಳು. ಗಾಂಧಿ ಸ್ವಲ್ಪ ನೀರನ್ನು ಕುಡಿದು ಇಟ್ಟರು. ಹುಡುಗಿ ಎದ್ದು ಹೋದಳು. ಸ್ವಲ್ಪ ಹೊತ್ತಿನ ನಂತರ ಗಾಂಧಿ ಹುಡುಗಿಯನ್ನು ಕರೆದು, ‘ಲೋಟ ಮುಚ್ಚಬೇಕಿತ್ತು. ಮುಚ್ಚದೇ ಇದ್ದರೆ ಬಿಸಿನೀರಿನ ಹಬೆ ಮೇಲಕ್ಕೆದ್ದು ಗಾಳಿಯಲ್ಲಿರುವ ಸೂಕ್ಷ್ಮ ಜೀವಿಗಳನ್ನು ಸಾಯಿಸುತ್ತದೆ. ಅವುಗಳನ್ನು ಸಾಯಿಸುವ ಅಧಿಕಾರ ನಮಗಿಲ್ಲ’ ಎಂದಿದ್ದರು. ಕಳೆದ ಎಪ್ಪತ್ತು ವರ್ಷಗಳಲ್ಲಿ ಹೊಸ ಪೀಳಿಗೆಗೆ ಗಾಂಧಿಯನ್ನು ವೈಚಾರಿಕವಾಗಿ ಪರಿಚಯಿಸುವ ಕೆಲಸ ನಡೆದಿಲ್ಲ. ಗಾಂಧಿಯನ್ನೇ ಶತ್ರುವಾಗಿ ಕಾಣಬಯಸುವ ಜನರೂ ಇರುವ ಭಾರತದಲ್ಲಿ ಕ್ರೌರ್ಯ ವಿಜೃಂಭಿಸದೇ ಇನ್ನೇನಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT