ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ‘ಹೌದಪ್ಪ’ಗಳ ಮಾತು ಕೇಳುತ್ತ ಕುಳಿತರೆ...

ಸಮಾಜದ ಬಿರುಕುಗಳಿಗೆ ಹೊಲಿಗೆ ಹಾಕಿದರೆ ಅರ್ಥವ್ಯವಸ್ಥೆ ವೇಗ ಪಡೆದುಕೊಳ್ಳಬಹುದು
Last Updated 15 ಜನವರಿ 2020, 20:02 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮ ವಲಯದ ಕೆಲವು ಮುಖಂಡರನ್ನು ಈಚೆಗೆ ಭೇಟಿ ಮಾಡಿದರು. ಬಜೆಟ್‌ ಮಂಡನೆಗೆ ಮೊದಲು ನಡೆಯುವ ವಾರ್ಷಿಕ ಕ್ರಿಯೆ ಇದು. ಆದರೆ ಈ ಭೇಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇದು ಟೀಕೆಗಳಿಗೂ ಆಹಾರವಾಯಿತು. ಪ್ರಧಾನಿಯಿಂದ ನೇಮಕವಾದ ನಿರ್ಮಲಾ ಅವರು ಆ ಜಾಗಕ್ಕೆ ಸೂಕ್ತರಲ್ಲದಿದ್ದರೆ ಅಲ್ಲಿಗೆ ಬೇರೆಯವರನ್ನು ತರಬಹುದಿತ್ತು. ಆದರೆ, ಅವರನ್ನು ಹಣಕಾಸು ಸಚಿವೆಯಾಗಿಯೇ ಇಟ್ಟುಕೊಂಡು, ಅವರ ಸ್ಥಾನದ ಘನತೆ ತಗ್ಗಿಸುವ ಅಗತ್ಯವಿರಲಿಲ್ಲ.

ಅರ್ಥವ್ಯವಸ್ಥೆಯ ಸ್ಥಿತಿ ಬಗ್ಗೆ ವಾಣಿಜ್ಯೋದ್ಯಮಗಳ ಮುಖಂಡರಿಂದ ಮಾಹಿತಿ ಪಡೆಯುವುದು ಈ ಭೇಟಿಯ ಉದ್ದೇಶ. ಅರ್ಥವ್ಯವಸ್ಥೆ ಚೆನ್ನಾಗಿದೆ ಎಂದು ಸರ್ಕಾರದಲ್ಲಿರುವವರು ಈಗ ಎದೆ ತಟ್ಟಿಕೊಂಡು ಹೇಳುತ್ತಿಲ್ಲ. ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರ ಏನು ಮಾಡಬೇಕು ಎಂಬುದನ್ನು ಉದ್ಯಮಿಗಳಿಂದ ತಿಳಿದುಕೊಳ್ಳಲು ಮೋದಿ ಬಯಸಿದ್ದರು. ಇದು ಸರಿಯಾದ ಕ್ರಮ. ಬೇಡಿಕೆ ಹೆಚ್ಚಿಸುವುದು, ಸಾಲದ ಅಲಭ್ಯತೆ, ಜಿಎಸ್‌ಟಿ ಸರಳೀಕರಣ, ತೆರಿಗೆ ಭಯೋತ್ಪಾದನೆ, ಕಾರ್ಮಿಕ ಕಾನೂನು ಸುಧಾರಣೆ, ಗ್ರಾಹಕರ ಕೊಳ್ಳುವ ಶಕ್ತಿ ಹೆಚ್ಚಿಸುವುದು, ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವುದು ಮತ್ತಿತರ ವಿಷಯಗಳ ಬಗ್ಗೆ ಉದ್ಯಮಿಗಳು ಮಾತನಾಡಿದರು.

ಆದರೆ, ನಾಗರಿಕ ಸಮಾಜ ಹಾಗೂ ಸರ್ಕಾರದ ನಡುವಿನ ವಿಶ್ವಾಸದ ಕೊರತೆಯನ್ನು ಸರಿಪಡಿಸಲು ಮೋದಿ ಅವರು ಗಮನ ನೀಡಬೇಕು ಎಂಬುದನ್ನು ಉದ್ಯಮಿಗಳು ಹೇಳಲಿಲ್ಲ. ಸರ್ಕಾರದ ಕೆಲವು ನಿಲುವುಗಳು ತಮ್ಮ ಭವಿಷ್ಯವನ್ನು ಒತ್ತೆಯಿರಿಸಿವೆ ಎಂದು ಭಾವಿಸಿ ಸರ್ಕಾರವನ್ನು ಪ್ರಶ್ನಿಸುತ್ತಿರುವ ಅಲ್ಪಸಂಖ್ಯಾತರು ಹಾಗೂ ಯುವಜನರಲ್ಲಿ ಮನೆಮಾಡಿರುವ ಕಸಿವಿಸಿಯ ಬಗ್ಗೆಯೂ ಉದ್ಯಮಿಗಳು ಹೇಳಲಿಲ್ಲ. ಸಾಮಾಜಿಕ ಸೌಹಾರ್ದ ನೆಲೆಸಿದರೆ ಅರ್ಥವ್ಯವಸ್ಥೆ ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. ಇಂದು ಕೋಮುಭಾವನೆ
ಉದ್ರೇಕಿಸುತ್ತಿರುವವರ ‘ಬಲ’ದ ರಾಜಕಾರಣ ಹಾಗೂ ಮುಖ್ಯವಾಹಿನಿಯ ಹಲವು ರಾಜಕಾರಣಿಗಳು ಅಂಥದ್ದೊಂದು ಸ್ಥಿತಿ ನಿರ್ಮಾಣವಾಗಲು ಬಿಡುತ್ತಿಲ್ಲ ಎಂದು ಮೋದಿ ಅವರಿಗೆ ಹೇಳಬೇಕಿತ್ತು.

ಎಡಪಂಥೀಯ ತೀವ್ರಗಾಮಿ ಗುಂಪುಗಳನ್ನು ದೋಷಮುಕ್ತಗೊಳಿಸಬೇಕಿಲ್ಲ. ಎರಡೂ ಬಗೆಯ ಸೈದ್ಧಾಂತಿಕ ತೀವ್ರಗಾಮಿಗಳು‌, ಮತಾಂಧರ ವಿರುದ್ಧ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಬೇಕು. ಅರ್ಥ ವ್ಯವಸ್ಥೆ
ಯನ್ನು ಸರಿದಾರಿಗೆ ತರುವ ಮುನ್ನ, ಅರ್ಥವ್ಯವಸ್ಥೆಯಲ್ಲಿನ ರೋಗಗಳಿಗೆ ಮದ್ದು ಅರೆಯಲು ಮುಂದಾಗುವ ಮುನ್ನ ‘ಶಾಂತಿ’ ನೆಲೆಸುವಂತಾಗಬೇಕು ಎಂದು ಉದ್ಯಮಿಗಳು ವಾದಿಸಬೇಕಿತ್ತು. ಕೆಲವೇ ಕಂಪನಿಗಳ ಷೇರುಮೌಲ್ಯ ಹೆಚ್ಚುವಂತೆ ಮಾಡಿ ಅರ್ಥವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ; ಸಾಮಾಜಿಕ ಸಂಘರ್ಷಗಳು, ಹಿಂಸೆ ನಿರಂತರವಾಗಿ ನಡೆಯುತ್ತಿದ್ದರೆ ನಿಜ ಅರ್ಥದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಮೋದಿ ಅವರು ನೀಡಿದ್ದ ಆಹ್ವಾನದ ಅವಕಾಶವನ್ನು ಬಳಸಿಕೊಂಡು ಪ್ರಾಮಾಣಿಕವಾಗಿ ಹೇಳಬೇಕಿತ್ತು.

ದೂರಸಂಪರ್ಕ, ತೈಲ, ಉಕ್ಕು... ಹೀಗೆ ಉದ್ಯಮದ ಯಾವುದೇ ವಲಯದ ಬಹುತೇಕ ದಿಗ್ಗಜರು ತಮ್ಮ ವಹಿವಾಟಿಗೆ ನೆರವಾಗುವಂತೆ ನಿಯಮಗಳಲ್ಲಿ ಅನುಕೂಲ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಸಮಾಜದಲ್ಲಿ ತೀವ್ರ ಅಸಮಾನತೆ ಇದ್ದಾಗ, ನಿರಂತರ ತಿಕ್ಕಾಟ ಇದ್ದಾಗ, ಧಾರ್ಮಿಕ ವಿಘಟನೆಗಳು ಇದ್ದಾಗ ವಾಣಿಜ್ಯೋದ್ಯಮ ಬೆಳವಣಿಗೆ ಸಾಧಿಸುವುದಿಲ್ಲ.

2014ರ ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ನೀಡಿದ್ದ ಭರವಸೆಯತ್ತ ನೋಡೋಣ. ಅದರಲ್ಲಿ ಈಗಿನ ಬಿಕ್ಕಟ್ಟುಗಳಿಗೆ ಉತ್ತರವಿದೆ. ಎಲ್ಲರ ಅಭಿವೃದ್ಧಿ, ಸಂವಿಧಾನವೇ ಪವಿತ್ರ ಗ್ರಂಥ, ಅಭಿವೃದ್ಧಿಯೇ ಮಂತ್ರ ಎಂಬ ಮಾತುಗಳನ್ನು ಅವರು ಹೇಳಿದ್ದರು. ಇವೆಲ್ಲಕ್ಕಿಂತ ಮಿಗಿಲಾಗಿ ಅವರು ಪ್ರತೀ ಭಾರತೀಯನ ಭವಿಷ್ಯವೂ ಉಜ್ವಲವಾಗಲಿದೆ ಎಂದಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಎರಡನೆಯ ಅವಧಿಯಲ್ಲಿ ಹಲವು ರಂಗಗಳಲ್ಲಿ ಜನರನ್ನು ಭ್ರಮನಿರಸನಗೊಳಿಸಿತ್ತು. ಹಿಂದಿನಿಂದಲೂ ಕಾಂಗ್ರೆಸ್ಸಿಗೆ ಮತ ಹಾಕುತ್ತಿದ್ದ ದಲಿತರು, ಒಬಿಸಿ ವರ್ಗದವರು, ಕೆಲವು ಮುಸ್ಲಿಮರು ಕೂಡ ಮೋದಿ ಮಾತನ್ನು ನಂಬಿದ್ದರು. ಮೋದಿ ಅವರು ದೊಡ್ಡ ಜಯ ಸಾಧಿಸಿದರು.

ಈಗ ಮೋದಿ ಅವರು ಇಂದಿರಾ ಗಾಂಧಿ ಎಸಗಿದ್ದ ತಪ್ಪುಗಳನ್ನೇ ಎಸಗುತ್ತಿದ್ದಾರೆ. ವ್ಯಂಗ್ಯವೆಂದರೆ ಇಂದಿರಾ ವಿರುದ್ಧ ಆರ್‌ಎಸ್‌ಎಸ್‌ ಹೋರಾಟ ನಡೆಸಿತ್ತು, ಇಂದಿರಾ ಹೇರಿದ್ದ ತುರ್ತುಪರಿಸ್ಥಿತಿ ವೇಳೆ ಮೋದಿ ಅವರೂ ಸೇರಿದಂತೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹಲವು ನಾಯಕರನ್ನು ಬಂಧಿಸಲಾಗಿತ್ತು. ಮೋದಿ ಅವರು ಅಧಿಕಾರಕ್ಕೆ ಬಂದಿದ್ದು ಯುಪಿಎ ಸರ್ಕಾರದ ತಪ್ಪುಗಳನ್ನು ಸರಿಪಡಿಸಲು. ಯುಪಿಎ ಅಧಿಕಾರಾವಧಿಯಲ್ಲಿ ಸೋನಿಯಾ ಗಾಂಧಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸಂಪುಟದ ಇತರ ಸಚಿವರಿಗೆ ಸೀಮಿತ ಸ್ವಾಯತ್ತೆ ನೀಡಿದ್ದರು, ಸೋನಿಯಾ ಗಾಂಧಿ ಆಪ್ತ ವಲಯದವರು ಹೆಚ್ಚಿನ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರು. ತೀರ್ಮಾನ ಕೈಗೊಳ್ಳುವಾಗ ವಿಸ್ತೃತ ಸಮಾಲೋಚನೆ ಇರುತ್ತಿರಲಿಲ್ಲ, ಭಿನ್ನ ದೃಷ್ಟಿಕೋನಗಳಿಗೆ ಗೌರವ ನೀಡುತ್ತಿರಲಿಲ್ಲ, ನಿರ್ಧಾರ ಕೈಗೊಳ್ಳುವಲ್ಲಿ ಪಾರದರ್ಶಕತೆಯೂ ಇರುತ್ತಿರಲಿಲ್ಲ. ಈ ನಿರಾಶಾದಾಯಕ ಸ್ಥಿತಿ ಇದ್ದ ಹೊತ್ತಿನಲ್ಲಿ ಮೋದಿ ಅವರು ಅಧಿಕಾರ ಹಿಡಿದರು.

ನಾವು ಈಗ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಎಸಗಿದ ತಪ್ಪುಗಳ ಪುನರಾವರ್ತನೆಯನ್ನು ಕಾಣುತ್ತಿದ್ದೇವೆ. ಮೋದಿ ಅವರು ತಮ್ಮ ಸಂಪುಟದ ಒಬ್ಬ ಸಹೋದ್ಯೋಗಿಯ ಮಾತನ್ನು ಮಾತ್ರ ಕೇಳುತ್ತಿದ್ದಾರೆ ಎಂಬ ಆರೋಪ ಇದೆ. ಬಲಿಷ್ಠ, ಅಧಿಕಾರದಾಹಿ, ಸರ್ವಾಧಿಕಾರಿ ಧೋರಣೆಯ ಯಾವ ನಾಯಕರೂ ದೇಶದಲ್ಲಿ ಬಹುಕಾಲ ಅಧಿಕಾರದಲ್ಲಿ ಉಳಿಯಲಿಲ್ಲ ಎಂಬುದನ್ನು ಅವರು ಮರೆಯುತ್ತಿದ್ದಾರೆ.

ಮೋದಿ ಅವರು ಆರಂಭದ ಹೆಜ್ಜೆಯಾಗಿ ತಮ್ಮ ಸಂಪುಟದ ಸಹೋದ್ಯೋಗಿಗಳ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಆರಂಭಿಸಬೇಕು. ಮೋದಿ ಅವರು ‘ಹೌದಪ್ಪ’ಗಳಿಗೆ ಮಾತ್ರ ಕಿವಿಗೊಟ್ಟರೆ ಅದೇ ಅವರ ತಪ್ಪಾಗುತ್ತದೆ. ಪರಿಸ್ಥಿತಿ ಬದಲಾದಾಗ ಮೋದಿ ಅವರ ಕೈಬಿಡುವವರಲ್ಲಿ ‘ಹೌದಪ್ಪ’ಗಳೇ ಮೊದಲಿಗರಾಗಿರುತ್ತಾರೆ. ಮೋದಿ ಅವರು ನಾಗರಿಕ ಸಮಾಜದ ಎರಡೂ ಬಗೆಯ ಸಿದ್ಧಾಂತಿಗಳ ಜೊತೆ ಮಾತುಕತೆ ನಡೆಸಬೇಕು. ಯುವಕರ ಜೊತೆ ಮುಖಾಮುಖಿಯಾಗಿ ಸಂವಾದ ನಡೆಸಬೇಕು. ವಿರೋಧ ಪಕ್ಷಗಳನ್ನೂ ಮರೆಯಬಾರದು.

ಇಂದಿರಾ ನೇತೃತ್ವದ ಸರ್ಕಾರವನ್ನು ಉರುಳಿಸಿದ ಜೆ.ಪಿ. ಆಂದೋಲನ ಹಾಗೂ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಪತನಕ್ಕೆ ಕಿಡಿ ಹೊತ್ತಿಸಿದ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನ ಯಶಸ್ಸು ಕಂಡಿದ್ದು ಯುವಕರ ಭಾಗ
ವಹಿಸುವಿಕೆಯ ಪರಿಣಾಮವಾಗಿ ಎಂಬುದನ್ನು ಮೋದಿ ಮರೆಯಬಾರದು. ಈಗ ಕೂಡ, ಸರ್ಕಾರದ ಕೆಲವು ಕ್ರಮಗಳ ವಿರುದ್ಧ ಯುವಕರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಕಿಗೆ ತುಪ್ಪ ಸುರಿಯುವ ಗುಂಪುಗಳು ಇವುಗಳ ಹಿಂದೆ ಇದ್ದಿರಬಹುದು. ಆದರೆ, ದೇಶದೆಲ್ಲೆಡೆ ಇರುವ ಆಕ್ರೋಶವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಪ್ರತಿಭಟನಕಾರರನ್ನು ಪೊಲೀಸರ ಲಾಠಿ ಹಾಗೂ ಪ್ರಭುತ್ವದ ಬಲಿಷ್ಠ ತೋಳುಗಳನ್ನು ಬಳಸುವುದರಿಂದಲೇ ನಿಭಾಯಿಸುವುದು ಸೂಕ್ತವಾಗದು.

ಜೆ.ಪಿ. ಆಂದೋಲನ, ಅಣ್ಣಾ ಹಜಾರೆ ಅವರ ಹೋರಾಟಕ್ಕೂ ಇಂದಿನ ಪ್ರತಿಭಟನೆಗಳಿಗೂ ಒಂದು ವ್ಯತ್ಯಾಸ ಇದೆ. ಇಂದಿನ ಪ್ರತಿಭಟನೆಗಳು ಒಬ್ಬನ ನಾಯಕತ್ವದಲ್ಲಿ ನಡೆಯುತ್ತಿಲ್ಲ. ಇದು ಎಚ್ಚರಿಕೆಯ ಗಂಟೆಯಾಗಬೇಕು. ನೋಟು ರದ್ದತಿಯಿಂದ ಉಂಟಾದ ಸಮಸ್ಯೆಗಳನ್ನು ಸರಿಪಡಿಸುವುದು ಸುಲಭವಿರಬಹುದು. ಆದರೆ, ನಾಗರಿಕರನ್ನು ‘ಡಿನೋಟಿಫೈ’ ಮಾಡುವುದರಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಬಗೆಹರಿಸುವುದು ಅಷ್ಟು ಸುಲಭವಲ್ಲ. ಸಮಾಜದ ಬಿರುಕುಗಳಿಗೆ ಹೊಲಿಗೆ ಹಾಕುವುದು, ಶಾಂತಿ ನೆಲೆಸುವಂತೆ ಮಾಡುವುದು ಅರ್ಥವ್ಯವಸ್ಥೆಗೆ ವೇಗ ತಂದುಕೊಡಲು ಇರುವ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT