ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು ನದಿ: ಇದು ಪಾಕ್‌ ಪಾಲಿನ ಜೀವನಾಡಿ–ಜೀವಭಯ, ಭಾರತಕ್ಕಿರುವ ಕೊನೆಯ ಅಸ್ತ್ರ

Last Updated 8 ಏಪ್ರಿಲ್ 2019, 4:28 IST
ಅಕ್ಷರ ಗಾತ್ರ

ಭಾರತ ಮತ್ತು ಪಾಕಿಸ್ತಾನದ ನಡುವಣ ಎಲ್ಲ ಸಂಘರ್ಷಗಳ ಗುಪ್ತಗಾಮಿನಿಯಾಗಿರುವುದು ಸಿಂಧು ನದಿ. ಇದು ಪಾಕಿಸ್ತಾನದ ಪಾಲಿನ ಜೀವನಾಡಿ, ಆರ್ಥಿಕತೆಯ ಆಧಾರಸ್ತಂಭ. ಸಿಂಧು ನದಿಗೆನೀರು ಹರಿಸಿ ಬಲ ತುಂಬುವ ಪ್ರಮುಖ ಉಪನದಿಗಳನ್ನು ನಿಯಂತ್ರಿಸುವ ಆಯಕಟ್ಟಿನ ಭಾಗದಲ್ಲಿ ಭಾರತದ ಸುಪರ್ದಿಯಲ್ಲಿರುವಕಾಶ್ಮೀರ ಇದೆ.

ಒಂದು ವೇಳೆ ಪಾಕಿಸ್ತಾನವುಕಾಶ್ಮೀರದ ಮೇಲಿನ ತನ್ನ ಹಕ್ಕು ಪ್ರತಿಪಾದನೆಯನ್ನು ಬಿಟ್ಟುಕೊಟ್ಟರೆ, ಗಡಿ ನಿಯಂತ್ರಣ ರೇಖೆಯನ್ನು (ಲೈನ್ ಆಫ್ ಕಂಟ್ರೋಲ್– ಎಲ್‌ಒಸಿ) ಅಂತರ ರಾಷ್ಟ್ರೀಯ ಗಡಿ ಎಂದು ಒಪ್ಪಿಕೊಂಡುಬಿಟ್ಟರೆ ಅದೇ ಕ್ಷಣ ಅದು ತನ್ನ ಜೀವನಾಡಿಯಾದ ನದಿಯ ಮೇಲಿನ ಹಕ್ಕನ್ನೂ ಕಳೆದುಕೊಂಡಂತೆ ಆಗುತ್ತದೆ ಎನ್ನುವುದು ಪಾಕಿಸ್ತಾನದ ಆತಂಕ.ಆದರೆ ಭಾರತ ಈವರೆಗೆ ಪಾಕಿಸ್ತಾನಕ್ಕೆ ಹರಿಸುವ ನೀರಿನ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ.ಭಾರತದಲ್ಲಿ ನಡೆಸುತ್ತಿರುವಹಿಂಸಾಚಾರವನ್ನು ಸಮರ್ಥಿಸಿಕೊಳ್ಳಲು ಪಾಕಿಸ್ತಾನವು ‘ಭಾರತ ನನ್ನ ಪಾಲಿನ ನೀರನ್ನು ಕಸಿಯುತ್ತಿದೆ ಅಥವಾ ಕಸಿಯುವ ಸಿದ್ಧತೆಯಲ್ಲಿದೆ’ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ವಿಚಾರವನ್ನು ನಿರೂಪಿಸಲು, ಸೂಕ್ತ ಆಧಾರ ಒದಗಿಸಲು ಪಾಕಿಸ್ತಾನಕ್ಕೆ ಈವರೆಗೆ ಸಾಧ್ಯವಾಗಿಲ್ಲ.

ಲೇಹ್‌ನಲ್ಲಿ ಝಂಸ್ಕಾರ್ ನದಿಯನ್ನು ಒಡಲಿನಲ್ಲಿ ಸೇರಿಸಿಕೊಳ್ಳುತ್ತಿರುವ ಸಿಂಧು. ಎಡದಿಂದ ಬರುತ್ತಿರುವುದು ಸಿಂಧು, ಮೇಲಿನಿಂದ ಹರಿದು ಬರುತ್ತಿರುವುದು ಝಂಸ್ಕಾರ್. (Pic Courtesy- wikipedia)
ಲೇಹ್‌ನಲ್ಲಿ ಝಂಸ್ಕಾರ್ ನದಿಯನ್ನು ಒಡಲಿನಲ್ಲಿ ಸೇರಿಸಿಕೊಳ್ಳುತ್ತಿರುವ ಸಿಂಧು. ಎಡದಿಂದ ಬರುತ್ತಿರುವುದು ಸಿಂಧು, ಮೇಲಿನಿಂದ ಹರಿದು ಬರುತ್ತಿರುವುದು ಝಂಸ್ಕಾರ್. (Pic Courtesy- wikipedia)

ಸಿಂಧು: ಭಾರತದ ಭಾವುಕ ಸೆಲೆ, ಪಾಕ್‌ಗೆ ಆರ್ಥಿಕ ನೆಲೆ

ಟಿಬೆಟ್‌ನ ಮಾನಸ ಸರೋವರದಲ್ಲಿ ಸಮುದ್ರಮಟ್ಟದಿಂದ ಸುಮಾರು 5,182 ಮೀಟರ್ ಎತ್ತರದಲ್ಲಿ ಹುಟ್ಟುವ ಸಿಂಧು ನದಿ 3,200 ಕಿ.ಮೀ. ಹರಿದು ಪಾಕಿಸ್ತಾನದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಭಾರತದಲ್ಲಿ ಸುಮಾರು 800 ಕಿ.ಮೀ. ಪ್ರವಹಿಸುವ ಸಿಂಧು, ಪಾಕಿಸ್ತಾನದಲ್ಲಿ ಉಳಿದ ಯಾತ್ರೆ ಪೂರೈಸುತ್ತದೆ. ಪಾಕಿಸ್ತಾನದ ಹಲವು ಪ್ರಾಂತ್ಯಗಳ ಕೃಷಿ, ಕೈಗಾರಿಕೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಿಂಧು ನದಿಯೇ ಜೀವ. ಸಟ್ಲೇಜ್, ಬಿಯಾಸ್, ರಾವಿ, ಚೀನಬ್ ಮತ್ತು ಝೀಲಂ ನದಿಗಳು ಸಿಂಧು ನದಿಯನ್ನು ಸೇರಿಕೊಳ್ಳುತ್ತವೆ.

ಸಿಂಧು ನದಿಯ ಜಲಾನಯನ ಪ್ರದೇಶವು ಚೀನಾ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನಗಳೊಂದಿಗೆ ಹಂಚಿಹೋಗಿದೆ. ಪಾಕಿಸ್ತಾನದಲ್ಲಿ ಅತಿಹೆಚ್ಚು ಅಂದರೆ, ಶೇ 60ರಷ್ಟು ಸಿಂಧು ಜಲಾನಯನ ಪ್ರದೇಶವಿದ್ದರೆ ಭಾರತದಲ್ಲಿ ಶೇ20, ಅಫ್ಗಾನಿಸ್ತಾನದಲ್ಲಿ ಶೇ5 ಮತ್ತು ಟಿಬೆಟ್‌ನಲ್ಲಿ ಶೇ15ರಷ್ಟು ಜಲಾನಯನ ಪ್ರದೇಶವಿದೆ. ಸಿಂಧು ನದಿ ನೀರಿದ ದೊಡ್ಡ ಫಲಾನುಭವಿಗಳಾದ ಭಾರತ ಮತ್ತು ಪಾಕಿಸ್ತಾನಗಳು ಬೇಸಾಯ ಮತ್ತು ವಿದ್ಯುತ್ ಉತ್ಪಾದನೆಗಾಗಿ ನದಿಯನ್ನು ಅವಲಂಬಿಸಿವೆ.

ಸಿಂಧು ನದಿಗೆ ಐದು ಮುಖ್ಯ ಉಪನದಿಗಳಿವೆ. ಈ ಪೈಕಿ ಕಾಶ್ಮೀರ ಕಣಿವೆಯಲ್ಲಿ ಹುಟ್ಟುವ ಝೀಲಂ ಅತಿದೊಡ್ಡದು. ಜಮ್ಮು ಪ್ರಾಂತ್ಯದಲ್ಲಿ ಹರಿಯುವ ಚೀನಬ್ ಎರಡನೇ ದೊಡ್ಡ ನದಿ. ಉಳಿದ ಮೂರು ಉಪನದಿಗಳು (ರಾವಿ, ಸಟ್ಲೇಜ್ ಮತ್ತು ಬಿಯಾಸ್) ಹಿಮಾಚಲ ಪ್ರದೇಶದ ಮೂಲಕ ಹರಿದು ಸಿಂಧು ನದಿಯನ್ನು ಸೇರಿಕೊಳ್ಳುತ್ತವೆ.

ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳ ಸುಪರ್ದಿಯಲ್ಲಿರುವ ಕಾಶ್ಮೀರಗಳ ನಡುವೆ ಪ್ರಸ್ತುತ ಅಸ್ತಿತ್ವದಲ್ಲಿರುವ ಗಡಿ ನಿಯಂತ್ರಣ ರೇಖೆಯನ್ನು ಎರಡೂ ದೇಶಗಳು ಒಂದು ವೇಳೆ ಶಾಶ್ವತ ಗಡಿ ಎಂದು ಒಪ್ಪಿಕೊಂಡುಬಿಟ್ಟರೆ ಸಿಂಧು ನದಿ ಮತ್ತು ಅದರ ಎಲ್ಲ ಉಪನದಿಗಳ ಮೇಲಿನ ಭಾಗವು ಭಾರತದ ನಿಯಂತ್ರಣಕ್ಕೆ ಸಿಕ್ಕಂತೆ ಆಗುತ್ತದೆ. ಪಾಕಿಸ್ತಾನ ಶಾಶ್ವತವಾಗಿ ನದಿಪಾತ್ರದ ಕೆಳ ಹರಿವಿನ ಪ್ರದೇಶದಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ.

ಸಿಂಧು ನದಿಯ ಜಲಜಾಲವು ಎರಡೂ ದೇಶಗಳಲ್ಲಿ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನದ ಆರ್ಥಿಕತೆಗೆ ಆಧಾರವಾಗಿರುವ ಏಕೈಕ ನದಿ ಇದು. ಪಾಕಿಸ್ತಾನದ ಶೇ92ರಷ್ಟು ಭೂಮಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲ. ಭಾರತದಲ್ಲಿ ವಾಯವ್ಯ ಪ್ರಾಂತ್ಯದ ಕಡಿಮೆ ಮಳೆ ಬೀಳುವ ರಾಜ್ಯಗಳಾದ ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನಗಳಿಗೆ ಸಿಂಧು ನದಿಯ ನೀರೇ ಆಧಾರ. ಪಾಕಿಸ್ತಾನದ ಅರ್ಧಕ್ಕೂ ಹೆಚ್ಚು ಜನರು ಕೃಷಿಯನ್ನೇ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ. ಭಾರತದ ಪಾಲಿಗೆ ಗೋಧಿಯ ಕಣಜ ಎನಿಸಿರುವ ಪಂಜಾಬ್ ದೇಶದ ಒಟ್ಟು ಗೋಧಿ ಉತ್ಪನ್ನದ ಶೇ20ರಷ್ಟನ್ನು ಉತ್ಪಾದಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಎರಡೂ ದೇಶಗಳಿಗೆ ಸಿಂಧು ನದಿ ಎಷ್ಟು ಅನಿವಾರ್ಯ ಎನ್ನುವುದು ಅರ್ಥವಾಗುತ್ತದೆ.

ಕಾಶ್ಮೀರದ ಕಾರಕೊರಮ್ ಹೆದ್ದಾರಿಯಿಂದ ಕಾಣುವ ಸಿಂಧು ನದಿ (Pic Courtesy- wikipedia)
ಕಾಶ್ಮೀರದ ಕಾರಕೊರಮ್ ಹೆದ್ದಾರಿಯಿಂದ ಕಾಣುವ ಸಿಂಧು ನದಿ (Pic Courtesy- wikipedia)

ಬಹುಕಾಲದ ಜಲರಾಜಕಾರಣ

ಭಾರತ ಮತ್ತು ಪಾಕ್ ನಡುವೆ ಗಡಿ ಹಂಚಿಕೊಡಲು 1947ರಲ್ಲಿ ಸರ್ ಸಿರಿಲ್ ರ‍್ಯಾಡ್‌ಕ್ಲಿಫ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಿಂಧು ನೀರಾವರಿ ವ್ಯವಸ್ಥೆಯು ಎರಡೂ ದೇಶಗಳಿಗೆ ಅನಿವಾರ್ಯವಾಗಿದ್ದ ಕಾರಣ ಅದನ್ನು ಹೇಗೆ ಹಂಚಿಕೊಡುವುದು ಎಂಬ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ರ್‍ಯಾಡ್‌ಕ್ಲಿಫ್ ಅವರಿಗೆ ಸಾಧ್ಯವಾಗಲಿಲ್ಲ.

ಇದೇ ಕಾರಣಕ್ಕೆ ಪಂಜಾಬ್ ರಾಜ್ಯವನ್ನು ಹಂಚಿಕೊಡುವುದು ಬ್ರಿಟಿಷ್ ಆಡಳಿತಾಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಈ ಸಂಕೀರ್ಣ ನೀರಾವರಿ ವ್ಯವಸ್ಥೆಯು ಒಂದೇ ಆಡಳಿತದಡಿ ನಡೆಯುವಂತೆ ರೂಪುಗೊಂಡಿತ್ತು. ಹಂಚಿಕೆಯ ಜವಾಬ್ದಾರಿಯನ್ನು ಕ್ರಮೇಣಉತ್ತರ ಪಂಜಾಬ್ (ಭಾರತ) ಮತ್ತು ಪಶ್ಚಿಮ ಪಂಜಾಬ್ (ಪಾಕಿಸ್ತಾನ) ಪ್ರಾಂತ್ಯಗಳ ಮುಖ್ಯ ಎಂಜಿನಿಯರ್‌ಗಳಿಗೆ ವರ್ಗಾಯಿಸಲಾಯಿತು. ಎರಡೂ ದೇಶದ ನೀರಾವರಿ ಪರಿಣಿತರು ಮತ್ತೊಂದು ವರ್ಷದ ಅವಧಿಗೆ ಅಸ್ತಿತ್ವದಲ್ಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗಲು ಸಮ್ಮತಿಸಿದರು. ಈ ಒಪ್ಪಂದ ಗಡುವು ಮಾರ್ಚ್ 31, 1948ಕ್ಕೆ ಮುಕ್ತಾಯವಾಯಿತು. ಮಾರನೇ ದಿನವೇ ಭಾರತವು ಪಾಕಿಸ್ತಾನಕ್ಕೆ ಹರಿಯಬೇಕಿದ್ದ ನೀರನ್ನು ತಡೆದು ನಿಲ್ಲಿಸಿತು.

ಮುಂದೊಂದು ದಿನ ಭಾರತ ಮನಸ್ಸು ಮಾಡಿದರೆ ತನ್ನ ನೀರ ಸೆಲೆಯನ್ನು ತಡೆದು ನಿಲ್ಲಿಸಬಹುದು ಎಂದು ಪಾಕಿಸ್ತಾನಕ್ಕೆ ಅನ್ನಿಸಿದ ಕ್ಷಣ ಅದು.ಕಾಶ್ಮೀರ ಕಣಿವೆಯ ಸಂಘರ್ಷದೊಂದಿಗೆ ಜಲವಿವಾದವು ತಳಕುಹಾಕಿಕೊಂಡಿದೆ ಎಂದು ಅಲ್ಲಿನ ಜನರು ನಂಬಲು ಇದು ಆಧಾರವಾಯಿತು. ಕಾಶ್ಮೀರ ವಿವಾದ ಮತ್ತು ಸಿಂಧು ನದಿಯ ನೀರು ಹಂಚಿಕೆಯ ವಿವಾದಗಳು ಪರಸ್ಪರ ತಳಕುಹಾಕಿಕೊಂಡಿವೆ. ಭಾರತ ಉಪಖಂಡದಿಂದ ಬ್ರಿಟಿಷರು ಕಾಲ್ತೆಗೆದ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವಣಉದ್ವಿಗ್ನತೆ ಶಮನಗೊಳ್ಳಲು ಇರುವ ದೊಡ್ಡ ತೊಡಕಾಗಿಯೂ ಪರಿಣಮಿಸಿದೆ.

1948ರ ಜನವರಿ ತಿಂಗಳಲ್ಲಿಭಾರತ ಸರ್ಕಾರವು ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕೊಂಡೊಯ್ದಿತು. ಏಪ್ರಿಲ್ 21, 1948ರಲ್ಲಿ ಎರಡೂ ದೇಶಗಳ ನಡುವೆ ಕದನವಿರಾಮ ಘೋಷಣೆಯಾಗಿ, ಎರಡೂ ಸರ್ಕಾರಗಳು ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಂಡವು. ಅದೇ ವರ್ಷವಿಶ್ವಬ್ಯಾಂಕ್‌ನ ಅಂದಿನ ಅಧ್ಯಕ್ಷ ಯೂಗೆನೆ ಬ್ಲಾಕ್ ಎರಡೂ ದೇಶಗಳ ನಡುವೆ ಬಹುಕಾಲದಿಂದ ಬಾಕಿ ಉಳಿದಿದ್ದ ವಿವಾದ ಪರಿಹರಿಸಲು ಮುಂದಾದರು. ಭಾರತಕ್ಕೆ ತೃತೀಯ ದೇಶವೊಂದು ಮಧ್ಯಪ್ರವೇಶಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೂ, ಕೊನೆಗೆ ಎರಡೂ ದೇಶಗಳು ಯೂಗೆನೆ ಬ್ಲಾಕ್ ಪ್ರಸ್ತಾವವನ್ನು ಒಪ್ಪಿಕೊಂಡವು.

ಸ್ವಾತಂತ್ರ್ಯ ಸಿಕ್ಕ ಕೆಲವೇದಿನಗಳಲ್ಲಿ ಭಾರತವುಬಿತ್ತನೆ ಕಾಲದಲ್ಲಿ ‘ಕೇಂದ್ರ ಬಾರಿ ದೊಅಬ್’(Central Bari Doab) ಕಾಲುವೆಗಳಲ್ಲಿ ನೀರು ತಡೆಹಿಡಿಯುವ ಮೂಲಕ ಪಾಕಿಸ್ತಾನದಲ್ಲಿ ಭಾರಿ ಪ್ರಮಾಣದ ಬೆಳೆನಷ್ಟಕ್ಕೆ ಕಾರಣವಾಯಿತು ಎಂದು ಪಾಕಿಸ್ತಾನ ಪ್ರತಿಪಾದಿಸಿತು.ಹೊಸದಾಗಿ ಅಸ್ತಿತ್ವಕ್ಕೆ ಬಂದ ದೇಶವೊಂದು ತನ್ನ ಸಾರ್ವಭೌಮತ್ವವನ್ನು ಸಾರಿಹೇಳಲು ಹವಣಿಸುತ್ತಿದ್ದ ಹೊತ್ತಿನಲ್ಲಿಯೇ ಎದುರಿಸಿದ ಆಘಾತ ಎಂಬಂತೆ ಅದನ್ನು ವಿಶ್ವ ಸಮುದಾಯ ವಿಶ್ಲೇಷಿಸಿತು. ಪಾಕಿಸ್ತಾನದ ಆರೋಪವನ್ನು ಭಾರತ ಸರ್ಕಾರ ಒಪ್ಪಿಕೊಳ್ಳಲಿಲ್ಲ. ಆದರೆಹೀಗೆ ಮಾಡುವ ಮೂಲಕತನ್ನ ನೀರಾವರಿ ಜಾಲದ ಮುಖ್ಯಬಿಂದುವನ್ನು ನಿಯಂತ್ರಿಸುವ ಅಧಿಕಾರ ತನ್ನಲ್ಲಿಲ್ಲ ಎಂಬುದನ್ನು ಪಾಕಿಸ್ತಾನ ಪರೋಕ್ಷವಾಗಿ ವಿಶ್ವಸಮುದಾಯದ ಎದುರು ತೋಡಿಕೊಂಡಿತ್ತು.

1948ರಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಓರ್ವ ಬ್ರಿಟಿಷ್ ಜನರಲ್ ಹೀಗೆ ಹೇಳುತ್ತಾರೆ.‘ಕಾಶ್ಮೀರ ವಿವಾದಕ್ಕೆ ಮುಖ್ಯ ಕಾರಣ ಭೂಮಿ ಅಲ್ಲವೇ ಅಲ್ಲ. ಅದು ನೀರಿನ ಬಗೆಗೆ ಪಾಕಿಸ್ತಾನಕ್ಕೆ ಇರುವ ಅಭದ್ರತೆಯ ಆತಂಕ ಮಾತ್ರ. ಪಾಕಿಸ್ತಾನದ ಜೀವನಾಡಿಗಳಾಗಿರುವ ಬಹುತೇಕ ನದಿಗಳು ಒಂದೋ ಭಾರತದಲ್ಲಿ ಹುಟ್ಟುತ್ತವೆ ಅಥವಾ ಭಾರತದ ಮೂಲಕವೇ ಹರಿದುಬರುತ್ತವೆ. ವಿಶ್ವಬ್ಯಾಂಕ್‌ನ ಸದಾಶಯದಂತೆ ಎರಡೂ ದೇಶಗಳ ನಡುವಣ ನೀರಿನ ವಿವಾದ ಪರಿಹರಿಸಿಕೊಳ್ಳುವುದು ಕಾಶ್ಮೀರ ವಿವಾದದ ತೀವ್ರತೆಯನ್ನು ತಕ್ಕಮಟ್ಟಿಗೆ ಕಡಿಮೆ ಮಾಡೀತು’ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಭಾರತ ಉಪಖಂಡದಿಂದ ಬ್ರಿಟಿಷರು ಕಾಲ್ತೆಗೆದ ನಂತರ ಕಾಶ್ಮೀರ ವಿಚಾರವಾಗಿ ಭಾರತ–ಪಾಕ್ ನಡುವೆ ಉಂಟಾದ ಸಂಘರ್ಷಗಳಿಗೆ ನೀರಿನ ಹಂಚಿಕೆಗಿಂತಲೂ ಸಿದ್ಧಾಂತಗಳು ಮತ್ತು ಸಾರ್ವಭೌಮತ್ವದ ಮೇಲ್ಮೆಯ ಹೊಯ್ದಾಟಗಳು ಕಾರಣ ಎನ್ನಲಾಗಿತ್ತು. ಆದರೆ ನವೆಂಬರ್ 1951ರಲ್ಲಿ ಕರಾಚಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಕಚೇರಿಯಿಂದ ರವಾನೆಯಾದ ಪತ್ರವೊಂದು ಬೇರೆಯದೇ ಕಥೆ ಹೇಳುತ್ತದೆ.

‘ತಮ್ಮ ಜಲಮೂಲಗಳ ಮೇಲೆ ಭಾರತಕ್ಕೆ ಪರಮಾಧಿಕಾರ ಇರುವುದನ್ನು ಪಾಕಿಸ್ತಾನೀಯರು ಸಹಿಸುತ್ತಿಲ್ಲ. ಅಂಥದ್ದೊಂದು ನಿಯಂತ್ರಣ ಸಿಕ್ಕಿಬಿಟ್ಟರೆ ಭಾರತವು ಪಾಕಿಸ್ತಾನವನ್ನು ಹೊಸಕಿಹಾಕಬಹುದು ಎನ್ನುವುದು ಅವರ ಆತಂಕ. ಭಾರತವು ತನ್ನ ಮಂಗ್ಲಾ ಅಣೆಕಟ್ಟೆಯಲ್ಲಿ ಝೀಲಂ ನದಿಯನ್ನು ತಡೆದು ನಿಲ್ಲಿಸಿದರೂ ಪಾಕಿಸ್ತಾನದಲ್ಲಿ ಹಾಹಾಕಾರ ಉಂಟಾಗಬಹುದು. ಹೀಗಾಗಿಯೇ ಕಾಶ್ಮೀರ ವಿವಾದ ಪರಿಹಾರಕ್ಕೆ ಎಂಥದ್ದೇ ಸೂತ್ರ ಮುಂದಿಟ್ಟರೂ ಪಾಕಿಸ್ತಾನ ಒಂದಲ್ಲಾ ಒಂದು ನೆಪ ಮುಂದಿಟ್ಟು ಅದನ್ನು ತಳ್ಳಿಹಾಕುತ್ತದೆ. ತನ್ನ ಜುಟ್ಟನ್ನು ಭಾರತಕ್ಕೆ ಕೊಟ್ಟು ಸದಾ ಅದರ ಹಂಗಿನಲ್ಲಿ ಬದುಕುವುದಕ್ಕಿಂತ, ಆತ್ಮಹತ್ಯೆಗೆ ಸಮ ಎಂದು ಗೊತ್ತಿದ್ದರೂ ಘೋರ ಯುದ್ಧವನ್ನೇ ಮಾಡಲು ಮುಂದಾದೀತು’ ಎನ್ನುತ್ತದೆ ಬ್ರಿಟಿಷ್ ಹೈಕಮಿಷನ್‌ನ ಆ ಪತ್ರ.

ಪಾಕಿಸ್ತಾನದಲ್ಲಿ ಇಂಥ ಅಭಿಪ್ರಾಯ ವ್ಯಾಪಕವಾಗಿ ‍ಪ್ರಚಲಿತದಲ್ಲಿದ್ದ ಕಾಲದಲ್ಲಿಯೂ ಭಾರತದ ರಾಜಕಾರಣಿಗಳಿಗೆ ಪಾಕಿಸ್ತಾನಕ್ಕೆ ನೀರಿನ ಹರಿವು ತಡೆದು, ತೊಂದರೆ ಕೊಡುವ ಇಚ್ಛೆ ಇರಲಿಲ್ಲ. ‘ಕಾಶ್ಮೀರದ ಸಂಪೂರ್ಣ ಭೂಪ್ರದೇಶದ ಭಾರತದ ಸುಪರ್ದಿಗೆ ಸಿಕ್ಕರೂ, ಸಿಂಧು ನದಿಯ ಪೂರ್ಣ ಹರಿವು ನಿಯಂತ್ರಿಸಲು ಸಾಧ್ಯವಿಲ್ಲ, ಅಂಥ ಕೆಲಸ ಮಾಡುವುದಿಲ್ಲ’ ಎಂದೇ ಭಾರತದ ನಾಯಕರು ಹೇಳುತ್ತಿದ್ದರು.

ಕಾಲುವೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಿಕೊಳ್ಳುವ ಮೂಲಕ ಕಾಶ್ಮೀರ ವಿವಾದಕ್ಕೂ ಪರಿಹಾರ ಕಂಡುಕೊಳ್ಳಬಹುದು ಎಂದು ಪಾಕಿಸ್ತಾನ ಭಾವಿಸಿತ್ತು ಎಂದು ಕೆಲ ತಜ್ಞರು ಹೇಳುತ್ತಾರೆ. ಆದರೆ ಭಾರತ ಈ ಮಾರ್ಗವನ್ನು ಸಂಪೂರ್ಣವಾಗಿ ನಿರಾಕರಿಸಿತು. ಕಾಶ್ಮೀರ ವಿವಾದ ಮತ್ತು ಸಿಂಧು ನದಿ ನೀರಿನ ಜಲಹಂಚಿಕೆಯ ವಿವಾದಗಳನ್ನು ಪ್ರತ್ಯೇಕವಾಗಿಯೇ ಚರ್ಚಿಸಬೇಕು, ಪ್ರತ್ಯೇಕವಾಗಿಯೇ ಪರಿಹರಿಸಿಕೊಳ್ಳಬೇಕು ಎನ್ನುವುದು ಭಾರತದ ಪ್ರತಿಪಾದನೆ.

1960ರ ಸೆಪ್ಟೆಂಬರ್ ತಿಂಗಳಲ್ಲಿಎರಡೂ ದೇಶಗಳು ಸಿಂಧು ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ ಪ್ರಕಾರ ಸಿಂಧು ನದಿ ವ್ಯವಸ್ಥೆಯ ಪಶ್ಚಿಮ ನದಿಗಳಾದ ಸಿಂಧು, ಝೀಲಂ ಮತ್ತು ಚೀನಬ್ ನದಿಗಳ ಮೇಲೆ ಪಾಕಿಸ್ತಾನಕ್ಕೆ, ಪೂರ್ವದ ನದಿಗಳಾದ ಸಟ್ಲೇಜ್, ರಾವಿ ಮತ್ತು ಬಿಯಾಸ್‌ ಮೇಲೆ ಭಾರತಕ್ಕೆ ಪೂರ್ಣಾಧಿಕಾರ ಸಿಕ್ಕಿದೆ. ಸಿಂಧು ನದಿ ನೀರು ಹಂಚಿಕೆ ಒಪ್ಪಂದ ಜಾರಿಯಾದ ನಂತರ ಪಾಕಿಸ್ತಾನ ಮತ್ತು ಭಾರತ ಸರ್ಕಾರಗಳು ನೀರು ಸಂಗ್ರಹ ಮತ್ತು ಬಳಕೆಗೆ ಸಾಕಷ್ಟು ಹಣ ಖರ್ಚು ಮಾಡಿದವು. ಈ ಅವಧಿಯಲ್ಲಿ ಎರಡೂ ದೇಶಗಳ ನಡುವಣ ಸಂಘರ್ಷದ ತೀವ್ರತೆಯೂ ಕಡಿಮೆಯಾಗಿತ್ತು. ಎರಡೂ ದೇಶಗಳ ನಾಯಕರು ನೀರು ಹಂಚಿಕೆಯ ಸಂಘರ್ಷವನ್ನು ಹೆಚ್ಚೂಕಡಿಮೆ ಮರೆತೇ ಬಿಟ್ಟಿದ್ದರು.

ಎರಡೂ ದೇಶಗಳ ಜನಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಜಲಮೂಲಗಳ ಮೇಲೆ ಒತ್ತಡವೂ ಹೆಚ್ಚಾಯಿತು. ಭಾರತ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳನ್ನು ಘೋಷಿಸಿದ ನಂತರ ಕಾಶ್ಮೀರ ಕಣಿವೆಯ ಜಲ ಪ್ರಾಮುಖ್ಯತೆ ಮತ್ತೊಮ್ಮೆ ಪಾಕಿಸ್ತಾನಕ್ಕೆ ಅರಿವಾಯಿತು. ಕಾಶ್ಮೀರ ಯಾರ ವಶದಲ್ಲಿರುಬೇಕು ಎನ್ನುವ ಚರ್ಚೆ ಕಾವು ಪಡೆದುಕೊಂಡಿತು.

ಸಿಂಧು ನದಿಯ ಜಾಲ(Pic Courtesy- wikipedia)
ಸಿಂಧು ನದಿಯ ಜಾಲ(Pic Courtesy- wikipedia)

ಪಾಕಿಸ್ತಾನದ ಬೆನ್ನೆಲುಬು

ಭಾರತ ದೇಶದಲ್ಲಿ ಹಿರಿಯುವ ಹಲವು ದೊಡ್ಡ ನದಿಗಳಲ್ಲಿ ಸಿಂಧು ನದಿಯೂ ಒಂದು. ಆದರೆ ಪಾಕಿಸ್ತಾನದ ಸ್ಥಿತಿ ಹಾಗಲ್ಲ. ಅಲ್ಲಿ ಸಿಂಧು ನದಿಯೇ ಪ್ರಧಾನ. ಪಾಕಿಸ್ತಾನದ ಜನಜೀವನ ಸಂಪೂರ್ಣವಾಗಿ ಸಿಂಧು ನದಿಯನ್ನು ಆಧರಿಸಿದೆ. ಪಾಕಿಸ್ತಾನದ ಆತಂಕಕ್ಕೆ ಇಂಬುಕೊಡುವ ಮತ್ತೊಂದು ವಾಸ್ತವವೆಂದರೆ ಪಾಕಿಸ್ತಾನಕ್ಕೆ ಹರಿಯುವ ಸಿಂಧು ನದಿಯ ಎಲ್ಲ ಐದೂ ಉಪನದಿಗಳ ಪಾತ್ರದ ಮೇಲ್ಭಾಗದಲ್ಲಿ ಭಾರತವಿದೆ. ನೀರಿನ ಹರಿವು ನಿಯಂತ್ರಿಸುವ ವಿಚಾರದಲ್ಲಿ ಭಾರತಕ್ಕೆ ಸಾಕಷ್ಟು ಅವಕಾಶಗಳನ್ನು ಇದು ನೀಡುತ್ತದೆ.

ವಿಶ್ವಬ್ಯಾಂಕ್‌ನಲ್ಲಿ ಹಿರಿಯ ನೀರಾವರಿ ತಜ್ಞರಾಗಿದ್ದ ಮತ್ತು ಪ್ರಸ್ತುತ ಹಾರ್ವಾರ್ಡ್‌ ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಭಾರತ ಉಪಖಂಡದ ನೀರಾವರಿ ತಜ್ಞ ಜಾನ್ ಬ್ರಿಸ್‌ಕೋಸ್ ಪಾಕಿಸ್ತಾನದ ಆತಂಕವನ್ನು ಹೀಗೆ ಗ್ರಹಿಸುತ್ತಾರೆ.‘ಸಿಂಧು ನೀರಿನ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೇರೆ ಯಾವ ಮಾರ್ಗಗಳೂ ಉಳಿದಿಲ್ಲ. ಪ್ರಾದೇಶಿಕವಾಗಿ ನದಿಪಾತ್ರದ ಮೇಲ್ಭಾಗದಲ್ಲಿರುವ ಭಾರತ ಈ ವಿಚಾರದಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದೆ’ ಎನ್ನುತ್ತಾರೆ ಅವರು.

ಪಾಕಿಸ್ತಾನಕ್ಕೂ ಈ ವಿಚಾರದ ಅರಿವು ಸ್ಪಷ್ಟವಾಗಿಯೇ ಇದೆ. ಸ್ವಾತಂತ್ರ್ಯಾನಂತರ ಅರ್ಧಕ್ಕೂ ಅಧಿಕ ಅವಧಿ ಮಿಲಿಟರಿ ಆಡಳಿತದಲ್ಲಿಯೇ ಕಳೆದರೂ ಪಾಕಿಸ್ತಾನವು ನೀರಿನ ವಿಚಾರದಲ್ಲಿ ಸ್ವಾವಲಂಬಿಯಾಗಲು ಅಥವಾ ಈ ವಿಚಾರದ ಆತಂಕವನ್ನು ಮಾತುಕತೆಯ ಮೂಲಕ ರಾಜತಾಂತ್ರಿಕವಾಗಿ ಪರಿಹರಿಸಿಕೊಳ್ಳಲು ಅದಕ್ಕೆಸಾಧ್ಯವಾಗಲೇ ಇಲ್ಲ. ಕಳೆದ ಕೆಲ ವರ್ಷಗಳಿಂದ ಕಾಶ್ಮೀರ ವಿವಾದದೊಂದಿಗೆ ನೀರಾವರಿ ವಿಚಾರವೂ ಮತ್ತೆ ತಳಕು ಹಾಕಿಕೊಳ್ಳುತ್ತಿದೆ. ಒಂದು ವೇಳೆ ಕಾಶ್ಮೀರದ ಮೇಲೆ ತಾವು ಪ್ರತಿಪಾದಿಸುತ್ತಿರುವ ಹಕ್ಕನ್ನು ಬಿಟ್ಟುಕೊಟ್ಟರೆ ಝೀಲಂ ಮತ್ತು ಚೀನಬ್ ನದಿಗಳ ಮೂಲವನ್ನೇ ಬಿಟ್ಟುಕೊಡಬೇಕಾಗುತ್ತದೆ. ಮಾತ್ರವಲ್ಲಸಿಂಧು ನದಿ ನೀರಿನ ವಿಚಾರದಲ್ಲಿ ಸದಾ ಭಾರತದ ಕೃಪಾದೃಷ್ಟಿಯನ್ನೇ ಅವಲಂಬಿಸಿರಬೇಕಾಗುತ್ತದೆ ಎಂಬುದು ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ನಾಯಕತ್ವಕ್ಕೆ ಸ್ಪಷ್ಟವಾಗಿ ಅರ್ಥವಾಗಿದೆ.

ಪಾಕಿಸ್ತಾನದ ಖರ್ಮಾಂಗ್ ಜಿಲ್ಲೆಯಲ್ಲಿ ಸಿಂಧು ನದಿ (Pic Courtesy- wikipedia)
ಪಾಕಿಸ್ತಾನದ ಖರ್ಮಾಂಗ್ ಜಿಲ್ಲೆಯಲ್ಲಿ ಸಿಂಧು ನದಿ (Pic Courtesy- wikipedia)

ವಿಶ್ವಾಸಾರ್ಹತೆಯ ಪ್ರಶ್ನೆ

ಸಿಂಧು ನೀರು ಹಂಚಿಕೆ ಒಪ್ಪಂದವನ್ನು ಭಾರತ ಅಷ್ಟು ಸುಲಭವಾಗಿ ಉಲ್ಲಂಘಿಸುತ್ತದೆ ಎಂದು ನಂಬಲು ಯಾವುದೇ ಆಧಾರಗಳಿಲ್ಲ. ಆದರೆ ಪಾಕಿಸ್ತಾನವು ಭಾರತದೊಂದಿಗೆ ವಿಶ್ವಾಸಾರ್ಹ ಸಂಬಂಧ ಹೊಂದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ‘ಸ್ವಾತಂತ್ರ್ಯ ಬಂದ ಆರಂಭದ ದಿನಗಳಲ್ಲಿ ಭಾರತವು ಪಾಕಿಸ್ತಾನಕ್ಕೆ ನೀರು ಹರಿಸಿರಲಿಲ್ಲ. ಹೀಗಾಗಿ ನೀರಾವರಿ ವಿಚಾರದಲ್ಲಿ ಭಾರತವನ್ನು ನಾವು ನಂಬಲು ಸಾಧ್ಯವಿಲ್ಲ. ಕಾಶ್ಮೀರದ ಮೇಲಿನ ಹಕ್ಕು ಪ್ರತಿಪಾದನೆ ಬಿಟ್ಟುಕೊಡುವುದು ಈ ಹಿನ್ನೆಲೆಯಲ್ಲಿ ಆತ್ಮಘಾತುಕ ನಿರ್ಧಾರವಾಗುತ್ತದೆ’ ಎನ್ನುವುದು ಪಾಕಿಸ್ತಾನದ ಪ್ರತಿಪಾದನೆ.

2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯಲ್ಲಿ ಕೈವಾಡವಿರುವ ಉಗ್ರಗಾವಿ ಸಂಘಟನೆ ‘ಲಷ್ಕರ್ ಎ ತಯ್ಯಬಾ’ದ (ಎಲ್‌ಇಟಿ) ಹೊರ ಜಗತ್ತಿಗೆ ಕಾಣಿಸುವಮುಖ ಎಂದೇ ನಂಬಿರುವ ಜಮಾತ್ ಉದ್ ದಾವಾ (ಜೆಯುಡಿ) ಸಹ ಪಾಕಿಸ್ತಾನವು ಕಾಶ್ಮೀರದ ಮೇಲೆ ಪ್ರತಿಪಾದಿಸುವ ಹಕ್ಕನ್ನು ಸಮರ್ಥಿಸುತ್ತದೆ. ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್‌ಐ ಜೊತೆಗೆ ಜೆಯುಡಿ ನಂಟು ಹೊಂದಿದೆ ಎಂದು ಬಹುತೇಕರು ಹೇಳುತ್ತಾರೆ. ಆದರೆ ಅಧಿಕೃತವಾಗಿ ಈ ವಿಚಾರವನ್ನು ಪಾಕಿಸ್ತಾನ ಈವರೆಗೆ ಒಪ್ಪಿಕೊಂಡಿಲ್ಲ.

‘ಕಾಶ್ಮೀರವನ್ನು ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿದೆ’ ಎಂದು ಪ್ರತಿಪಾದಿಸುವ ಜೆಯುಡಿ, ‘ಪಾಕಿಸ್ತಾನಕ್ಕೆ ನೀರು ಬಿಡಲು ಸತಾಯಿಸುವಭಾರತದ ಕ್ರಮ ಅದರ ಮೇಲೆ ಜಿಹಾದ್ (ಧರ್ಮಯುದ್ಧ) ಘೋಷಿಸಲು ತಕ್ಕ ಕಾರಣ’ ಎಂದು ಸಾರಿ ಹೇಳುತ್ತದೆ. ಪಾಕಿಸ್ತಾನದ ನೀರಾವರಿ ಭದ್ರತೆಗೆ ಕಾಶ್ಮೀರದ ಮೇಲಿರುವ ಅವಲಂಬನೆಯನ್ನು ಜೆಯುಡಿ ಬಹಿರಂಗವಾಗಿ ಒಪ್ಪಿಕೊಂಡಿದೆ. ಇದು ಪಾಕ್ ಮಿಲಿಟರಿ ನಿಲುವಿಗೆ ವ್ಯತಿರಿಕ್ತವಾದ ಸಂಗತಿ. ಆದರೆ ಆಂತರ್ಯದಲ್ಲಿ ಇದು ಪಾಕಿಸ್ತಾನದ ಮಿಲಿಟರಿ ಮತ್ತು ಆಡಳಿತಗಾರರ ಧೋರಣೆಯನ್ನೇ ಪ್ರತಿಬಿಂಬಿಸುತ್ತಿದೆ.

ಸಿಂಧು ನದಿಯ ಜಲಾನಯನ ಪ್ರದೇಶ (Courtesy- India-WRIS wiki)
ಸಿಂಧು ನದಿಯ ಜಲಾನಯನ ಪ್ರದೇಶ (Courtesy- India-WRIS wiki)

ನಮ್ಮಿಂದ ತಪ್ಪಾಗಿಲ್ಲ: ಭಾರತದ ಪ್ರತಿಪಾದನೆ

‘ಸಿಂಧು ನದಿ ನೀರಿನಲ್ಲಿ ಪಾಕಿಸ್ತಾನ ಹೊಂದಿರುವ ಪಾಲಿನಲ್ಲಿ ನಾನೆಂದೂ ಹಸ್ತಕ್ಷೇಪ ಮಾಡಿಲ್ಲ, ಪಾಕಿಸ್ತಾನಕ್ಕೆ ಹರಿಯುವ ನೀರಿಗೆ ತಡೆಯೊಡ್ಡಿಲ್ಲ’ ಎಂದೇ ಭಾರತ ಸರ್ಕಾರ ಬಹುಕಾಲದಿಂದ ಪ್ರತಿಪಾದಿಸುತ್ತಿದೆ.ಸಿಂಧು ನದಿ ನೀರು ಹಂಚಿಕೆ ಒಪ್ಪಂದದ ಮಾತುಕತೆ ನಡೆಯುತ್ತಿದ್ದಾಗಲೂ (1950ರ ದಶಕ) ಭಾರತ ತನ್ನಿಂದ ತಪ್ಪಾಗಿಲ್ಲ ಎಂದೇ ಪಾಕಿಸ್ತಾನ ಮತ್ತು ವಿಶ್ವಬ್ಯಾಂಕ್‌ಗೆ ಮನವರಿಕೆ ಮಾಡಿಕೊಡಲು ಯತ್ನಿಸಿತ್ತು.

‘ಪಾಕಿಸ್ತಾನದಲ್ಲಿ ಉಂಟಾಗಿರುವ ಆಹಾರದ ಅಭಾವಕ್ಕೆ ಭಾರತ ನದಿ ನೀರು ಹರಿವು ನಿಲ್ಲಿಸಿದ್ದು ಕಾರಣವಲ್ಲ’ ಎಂದೇ 1953ರಲ್ಲಿ ಸಂಸತ್ತಿನಲ್ಲಿ ಅಂದಿನ ಹಣಕಾಸು ಸಚಿವ ಚಿಂತಾಮಣಿರಾವ್ ದೇಶಮುಖ್ ಸ್ಪಷ್ಟಪಡಿಸಿದ್ದರು. ‘ನೀರು ನಿರ್ವಹಣೆ ವಿಚಾರದಲ್ಲಿ ನಮ್ಮಿಂದ ಅಲ್ಪ ಅವಧಿಯಲ್ಲಿ ಕೆಲ ಲೋಪದೋಷಗಳು ಆಗಿದೆ ಎಂದುಕೊಂಡರೂ, ಅದು ಗರಿಷ್ಠ 15 ದಿನಗಳನ್ನು ಮೀರಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದರು.

ಇತಿಹಾಸದಲ್ಲಿ ಎಲ್ಲಿಯೂ ಭಾರತ ತಾನು ಸಿಂಧು ನದಿ ನೀರಿನ ಹರಿವಿಗೆ ತಡೆಯೊಡ್ಡಿದ್ದೇನೆ ಎಂದು ಒಪ್ಪಿಕೊಂಡಿಲ್ಲ. ಆದರೆ ಸಿಂಧು ನದಿಗೆ ಭಾರತದ ಗಡಿಯಿಂದ ಹರಿದು ಹೋಗುವ ನೀರಿನ ದತ್ತಾಂಶಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ ಎನ್ನುವುದೂ ಅಷ್ಟೇ ನಿಜ. ಪಾಕಿಸ್ತಾನಕ್ಕೆ ಮಾತ್ರ ಈವರೆಗೆ ಭಾರತ ಸಿಂಧು ನದಿ ನೀರಿನ ಹರಿವಿಗೆ ತಡೆಯೊಡ್ಡಿದೆ ಎಂದು ಆಧಾರ ಸಹಿತ ನಿರೂಪಿಸಲು ಸಾಧ್ಯವಾಗಿಲ್ಲ. ಹಾಗೆಂದುಪಾಕ್ ಸರ್ಕಾರತನ್ನ ನೆಲದಲ್ಲಿರುವ ಜನಾಭಿಪ್ರಾಯವನ್ನು ಬದಲಿಸಲು ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ.

ಭಾರತವು ಇದೀಗ ಝೀಲಂ ಮತ್ತು ಚೀನಬ್ ನದಿಗಳಿಗೆ ಕಿಶನ್‌ಗಂಗಾ, ದಾಲ್ ಹಸ್ತೆ, ಸವಾಲ್‌ಕೋಟ್ ಮತ್ತು ಇತರೆಡೆ ಅಣೆಕಟ್ಟುಗಳನ್ನು ಕಟ್ಟಲು ಆರಂಭಿಸಿದೆ. ಸಿಂಧು ನದಿ ಒಪ್ಪಂದವು ಝೀಲಂ ಮತ್ತು ಚೀನಬ್ ನದಿಗಳ ನೀರು ಬಳಸಿ ಜಲವಿದ್ಯುತ್ ಉತ್ಪಾದಿಸಲು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿದೆ. ‘ಪಾಕಿಸ್ತಾನಕ್ಕೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುವಂತಿಲ್ಲ ಅಥವಾ ತಡವಾಗುವಂತಿಲ್ಲ’ ಎನ್ನುವಈ ಒಪ್ಪಂದದ ಷರತ್ತಿಗೆ ಒಳಪಟ್ಟು ಯೋಜನೆಗಳನ್ನು ರೂಪಿಸಲಾಗಿದೆ ಎಂದೇ ಭಾರತ ಪ್ರತಿಪಾದಿಸುತ್ತಿದೆ.

ಆದರೆ ಕಾಶ್ಮೀರ ಕಣಿವೆಯಲ್ಲಿ ಮಾತ್ರ 1960ರಸಿಂಧು ನದಿ ಒಪ್ಪಂದದಿಂದ ನಮ್ಮ ರಾಜ್ಯಕ್ಕೆನಷ್ಟವಾಗಿದೆ ಎಂಬ ಭಾವ ಮನೆ ಮಾಡಿದೆ. ‘ತಮ್ಮ ಸ್ವಂತ ರಾಜ್ಯದಲ್ಲಿ ಹರಿಯುವ ನದಿಗಳಿಂದ ಪೂರ್ಣ ಸಾಮರ್ಥ್ಯದಲ್ಲಿ ಜಲವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ’ ಎನ್ನುವುದು ಕಾಶ್ಮೀರಿಗಳ ಬೇಸರ.

ಈ ಎಲ್ಲ ಚರ್ಚೆ ಮತ್ತುವಿವಾದಗಳ ನಡುವೆ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿವಿದ್ಯುತ್ ಮತ್ತು ನೀರಿನ ಅಭಾವ ದಿನದಿಂದ ಹೆಚ್ಚುತ್ತಿದೆ.ಹವಾಮಾನ ಬದಲಾವಣೆ ಮತ್ತು ಜನಸಂಖ್ಯೆಯ ಒತ್ತಡವನ್ನು ಗಮನಿಸಿದಾಗ, ಭಾರತ–‍‍ಪಾಕಿಸ್ತಾನ ನಡುವಣ ನೀರಾವರಿ ವಿವಾದ ಶೀಘ್ರ ಶಮನವಾಗದಿದ್ದರೆ ಮುಂದೊಂದು ದಿನ ಕಾಶ್ಮೀರ ಸಂಘರ್ಷದ ಸ್ವರೂಪಕ್ಕೆ ಮತ್ತೊಂದು ಆಯಾಮ ಸೇರ್ಪಡೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

–––

ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT