ಸೋಮವಾರ, ಸೆಪ್ಟೆಂಬರ್ 20, 2021
22 °C

ಜೆಎನ್‌ಯು: ಆಳುವವರ ಮಗ್ಗುಲ ಮುಳ್ಳು

ಡಿ.ಉಮಾಪತಿ Updated:

ಅಕ್ಷರ ಗಾತ್ರ : | |

prajavani

ಒಂದು ದೇಶದ ಮಾನವಸಂಪನ್ಮೂಲವನ್ನು, ಅಲ್ಲಿನ ಅರಿವಿನ ಹಾಗೂ ಸಮ ಸಮಾಜವನ್ನು ರೂಪಿಸಿ ಬೆಳೆಸುವ ಅಡಿಪಾಯ ಶಿಕ್ಷಣ. ಭಾರತದಲ್ಲಿ ಈ ಅಡಿಪಾಯಕ್ಕೇ ಗೆದ್ದಲು ಹಿಡಿದಿದೆ. ಮುಕ್ತಚಿಂತನೆ, ಸ್ವಾಯತ್ತತೆ, ಗುಣಮಟ್ಟವನ್ನು ರಾಜಕೀಯ ಹಸ್ತಕ್ಷೇಪ ಹಾಳುಗೆಡವಿದೆ. ಗೆದ್ದಲನ್ನು ಕೊಡವಿ ಕಟ್ಟುವ ಕೆಲಸ ನಡೆಯುತ್ತಿಲ್ಲ. ಬದಲಿಗೆ ಇನ್ನಷ್ಟು ಗೆದ್ದಲು ಹಿಡಿಸುವ ಕೆಲಸ ಬಿಡುವಿಲ್ಲದೆ ಸಾಗಿದೆ.

ಒಂದೆಡೆ ಉನ್ನತ ಶಿಕ್ಷಣ ವ್ಯವಸ್ಥೆಯ ಈ ಅಧೋಗತಿಯನ್ನು ನೋಡುತ್ತಿದ್ದೇವೆ. ಇನ್ನೊಂದೆಡೆ ಸಮಾಜದ ಅತ್ಯಂತ ಕೆಳವರ್ಗಗಳ ಜನರ ಜೇಬುಗಳಿಗೂ ಎಟುಕುವಂತೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಹೆಸರಾಂತ ಸರ್ಕಾರಿ ವಿಶ್ವವಿದ್ಯಾಲಯಗಳ ಹೆಸರಿಗೆ ಮಸಿ ಬಳಿದು ಅವುಗಳಿಗೆ ಬೀಗ ಜಡಿಯುವ ಹುನ್ನಾರ ನಡೆಯುತ್ತಿದೆ. ಮುಕ್ತ ಸಂವಾದಕ್ಕೆ ಮತ್ತು ಪ್ರಶ್ನಿಸುವುದಕ್ಕೆ ಅವಕಾಶವಿರುವ ಈ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಕೆಡವಲಾಗುತ್ತಿದೆ. ಫೇಕ್ ನ್ಯೂಸ್ ಹಬ್ಬಿಸುವ ‘ವಾಟ್ಸ್‌ಆ್ಯಪ್‌ ಯೂನಿವರ್ಸಿಟಿ’ಗಳನ್ನು ದೇಶದ ಉದ್ದಗಲಕ್ಕೆ ವ್ಯವಸ್ಥಿತವಾಗಿ ನಾಯಿಕೊಡೆಗಳಂತೆ ಎಬ್ಬಿಸಲಾಗುತ್ತಿದೆ.

ಅರಿವು ಮುನ್ನಡೆಯಬೇಕಿದ್ದರೆ ಅಸ್ತಿತ್ವದಲ್ಲಿರುವ ಅರಿವನ್ನು ಪ್ರಶ್ನಿಸಬೇಕು. ಅಂತಹುದೊಂದು ವಿಮರ್ಶಾತ್ಮಕ ವಿಚಾರಣೆಯು ವಿಶೇಷವಾಗಿ ಉನ್ನತ ಶಿಕ್ಷಣಕ್ಕೆ ಮಹತ್ವಪೂರ್ಣ. ವಿದ್ಯಾರ್ಥಿಗಳು-ಶಿಕ್ಷಕರು ಪರಸ್ಪರ ವಾದ-ಸಂವಾದದಲ್ಲಿ ತೊಡಗುವ ಮುಕ್ತ ಆವರಣ ವಿಶ್ವವಿದ್ಯಾಲಯ. ಮಾತಿನ ಮತ್ತು ಚರ್ಚೆಯ ಸ್ವಾತಂತ್ರ್ಯ ಅತ್ಯಂತ ಮೂಲಭೂತವಾದದ್ದು. ಈ ಸ್ವಾತಂತ್ರ್ಯವೇ ಇದೀಗ ಗಂಡಾಂತರಕ್ಕೆ ಸಿಲುಕಿದೆ. ಸರ್ಕಾರಗಳು ಮತ್ತು ಅವುಗಳ ಹಿಂದಿನ ರಾಜಕೀಯ ಪಕ್ಷಗಳು ಪರಿವಾರಗಳು ಮುಕ್ತ ಚಿಂತನೆಯನ್ನು ನಿಯಂತ್ರಿಸತೊಡಗಿವೆ. ಯಥಾಸ್ಥಿತಿಯ ಸ್ಪಷ್ಟ ಅರಿವನ್ನು ಮತ್ತು ಅದನ್ನು ಪ್ರಶ್ನಿಸುವ ವಾತಾವರಣ ಇರುವ ಶಿಕ್ಷಣ ಕೇಂದ್ರಗಳಿಗೆ ದೇಶದ್ರೋಹಿ ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ. ಇಂತಹ ಪಟ್ಟಿಯಲ್ಲಿನ ಮೊದಲ ಹೆಸರು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು).

ಜನತಾಂತ್ರಿಕ ಭಿನ್ನಮತದ ಪ್ರತೀಕವಾಗಿ ಹೊಮ್ಮಿರುವ ಈ ವಿಶ್ವವಿದ್ಯಾಲಯವನ್ನು ಸದೆಬಡಿಯುವ ವ್ಯವಸ್ಥಿತ ಕಾರ್ಯಸೂಚಿಯನ್ನು ಆಳುವ ವರ್ಗ 2016ರಲ್ಲೇ ಅನಾವರಣಗೊಳಿಸಿತು. ಕಾರ್ಯಸೂಚಿಯ ಜಾರಿಗೆಂದು ಕಟ್ಟರ್‌ವಾದಿ ಕುಲಪತಿಯ ನೇಮಕ ನಡೆಯಿತು. ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಮೊಕದ್ದಮೆಗಳು, ಬೋಧಕ ಸಿಬ್ಬಂದಿಯಲ್ಲಿ ಪಕ್ಷಪಾತದ ನೇಮಕಾತಿಗಳು ಫಲ ನೀಡದೆ ಹೋದಾಗ ವಿಶ್ವವಿದ್ಯಾಲಯದ ಮೂಲಭೂತ ಚರ್ಯೆಯನ್ನು ಬದಲಾಯಿಸಿ ಅದನ್ನು ಕುಲೀನ ಸಿರಿವಂತ ವರ್ಗಗಳಿಗೆ ಸೀಮಿತಗೊಳಿಸುವ ಪ್ರಯತ್ನ ಜರುಗಿತು.

ಆ ದಿಸೆಯಲ್ಲಿ ಮೊದಲ ಹೆಜ್ಜೆ ಭಾರೀ ಶುಲ್ಕ ಏರಿಕೆ. ಚಳವಳಿಗೆ ಇಳಿದ ವಿದ್ಯಾರ್ಥಿ ಸಮುದಾಯದ ಪ್ರತಿರೋಧ ತಗ್ಗುವ ಸೂಚನೆಗಳು ತೋರಲಿಲ್ಲ. ಹತಾಶ ವ್ಯವಸ್ಥೆ ರಾತ್ರೋ ರಾತ್ರಿ ಕ್ಯಾಂಪಸಿಗೆ ಗೂಂಡಾಗಳನ್ನು ನುಗ್ಗಿಸಿ ವಿದ್ಯಾರ್ಥಿಗಳು-ಶಿಕ್ಷಕರ ಮೂಳೆ ಮುರಿದು ಬುರುಡೆ ಬಿಚ್ಚಿಸಿ ರಕ್ತ ಹರಿಸಿದ್ದು ಹೇಯ ಮತ್ತು ಬರ್ಬರ ವರ್ತನೆ.

ಛತ್ತೀಸಗಡದಲ್ಲಿ ಆದಿವಾಸಿಗಳ ವಿರುದ್ಧ ಆದಿವಾಸಿಗಳ ಕೈಗೆ ಬಂದೂಕು ಕೊಟ್ಟು ಅದಕ್ಕೆ ‘ಸಾಲ್ವಾಜುದುಂ’ ಎಂಬ ಹೆಸರಿಟ್ಟು ನಿಲ್ಲಿಸಿದ್ದಕ್ಕೂ, ಜೆಎನ್‌ಯುಗೆ ಗೂಂಡಾಗಳನ್ನು ನುಗ್ಗಿಸಿದ್ದಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ. ಜೆಎನ್‌ಯು ಸಾಮಾಜಿಕ, ರಾಜಕೀಯ, ಆರ್ಥಿಕ ಕಾರ್ಯಕಾರಣಗಳನ್ನು ಹರಿತವಾಗಿ ವಿಶ್ಲೇಷಿಸಬಲ್ಲದು. ಸಾಮಾಜಿಕ ಬದುಕಿನ ಮೇಲೆ ಒಳಗಿನಿಂದಲೇ ಎರಗುವ ವಿಪತ್ತುಗಳನ್ನು ಕಾರಸ್ಥಾನಗಳನ್ನು ಗುರುತಿಸಿ ಬಯಲು ಮಾಡಬಲ್ಲದು. ಯಥಾಸ್ಥಿತಿಯನ್ನು, ದಮನ–ದಬ್ಬಾಳಿಕೆಗಳನ್ನು ನಿರಂತರ ಪ್ರಶ್ನಿಸಬಲ್ಲದು. ದೇಶದ ಬಹುತೇಕ ವಿಶ್ವವಿದ್ಯಾಲಯಗಳಂತೆ ಆಳುವವರ್ಗದ ಮುಂದೆ ಮಂಡಿಯೂರಿ ನಿಲ್ಲಲು ಒಲ್ಲದು. ಹೀಗಾಗಿಯೇ ಯಥಾಸ್ಥಿತಿವಾದಿಗಳು ಮತ್ತು ಆಳುವ ವರ್ಗದ ಕಣ್ಣುರಿಗೆ ಗುರಿಯಾಗತೊಡಗಿದೆ.

ಜಾಮಿಯಾ ಮಿಲಿಯಾ ಮತ್ತು ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯಗಳ ಗ್ರಂಥಾಲಯ, ಹಾಸ್ಟೆಲ್‌ಗಳು, ಶೌಚಾಲಯಗಳಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಕ್ರೂರವಾಗಿ ಚಚ್ಚಿದ ಪೊಲೀಸರು ಆಳುವವರ ಆದೇಶವಿಲ್ಲದೆ ಹಾಗೆ ವರ್ತಿಸುವವರಲ್ಲ. ಮೂರನೆಯ ಸರದಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ್ದು. ಅಲ್ಲಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಪೂರ್ವನಿಯೋಜಿತ ದಾಳಿಗೆ ಅನುವು ಮಾಡಿಕೊಡಲು ಇಡೀ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ದೆಹಲಿಯ ತುಕಡೇ ತುಕಡೇ ಗ್ಯಾಂಗ್‌ಗೆ ಪಾಠ ಕಲಿಸಬೇಕಿದೆ ಎಂಬುದಾಗಿ ದೇಶದ ಗೃಹಮಂತ್ರಿಯವರು ಸಾರ್ವಜನಿಕ ಹೇಳಿಕೆ ನೀಡಿದ ಬೆನ್ನಿಗೇ ಈ ದುಷ್ಕೃತ್ಯ ನಡೆದದ್ದು ಅನಿರೀಕ್ಷಿತವೇನೂ ಅಲ್ಲ.

ಜೆಎನ್‌ಯು ಆವರಣದಲ್ಲಿ ರಕ್ತ ಹರಿಸಿದ ಗೂಂಡಾಗಳು ತಮ್ಮ ಒಡೆಯರು ಒಪ್ಪಿಸಿದ ಕೆಲಸ ಮುಗಿಸಿ ಆರಾಮವಾಗಿ ಹರಟುತ್ತ ಎದೆ ಸೆಟೆಸಿ ಹೊರ ನಡೆದರು. ನಾಲ್ಕು ದಿನಗಳ ನಂತರವೂ ಈ ಪೈಕಿ ಒಬ್ಬರನ್ನೂ ಪೊಲೀಸರು ಬಂಧಿಸಿಲ್ಲ. ಬದಲಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ತೊರೆಯ ಮೇಲು ಭಾಗದಲ್ಲಿ ನೀರು ಕುಡಿಯುವ ತೋಳ, ತನ್ನ ನೀರನ್ನು ಎಂಜಲು ಮಾಡುತ್ತಿರುವುದಾಗಿ ಅದೇ ತೊರೆಯ ಕೆಳಭಾಗದಲ್ಲಿ ನೀರು ಕುಡಿಯುವ ಕುರಿಮರಿಯನ್ನು ಬೆದರಿಸಿದಷ್ಟೇ ಅಸಂಗತವಿದು.

ಈ ಗೂಂಡಾಗಿರಿ ವಿರುದ್ಧ ದೇಶದ ಮೂಲೆ ಮೂಲೆಗಳ ವಿದ್ಯಾರ್ಥಿಶಕ್ತಿ ಎದೆಸೆಟೆಸಿ ಪ್ರತಿಭಟಿಸಿರುವುದು ಮತ್ತು ಈ ಪ್ರತಿಭಟನೆ ಹಬ್ಬುತ್ತಲೇ ಇರುವುದು ಚೇತೋಹಾರಿ ಸೂಚನೆ.


1977ರ ಚುನಾವಣಾ ಸೋಲಿನ ನಂತರವೂ ಜೆಎನ್‌ಯು ಕುಲಪತಿಯಾಗಿ ಮುಂದುವರಿದಿದ್ದ ಇಂದಿರಾ ಗಾಂಧಿ ಅವರ ರಾಜೀನಾಮೆಗೆ ಒತ್ತಾಯಿಸಿ ಅವರ ಮುಂದೆಯೇ ಆರೋಪಪಟ್ಟಿಯನ್ನು ಓದಿದ ಆಗಿನ ವಿದ್ಯಾರ್ಥಿ ನಾಯಕ ಸೀತಾರಾಂ ಯೆಚೂರಿ

ಮಾನವಿಕಗಳು, ಸಮಾಜವಿಜ್ಞಾನಗಳು, ಅಂತರರಾಷ್ಟ್ರೀಯ ಅಧ್ಯಯನಗಳಂತಹ ವಿಷಯಗಳಲ್ಲಿ ಜೆಎನ್‌ಯು ದೇಶದಲ್ಲೇ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. 2017ರಲ್ಲಿ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯದ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ಜೆಎನ್‌ಯುಗೆ ನೀಡಿದರು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರ‍್ಯಾಂಕಿಂಗ್ ಫ್ರೇಮ್ ವರ್ಕ್ 2018ರಲ್ಲಿ ಈ ವಿಶ್ವವಿದ್ಯಾಲಯಕ್ಕೆ ಎರಡನೆಯ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಆರನೆಯ ಅತ್ಯುತ್ತಮ ಶಿಕ್ಷಣ ಸಂಸ್ಥೆಯ ರ‍್ಯಾಂಕ್ ನೀಡಿತ್ತು.

ಪ್ರಗತಿಶೀಲ ಪರಂಪರೆಗೆ ಹೆಸರಾದ ಶೈಕ್ಷಣಿಕ ವಾತಾವರಣವನ್ನು ಇಲ್ಲಿ ಕಾಣಬಹುದು. ಇಲ್ಲಿನ ವಿದ್ಯಾರ್ಥಿ ಸಂಘಟನೆ ಹಲವು ವಿಧಗಳಲ್ಲಿ ಆದರ್ಶಪ್ರಾಯ. ಇಲ್ಲಿ ಅಧ್ಯಯನ ಮಾಡಿದ ಅನೇಕರು ರಾಜಕಾರಣ ಮತ್ತು ಸಾಮಾಜಿಕ ಆಂದೋಲನಗಳಲ್ಲಿ ವಿಶೇಷ ಪಾತ್ರವಹಿಸಿದ್ದಾರೆ.

ಪ್ರಕಾಶ್ ಕಾರಟ್‌, ಸೀತಾರಾಂ ಯೆಚೂರಿ, ಡಿ.ಪಿ.ತ್ರಿಪಾಠಿ, ಆನಂದ ಕುಮಾರ್, ಮೋದಿ ಮಂತ್ರಿ ಮಂಡಲದ ವಿದೇಶಾಂಗ ಮಂತ್ರಿ ಎಸ್.ಜೈಶಂಕರ್, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್, ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಮುಂತಾದ ಪ್ರಮುಖರು ಇಲ್ಲಿ ವ್ಯಾಸಂಗ ಮಾಡಿದವರೇ.

1969ರಲ್ಲಿ ಅಸ್ತಿತ್ವಕ್ಕೆ ಬಂದ ಜೆಎನ್‌ಯು ಕಾರ್ಯಾರಂಭ ಮಾಡಿದ್ದು 1971ರಲ್ಲಿ. ರಾಷ್ಟ್ರೀಯ ಏಕತೆ, ಸಾಮಾಜಿಕ ನ್ಯಾಯ, ಸೆಕ್ಯುಲರಿಸಂ, ಜನತಾಂತ್ರಿಕ ಜೀವನ ವಿಧಾನ, ಅಂತರರಾಷ್ಟ್ರೀಯ ಅರಿವು, ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಬಗೆದು ಅರ್ಥೈಸುವ ನೆಹರೂ ತತ್ವಗಳನ್ನು ಪಸರಿಸುವುದು ಈ ವಿಶ್ವವಿದ್ಯಾಲಯದ ಉದ್ದೇಶ. ಭಾರತದ ಸಂಕೀರ್ಣ ಸಂಸ್ಕೃತಿಯ ಅಧ್ಯಯನಕ್ಕೆ ಪ್ರೋತ್ಸಾಹ, ದೇಶದ ಎಲ್ಲ ಭಾಗಗಳಿಂದ ವಿದ್ಯಾರ್ಥಿಗಳು-ಶಿಕ್ಷಕರಿಗೆ ಅವಕಾಶ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ದೇಶದ ಸಾಮಾಜಿಕ ಅಗತ್ಯಗಳ ಅರಿವು ಮೂಡಿಸಿ ಅಂತಹ ಅಗತ್ಯಗಳ ಪೂರೈಕೆಯತ್ತ ಅವರನ್ನು ಸಜ್ಜು ಮಾಡುವುದು, ಅಂತರಶಿಸ್ತೀಯ ಅಧ್ಯಯನಗಳು, ವಿದೇಶಿ ಭಾಷೆಗಳು-ಸಾಹಿತ್ಯ-ಬದುಕುಗಳ ಕಲಿಕೆ, ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ವಿದೇಶಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವತ್ತ ಶ್ರಮಿಸುವುದು ಈ ವಿಶ್ವವಿದ್ಯಾಲಯದ ಕಾರ್ಯಸೂಚಿ.

ಕಡಿಮೆ ಶುಲ್ಕ ಮತ್ತು ಗುಣಮಟ್ಟದ ಶಿಕ್ಷಣದ ಕಾರಣ ದೇಶದ ಎಲ್ಲೆಡೆಗಳಿಂದ ದಲಿತ–ಹಿಂದುಳಿದ-ಬಡ ವಿದ್ಯಾರ್ಥಿಗಳು ಭವಿಷ್ಯ ಅರಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ. ಹಿಂದುಳಿದ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಐದು ಅಂಕ, ಅವರ ಪೈಕಿ ದಲಿತರು, ಆದಿವಾಸಿಗಳಿಗೆ ಇನ್ನೈದು ಅಂಕ, ದಲಿತ ಆದಿವಾಸಿ ಹೆಣ್ಣುಮಕ್ಕಳಾದರೆ ಹೆಚ್ಚುವರಿ ಐದು ಅಂಕದ ಆಸರೆಯನ್ನು ಜೆಎನ್‌ಯು ಪ್ರವೇಶ ಪರೀಕ್ಷೆಯಲ್ಲಿ ಕಲ್ಪಿಸಲಾಗಿತ್ತು. ಜೆಎನ್‌ಯು ಇರದೆ ಹೋಗಿದ್ದರೆ ಗುಣಮಟ್ಟದ ಉನ್ನತ ಶಿಕ್ಷಣ ಇವರ ಪಾಲಿಗೆ ಆಕಾಶ ಕುಸುಮವಾಗಿಯೇ
ಉಳಿಯುತ್ತಿತ್ತು.

ದೇಶದ ನಾನಾ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಹೊತ್ತು ತಂದ ವಿಭಿನ್ನ ಹಿನ್ನೆಲೆಗಳು, ಭಾಷೆ-ಸಂಸ್ಕೃತಿ ಜೆಎನ್‌ಯುವನ್ನು ಅಕ್ಷರಶಃ ಒಂದು ಪುಟ್ಟ ಭಾರತವನ್ನೇ ಆಗಿಸಿದ್ದವು. ಪ್ರಗತಿಶೀಲ ಚಳವಳಿಗಳ ಸಂಪರ್ಕವಿದ್ದ ವಿದ್ಯಾರ್ಥಿಗಳ ಆಗಮನವು ಆ ಕಾಲದ ಹೆಸರಾಂತ ಕವಿಗಳು, ಸಾಂಸ್ಕೃತಿಕ ಹೋರಾಟಗಾರರನ್ನು ಕ್ಯಾಂಪಸ್‌ಗೆ ಆಕರ್ಷಿಸಿತ್ತು. ಅವರು ಕ್ಯಾಂಪಸ್‌ನ ಸಾಮಾಜಿಕ ಬದುಕಿನ ಭಾಗವೇ ಆಗಿ ಹೋದರು. ವ್ಯವಸ್ಥೆಯ ವಿರುದ್ಧದ ಪ್ರಖರ ಕಾವ್ಯ ರಚಿಸಿದ ಬಾಬಾ ನಾಗಾರ್ಜುನ, ಶೇಕ್ಸ್‌ಪಿಯರಿಯನ್ ಇಂಗ್ಲಿಷ್ ಮತ್ತು ಪರಿಶುದ್ಧ ಹಿಂದಿ ಬಲ್ಲವರಾಗಿದ್ದ ಲಖನೌನ ಸಾನೆ ನಖ್ವಿ ಕ್ಯಾಂಪಸಿನ ರಸ್ತೆಬದಿಯ ಚಹಾ ಅಂಗಡಿಗಳಲ್ಲಿ ಕುಳಿತು ಚರ್ಚಿಸುತ್ತಿದ್ದುದು ಸಾಮಾನ್ಯ ನೋಟವಾಗಿತ್ತು.

ಸಿನಿಮಾ ಜಗತ್ತಿನ ಮೇಧಾವಿ ಋತ್ವಿಕ್ ಘಟಕ್, ಕುಮಾರ್‌ ಶಹಾನಿ, ಮಣಿಕೌಲ್, ರಾಜಬಹಾದೂರ್, ನಂತರದ ವರ್ಷಗಳಲ್ಲಿ ಪ್ರಕಾಶ್ ಝಾ ತಮ್ಮ ಚಲನಚಿತ್ರಗಳೇ ಅಲ್ಲದೆ ಇತರೆ ಸಿನಿಮಾಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿದ್ದರು. ರಷ್ಯನ್ ಅಧ್ಯಯನ ಕೇಂದ್ರದ ಆಡಿಟೋರಿಯಂ ದೇಶ, ವಿದೇಶಗಳ ಅತ್ಯುತ್ತಮ ಚಲನಚಿತ್ರಗಳನ್ನು ನೋಡಿ ಸಂವಾದಿಸುವ ಕೇಂದ್ರವಾಯಿತು. ಕ್ಯಾಂಪಸಿನಲ್ಲಿ ಬೌದ್ಧಿಕ ಸಂವಾದಗಳು ಅನುದಿನದ ಚಟುವಟಿಕೆಗಳಾದವು. ಇಂತಹ ಸಂವಾದಗಳಿಗೆ ಸ್ಥಳಾವಕಾಶ ನೀಡಿದ್ದೇ ಅಲ್ಲದೆ ಅವುಗಳನ್ನು ಪೋಷಿಸಿದ ಸಂಪ್ರದಾಯ ಜೆಎನ್‌ಯುವಿನದಾಗಿತ್ತು.

ಜಾಗತಿಕ ರಾಜಕೀಯ, ಯುದ್ಧಗಳು, ಕಾರ್ಮಿಕ ಚಳವಳಿಗಳು, ಸಾಮ್ರಾಜ್ಯವಾದ, ಸಾಮಾಜಿಕ -ಆರ್ಥಿಕ ಘಟನಾವಳಿಗಳನ್ನು ಅರ್ಥೈಸಿ, ವಿಶ್ಲೇಷಿಸಿ ರಾಜಕೀಯವಾಗಿ ಪ್ರತಿಕ್ರಿಯಿಸುವ ಪರಂಪರೆ ರೂಪು ತಳೆಯಿತು.

ಬ್ರಿಟಿಷ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ ಹಿಂತಿರುಗಿದ್ದ ಪ್ರಕಾಶ್ ಕಾರಟ್‌, ಜೈರುಸ್ ಬ್ಯಾನರ್ಜಿ, ಸುನಿತ್ ಛೋಪ್ರಾ, ರೆಹಾನಾ ಬಟ್ ಮುಂತಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೊಸ ವೈಚಾರಿಕ ಗಾಳಿಯನ್ನು ಹೊತ್ತು ತಂದಿದ್ದರು. ಪಾಶ್ಚಾತ್ಯ ಸಂವೇದನೆಗಳು ಮತ್ತು ಭಾರತದ ಗ್ರಾಮೀಣ ಹಿನ್ನೆಲೆಯ ಸಂವೇದನೆಗಳು, ಮಾರ್ಕ್ಸ್‌ವಾದಿ ವಿಚಾರಧಾರೆ ಕಲೆತು ವಿಭಿನ್ನವೆನಿಸಿದ ಹೊಚ್ಚ ಹೊಸ ನೋಟವನ್ನು ಕಟ್ಟಿದವು.

ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬಂದರು. ಬಿಹಾರ ಮತ್ತು ಆಂಧ್ರದ ಜಮೀನುದಾರರ ಮಕ್ಕಳು ಸೇರಿದರು. ಉಳ್ಳವರು- ಇಲ್ಲದವರು, ಮೇಲ್ವರ್ಗಗಳು-ತಳವರ್ಗಗಳು ಬೆರೆತವು. ದೇಶ ವಿದೇಶಗಳ ಜನಾಂದೋಲನಗಳು, ಜನಾಂಗೀಯ ಆಂದೋಲನಗಳು, ಜಮೀನು- ಕೃಷಿಕ- ಕಾರ್ಮಿಕ ಅರ್ಥವ್ಯವಸ್ಥೆಯ ಕುರಿತು ರಭಸದ ಚರ್ಚೆಗಳು ನಡೆದವು. ಸಂಶೋಧನೆ- ಸಂವಾದಕ್ಕೆ ಯಾವ ಗಡಿರೇಖೆಗಳೂ ಇರಲಿಲ್ಲ. ನಿರ್ಭೀತಿಯಿಂದ ಪ್ರಶ್ನಿಸುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳಲ್ಲಿ ಪ್ರಬಲ ಸಂಸ್ಕೃತಿಯನ್ನಾಗಿ ಬಿತ್ತಿ ಬೆಳೆಸಲಾಯಿತು. ಕಾಲಕ್ರಮೇಣ ಅರಿವಿನ ಮತ್ತು ಸಮಾನತೆಯ ಅಕ್ಷರ ಸಂಸ್ಕೃತಿ ಹೊಮ್ಮಿತು. ಮುಂಬಯಿ ಮತ್ತು ಕೊಲ್ಕತ್ತಾದ ಹಳೆಯ ವಿಶ್ವವಿದ್ಯಾಲಯಗಳು ಕುಸಿಯತೊಡಗಿದ್ದಾಗ ಪೂರ್ವಗ್ರಹಗಳಿಂದ ಮುಕ್ತವಾದ ತಿಳಿವಿನ ಹೊಸ ದೇಗುಲ ಜೆಎನ್‌ಯು ರೂಪದಲ್ಲಿ ತಲೆಯೆತ್ತಿತು. ಪ್ರಾದೇಶಿಕ ರಾಜಕಾರಣಕ್ಕೆ ಬದಲಾಗಿ ಜಾಗತಿಕ ರಾಜಕಾರಣವನ್ನು ಪ್ರತಿಬಿಂಬಿಸಿತು.‌

ಪಠ್ಯಕ್ರಮ ಮತ್ತು ಕೋರ್ಸ್‌ಗಳನ್ನು ಅಧ್ಯಾಪಕರೇ ರೂಪಿಸುವ ರೋಮಾಂಚನವಿತ್ತು. ಬಂಡವಾಳವಾದ, ವಸಾಹತುವಾದ, ವಸಾಹತುವಾದಿ ಅರ್ಥವ್ಯವಸ್ಥೆ, ಭಾರತೀಯ ರಾಜಕೀಯ ಅರ್ಥವ್ಯವಸ್ಥೆ ಕುರಿತ ಹೊಸ ಕೋರ್ಸ್‌ಗಳು ಅಧ್ಯಯನಕ್ಕೆ ದೊರೆತವು. ಜರ್ಮನ್, ಫ್ರೆಂಚ್, ರಷ್ಯನ್, ಸ್ಪ್ಯಾನಿಶ್ ಮುಂತಾದ ಭಾಷೆಗಳನ್ನು ಕಲಿಸುವ ಶಾಲೆಯೂ ವಿಶ್ವವಿದ್ಯಾಲಯದ ಅರಿವಿನ ದಿಗಂತವನ್ನು ವಿಸ್ತರಿಸಿತು. ಜೀವ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ ಅಧ್ಯಯನ ಸಂಶೋಧನೆ ಶಾಖೆಗಳು ಅರಳಿದವು.

ಸಾಮಾಜಿಕ ವ್ಯವಸ್ಥೆಯ ತಲಸ್ಪರ್ಶಿ ವಿಮರ್ಶೆ ಮತ್ತು ರಾಜಕೀಯ ಆಂದೋಲನ ಎರಡೂ ವಿಶ್ವವಿದ್ಯಾಲಯದ ಶಿಕ್ಷಣದ ಹೆಗ್ಗುರುತುಗಳೆನಿಸಿದವು. ಪ್ರಾದೇಶಿಕ ಗೆರೆಗಳು ಅಳಿಸಿ ಹೋಗಿ ವಿಶ್ವಮಾನವತೆಯ ಎತ್ತರದ ವೈಚಾರಿಕ ವಾತಾವರಣ ಹರಳುಗಟ್ಟಿತು. ಕೋಮುವಾದ ಜಾತಿವಾದ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಸೋಂಕಿನಿಂದ ಜೆಎನ್‌ಯು ದೂರ ಉಳಿಯಿತು.

ಇಲ್ಲಿನ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ದೇಶದ ಆಗು ಹೋಗುಗಳು ಮತ್ತು ಸಾಮಾಜಿಕ ದಮನದ ಸಂರಚನೆಗಳ ಪ್ರತಿರೋಧ ಕುರಿತು ಹಗಲು-ರಾತ್ರಿ ಶುದ್ಧ ಜನತಾಂತ್ರಿಕ ಮನೋಭಾವನೆಯಲ್ಲಿ ಜರುಗುವ ಗಂಭೀರ ವಾದ-ಸಂವಾದದ ಸುತ್ತ ಹೆಣೆಯಲಾದದ್ದು ಅನುಪಮ ಯಶಸ್ವೀ ಪ್ರಯೋಗ. ಆಫ್ರಿಕನ್ ದೇಶಗಳು ಎರಡನೆಯ ಸುತ್ತಿನ ವಸಾಹತುವಾದಿ ಅಲೆಗೆ ಬಲಿಯಾಗುತ್ತಿದ್ದ ಹೊತ್ತಿನಲ್ಲಿ ಕಣ್ಣು ತೆರೆದ ಜೆಎನ್‌ಯು ಸ್ವಾಭಾವಿಕವಾಗಿಯೇ ವಸಾಹತುವಾದವನ್ನು ಗಂಭೀರವಾಗಿ ಪರಿಗಣಿಸಿ ಕಟುವಿಮರ್ಶೆಗೆ ಒಡ್ಡಿತ್ತು.
ತುರ್ತುಪರಿಸ್ಥಿತಿಯ ನಂತರದ ವರ್ಷಗಳಲ್ಲಿ ಇಂದಿರಾಗಾಂಧಿಯವರ ಕುರಿತು ಜೆಎನ್‌ಯುವಿನ ಕಮ್ಯೂನಿಸ್ಟ್ ಮತ್ತು ಸಮಾಜವಾದಿ ವಲಯ ಕರುಳಿನ ದ್ವೇಷ ಹೊಂದಿತ್ತು. 1977ರ ಚುನಾವಣಾ ಸೋಲಿನ ನಂತರವೂ ಜೆಎನ್‌ಯು ಕುಲಪತಿ ಆಗಿ ಮುಂದುವರೆದಿದ್ದರು ಇಂದಿರಾ. ಸೀತಾರಾಂ ಯೆಚೂರಿ ನಾಯಕತ್ವದ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಆಕೆಯ ನಿವಾಸಕ್ಕೆ ಮೆರವಣಿಗೆಯಲ್ಲಿ ತೆರಳಿ ಘೋಷಣೆ ಕೂಗಿತ್ತು. ಹೊರಬಂದ ಅವರಿಗೆ ಅವರ ಮೇಲಿನ ಆರೋಪಪಟ್ಟಿಯನ್ನು ಓದಿ ಹೇಳಿದ್ದರು ಯೆಚೂರಿ. ಆನಂತರ ರಾಜೀನಾಮೆ ನೀಡದೆ ವಿಧಿಯಿರಲಿಲ್ಲ ಆಕೆಗೆ. 1981ರಲ್ಲಿ ಇಂದಿರಾ ಅವರ ಜೆಎನ್‌ಯು ಕ್ಯಾಂಪಸ್ ಭೇಟಿಯನ್ನು ಬಹಿಷ್ಕರಿಸಿ ಕರಾಳ ದಿನವೆಂದು ಘೋಷಿಸಲಾಗಿತ್ತು. ಬಂದೂಕು ಹಿಡಿದ ಪೊಲೀಸರು ಕ್ಯಾಂಪಸ್ ತುಂಬಿದ್ದರು.

ಜೆಎನ್‌ಯುವಿನಲ್ಲಿ ಹಾಜರಾತಿ ತೆಗೆದುಕೊಳ್ಳಲಾಗುವುದಿಲ್ಲ. ಆದರೆ ತರಗತಿಗಳು ಭರ್ತಿಯಾಗಿರುತ್ತವೆ. ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಜನಪರ ಆಂದೋಲನಗಳಲ್ಲಿ ಕೊರಳು ತೆರೆದು ದೊಡ್ಡದಾಗಿ ಘೋಷಣೆ ಕೂಗುತ್ತಾನೆ. ಲೈಂಗಿಕ ಹಲ್ಲೆಗಳು ವಿರಳಾತಿವಿರಳ. ಇಲ್ಲಿನ ಗ್ರಂಥಾಲಯ ಇತ್ತೀಚಿನವರೆಗೆ ದಿನದ 24 ತಾಸು ತೆರೆದಿರುತ್ತಿತ್ತು. ಇದೀಗ ರಾತ್ರಿ 11.30ರ ನಂತರ ಕ್ಯಾಂಪಸಿನಲ್ಲಿ ‘ಕರ್ಫ್ಯೂ’ ವಿಧಿಸಲು ಹೊರಟಿದೆ ವಿವಿ ಆಡಳಿತ. ಕಿಸೆಯಲ್ಲಿ ಚಿಲ್ಲರೆ ಕಾಸಿದ್ದರೂ ಹಸಿವನ್ನು ಹಿಂಗಿಸಿಕೊಳ್ಳುವ ಅವಕಾಶವಿದ್ದ ಸರಳ ದಾಬಾಗಳನ್ನು ಮುಚ್ಚಿಸಲಾಗುತ್ತಿದೆ. ದುಬಾರಿ ಫುಡ್‌ಕೋರ್ಟ್‌ಗಳು ತಲೆಯೆತ್ತಲಿವೆ. ಸ್ವತಂತ್ರ ಆಲೋಚನೆಯನ್ನು ಹುರಿಗಟ್ಟಿಸುವ ಮಾನವಿಕ ಕೋರ್ಸ್‌ಗಳು ಇಲ್ಲಿನ ಜೀವಾಳ ಆಗಿದ್ದವು. ಇವುಗಳಿಗೆ ಗ್ರಹಣ ಹಿಡಿಸಲೆಂದೇ ಇದೀಗ ಮ್ಯಾನೇಜ್ಮೆಂಟ್, ಎಂಜಿನಿಯರಿಂಗ್ ಮುಂತಾದ ಹಣವಂತ ಕೋರ್ಸುಗಳನ್ನು ಆರಂಭಿಸಲಾಗುತ್ತಿದೆ. ದಡ್ಡರನ್ನು ಬೋಧಕರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
‘ಜಿಯೋ’ ವಿಶ್ವವಿದ್ಯಾಲಯಕ್ಕೆ ಅದು ಕಣ್ಣು ಬಿಡುವ ಮೊದಲೇ ಕೇಂದ್ರ ಸರ್ಕಾರ ‘ಸ್ಟೇಟಸ್ ಆಫ್ ಎಮಿನೆನ್ಸ್’ ದಯಪಾಲಿಸಿದೆ. ಇತ್ತ ದಶಕಗಟ್ಟಲೆ ಗಳಿಸಿಕೊಂಡು ಬಂದಿದ್ದ ಜೆಎನ್‌ಯು ಘನತೆಯನ್ನು, ಅದರ ಬಹುತ್ವದ ಸಂಸ್ಕೃತಿಯನ್ನು ಮಣ್ಣುಪಾಲು ಮಾಡಲಾಗುತ್ತಿದೆ. ಸಮಾನತೆಯನ್ನು ನಿರಾಕರಿಸುವ ಈ ದುಷ್ಟತನ ನೂರಾರು ವರ್ಷಗಳಷ್ಟು ಹಳೆಯದು. ಏಕಲವ್ಯ ಶಂಬೂಕರ ಬೆರಳು ಕೊರಳುಗಳು ಈಗಲೂ ಬಗೆಬಗೆಯಾಗಿ ಬಲಿಯಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು