ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬೆಗಳ ಜೊತೆ ಜಪಾನಿನ ಬದುಕು

ಜಪಾನ್‌ನಲ್ಲಿ ಜನಸಂಖ್ಯೆ ಕಡಿಮೆ ಆಗುತ್ತಿದೆ, ಒಂಟಿತನ ಬಾಧಿಸುತ್ತಿದೆ...
Last Updated 22 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ನಗೊರೊ ಹೆಸರಿನ ಈ ಹಳ್ಳಿಯಲ್ಲಿ ಕಡೆಯ ಬಾರಿ ಮಗುವಿನ ಜನನ ಆಗಿದ್ದು 18 ವರ್ಷಗಳ ಹಿಂದೆ. ಮಧ್ಯದಲ್ಲಿ ಒಂದು ನದಿಯನ್ನು ಹೊಂದಿರುವ ಈ ಹಳ್ಳಿಯಲ್ಲಿ ಈಗ ಎರಡು ಡಜನ್‌ಗಿಂತ ಸ್ವಲ್ಪ ಹೆಚ್ಚು ಜನ ವಯಸ್ಕರು ವಾಸಿಸುತ್ತಿದ್ದಾರೆ. ಈ ಹಳ್ಳಿ ಇರುವುದು ಜಪಾನಿನ ಶಿಕೊಕು ದ್ವೀಪದಲ್ಲಿ. ಇಲ್ಲಿನ ಪ್ರಾಥಮಿಕ ಶಾಲೆಯ ಬಾಗಿಲು 2012ರಲ್ಲಿ ಮುಚ್ಚಿದೆ. ಆ ವೇಳೆಗೆ ಇಲ್ಲಿನ ಕೊನೆಯ ಇಬ್ಬರು ಮಕ್ಕಳೂ ಆರನೆಯ ತರಗತಿ ಪೂರ್ಣಗೊಳಿಸಿದ್ದರು.

ಆದರೆ, ಈಚಿನ ಶರತ್ಕಾಲದಲ್ಲಿ ಆ ಊರಿನ ಸುಕಿಮಿ ಅಯನೊ ಅವರು ಶಾಲೆಗೆ ಪುನಃ ಜೀವ ಕಳೆ ತಂದರು. ಅಂದಹಾಗೆ, ಅವರು ಶಾಲೆಗೆ ಜೀವಕಳೆ ತಂದಿದ್ದು ಬೊಂಬೆಗಳನ್ನು ಬಳಸಿಕೊಂಡು; ಮನುಷ್ಯರಿಂದ ಅಲ್ಲ! ಕೈಯಿಂದ ಸಿದ್ಧಪಡಿಸಿದ ಅಂದಾಜು 40 ಬೊಂಬೆಗಳನ್ನು ಅಯನೊ ಅವರು ಬಾಗಿಲು ಮುಚ್ಚಿದ ಆ ಶಾಲೆಯ ಮೈದಾನದಲ್ಲಿ ಜೋಡಿಸಿ ಇರಿಸಿದ್ದರು. ಅವರು ಬೊಂಬೆಗಳನ್ನು ಜೋಡಿಸಿ ಇರಿಸಿದ್ದ ರೀತಿಯು, ಶಾಲೆಯ ವಾರ್ಷಿಕ ಕ್ರೀಡಾ ಕಾರ್ಯಕ್ರಮವಾದ ‘ಉಂಡೊಕಾಯ್’ ನೆನಪಿಸುವಂತೆ ಇತ್ತು. ಮಕ್ಕಳನ್ನು ಹೋಲುವ ಬೊಂಬೆಗಳನ್ನು ಮಾಡಿ ಅವುಗಳಲ್ಲಿ ಕೆಲವು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವಂತೆ, ಇನ್ನು ಕೆಲವು ಜೋಕಾಲಿಯ ಮೇಲೆ ಆರಾಮವಾಗಿ ಕುಳಿತಿರುವಂತೆ, ಇನ್ನೊಂದಿಷ್ಟು ಬೊಂಬೆಗಳು ಚೆಂಡನ್ನು ಹಾರಿಸಿರುವಂತೆ ಜೋಡಿಸಿದ್ದರು.

‘ನಮಗೆ ಇಲ್ಲಿ ಈಗ ಮಕ್ಕಳು ಕಾಣಿಸುವುದೇ ಇಲ್ಲ’ ಎಂದು ಅಯನೊ ಹೇಳುತ್ತಾರೆ. ಅವರು ಜನಿಸಿದ್ದು ಇದೇ ಊರಿನಲ್ಲಿ. ಈಗ ಅವರು, ಏಳು ವರ್ಷಗಳಿಂದ ಬೊಂಬೆಗಳ ಉತ್ಸವ ಆಯೋಜಿಸುತ್ತಿದ್ದಾರೆ. ‘ಇಲ್ಲಿ ಹೆಚ್ಚು ಮಕ್ಕಳು ಇದ್ದಿದ್ದರೆ ಚೆನ್ನಾಗಿತ್ತು. ಹಾಗೆ ಇದ್ದಿದ್ದರೆ ನಮ್ಮ ಖುಷಿ ಹೆಚ್ಚುತ್ತಿತ್ತು’ ಎಂದು ಅವರು ಹೇಳುತ್ತಾರೆ. ‘ಹಾಗಾಗಿ, ನಾನು ಮಕ್ಕಳ ಬೊಂಬೆಗಳನ್ನು ಮಾಡಿದೆ’ ಎಂಬ ಮಾತನ್ನೂ ಸೇರಿಸುತ್ತಾರೆ.

ಜಪಾನಿನ ಜನಸಂಖ್ಯೆ ಕಡಿಮೆ ಆಗುತ್ತಿದೆ, ವಯಸ್ಸಾದವರ ಪ್ರಮಾಣ ಹೆಚ್ಚಾಗುತ್ತಿದೆ. ಜನಸಂಖ್ಯೆ ಕಡಿಮೆ ಆಗುತ್ತಿರುವುದು, ವೃದ್ಧರ ಪ್ರಮಾಣ ಹೆಚ್ಚಾಗುತ್ತಿರುವುದು ತೀವ್ರವಾಗಿ ಕಾಣುತ್ತಿರುವುದು ಜಪಾನಿನ ಗ್ರಾಮೀಣ ಪ್ರದೇಶಗಳಲ್ಲಿ. ಅಲ್ಲಿ ಜನನ ಪ್ರಮಾಣ ಕುಸಿಯುತ್ತಿರುವುದರ ಜೊತೆಗೆ, ಉದ್ಯೋಗ ಅವಕಾಶಗಳು ಕೂಡ ಕಡಿಮೆ ಆಗುತ್ತಿವೆ. ಜೀವನ ವಿಧಾನ ಕೂಡ ಹಿತಕರವಾಗಿ ಇಲ್ಲ.

‘ಇಲ್ಲಿ ಯುವಕರಿಗೆ ಯಾವ ಅವಕಾಶಗಳೂ ಉಳಿದಿಲ್ಲ’ ಎನ್ನುವುದು ಅಯನೊ ಅವರ ಅನಿಸಿಕೆ. ಈ ಊರಿನಲ್ಲಿ ಹಿಂದೆ ಒಂದು ಆಸ್ಪತ್ರೆ ಇತ್ತು, ಜೂಜು ಕೇಂದ್ರ ಇತ್ತು, ಊಟದ ಹೋಟೆಲ್ ಕೂಡ ಇತ್ತು. ಆದರೆ, ಈಗ ಈ ಊರಿನಲ್ಲಿ ಒಂದು ಅಂಗಡಿ ಕೂಡ ಉಳಿದುಕೊಂಡಿಲ್ಲ. ಇಲ್ಲಿ ಅಯನೊ ಮತ್ತು ಅವರ ಸ್ನೇಹಿತರು ಸಿದ್ಧಪಡಿಸಿರುವ ಅಂದಾಜು 350 ಬೊಂಬೆಗಳು ಇವೆ. ಈ ಬೊಂಬೆಗಳ ಸಂಖ್ಯೆ ಅಲ್ಲಿನ ಜನರ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚು!

ಬೊಂಬೆಗಳನ್ನು ಊರಿನ ತುಂಬೆಲ್ಲ ಇರಿಸಲಾಗಿದೆ. ವಯರ್‌ಗಳನ್ನು ಬಳಸಿ ಅವುಗಳನ್ನು ಸಿದ್ಧಪಡಿಸಲಾಗಿದೆ. ಬೊಂಬೆಗಳ ಒಳಗಡೆ ದಿನಪತ್ರಿಕೆಗಳನ್ನು ತುಂಬಿಸಲಾಗಿದೆ, ಬೊಂಬೆಗಳಿಗೆ ಹಳೆಯ ಬಟ್ಟೆಗಳನ್ನು ತೊಡಿಸಲಾಗಿದೆ. ಹಿಂದೆ ಈ ಊರಿನ ತುಂಬೆಲ್ಲ ಇದ್ದ ಜನರನ್ನು ಚಿತ್ರಿಸುವಂತೆ ಬೊಂಬೆಗಳನ್ನು ಇರಿಸಲಾಗಿದೆ.

ಗಾಲಿ ಕುರ್ಚಿಯ ಮೇಲೆ ಕುಳಿತಿರುವಂತೆ, ಕಟ್ಟಡ ಕಾರ್ಮಿಕರು ಬೀಡಿ ಸೇದುತ್ತಿರುವಂತೆ, ಒಂದಿಷ್ಟು ಜನ ಬಸ್‌ ನಿಲ್ದಾಣದಲ್ಲಿ ನಿಂತಿರುವಂತೆ, ಒಬ್ಬ ತಂದೆ ಮಕ್ಕಳು ಕುಳಿತಿರುವ ಬಂಡಿಯನ್ನು ಎಳೆಯುತ್ತಿರುವಂತೆ ಬೊಂಬೆಗಳನ್ನು ಸಿದ್ಧಪಡಿಸಲಾಗಿದೆ. ಶಾಲೆಯ ಒಳಗೆ ಪುಟಾಣಿ ಗೊಂಬೆಗಳು, ಶಿಕ್ಷಕಿ ಗೊಂಬೆ ಹೇಳುವ ಪಾಠವನ್ನು ಕೇಳುತ್ತಿರುವಂತೆ ಕೂರಿಸಲಾಗಿದೆ. ಆ ಬೊಂಬೆಗಳ ಮುಖದಲ್ಲಿ ಒಂದು ತುಂಟತನ ಕಾಣುವಂತೆ ಅಯನೊ ಅವುಗಳನ್ನು ಸಿದ್ಧಪಡಿಸಿದ್ದಾರೆ. ಬೊಂಬೆಗಳೇ ಹೆಚ್ಚಿರುವ ಈ ಊರು ತೀರಾ ವಿಚಿತ್ರವಾಗಿಯೇನೂ ಕಾಣಿಸುವುದಿಲ್ಲ!

‘ಇದು ವಿಚಿತ್ರವಾಗಿದೆ ಎಂದು ನನಗೇನೂ ಅನ್ನಿಸುವುದಿಲ್ಲ’ ಎಂದು ಹೇಳುತ್ತಾರೆ 38 ವರ್ಷ ವಯಸ್ಸಿನ ಫ್ಯಾನ್ನಿ ರೇನಾಡ್. ಫ್ರಾನ್ಸ್‌ನ ಇವರು ತಮ್ಮ ಪತಿ ಕ್ರಿಸ್ ಮನ್ನೊನ್ ಜೊತೆ ಇಲ್ಲಿಗೆ ಬಂದಿದ್ದರು. ಇಲ್ಲಿನ ಬೊಂಬೆಗಳ ಬಗ್ಗೆ ಒಂದು ಬ್ಲಾಗ್‌ನಲ್ಲಿ ಓದಿ, ಇಲ್ಲಿಗೆ ಭೇಟಿ ನೀಡಿದ್ದರು. ‘ಒಂದು ಹಳ್ಳಿಗೆ ಪುನಃ ಜೀವಂತಿಕೆ ತಂದುಕೊಡುವ ಬಹಳ ಒಳ್ಳೆಯ ವಿಧಾನ ಇದು’ ಎಂದು ರೇನಾಡ್ ಹೇಳಿದರು.

ಮಕ್ಕಳ ಪಾಲನೆಗೆ ಸಬ್ಸಿಡಿ, ವೈದ್ಯಕೀಯ ವೆಚ್ಚಗಳ ಮೇಲೆ ರಿಯಾಯಿತಿ, ಗೃಹ ನಿರ್ಮಾಣಕ್ಕೆ ಬೆಂಬಲ… ಇಂತಹ ಯೋಜನೆಗಳು ಇದ್ದರೂ ಈ ಪ್ರದೇಶದಲ್ಲಿ ಹೊಸಬರು ಬಂದು ವಾಸ್ತವ್ಯ ಹೂಡುವ ಅಥವಾ ಇಲ್ಲಿಯೇ ಜನಿಸಿದವರು ಪುನಃ ಇಲ್ಲಿಗೆ ಬರುವ ಸಾಧ್ಯತೆಗಳು ಕ್ಷೀಣವಾಗಿವೆ. ಅಯನೊ ತಮ್ಮ 12ನೆಯ ವಯಸ್ಸಿನಲ್ಲಿ ಈ ಊರಿನಿಂದ ತಮ್ಮ ತಂದೆಯ ಜೊತೆ ಒಸಾಕಾ ನಗರಕ್ಕೆ ವಲಸೆ ಹೋದರು. ಅವರ ತಂದೆಗೆ ಅಲ್ಲಿ ಉದ್ಯೋಗ ಸಿಕ್ಕಿತ್ತು. ಅಲ್ಲಿ ತಮ್ಮ ಜೀವನ ಸಂಗಾತಿಯನ್ನು ಭೇಟಿಯಾದ ಅಯನೊ, ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನು ಹೆತ್ತು, ಅವರನ್ನು ಅಲ್ಲಿಯೇ ಬೆಳೆಸಿದರು. ಅಯನೊ ಅವರ ತಂದೆ ನಿವೃತ್ತಿಯ ನಂತರ ಈ ಊರಿಗೆ ಮರಳಿದರು. ಅದೇ ರೀತಿ, ತಮ್ಮ ತಂದೆಯನ್ನು ನೋಡಿಕೊಳ್ಳಲು ಅಯನೊ ಅವರು ಹದಿನಾರು ವರ್ಷಗಳ ಹಿಂದೆ ಊರಿಗೆ ಮರಳಿದರು.

ತಮ್ಮ ಮನೆಯ ಮುಂದಿರುವ ಗದ್ದೆಯಲ್ಲಿ ಅವರು ಒಂದಿಷ್ಟು ಗಜ್ಜರಿ ಬೆಳೆದಿದ್ದರು. ಅದನ್ನು ಹಕ್ಕಿಗಳು ಹಾಳು ಮಾಡುತ್ತಿದ್ದವು. ಹಾಗಾಗಿ, ಅವುಗಳನ್ನು ದೂರ ಇರಿಸಲು ಅಯನೊ ಅವರು ಒಂದು ಬೆದರುಬೊಂಬೆ ಮಾಡಿದ್ದರು. ಆ ಬೆದರುಬೊಂಬೆ ನಿಜವಾದ ಮನುಷ್ಯನಂತೆ ಕಾಣುತ್ತಿತ್ತು. ಹಾಗಾಗಿ ಅದು ಹಕ್ಕಿಗಳನ್ನು ದೂರ ಇರಿಸಲು ಸಹಾಯ ಮಾಡಿತು. ನಂತರ ಅಯನೊ ಅವರು ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಹೋಲುವ ಬೊಂಬೆಗಳನ್ನು ಸಿದ್ಧಪಡಿಸಿದರು.

ಆ ಮಾರ್ಗದಲ್ಲಿ ಹೋಗುತ್ತಿದ್ದ ಪ್ರಯಾಣಿಕರು, ಆ ಬೊಂಬೆಗಳ ಬಳಿ ದಾರಿ ಕೇಳಿದಾಗ ಅಯನೊ ಅವರಿಗೆ ತಮಾಷೆ ಅನಿಸಿತ್ತು. ನಂತರ ಅವರು ಬೊಂಬೆ ಮಾಡುವುದನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿದರು. ಈಗ ಅವರು ಸಮೀಪದ ಪಟ್ಟಣದಲ್ಲಿ ಬೊಂಬೆ ಸಿದ್ಧಪಡಿಸುವ ಬಗ್ಗೆ ಪಾಠ ಮಾಡುತ್ತಾರೆ. ಹಾಗೆಯೇ, ತಮ್ಮ ಸ್ಟುಡಿಯೊಕ್ಕೆ ಬಂದವರಿಗೆ ಕೂಡ ಬೊಂಬೆ ಮಾಡುವ ಬಗ್ಗೆ ಪಾಠ ಹೇಳುತ್ತಾರೆ.

ಈಚೆಗೆ ಕೆಲವು ದಿನಗಳ ಹಿಂದೆ ಅಯನೊ ಅವರು, ಬೊಂಬೆಗಳ ಮುಖದ ಮೇಲೆ ಕೋಪ ತೋರಿಸುವುದು ಹೇಗೆ, ಖುಷಿಯ ಭಾವ ತೋರಿಸುವುದು ಹೇಗೆ ಎಂಬುದನ್ನು ಒಂದಿಷ್ಟು ಜನ ಮಹಿಳೆಯರಿಗೆ ಕಲಿಸಿಕೊಟ್ಟರು. ಕೆಲವು ಬಾರಿ ಅಯನೊ ಅವರು ಬೇರೆಯವರು ಕೋರಿದ ರೀತಿಯಲ್ಲಿ ಬೊಂಬೆಗಳನ್ನು ಮಾಡಿಕೊಡುವುದೂ ಇದೆ. ಕ್ಯಾನ್ಸರ್‌ನ ಕಾರಣದಿಂದಾಗಿ ತಮ್ಮ ಪತ್ನಿಯನ್ನು ಕಳೆದುಕೊಂಡಿರುವ ವೈದ್ಯರೊಬ್ಬರು, ಪತ್ನಿಯನ್ನು ಹೋಲುವ ಎರಡು ಬೊಂಬೆಗಳನ್ನು ಮಾಡಿಸಿಕೊಂಡು ಹೋದರು. ಒಂದು ಬೊಂಬೆಯನ್ನು ಮನೆಯ ಜಗುಲಿಯಲ್ಲೂ, ಇನ್ನೊಂದನ್ನು ಒಳಕೋಣೆಯಲ್ಲೂ ಇಟ್ಟುಕೊಳ್ಳಲು ಆ ವೈದ್ಯರು ಬೊಂಬೆಗಳನ್ನು ಮಾಡಿಸಿಕೊಂಡರು.

ಅಯನೊ ಅವರು ತಮ್ಮ ಅಜ್ಜಿಯನ್ನು ಹೋಲುವ ಬೊಂಬೆಯನ್ನು ಕಾರಿನ ಒಂದು ಆಸನದ ಮೇಲೆ ಇಟ್ಟುಕೊಂಡಿದ್ದಾರೆ. ದಿನಸಿ ವಸ್ತುಗಳನ್ನು ತರಲು ಕಾರು ಚಾಲನೆ ಮಾಡಿಕೊಂಡು ಹೋಗುವಾಗ ಈಗ ಅಯನೊ ಅವರಿಗೆ ತಾವು ಒಂಟಿ ಎಂದು ಅನ್ನಿಸುವುದಿಲ್ಲ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT