ಮಂಗಳವಾರ, ಸೆಪ್ಟೆಂಬರ್ 21, 2021
21 °C

ವಿಶ್ಲೇಷಣೆ | ಔಷಧ, ಲಸಿಕೆ, ಅವಸರದ ನಡೆ

ಡಾ. ಎಚ್.ಎಸ್. ಅನುಪಮಾ Updated:

ಅಕ್ಷರ ಗಾತ್ರ : | |

Prajavani

ತಾಪಮಾನ ಏರಿದೆಯೆಂದು ನಾನಾ ವಿಧದಲ್ಲಿ ಭೂಮಿ ಹೇಳಿದ್ದು ನಮಗೆ ಕೇಳಿರಲಿಲ್ಲ. ಆದರೆ, ಕ್ಷುದ್ರ ಎಂದುಕೊಳ್ಳಬಹುದಾದ ಅರೆಜೀವಿ ಕಣವೊಂದು ದೊಡ್ಡಣ್ಣ, ಸಣ್ಣಯ್ಯ ಎನ್ನದೆ ಎಲ್ಲರೂ ಮಂಡಿಯೂರುವಂತೆ ಮಾಡಿರುವಾಗ, ನಮ್ಮ ಉಸಿರಾಟದ ಸದ್ದು ನಮಗೇ ಕೇಳುವಷ್ಟು ಗಾಬರಿ ಆವರಿಸಿಕೊಂಡಿದೆ. ಕಂಗೆಡಿಸುವ ವಾಸ್ತವದ ಆಳ– ಅಗಲಗಳೇ ಇನ್ನೂ ಅಳತೆಗೆ ಸಿಗದಂತಾಗಿರುವಾಗ, ಕೋವಿಡ್ ನಂತರದ ಜಗತ್ತು ಹೇಗಿರಬಹುದು ಎನ್ನುವುದು ನಮ್ಮ ಕಲ್ಪನೆಯ ಆಚೆ ಚಾಚಿಕೊಂಡಿದೆ.

ಲಾಕ್‍ಡೌನ್ ಆದೆವೆಂದು ಮರುಗುತ್ತಿರುವವರ ಚಿತ್ತ, ಎಷ್ಟು ಬೇಗ ಸಂಪೂರ್ಣ ಅನ್‍ಲಾಕ್ ಆದೇವೋ ಎಷ್ಟು ಬೇಗ ಕೋವಿಡ್‍ಗೆ ಔಷಧ, ಲಸಿಕೆ ಕಂಡುಹಿಡಿದೇವೋ ಎನ್ನುವತ್ತ ನೆಟ್ಟಿದೆ. ಆರೋಗ್ಯ ಕ್ಷೇತ್ರವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿರುವ ಬಂಡವಾಳ ಜಗತ್ತಿಗೂ ಇದೇ ಧಾವಂತ. ಆದರೆ ಆರೋಗ್ಯ ಕ್ಷೇತ್ರದ ಸಂಶೋಧನೆ ಎನ್ನುವುದು ಅಡುಗೆಯೆಂಬ ಧ್ಯಾನದ ಹಾಗೆ. ಅಲ್ಲಿ ಅವಸರ, ವಿಳಂಬ, ನಿರ್ಲಕ್ಷ್ಯಕ್ಕೆ ಕ್ಷಮೆಯೇ ಇಲ್ಲ.

ಮಲೇರಿಯಾ ಸೋಂಕಿಗೆ ಕೊಡುವ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‍ಸಿಕ್ಯು) ಔಷಧಿಯು ಕೋವಿಡ್-19ಕ್ಕೂ ಫಲಕಾರಿಯಾಗುತ್ತದೆಂದು ‘ಕಂಡುಹಿಡಿ’ಯಲಾಯಿತು. ಆಸ್ಪತ್ರೆ, ಔಷಧಿ ಅಂಗಡಿಗಳಲ್ಲಿದ್ದ ಎಚ್‍ಸಿಕ್ಯು ಮಂಗಮಾಯವಾಗಿಬಿಟ್ಟಿತು. ಅಮೆರಿಕವು ತುರ್ತಾಗಿ ಎಚ್‍ಸಿಕ್ಯು ಕಳಿಸುವಂತೆ ಕೇಳಿದಾಗ, ಲಾಕ್‍ಡೌನ್ ಸಡಿಲಿಸಿ ಭಾರತ ಕಳಿಸಲೊಪ್ಪಿತು. ಕ್ಲೋರೋಕ್ವಿನ್ ಬಳಸಿದರೆ ಹೃದಯ ಕಾಯಿಲೆ ಇರುವವರಲ್ಲಿ ಮರಣ ಸಂಭವಿಸುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯ ನಡುವೆಯೇ ಕೆಲವರು ಅದನ್ನು ಸೇವಿಸಿ ಹೃದಯಸ್ತಂಭನಕ್ಕೆ ಒಳಗಾದರು.

ಇದರ ನಡುವೆ, ಬ್ರಿಟನ್ನಿನಲ್ಲಿ ನೆಲೆಸಿರುವ ಭಾರತ ಮೂಲದ ಇಬ್ಬರು ವೈದ್ಯವಿಜ್ಞಾನಿಗಳು ಕೋವಿಡ್‍ಗೆ ಎಚ್‍ಸಿಕ್ಯು ಪರಿಣಾಮಕಾರಿಯಲ್ಲ, ಅಪಾಯಕಾರಿ ಎಂದು ಬ್ರಿಟಿಷ್ ವೈದ್ಯಕೀಯ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಅಧ್ಯಯನ ವರದಿ ಪ್ರಕಟಿಸಿದರು. ಮತ್ತೊಂದೆಡೆ, ಅಧ್ಯಯನ ವಿಧಾನವೇ ಸರಿಯಿಲ್ಲವೆಂದು ಇನ್ನೊಂದು ಗುಂಪು ಅದನ್ನು ಸಂಪೂರ್ಣ ಅಲ್ಲಗಳೆಯಿತು. ಒಂದು ವಾದದ ಹಿಂದೆ ಔಷಧ ತಯಾರಿಕಾ ಕಂಪನಿಯ ಪ್ರಭಾವವಿದ್ದರೆ, ಮತ್ತೊಂದು ವಾದದ ಹಿಂದೆ ಸ್ಯಾನಿಟೈಸರ್‌ ತಯಾರಿಸುವ ಕಂಪನಿಯ ಪ್ರಭಾವ ಇದೆ ಎಂಬ ಮಾತುಗಳು ಹರಿದಾಡಿದವು. ಲೋಕಹಿತಕ್ಕಿಂತ ಬಂಡವಾಳ ಹಿತ, ಪೇಟೆಂಟ್ ಹಿತವೇ ಕ್ರಿಯಾಶೀಲವಾಯಿತು.

ಕೋವಿಡ್ ಲಸಿಕೆಯದು ಮತ್ತೊಂದು ಕತೆ. ಆರೋಗ್ಯವಂತ ವ್ಯಕ್ತಿಗೆ ರೋಗ ಬರದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಲಸಿಕೆ ನೀಡಲಾಗುತ್ತದೆ. ಈಗ ದಿನಕ್ಕೊಂದು ವಿಜ್ಞಾನಿಗಳ ತಂಡ ಕೋವಿಡ್‍ಗೆ ಪರಿಣಾಮಕಾರಿ ಲಸಿಕೆ ಸಿದ್ಧಗೊಳಿಸಿಯೇಬಿಟ್ಟೆವು ಎನ್ನುತ್ತಿದೆ. ನಮಗೆ ಅವಸರವಿದೆಯೆಂದು ಕೋವಿಡ್‍ಗೆ ಅವಸರವಿದೆಯೇ? ಲಸಿಕೆಯನ್ನು ಫಾಸ್ಟ್‌ಫುಡ್ಡಿನಂತೆ ಫಟಾಫಟ್ ತಯಾರಿಸಬಹುದೇ? ಖಂಡಿತ ಇಲ್ಲ.

ಯಾವ ರೋಗಾಣುವಿನ ವಿರುದ್ಧ ಲಸಿಕೆ ಕಂಡುಹಿಡಿಯುವೆವೋ ಅದನ್ನು ಕೂಲಂಕಷ ಅಧ್ಯಯನಕ್ಕೆ ಒಳಪಡಿಸಬೇಕು, ಆ್ಯಂಟಿಜೆನ್ನುಗಳ ಪಟ್ಟಿ ಮಾಡಿ, ಕಾಯಿಲೆಕಾರಕವಾದದ್ದನ್ನು ಬಿಟ್ಟು ರೋಗನಿರೋಧಕ ಶಕ್ತಿ ಉದ್ದೀಪಿಸುವುದನ್ನು ಗುರುತಿಸಬೇಕು, ಆಯ್ದ ಕೆಲವು ಪ್ರಾಣಿಗಳಿಗೆ ಉದ್ದೀಪಕ ಆ್ಯಂಟಿಜೆನ್ ಕೊಡಬೇಕು, ನಂತರ ಪ್ರಾಣಿಗಳ ರಕ್ತಮಾದರಿ ಸಂಗ್ರಹಿಸಿ, ರೋಗಾಣುವಿನ ವಿರುದ್ಧ ಆ್ಯಂಟಿಬಾಡಿಗಳು ಉತ್ಪತ್ತಿಯಾಗಿವೆಯೇ ಎಂದು ಪರೀಕ್ಷಿಸಬೇಕು, ಪ್ರಾಣಿಯನ್ನು ನಿಜವಾದ ರೋಗಾಣುವಿಗೊಡ್ಡಿ ಸೋಂಕುಂಟು ಮಾಡಿ, ರೋಗನಿರೋಧಕ ಶಕ್ತಿ ಬಂದಿದೆಯೇ ಎಂದು ಪರಿಶೀಲಿಸಬೇಕು, ಈ ಪ್ರಯೋಗ ಸಫಲವಾದರೆ ಆರೋಗ್ಯವಂತ ಮನುಷ್ಯರನ್ನು ಆಯ್ದು, ಸಮ್ಮತಿ ಪಡೆದು, ಲಸಿಕೆ ನೀಡಬೇಕು, ಅವರ ರೋಗನಿರೋಧಕ ಶಕ್ತಿ ಹೆಚ್ಚಿತೇ? ರೋಗಾಣುವಿನ ಸಂಪರ್ಕವಾದಾಗ ರೋಗ ಬರದಂತೆ ತಡೆಗಟ್ಟಿತೇ? ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಪರಿಣಾಮಗಳೇನು ಎಂಬ ಬಗೆಗೆ ವಿಸ್ಕೃತ ಕ್ಲಿನಿಕಲ್ ಟ್ರಯಲ್‍ಗಳಾದ ನಂತರ ಮಾರುಕಟ್ಟೆಗೆ ಬಿಡಬೇಕು.

ಓಹೋ, ಎಂಥ ದೀರ್ಘ ಪ್ರಕ್ರಿಯೆ ಅಲ್ಲವೇ? ಹೌದು, ಎಡ್ವರ್ಡ್ ಜೆನ್ನರ್, ಲೂಯಿಸ್ ಪಾಶ್ಚರ್, ವ್ಲಾದಿಮಿರ್ ಹಾಫ್ಕಿನ್, ಆಲ್ಬರ್ಟ್ ಬ್ರೂಸ್ ಸ್ಯಾಬಿನ್- ಒಬ್ಬರೇ ಇಬ್ಬರೇ? ಒಂದು ಲಸಿಕೆ ಕಂಡುಹಿಡಿಯಲು ಜೀವಿತಾವಧಿಯನ್ನೇ ಸವೆಸಿದವರಿದ್ದಾರೆ. ಸಫಲಗೊಳ್ಳದೇ ಲಯವಾಗಿ ಹೋದವರು ಅಸಂಖ್ಯ ಜನರಿದ್ದಾರೆ. ಒಂದು ಲಸಿಕೆ ತಯಾರಿಗೆ ಇಂದಿನ ವೇಗದ ಕಾಲದಲ್ಲೂ ಕನಿಷ್ಠ ಎರಡು ವರ್ಷ ಬೇಕೇಬೇಕು. ಅದಕ್ಕಿಂತ ಮುನ್ನ ಮಾರುಕಟ್ಟೆಗೆ ಬಂದದ್ದು ಮೌಲಿಕ, ಸುರಕ್ಷಿತ ಆಗಿರುವ ಸಾಧ್ಯತೆ ಕಡಿಮೆ. ಆದರೆ ಕೋವಿಡ್-19 ಬಂದು ಆರು ತಿಂಗಳೂ ಆಗಿಲ್ಲ, ಲಸಿಕೆ ಪ್ರಯತ್ನ ಶುರುವಾಗಿ ಮೂರು ತಿಂಗಳಾಗಿಲ್ಲ, ದಿನಕ್ಕೊಂದು ತಂಡ ತಾನಿನ್ನೇನು ವ್ಯಾಕ್ಸಿನ್ ತಯಾರಿಸಿಯೇ ಬಿಟ್ಟೆ ಎನ್ನುತ್ತಿದೆಯಲ್ಲ!

ಇದ್ದಕ್ಕಿದ್ದಂತೆ ಜನರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅವಸರ ಹುಟ್ಟಿಕೊಂಡಿದೆ. ಕಂಡುಕೇಳರಿಯದ ಗಿಡಮೂಲಿಕೆ, ಎಲೆ-ಬೇರು-ತೊಗಟೆ-ಕಷಾಯಗಳನ್ನು ಬಳಸತೊಡಗಿದ್ದಾರೆ. ಆದರೆ ನಿಯಮಿತ ಆಹಾರ, ನಿದ್ರೆ ಮತ್ತು ಶ್ರಮದ ಸರಳ ಬದುಕು ರೋಗನಿರೋಧಕ ಶಕ್ತಿಯನ್ನು ನಿಧಾನವಾಗಿ ಸಂಚಯಗೊಳಿಸೀತೇ ಹೊರತು ಛೂಮಂತ್ರ ಗಾಳಿ ಅಂದಕೂಡಲೇ ದೇಹ ದೃಢವಾಗಲಾರದು.

ಸ್ವಾತಂತ್ರ್ಯಾನಂತರ ಎರಡು ದಶಕಗಳ ತನಕ ಹೊಸ ನಾಡು ಕಟ್ಟುವ ಹುಮ್ಮಸ್ಸಿನ ಜನ, ವೈಜ್ಞಾನಿಕ ದೃಷ್ಟಿಕೋನ- ವಿಜ್ಞಾನ ಸಂಶೋಧನೆಗಳನ್ನು ಬಲಪಡಿಸಬೇಕೆನ್ನುವ ನಾಯಕತ್ವ ದೇಶದಲ್ಲಿತ್ತು. ನಂತರ ನಾವು ಅಭಿವೃದ್ಧಿಯ ಮಾತನಾಡಿದೆವು, ಸಾಮಾಜಿಕ ನ್ಯಾಯದ ಮಾತನಾಡಿದೆವು, ಧರ್ಮ-ದೇಗುಲಗಳ ಬಗೆಗೆ ಎಗ್ಗಿಲ್ಲದೆ ಬಡಿದಾಡಿದೆವು. ಆದರೆ ವೈಜ್ಞಾನಿಕ ಸಂಶೋಧನೆಯ ಬಗೆಗೆ ಚಕಾರವೆತ್ತಲಿಲ್ಲ. ತಂತ್ರಜ್ಞಾನ ಅಭಿವೃದ್ಧಿಪಡಿಸಿ ಉಪಕರಣ, ಯಂತ್ರಗಳನ್ನೇನೋ ಕಂಡುಹಿಡಿದೆವು. ಮೂಲವಿಜ್ಞಾನ, ಆರೋಗ್ಯ ವಿಜ್ಞಾನ ನಮ್ಮನ್ನು ಸೆಳೆಯಲಿಲ್ಲ. ಇದರಿಂದ ನಿಜಕ್ಕೂ ಸೊರಗಿದ್ದು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಚರಕ, ಸುಶ್ರುತರಂಥ ಮೇಧಾವಿಗಳನ್ನು ಸಾವಿರಾರು ವರ್ಷ ಮೊದಲೇ ಸೃಷ್ಟಿಸಿದ ಭಾರತವು ನೂರನಲವತ್ತು ಕೋಟಿ ಜನಗಡಣದ ನಡುವೆ ತನಗೆ ಅಗತ್ಯವಿರುವ ಔಷಧ, ಲಸಿಕೆ ತಾನೇ ತಯಾರಿಸಿಕೊಳ್ಳುವ, ತನ್ನ ಕಾಯಿಲೆಗಳಿಗೆ ಕಾರಣ ಹುಡುಕಿ ಔಷಧ ಕಂಡುಹಿಡಿದುಕೊಳ್ಳುವ ಜಾಗತಿಕ ಗುಣಮಟ್ಟದ ಸಂಶೋಧನಾ ತಂಡ ಕಟ್ಟಲು ವಿಫಲವಾಗಿದೆ.

‘ಪುರಾಣ ಕಾಲದಲ್ಲೇ ಪ್ಲಾಸ್ಟಿಕ್ ಸರ್ಜರಿಯಿಂದ ಗಣಪನನ್ನು ಸೃಷ್ಟಿಸಿದೆವು, ರಾಮಾಯಣ ಕಾಲದಲ್ಲಿ ಆನೆ ಲದ್ದಿಯಿಂದ ಜೆಟ್ ಫ್ಯುಯೆಲ್ ತಯಾರಿಸಿ ಪುಷ್ಪಕವಿಮಾನ ಹಾರಿಸಿದ್ದೆವು, ಬರಲಿರುವ ರೋಗಗಳೆಲ್ಲವನ್ನೂ ಊಹಿಸಿ ಋಷಿಮುನಿಗಳು ಆಗಲೇ ಮಂತ್ರೌಷಧವನ್ನು ಸಂಹಿತೆಗಳಲ್ಲಿ ಬರೆದಿಟ್ಟಿರುವರು’ ಎಂಬಂತಹ ಅಪದ್ಧ, ಅಪಕ್ವ ವಿಚಾರಗಳನ್ನೇ ಹುಸಿಚಿಂತಕರು, ಜನನಾಯಕರು ತಾವೂ ನಂಬಿ, ಜನರನ್ನೂ ಕತ್ತಲಲ್ಲಿಟ್ಟ ಕಾರಣದಿಂದ ಒಂದೆಡೆ ಮೌಢ್ಯವು ಆರೋಗ್ಯ ಸಂಶೋಧನಾ ಕ್ಷೇತ್ರವನ್ನು ಬಡವಾಗಿಸಿದ್ದರೆ, ಇನ್ನೊಂದೆಡೆ ಖಾಸಗಿ ಬಂಡವಾಳವು ಅದನ್ನೊಂದು ಉದ್ದಿಮೆಯನ್ನಾಗಿಸಿದೆ.

ಖಾಸಗಿ ಆರೋಗ್ಯ– ಔಷಧ ಸಂಸ್ಥೆಗಳಿಂದ ಅತ್ಯಾಧುನಿಕ, ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ನಿಜ. ಆದರೆ ರೋಗಿಗಳು ಲಾಭ ತರುವ ಗ್ರಾಹಕರಾಗಿ ಮಾರ್ಪಟ್ಟಿದ್ದರಿಂದ ಖಾಸಗಿ ವಲಯದ ಸಂಶೋಧನೆಯ ವಿಶ್ವಾಸಾರ್ಹತೆ ಕುರಿತು ಅನುಮಾನ ಮೂಡುವಂತಾಗಿದೆ.

ಎಂದೇ ಸರ್ಕಾರಗಳು ಔಷಧ ತಯಾರಿಕೆ, ಸಂಶೋಧನೆ, ರೋಗ ನಿಯಂತ್ರಣ ಕ್ಷೇತ್ರವನ್ನು ಬಂಡವಾಳಿಗರಿಗೆ ಕೈಯೆತ್ತಿ ಕೊಟ್ಟು ತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳಲು ನೋಡದೆ, ಈ ನೆಲದ ಬೌದ್ಧಿಕ ಸಂಪನ್ಮೂಲವನ್ನು ಉಪಯೋಗಿಸಿಕೊಳ್ಳಬೇಕು. ಜನರ ಜೀವ ಪೊರೆಯುವ ಕೃಷಿ, ಆರೋಗ್ಯ, ಕ್ರೀಡೆ, ಶಿಕ್ಷಣಕ್ಕೆ ದೇಶದ ಸುರಕ್ಷತೆಗೆ ಕೊಡುವಷ್ಟೇ ಹಣಕಾಸನ್ನು ತೆಗೆದಿರಿಸಬೇಕು. ಆರೋಗ್ಯ ಸಂಶೋಧನೆಯನ್ನು ಚುರುಕುಗೊಳಿಸಬೇಕು. ಜಾತಿ- ಧರ್ಮ- ಲಾಭ- ನಷ್ಟದ ಲೆಕ್ಕಾಚಾರ ಬಿಟ್ಟು, ಭವಿಷ್ಯದ ಅಗತ್ಯಗಳನ್ನು ಊಹಿಸಿ ಕಾರ್ಯಪ್ರವೃತ್ತರಾಗುವ ದೂರದೃಷ್ಟಿಯ ಕನಸುಗಾರರು ಜನರನ್ನು ಮುನ್ನಡೆಸುವಂತಾಗಬೇಕು.

ಲೇಖಕಿ: ವೈದ್ಯೆ, ಬರಹಗಾರ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು