ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎ ಎಂಬ ಪಿಡುಗು

ಬ್ಯಾಂಕಿಂಗ್‌ ವಲಯದ ನಿಷ್ಕ್ರಿಯ ಸೊತ್ತಿನ ಪ್ರಮಾಣದ ಏರಿಕೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ?
Last Updated 2 ಸೆಪ್ಟೆಂಬರ್ 2020, 20:00 IST
ಅಕ್ಷರ ಗಾತ್ರ

ಇಷ್ಟು ದೊಡ್ಡ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ನಿಷ್ಕ್ರಿಯ ಸೊತ್ತುಗಳ (ಎನ್‌ಪಿಎ) ಸಮಸ್ಯೆಗೆ ಕಾರಣ ಮತ್ತು ಪರಿಣಾಮಗಳು ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆ ಬೇರೆಯೇ ಆಗಿವೆ. ಆದರೂ ಈಗ ಕೊರೊನಾ ಹಾವಳಿ ತೀವ್ರವಾಗಿರುವಾಗ ಈ ಸಮಸ್ಯೆ ಮತ್ತೆ ಹೆಡೆಯೆತ್ತಲಿದೆ. ದೇಶದ ಒಟ್ಟಾರೆ ಬ್ಯಾಂಕಿಂಗ್ ಪ್ರಗತಿಗೆ ಅಡ್ಡಿಯಾಗುತ್ತಿರುವ ಈ ಸಮಸ್ಯೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ಹಾಗೂ ಜವಾಬ್ದಾರಿಗೆ ಸಂಬಂಧಿಸಿದ ಚರ್ಚೆಗೆ ಗ್ರಾಸ ಒದಗಿಸುವುದಂತೂ ನಿಜ. ಈ ಒಕ್ಕೂಟ ವ್ಯವಸ್ಥೆಯಲ್ಲಿ ವಾಣಿಜ್ಯ, ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ವಹಿಸಬೇಕಾದ ಪಾತ್ರದ ಬಗೆಗೆ ಚಿಂತನೆ ನಡೆಸಬೇಕಾದ ಅಗತ್ಯ ಮತ್ತೆ ತಲೆದೋರಿದೆ.

ದೇಶದ ಆರ್ಥಿಕತೆಯ ಗಾತ್ರವನ್ನು 2024-25ರ ವೇಳೆಗೆ ₹ 350 ಲಕ್ಷ ಕೋಟಿಗೆ ತಲುಪಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಭರ್ಜರಿ ಭರವಸೆಯನ್ನು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವರ್ಷದ ಜುಲೈ 10ರಂದು ಲೋಕಸಭೆಯಲ್ಲಿ 2019-20ನೇ ಸಾಲಿನ ಬಜೆಟ್ ಅನ್ನು ಸಮರ್ಥಿಸಿಕೊಳ್ಳುವಾಗ ಪುನರುಚ್ಚರಿಸಿದ್ದರು. ಈ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಬೇಕಾದ ಹೊಸ ಆಲೋಚನೆಗಳನ್ನು ಬ್ಯಾಂಕ್ ಶಾಖೆಗಳ ಮಟ್ಟದಲ್ಲಿ ಕ್ರೋಡೀಕರಿಸುವ ಪ್ರಯತ್ನ ನಂತರ ಪ್ರಾರಂಭವಾಯಿತು.

2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದು, ಮೂಲ ಸೌಕರ್ಯ ಯೋಜನೆಗಳಿಗೆ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸುವುದು, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ಸಾಲ ನೀಡಿಕೆ- ಹೀಗೆ ಮಹತ್ವದ ರಂಗಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ವಹಿಸಬೇಕಾದ ಪಾತ್ರವನ್ನು ಚರ್ಚಿಸಲಾಗುತ್ತಿದೆ. ಈ ಚರ್ಚೆಯಲ್ಲಿ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಅನೇಕ ವರ್ಷಗಳಿಂದ ಕಾಡುತ್ತಿರುವ ನಿಷ್ಕ್ರಿಯ ಸೊತ್ತುಗಳ (2004ರಿಂದ ಜಾರಿಯಲ್ಲಿರುವ, ಬಡ್ಡಿ ಸಮೇತ ವಾಪಸಾತಿಗೆ 90 ದಿನಗಳ ಅವಧಿ ಮೀರಿದ ಸಾಲಗಳ) ಸಮಸ್ಯೆ ಪ್ರವೇಶ ಪಡೆಯುವುದು ಸಹಜ.

ನಿಷ್ಕ್ರಿಯ ಸೊತ್ತುಗಳ ಸವಾಲಿನ ಸಾಧ್ಯತೆಯನ್ನು, ಕಳೆದ ಜುಲೈನಲ್ಲಿ ಪ್ರಕಟವಾದ ರಿಸರ್ವ್ ಬ್ಯಾಂಕಿನ ‘ಹಣಕಾಸು ಸ್ಥಿರತೆ’ ಕುರಿತ ವರದಿ ತೋರಿಸಿದೆ. ನಿಷ್ಕ್ರಿಯ ಸೊತ್ತಿನ ಒಟ್ಟು ಪ್ರಮಾಣ 2020ರ ಮಾರ್ಚ್‌ನಲ್ಲಿ ಶೇ 8.5ರಷ್ಟಿದ್ದದ್ದು 2022ರ ಮಾರ್ಚ್ ಹೊತ್ತಿಗೆ ಶೇ 12.5ಕ್ಕೆ ಹೆಚ್ಚಲಿದೆಯೆಂಬ ಅಂದಾಜಿದೆ. ಪರಿಸ್ಥಿತಿ ಹತೋಟಿಗೆ ಬಾರದಿದ್ದರೆ ಶೇ 14.7ಕ್ಕೆ ಜಿಗಿಯುವ ಸಂಭವವೂ ಇದೆ.

ಸಂಪತ್ತು ಸೃಷ್ಟಿಯ ಭರವಸೆಯನ್ನು ಮುಂದಿಟ್ಟ ಕೇಂದ್ರ ಹಣಕಾಸು ಸಚಿವಾಲಯವು ನಿಷ್ಕ್ರಿಯ ಸೊತ್ತು ಒಡ್ಡುತ್ತಿರುವ ಗಂಭೀರ ಸವಾಲನ್ನು 2019-20ನೇ ಸಾಲಿನ ಕೇಂದ್ರ ಆರ್ಥಿಕ ಸಮೀಕ್ಷೆಯಲ್ಲಿ ನೆನಪಿಸಿತ್ತು. ಇದಕ್ಕೆ, ಉದ್ದೇಶಪೂರ್ವಕ ಸುಸ್ತಿದಾರರ ಸಂಖ್ಯೆ ಹೆಚ್ಚುತ್ತಿರುವುದು
ದೊಡ್ಡ ಕಾರಣ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದರು.

ವಾಪಸಾತಿಯ ಸಾಧ್ಯತೆಯೇ ಇರದ ಸಾಲವನ್ನು ಬ್ಯಾಂಕಿಂಗ್ ವಲಯವು ಕೆಟ್ಟ ಸಾಲವೆಂದು ಪರಿಗಣಿಸುವುದು ರೂಢಿಯಲ್ಲಿದೆ. ವಾಸ್ತವದಲ್ಲಿ ಕೆಟ್ಟ ಸಾಲವೆಂದರೆ ನಿಷ್ಕ್ರಿಯ ಸೊತ್ತಿನ ಹಿರಿಯಕ್ಕ! ಸುಮಾರು ಎರಡು ವರ್ಷಗಳ ಹಿಂದೆಯೇ ಮೆಕ್ಸಿಕೊ, ಬ್ರೆಜಿಲ್, ಅರ್ಜೆಂಟಿನಾ, ಗ್ರೀಸ್, ಟರ್ಕಿ, ದಕ್ಷಿಣ ಕೊರಿಯಾ, ಥಾಯ್ಲೆಂಡ್, ಮಲೇಷ್ಯಾ, ಇಂಡೊನೇಷ್ಯಾ ಮತ್ತು ಭಾರತದ ಬ್ಯಾಂಕುಗಳಲ್ಲಿ ಹಿರಿಯಕ್ಕನ ನರ್ತನ! ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದ್ದ ಸಾಲ ವಸೂಲಾತಿ ಕಾನೂನಿನ ದೌರ್ಬಲ್ಯಗಳನ್ನು ಬಳಸಿಕೊಳ್ಳಲು ರಾಜಕೀಯ ಪ್ರಭಾವವುಳ್ಳ ಬೃಹತ್ ಉದ್ದಿಮೆಗಳು ಮುಂದಾದವು. ಇದರಿಂದ ಭಾರತದ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯ ಅಂತಃಸತ್ವವೇ ಉಡುಗಿಹೋಗಿತ್ತು. ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ಗಳಲ್ಲಿ ವಸೂಲಾಗದ ಸಾಲದ ಪ್ರಭಾವ ನಿಚ್ಚಳವಾಗಿದ್ದು, ಬ್ಯಾಂಕ್ ನೌಕರರು ಏನೆಲ್ಲಾ ಹೊಂದಾಣಿಕೆ, ಕಸರತ್ತುಗಳನ್ನು ಮಾಡಿದರೂ ಇದರ ಆಳವನ್ನು ಅಡಗಿಸಲು ಸಾಧ್ಯವಾಗದೇ ಹೋಯಿತು.

ಇದನ್ನು, ಕೇಂದ್ರದ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ 2018ರಲ್ಲೇ ತಿಳಿಸಿ ಬಿರುಗಾಳಿ ಎಬ್ಬಿಸಿದ್ದರು. ಅಮೆರಿಕದ ಕಂಪನಿಗಳು ನವದೆಹಲಿಯಲ್ಲಿ ಏರ್ಪಡಿಸಿದ್ದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುವಾಗ, ನಿಷ್ಕ್ರಿಯ ಸೊತ್ತಿನ ಏರಿಕೆಗೆ ಯುಪಿಎ ಸರ್ಕಾರವನ್ನೂ ರಿಸರ್ವ್ ಬ್ಯಾಂಕಿನ ಮೃದು ಧೋರಣೆಯನ್ನೂ ಜೇಟ್ಲಿ ಟೀಕಿಸಿದ್ದೇ ತಡ, ಅವರ ವಿರುದ್ಧ ಯುಪಿಎ ನೇತಾರ ಆನಂದ ಶರ್ಮಾ ವಾಗ್ದಾಳಿ ನಡೆಸಿದರು. ಸ್ವಾಯತ್ತೆ ಹೊಂದಿದ ಆರ್‌ಬಿಐ ವಿರುದ್ಧ ಮಾತನಾಡುವುದೇ ಸರಿಯಲ್ಲವೆಂದು ವಾದಿಸಿ, ರಿಸರ್ವ್‌ ಬ್ಯಾಂಕಿನ ಗವರ್ನರ್ ವಿರುದ್ಧ ಇರಿಸುಮುರಿಸುಗೊಂಡಿದ್ದ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಹೀಗೆ ನಿಷ್ಕ್ರಿಯ ಸೊತ್ತಿನ ಸಮಸ್ಯೆಯು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ತಿರುವುಗಳನ್ನು ಕಂಡಿತು. ಇದನ್ನು ಗುರುತಿಸಿದ್ದ ರಿಸರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಆಗಿದ್ದ, ಕೆ.ಸಿ.ಚಕ್ರವರ್ತಿ ಅವರು ಬ್ಯಾಂಕಿಂಗ್ ತಜ್ಞರ 2013ರ ವಾರ್ಷಿಕ ಸಮಾವೇಶದಲ್ಲಿ, ಏರಿಕೆ
ಪ್ರಮಾಣದಲ್ಲಿದ್ದ ಎನ್‌ಪಿಎ ಸಮಸ್ಯೆಯಿಂದ ಬ್ಯಾಂಕಿಂಗ್ ವ್ಯವಸ್ಥೆ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದನ್ನು ಪ್ರಸ್ತಾಪಿಸಿದ್ದರು.

ಒಂದಾದ ಮೇಲೊಂದು ಬ್ಯಾಂಕ್ ಹಗರಣಗಳು ಬೆಳಕಿಗೆ ಬಂದ ಮೇಲೆ, 2018ರಲ್ಲಿ ಆರ್‌ಬಿಐ ಗವರ್ನರ್ ಆಗಿದ್ದ ಉರ್ಜಿತ್ ಪಟೇಲ್ ಅವರು ಹಣಕಾಸು ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾದಾಗಲೂ ಬ್ಯಾಂಕ್‌ಗಳ ವಸೂಲಾಗದ ಸಾಲದ ಬಗೆಗೆ ವಿವರಣೆ ನೀಡಿದರು. ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯು 2016ರಲ್ಲಿ ಅನುಷ್ಠಾನಕ್ಕೆ ಬಂದ ನಂತರ ಎನ್‌ಪಿಎ ಪ್ರಮಾಣದಲ್ಲಿ ಸುಧಾರಣೆ ಕಂಡು ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ತೃಪ್ತಿಪಟ್ಟಿದ್ದೇನೋ ನಿಜ. ಆದರೆ 2017-18ರ ಒಂದೇ ಸಾಲಿನಲ್ಲಿ, ರಿಸರ್ವ್‌ ಬ್ಯಾಂಕಿನ ಪ್ರತಿನಿಧಿ ಎಂಬ ಹೆಗ್ಗಳಿಕೆ ಪಡೆದ ಎಸ್.ಬಿ.ಐ ಸೇರಿದಂತೆ ಆಗ ಅಸ್ತಿತ್ವದಲ್ಲಿದ್ದ ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳ ಒಟ್ಟು ಎನ್‌ಪಿಎ ₹ 87,300 ಕೋಟಿಗೆ ಮುಟ್ಟಿತ್ತು! ಎನ್‌ಪಿಎ ಸಮಸ್ಯೆಯಿಂದ ಆರೋಗ್ಯ ಕಳೆದು
ಕೊಳ್ಳುತ್ತಿರುವ ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲ್ವಿಚಾರಣೆ ನಡೆಸಲು ರಿಸರ್ವ್ ಬ್ಯಾಂಕಿಗೆ ಹೆಚ್ಚಿನ ಅಧಿಕಾರ ಬೇಕೆಂಬ ಪಟೇಲ್‌ ಅವರ ಬೇಡಿಕೆಗೆ ಇನ್ನೂ ಶಕ್ತಿ ಬಂದಿಲ್ಲ. ಪಟೇಲ್, ಆರ್‌ಬಿಐ ಗವರ್ನರ್ ಆಗಿಯೂ ಉಳಿದಿಲ್ಲ!

ಆರ್‌ಬಿಐ ಗವರ್ನರ್ ಆಗಿದ್ದ ರಘುರಾಂ ರಾಜನ್ ಅವರು ಎನ್‌ಪಿಎ ರೋಗಕ್ಕೆ ಪರಿಣಾಮಕಾರಿ ಮದ್ದು ಹುಡುಕಲು ಹಲವಾರು ಕಾರಣಗಳಿಂದ ಶಕ್ತರಾಗಲಿಲ್ಲ ಎನ್ನುವುದು ಒಪ್ಪತಕ್ಕ ವಿಷಯವೇ ಸರಿ. ಮಾಜಿ ಗವರ್ನರ್ ಆಗಿ 2018ರ ನವೆಂಬರ್‌ನಲ್ಲಿ ಸಂಸತ್ತಿನ ಅಂದಾಜು ಸಮಿತಿಗೆ ಅವರು ಸಲ್ಲಿಸಿದ್ದ ಟಿಪ್ಪಣಿಯಲ್ಲಿ, ಬೇಕಾಬಿಟ್ಟಿ ಸಾಲ ವಿತರಣೆ ಮತ್ತು ಸಾಲಮನ್ನಾ ನಿರ್ಧಾರಗಳಿಂದ ಎನ್‌ಪಿಎ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ತಿಳಿಸಿದ್ದರು. ವಾಣಿಜ್ಯ ಸಾಲ ವಿತರಣೆಯಲ್ಲಿ ಆರ್‌ಬಿಐ ಆಟಗಾರನಲ್ಲ, ಕೇವಲ ತೀರ್ಪುಗಾರ ಎಂದು ಹೇಳಿದ್ದು ಮಾರ್ಮಿಕವಾಗಿತ್ತು. ಭವಿಷ್ಯದಲ್ಲಿ ಈ ಸಮಸ್ಯೆ ಹೆಚ್ಚಲು ಸರ್ಕಾರದ ಸಾಲಮನ್ನಾ ನಿರ್ಧಾರಗಳು ನಾಂದಿ ಹಾಡುತ್ತವೆ ಎಂದು ಎಚ್ಚರಿಸಿದ್ದು ಕೂಡ ಸ್ವಾಗತಾರ್ಹ ವಿಚಾರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜನ್ ಅವರ ವಿಚಾರವನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸಬೇಕಾಗಿದೆ.

ವೋಟಿನ ಮೇಲೆ ಕಣ್ಣಿಟ್ಟು ಸಾಲ ಮನ್ನಾ ಮಾಡದೆ, ತೀರಾ ಕಷ್ಟದಲ್ಲಿರುವ ಸಾಲಗಾರರಿಗೆ ಬೇರೆ ರೀತಿಯ ಪರಿಹಾರ ಒದಗಿಸುವ ಚಿಂತನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಳಂಬ ಮಾಡದೆ ಮುಂದಾಗಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT