ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಂತರದ ಬದುಕು | ರಿಪೇರಿ ಮಾಡೋದೇಕೆ? ಹೊಸ ಆರ್ಥಿಕತೆ ರೂಪಿಸೋಣ ಬನ್ನಿ

ಉದ್ಯೋಗಿಗಳಲ್ಲ ಉದ್ಯಮಿಗಳಾಗಿ
Last Updated 9 ಮೇ 2020, 2:42 IST
ಅಕ್ಷರ ಗಾತ್ರ

ಕೊರೊನಾ ನಂತರದ ಜಗತ್ತು ಹೇಗಿರುತ್ತದೆ? ಹೇಗಿರಬೇಕು? ಸ್ಥಗಿತಗೊಂಡಿರುವ ಆರ್ಥಿಕತೆಯ ಚಕ್ರಕ್ಕೆ ಮರು ಚಾಲನೆ ನೀಡುವುದು ಹೇಗೆ? ನಿರುದ್ಯೋಗದ ಕರಿನೆರಳಿನಿಂದ ದೇಶವನ್ನು ಕಾಪಾಡುವುದು ಹೇಗೆ? ಇತ್ಯಾದಿ ಪ್ರಶ್ನೆಗಳು ಈಗ ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿವೆ. ಹಲವರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಂಡಿದ್ದಾರೆ. ಆದರೆ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ. ಮುಹಮ್ಮದ್ ಯೂನುಸ್ಅವರ ವಿಚಾರ ಈ ಪೈಕಿ ವಿಭಿನ್ನ ಮತ್ತು ವಿಶಿಷ್ಟ ಎನಿಸಿಕೊಳ್ಳುತ್ತದೆ.

‘ಉದ್ಯಮಶೀಲತೆ ಮನುಷ್ಯನ ಮೂಲ ಸ್ವಭಾವ’ ಎಂದು ದೃಢವಾಗಿ ಪ್ರತಿಪಾದಿಸುವ ಪ್ರೊ. ಮುಹಮ್ಮದ್ ಯೂನುಸ್, ‘ಇನ್ನೊಬ್ಬರ ಬಳಿ ಕೆಲಸ ಕೇಳುವುದು ಬಿಟ್ಟು, ಸ್ವತಃ ಸ್ವತಃ ಉದ್ಯಮಿಗಳಾಗಿ. ಪರಿಸರಕ್ಕೆ ಪೂರಕವಾದ, ಸಮಾಜಕ್ಕೆ ಅತ್ಯಗತ್ಯವಾದ ಉದ್ದಿಮೆಗಳನ್ನು ಸ್ಥಾಪಿಸಿ. ಸಂಪತ್ತು ಕೆಲವರ ಬಳಿಯಷ್ಟೇ ಕೇಂದ್ರೀಕೃತಗೊಳ್ಳುವುದನ್ನು ತಡೆಯಲು ಇಂಥ ಪ್ರಯತ್ನ ಅತ್ಯಗತ್ಯ. ಇದನ್ನು ಸಾಧ್ಯವಾಗಿಸಲು ಕೊರೊನಾ ಪಿಡುವು ಪೂರಕ ವಾತಾವರಣ ರೂಪಿಸಿಕೊಟ್ಟಿದೆ’ ಎಂದು ಈ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ.

ಸಮಾಜಕ್ಕೆ ಹಿತವಾಗುವ ಜೊತೆಗೆ ಪರಿಸರವನ್ನೂ ಕಾಪಾಡುವಮತ್ತು ಸಮಾಜದ ಬಹುತೇಕರನ್ನು ಒಳಗೊಳ್ಳುವ ಹೊಸ ಆರ್ಥಿಕತೆಯ ಪರಿಕಲ್ಪನೆಯನ್ನುವಿವರಿಸಿದ್ದಾರೆ. ಇದಕ್ಕಾಗಿ ಸರ್ಕಾರ, ದೊಡ್ಡದೊಡ್ಡ ಕಂಪನಿಗಳು, ಖಾಸಗಿ ವ್ಯಾಪಾರಿಗಳು ಏನೆಲ್ಲಾ ಮಾಡಬಹುದು ಎಂದು ಸಲಹೆಗಳನ್ನೂ ಕೊಟ್ಟಿದ್ದಾರೆ. ಈ ಕನಸು ಗ್ರಾಮ ಸ್ವರಾಜ್ಯ, ಸಹಕಾರ ತತ್ವಗಳನ್ನೂ ಬಹುಪಾಲು ಹೋಲುತ್ತದೆ.

‘ಕೊರೊನಾ ಪಿಡುಗಿನಿಂದ ಕೃಷಿ, ಕೃಷಿ ಮಾರುಕಟ್ಟೆ, ಕೈಗಾರಿಕೆಗಳು, ವಲಸೆ ಕಾರ್ಮಿಕರು, ಸರ್ಕಾರಿ ಆಡಳಿತ ಯಂತ್ರ ಕೆಲಸ ಮಾಡುವ ಪರಿ ಸೇರಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ವ್ಯವಸ್ಥೆಗಳ ಹಲವು ನ್ಯೂನತೆಗಳನ್ನು ತೆರೆದಿಟ್ಟಿದೆ’ ಎಂದು ಹಲವರು ಸುದೀರ್ಘ ವಿವರಣೆಗಳೊಂದಿಗೆ ವಿವರಿಸಿದ್ದಾರೆ. ಆದರೆ ಈ ಲೇಖನದ ಮೂಲಕ ನ್ಯೂನತೆಗಳನ್ನು ಮೀರುವಂಥ ವ್ಯವಸ್ಥೆ ಕಟ್ಟುವ ಸಾಧ್ಯತೆಗಳನ್ನು ಮುಂದಿಟ್ಟಿದ್ದಾರೆ.

ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಬಡ ಮಹಿಳೆಯರಿಗೆ ಸಾಲ ಸಿಗುವಂತೆ ಮಾಡಿದವರು ಅರ್ಥಶಾಸ್ತ್ರಜ್ಞ ಮೊಹಮದ್ ಯೂನಸ್. ‘ಸಾಲ ಪಡೆಯುವುದು ಮನುಷ್ಯನ ಮೂಲಭೂತ ಹಕ್ಕು, ಉದ್ಯಮಶೀಲತೆ ಮನುಷ್ಯನ ಮೂಲ ಸ್ವಭಾವ’ ಎಂದು ದೃಢವಾಗಿ ನಂಬಿದವರು ಅದರಂತೆಯೇ ಹಲವು ಯೋಜನೆಗಳನ್ನು ಜಾರಿ ಮಾಡಿ, ಯಶಸ್ವಿಯಾದವರು. ಅವರ ಸಾಧನೆಗೆ ನೊಬೆಲ್ ಪುರಸ್ಕಾರದ ಗೌರವವೂ ಸಿಕ್ಕಿದೆ.

ಪ್ರೊ. ಮುಹಮ್ಮದ್ ಯೂನುಸ್ ಅವರ ಮೂಲ ಲೇಖನದ ಪೂರ್ಣ ಪಠ್ಯ ಇಲ್ಲಿದೆ...

---

ಕೊರೊನಾ ವೈರಸ್ ಪಿಡುಗು ನಮಗೆ ಕಂಡುಕೇಳರಿಯದಂಥ ಅವಕಾಶವೊಂದನ್ನು ಒದಗಿಸಿದೆ. ಈಗ ನಾವು ಸರಿಯಾದ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ ಶೀಘ್ರಕಾರ್ಯತತ್ಪರರಾಗಬೇಕಿದೆ. ಸಂಕಷ್ಟ ಆರಂಭವಾಗುವ ಮೊದಲು ಇದ್ದಂಥ ಜಗತ್ತಿಗೆ ನಾವು ಮರಳಿ ಹೋಗಬೇಕೆ? ಅಥವಾ ನಮಗೆ ಎಂಥ ಆರ್ಥಿಕತೆ ಬೇಕು ಎಂದು ನಿರ್ಧರಿಸಿ ಅಂಥದ್ದನ್ನು ರೂಪಿಸಲು ಮುಂದಾಗಬೇಕೆ? ಆರ್ಥಿಕತೆಯ ಗಾಲಿಗಳು ಮತ್ತೆ ತಿರುಗಿದರು ಸಾಕು ಎಂಬ ಹತಾಶ ಮನಃಸ್ಥಿತಿಯಆಚೆಗೂ ನಾವೀಗ ಯೋಚಿಸಬೇಕಿದೆ.

ಕೊರೊನಾ ವೈರಸ್ ಹರಡುವ ಮೊದಲಿನ ಜಗತ್ತು ದೊಡ್ಡ ಸವಾಲುಗಳನ್ನು ಎದುರಿಸುತ್ತಿತ್ತು. ನಮ್ಮ ಬದುಕಿನ ರೀತಿ ಬದಲಿಸಿಕೊಳ್ಳದಿದ್ದರೆ ನಾವು ಎಂಥ ಬೆಲೆ ತೆರಬೇಕಾಗುತ್ತದೆ ಎಂಬ ಚಿಂತೆಯೂ ಆರಂಭವಾಗಿತ್ತು. ಪರಿಸರ ಮಾಲಿನ್ಯದಿಂದಾಗಿ ಉಂಟಾಗಿದ್ದಹವಾಮಾನ ವೈಪರಿತ್ಯವುಭೂಮಿ ಇನ್ನೆಷ್ಟು ದಿನಗಳುಸಹಿಸಿಕೊಳ್ಳಬಹುದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಮಾನವಕುಲದಿನಗಳನ್ನು ಎಣಿಸುತ್ತಿತ್ತು. ಕೃತಕ ಬುದ್ಧಿಮತ್ತೆಯನ್ನು ಆಧಾರವಾಗಿಸಿಕೊಂಡ ಹೊಸ ಜಗತ್ತು ಕಾರ್ಮಿಕರ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿತ್ತು. ಕೆಲವೇ ಕೆಲವರ ಬಳಿ ಸಂಪತ್ತು ಶೇಖರವಾಗುತ್ತಿತ್ತು. ಆದಾಯದ ಅಸಮಾನತೆಯು ಅಪಾಯಕಾರಿ ಮಟ್ಟ ಮುಟ್ಟಿತ್ತು.

ಇದೇ ನಮಗೆ ಸಿಗುವ ಕೊನೆಯ ದಶಕ, ಇದೇ ಕೊನೆಯ ಅವಕಾಶ ಎಂದೆಲ್ಲಾ ಕೊರೊನಾ ಪಿಡುಗು ನಮ್ಮನ್ನು ಆವರಿಸಿಕೊಳ್ಳುವ ಮೊದಲೂ ನಾವು ಪರಸ್ಪರರನ್ನು ಎಚ್ಚರಿಸಿಕೊಳ್ಳುತ್ತಿದ್ದೆವು. ಆದರೆ ಆಗ ನಾವು ಏನೆಲ್ಲಾ ಮಾಡಿದರೂ ಅದು ಭೂಮಿಯನ್ನು ಉಳಿಸುವಷ್ಟು ದೊಡ್ಡ ಮಟ್ಟದ ಫಲ ಕೊಡುತ್ತಿರಲಿಲ್ಲ.

ಈಗ ಹೇಳಿ ನಾವು ಅದೇ ಹಳೆಯ ಪ್ರಪಂಚಕ್ಕೆ ಹೋಗಬೇಕೆ? ಅಥವಾ ಹೊಸದನ್ನು ರೂಪಿಸಿಕೊಳ್ಳೋಣವೇ? ಆಯ್ಕೆ ನಮ್ಮೆದುರು ಇದೆ.

ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕಿನಪ್ರೊ. ಮುಹಮ್ಮದ್ ಯೂನುಸ್ (ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌)

ಹೊಸ ಆರಂಭ

ಜಗತ್ತಿನ ಲೆಕ್ಕಾಚಾರಗಳು ಮತ್ತು ಸಂದರ್ಭಗಳನ್ನೇ ಕೊರೊನಾ ಪಿಡುಗು ಬದಲಿಸಿದೆ. ಈ ಹಿಂದೆ ಎಂದೂ ಅಸ್ತಿತ್ವದಲ್ಲಿ ಇರದ ಸಾಕಷ್ಟು ಹೊಸ ಸಾಧ್ಯತೆಗಳನ್ನು ಅದು ನಮ್ಮೆದುರು ಬಿಚ್ಚಿಟ್ಟಿದೆ. ಕೇವಲ ಹಿಂದಿನಿಂದ ಹರಿದು ಬಂದಿದ್ದು ಮಾತ್ರವೇ ಜ್ಞಾನವಲ್ಲ. ನಮ್ಮ ಅನುಭವ ಮತ್ತು ಗ್ರಹಿಕೆಯಿಂದ ನಾವು ದಕ್ಕಿಸಿಕೊಳ್ಳುವಂಥದ್ದು ಸಹ ಜ್ಞಾನವೇ ಎನ್ನುವ ‘ತಬಲಾ ರಸ’ದ ಸಿದ್ಧಾಂತ ಮತ್ತೆ ಮುಂಚೂಣಿಗೆ ಬಂದಿದೆ. ಜಗತ್ತು ಒಂದು ಖಾಲಿ ಪುಸ್ತಕವಾಗಿ ನಮ್ಮೆದು ಹರಡಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ನಮಗೆ ಈ ಹಿಂದೆ ಎಂದೂ ಸಿಗದಂಥ ಅವಕಾಶಗಳು ಸಿಕ್ಕಿವೆ. ಈಗ ನಾವು ನಮಗೆ ಬೇಕಾದ ಹಾದಿಯಲ್ಲಿ ಮುನ್ನಡೆಯಬಹುದು.

ಆರ್ಥಿಕ ಚಟುವಟಿಕೆಗಳಿಗೆ ಮತ್ತೆ ಚಾಲನೆ ನೀಡುವ ಮೊದಲು ಎಂಥ ಅರ್ಥ ವ್ಯವಸ್ಥೆ ಬೇಕು ಎಂಬ ಬಗ್ಗೆ ನಮ್ಮಲ್ಲಿ ಒಮ್ಮತ ಮೂಡಬೇಕು. ಅರ್ಥ ವ್ಯವಸ್ಥೆ ಅಥವಾ ನಾವು ರೂಪಿಸಿಕೊಳ್ಳುವ ಯಾವುದೇ ವ್ಯವಸ್ಥೆಯು ನಾವು ಇಷ್ಟಪಟ್ಟ ಗುರಿಯ ಕಡೆಗೆ ನಮ್ಮನ್ನು ಕೊಂಡೊಯ್ಯುವ ಮಾರ್ಗವಷ್ಟೇ ಆಗಿರುತ್ತದೆ ಎಂದು ಸ್ಪಷ್ಟವಾಗಿ ಮೊದಲು ಅರ್ಥ ಮಾಡಿಕೊಳ್ಳೋಣ. ಅದು ಯಾವುದೋ ಅತಿಮಾನುಷ ಶಕ್ತಿಯೊಂದು ನಮಗೆ ಶಿಕ್ಷೆ ಕೊಡಲು ಹೆಣೆದ ಉರುಳಿನಂತೆ ಆಗಬಾರದು. ಈ ಸಾಧನ ರೂಪಿಸಿದವರು ನಾವು ಎಂಬುದನ್ನು ಎಂದಿಗೂ ಮರೆಯಬಾರದು. ಸಾಮುದಾಯಿಕ ಮಟ್ಟದಲ್ಲಿ ಎಲ್ಲರಿಗೂ ಖುಷಿಯ ಜೀವನ ದಕ್ಕುವವರೆಗೆ ನಾವು ಆ ವ್ಯವಸ್ಥೆಯನ್ನು ಬದಲಿಸುತ್ತಿರಬೇಕು, ಮತ್ತೆಮತ್ತೆ ರೂಪಿಸುತ್ತಿರಬೇಕು.

ನಾವು ಮುಟ್ಟಬೇಕು ಎಂದುಕೊಂಡಿದ್ದ ಸಾಮುದಾಯಿಕ ಖುಷಿಯ ಗುರಿಯೆಡೆಗೆ ಕರೆದೊಯ್ಯುವಲ್ಲಿ ನಾವು ರೂಪಿಸಿಕೊಂಡ ಆರ್ಥಿಕ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲ ಎಂದಾದರೆ ತಕ್ಷಣ ಅದನ್ನು ಅರ್ಥ ಮಾಡಿಕೊಂಡು ತಪ್ಪುಗಳನ್ನು ಗುರುತಿಸಿ, ಸರಿಪಡಿಸಬೇಕು. ‘ಕ್ಷಮಿಸಿ, ಯಾವುದೋ ಒಂದು ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ಸಮಸ್ಯೆಯಿಂದಾಗಿ ನಮಗೆ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ’ ಎಂದು ಎಂದಿಗೂ ವಿನಾಯ್ತಿ ಕೇಳಬಾರದು.

ಅಪಾಯಕಾರಿ ಕಾರ್ಬನ್ ಹೊರಸೂಸುವಿಕೆಯಿಲ್ಲದಂಥ ಜಗತ್ತು ಸೃಷ್ಟಿಸಬೇಕು ಎಂದಾಗಿದ್ದರೆ ಅದಕ್ಕೆ ಪೂರಕವಾದ ಸರಿಯಾದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳನ್ನು ಮೊದಲು ತಯಾರಿಸಬೇಕು. ನಿರುದ್ಯೋಗ ಸಮಸ್ಯೆ ಇಲ್ಲದಂಥ ಜಗತ್ತು ಸೃಷ್ಟಿಸಬೇಕು ಎಂದಾಗಿದ್ದರೆ ಅದಕ್ಕೂ ಅಷ್ಟೇ, ಅಂಥದ್ದೇ ಪೂರಕ ಪ್ರಯತ್ನಗಳು ಆಗಬೇಕು. ಸರಿಯಾದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ರೂಪಿಸುವುದು ಎಲ್ಲಕ್ಕೂ ಅಗತ್ಯ. ಅಂಥ ಶಕ್ತಿ ನಮ್ಮಲ್ಲಿ ಇದೆ. ಮಾವನ ಕುಲ ಯಾವುದಾದರೂ ಒಂದು ಗುರಿಯ ಹಿಂದೆ ಹೊರಟರೆ ಅದನ್ನು ಸಾಧಿಸಿಯೇ ತೀರುತ್ತದೆ.

ಈಗ ಕೊರೊನಾ ವೈರಸ್‌ ಸಂಕಷ್ಟ ನಮಗೆ ವ್ಯವಸ್ಥೆಯನ್ನು ಹೊಸದಾಗಿ ಕಟ್ಟಲು ಅವಕಾಶ ಮಾಡಿಕೊಟ್ಟಿದೆ. ನಮ್ಮ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳನ್ನು ಪೂರಕವಾಗಿ ರೂಪಿಸಲು ಇದು ಅತ್ಯುತ್ತಮ ಸಂದರ್ಭ.

ಯಳಂದೂರು ತಾಲ್ಲೂಕಿನಲ್ಲಿ ಆಹಾರದ ಪ್ಯಾಕಿಂಗ್ ಕಾಯಕದಲ್ಲಿ ತೊಡಗಿರುವ ಮಹಿಳೆಯರು

ಸಾಮಾಜಿಕ ಮತ್ತು ಪಾರಿಸರಿಕ ಪ್ರಜ್ಞೆ

ಜಾಗತಿಕ ಮಟ್ಟದಲ್ಲಿ ಒಂದು ತೆಗೆದುಕೊಳ್ಳುವ ಒಂದು ಸರ್ವಾನುಮತದ ನಿರ್ಧಾರವು ನಮಗೆ ದೊಡ್ಡಮಟ್ಟದಲ್ಲಿ ಸಹಾಯಕ್ಕೆ ಬರುತ್ತದೆ. ನಾವು ಎಲ್ಲಿಂದ ಬಂದೆವೋ ಮತ್ತೆ ಅಲ್ಲಿಗೇಹೋಗಲು ಇಷ್ಟಪಡುವುದಿಲ್ಲ ಎಂಬ ಸ್ಪಷ್ಟ ಸೂಚನೆಯೂ ಇಂಥ ನಿರ್ಧಾರದಲ್ಲಿ ಸಿಗಬೇಕು. ಆರ್ಥಿಕತೆಯ ಪುನರುತ್ಥಾನದ ಹೆಸರಿನಲ್ಲಿಯೇ ಅದೇ ಕುದಿಯುವ ಬಾಣಲೆಗೆ ನಾವು ಮತ್ತೆ ಬೀಳಬಾರದು.

ನಾವು ಇದನ್ನು (ಅರ್ಥ ವ್ಯವಸ್ಥೆಯ) ‘ಮರು ಚಾಲನೆ’ ಕಾರ್ಯಕ್ರಮ ಎಂದೂ ಕರೆಯಬಾರದು. ನಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿಕೊಳ್ಳಲು ಇದನ್ನು (ಅರ್ಥ ವ್ಯವಸ್ಥೆಯನ್ನು)‘ಮರು ರೂಪಿಸುವ’ ಕಾರ್ಯಕ್ರಮ ಎಂದು ಕರೆಯಬೇಕು. ಈ ಹೊಸ ವ್ಯವಸ್ಥೆಯಲ್ಲಿಯೂ ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ಮುಂಚೂಣಿಯಲ್ಲಿಯೇ ಇರುತ್ತವೆ(ಆದರೆ ಲಾಭಕೋರತನ ಮತ್ತು ಒಬ್ಬರ ಬಳಿಯೇ ಸಂಪತ್ತಿನ ಕೇಂದ್ರೀಕರಣಕ್ಕೆ ಅವಕಾಶ ಇರುವುದಿಲ್ಲ).ಕೊರೊನಾ ವೈರಸ್‌ ಪಿಡುಗಿನ ನಂತರದ ಕಾಲಘಟ್ಟಕ್ಕೆ ಸಮಾಜವನ್ನು ಸಜ್ಜುಗೊಳಿಸುವ ಎಲ್ಲ ಪ್ರಯತ್ನಗಳಲ್ಲಿಯೂ ಮತ್ತು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಲ್ಲಿಯೂ ಸಾಮಾಜಿಕ ಮತ್ತು ಪಾರಿಸರಿಕ ವಿಚಾರಗಳು ಕೇಂದ್ರ ಸ್ಥಾನದಲ್ಲಿರಬೇಕು.

ಇತರೆಲ್ಲಾ ಆಯ್ಕೆಗಳಿಗೆ ಹೋಲಿಸಿದರೆ ಸಮಾಜ ಮತ್ತು ಪರಿಸರಕ್ಕೆ ಹೆಚ್ಚು ಲಾಭದಾಯಕ ಎನ್ನಿಸಿದಾಗ ಮಾತ್ರ ಸರ್ಕಾರಗಳು ‘ಮನ್ನಾ’ ಆಯ್ಕೆಗಳನ್ನು ಬಳಸಬೇಕು. ಇಲ್ಲದಿದ್ದರೆ ಯಾರಿಗೂ ಒಂದೇ ಒಂದು ರೂಪಾಯಿ ಮನ್ನಾ ಮಾಡಬಾರದು. ಮರು ರೂಪಿಸಲು ತೆಗೆದುಕೊಳ್ಳುವ ಎಲ್ಲ ಸಾಮಾಜಿಕ, ಪಾರಿಸರಿಕ ಮತ್ತು ಆರ್ಥಿಕ ನಿರ್ಧಾರಗಳ ಹಿಂದೆ ಎಲ್ಲರನ್ನೂ ಒಳಗೊಳ್ಳುವಂಥ, ಬಹುಜನರಿಗೆ ಸುಖ ಮತ್ತು ಹಿತವಾಗುವ ಆರ್ಥಿಕತೆಯನ್ನು ಪ್ರಜ್ಞಾಪೂರ್ವಕವಾಗಿಕಟ್ಟುವ ಆಲೋಚನೆಯಿರಬೇಕು.

ಇದೇ ಸಕಾಲ

ಸಮಾಜದ ಒಳಿತನ್ನೇ ದೃಷ್ಟಿಯಲ್ಲಿರಿಸಿಕೊಂಡು ‘ಮರು ರೂಪಿಸುವ’ ಪ್ಯಾಕೇಜ್‌ಗಳನ್ನು ನಾವು ಯೋಜಿಸಬೇಕು. ಯೋಜನೆ ರೂಪಿಸುವ ಕೆಲಸವನ್ನು ಈಗಲೇ, ಅಂದರೆ ಸಮಸ್ಯೆಯ ಆಳದಲ್ಲಿ ಇರುವಾಗಲೇ ಆರಂಭಿಸಬೇಕು. ಒಮ್ಮೆ ಸಮಾಜ ಸಂಕಷ್ಟ ಸ್ಥಿತಿಯಿಂದ ಹೊರಗೆ ಬಂದರೆ ಹಳೆಯ ಆಲೋಚನೆಗಳು ಮತ್ತು ಉದಾಹರಣೆಗಳು ನಮ್ಮೆದುರು ಕುಣಿಯಲು ಆರಂಭಿಸುತ್ತವೆ. ಪ್ರಬಲ ಯೋಜನೆಗಳನ್ನು ‘ಈವರೆಗೆ ಯಾರೂ ಅನುಷ್ಠಾನಕ್ಕೆ ತಂದಿಲ್ಲ’ ಎಂದು ನೆಪವೊಡ್ಡಿ ತಿರಸ್ಕರಿಸುವ ಅಪಾಯವೂ ಇರುತ್ತದೆ.

ಒಲಿಂಪಿಕ್ ಕ್ರೀಡಾಕೂಟವನ್ನು ಸಮುದಾಯಗಳಿಗೆ ಹಣ ಗಳಿಕೆ ಮಾರ್ಗವಾಗಿ (ಸಾಮಾಜಿಕ ಉದ್ದಿಮೆ) ರೂಪಿಸಲು ಸಾಧ್ಯವಿದೆ ಎಂಬ ಪ್ರಸ್ತಾವ ಮುಂದಿಟ್ಟಾಗಲೂ ಹಳೆಯ ಉದಾಹರಣೆಗಳನ್ನು ಮುಂದಿಟ್ಟು ವಿರೋಧಿಸಲಾಯಿತು. ಇದೀಗ 2024ರ ಪ್ಯಾರೀಸ್ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಹೆಚ್ಚಿನ ಉತ್ಸಾಹದೊಂದಿಗೆ ಅದೇ ಮಾದರಿಯಲ್ಲಿ ರೂಪಿಸಲಾಗುತ್ತಿದೆ. ನೂಕುನುಗ್ಗಲು ಶುರುವಾಗುವ ಮೊದಲೇ ನಾವು ಸಿದ್ಧರಾಗಬೇಕು. ಹೀಗಾಗಿಯೇ ನಾನು ಇದೇ ಸಕಾಲ ಎಂದು ಹೇಳುತ್ತಿರುವುದು.

ಪೇಠಾ ತಯಾರಿಸುತ್ತಿರುವ ಕುಂಟುವಳ್ಳಿ ವಿಶ್ವನಾಥ್

ಸಾಮಾಜಿಕ ಉದ್ದಿಮೆ

ಈಗ ನಾವು ರೂಪಿಸುತ್ತಿರುವ ಸಮಗ್ರ ಮರು ನಿರ್ಮಾಣ ಯೋಜನೆಯಲ್ಲಿ ‘ಸಾಮಾಜಿಕ ಉದ್ದಿಮೆ’ಗೆ ಅಂದರೆ ಸಮುದಾಯಕ್ಕೆ ಹಣಗಳಿಕೆ ಮಾರ್ಗಗಳಿಗೆ ಹೆಚ್ಚು ಅವಕಾಶ ಇರಬೇಕು. ಈ ಮಾದರಿಯಲ್ಲಿ ಹೂಡಿಕೆದಾರರಿಗೆ ತಮ್ಮ ಬಂಡವಾಳ ಹಿಂಪಡೆಯಲು ಅವಕಾಶ ಇರುತ್ತದೆ. ಆದರೆ ಯಾರಿಗೂ ವೈಯಕ್ತಿಕವಾಗಿ ವಿಪರೀತ ಲಾಭ ಗಳಿಸಲು ಅವಕಾಶ ಇರುವುದಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಲು, ಜನರಿಗೆ ಬೇಕಾದಂಥ ವ್ಯವಸ್ಥೆ ರೂಪುಗೊಳ್ಳಲು ಈ ಮಾದರಿ ಹೆಚ್ಚು ಗಮನ ಕೊಡುತ್ತದೆ. ವ್ಯಾಪಾರದಿಂದ ಗಳಿಸಿದ ಲಾಭವನ್ನೂ ಅದೇ ವ್ಯಾಪಾರವನ್ನು ಇನ್ನಷ್ಟು ಬೆಳೆಸಲು ಮರು ಹೂಡಿಕೆ ಮಾಡಲಾಗುತ್ತದೆ.

ಈಗ ಲಭ್ಯವಿರುವ ಮರು ನಿರ್ಮಾಣ ಅವಕಾಶಗಳನ್ನು ಬಳಸಿಕೊಂಡು ಸರ್ಕಾರಗಳು ಹಲವು ಕ್ಷೇತ್ರಗಳಲ್ಲಿ ಸಾಮಾಜಿಕ ವ್ಯಾಪಾರಗಳನ್ನು ಪ್ರೋತ್ಸಾಹಿಸಲು, ಆದ್ಯತೆ ಕೊಡಲು ಸಾಧ್ಯವಿದೆ. ಹಾಗೆಂದು ಅವಶ್ಯವಿರುವ ಎಲ್ಲಡೆಯೂ ಸ್ವಯಂ ಪ್ರೇರಣೆಯಿಂದ ಇಂಥ ಸಾಮಾಜಿಕ ವ್ಯಾಪಾರಗಳು ಕಾಣಿಸಿಕೊಳ್ಳಲಿ ಎಂದು ಸರ್ಕಾರಗಳು ಕಾಯಬಾರದು.

ಸಾಮಾಜಿಕ ವ್ಯಾಪಾರಗಳು, ಉದ್ದಿಮೆಗಳು ತಕ್ಷಣಕ್ಕೆ ಕಾರ್ಯಸಾಧುವಲ್ಲ ಎನಿಸುವ ಕ್ಷೇತ್ರಗಳಲ್ಲಿ ಸರ್ಕಾರವೇ ಜವಾಬ್ದಾರಿ ಹೊತ್ತುಕೊಳ್ಳಬೇಕು. ಸಾಂಪ್ರದಾಯಿಕ ಸಮಾಜ ಕಲ್ಯಾಣ ಯೋಜನೆಗಳ ಮೂಲಕ ಅಸಹಾಯಕರು, ನಿರುದ್ಯೋಗಿಗಳು, ರೋಗಿಗಳ ನೆರವಿಗೆ ಧಾವಿಸಬೇಕು. ಅತ್ಯಗತ್ಯ ಸೇವೆಗಳನ್ನು ನಿರ್ವಹಿಸಬೇಕು. ಇಂಥ ಅತ್ಯಗತ್ಯ ಕ್ಷೇತ್ರಗಳಲ್ಲಿಯೂ ಮುಂದೊಂದು ದಿನ ಸಾಮಾಜಿಕ ಉದ್ದಿಮೆಗಳು ಕಾರ್ಯಾರಂಭ ಮಾಡಬಹುದು. ಆದರೆ ಅಲ್ಲಿಯವರೆಗೆ ಸರ್ಕಾರವೇ ಜವಾಬ್ದಾರಿ ನಿರ್ವಹಿಸಬೇಕು.

ಸಾಮಾಜಿಕ ವ್ಯಾಪಾರಕ್ಕೆ ಹೊಸ ವೇಗ ದೊರೆಯುವಂತೆ ಮಾಡಲು ಸರ್ಕಾರಗಳು ಮತ್ತು ಪ್ರಜ್ಞಾವಂತರು ‘ಸಾಮಾಜಿಕ ವ್ಯಾಪಾರ ಆರಂಭಿಕ ಹೂಡಿಕೆ ನಿಧಿ’ಯನ್ನು ಸ್ಥಾಪಿಸಬೇಕು. ಕೇಂದ್ರದ ಮಟ್ಟದಲ್ಲಿ ಮತ್ತು ಸ್ಥಳೀಯವಾಗಿಯೂ ಇಂಥ ನಿಧಿಗಳು ಇರಬೇಕು. ಖಾಸಗಿ ಉದ್ಯಮಿಗಳು, ಪ್ರತಿಷ್ಠಾನಗಳು, ಹಣಕಾಸು ಸಂಸ್ಥೆಗಳು, ಹೂಡಿಕೆ ನಿಧಿಗಳು ಇಂಥ ಆರಂಭಿಕೆ ಹೂಡಿಕೆ ನಿಧಿಗೆ ಬಂಡವಾಳ ಒದಗಿಸುವುದನ್ನು ಉತ್ತೇಜಿಸಬೇಕು.

ಸಾಂಪ್ರದಾಯಿಕ ಸ್ವರೂಪದಲ್ಲಿ ವ್ಯವಹಾರ ಮಾಡುತ್ತಿರುವ ಕಂಪನಿಗಳು ಸಾಮಾಜಿಕ ಉದ್ದಿಮೆಗಳಾಗಿ ಪರಿವರ್ತನೆಯಾಗಲು ಸರ್ಕಾರಗಳು ಉತ್ತೇಜನ ನೀಡಬೇಕು. ಕನಿಷ್ಠ ಪಕ್ಷ ಅವು ಸಾಮಾಜಿಕ ಉದ್ದಿಮೆಗಳಲ್ಲಿ ಜಂಟಿಯಾಗಿ ಬಂಡವಾಳ ಹೂಡುವ ಕಂಪನಿಗಳಾಗಿಯಾದರೂ ಕೆಲಸ ಮಾಡುವ ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳಬೇಕು.

ಮರು ನಿರ್ಮಾಣ ಕಾರ್ಯಕ್ರಮದಡಿ ಸರ್ಕಾರಗಳು ಸಾಮಾಜಿಕ ಉದ್ದಿಮೆಗಳು ಕಂಪನಿಗಳನ್ನು ಖರೀದಿಸುವುದಕ್ಕೆ, ಕಂಪನಿಗಳೊಂದಿಗೆ ಸಹಯೋಗದ ಒಪ್ಪಂದ ಮಾಡಿಕೊಳ್ಳುವುದಕ್ಕೆ ಆರ್ಥಿಕ ನೆರವು ಒದಗಿಸಬೇಕು. ಇಂಥ ಸಾಮಾಜಿಕ ಉದ್ದಿಮೆಗಳು ಷೇರುಪೇಟೆಯಿಂದ ಬಂಡವಾಳ ಪಡೆದುಕೊಳ್ಳಲು ಮತ್ತು ಹೂಡಿಕೆ ಮಾಡಲು ರಿಸರ್ವ್‌ ಬ್ಯಾಂಕ್ ಅವಕಾಶ ನೀಡಬೇಕು.

ಇಂಥ ಪ್ರಕ್ರಿಯೆ ಒಮ್ಮೆ ಅರಂಭವಾದರೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಸರ್ಕಾರಗಳು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸಾಮಾಜಿಕ ಉದ್ದಿಮೆಗಳು ಆರಂಭವಾಗಲು ಪ್ರೋತ್ಸಾಹ ನೀಡಬೇಕು.

ಸೌರಶಕ್ತಿ ಚಾಲಿತ ಡ್ರೈಯರ್‌ ಚಿತ್ರ: ಶ್ರೀ ಪಡ್ರೆ

ಸಾಮಾಜಿಕ ಉದ್ದಿಮೆಗಳ ಹೂಡಿಕೆದಾರರು

ಸಾಮಾಜಿಕ ಉದ್ದಿಮೆಗಳ ಹೂಡಿಕೆದಾರರು ಯಾರು ಮತ್ತು ಅವರನ್ನು ಎಲ್ಲಿ ಹುಡುಕುವುದು?

ಅವರು ಎಲ್ಲೆಡೆ ಇದ್ದಾರೆ. ಈಗ ಚಾಲ್ತಿಯಲ್ಲಿರುವ ಆರ್ಥಶಾಸ್ತ್ರದ ಪಠ್ಯಗಳಿಂದ ಅವರನ್ನು ಗುರುತಿಸಲು ಆಗುವುದಿಲ್ಲ. ಈಚೆಗಷ್ಟೇ ಅರ್ಥಶಾಸ್ತ್ರದ ಕೋರ್ಸ್‌ಗಳು ಸಾಮಾಜಿಕ ಉದ್ದಿಮೆ, ಪರಿಣಾಮ ಕೇಂದ್ರಿತ ಹೂಡಿಕೆ, ಸರ್ಕಾರೇತರ ಸಂಸ್ಥೆಗಳ ಬಗ್ಗೆ ಹೇಳಿಕೊಡಲು ಶುರು ಮಾಡಿವೆ. ಗ್ರಾಮೀಣ ಬ್ಯಾಂಕ್ ಮತ್ತು ಕಿರು ಸಾಲಕ್ಕೆ ವಿಶ್ವದ ಮನ್ನಣೆ ಸಿಕ್ಕ ನಂತರವೇ ಇಂಥ ಬೆಳವಣಿಗೆಗಳು ಆರಂಭವಾದವು ಎಂಬುದನ್ನು ಉಲ್ಲೇಖಿಸಲೇಬೇಕಿದೆ.

ಲಾಭ ಹೆಚ್ಚಿಸುವ ವಿಜ್ಞಾನವಾಗಿರುವವರೆಗೆ ಮರು ನಿರ್ಮಾಣ ಪ್ರಕ್ರಿಯೆಯಲ್ಲಿ ಅರ್ಥಶಾಸ್ತ್ರದ ಚಾಲ್ತಿಯಲ್ಲಿರುವ ನಿಯಮಗಳಿಂದ ಹೆಚ್ಚು ಮಾರ್ಗದರ್ಶನ ಸಿಗುವುದಿಲ್ಲ. ದೇಶದ ಒಟ್ಟಾರೆ ಆರ್ಥಿಕತೆಯಲ್ಲಿ ಸಾಮಾಜಿಕ ಉದ್ದಿಮೆಗೆ ಮುಖ್ಯ ಸ್ಥಾನ ಸಿಗಬೇಕು, ಸಮಾಜ ಮತ್ತು ಪರಿಸರ ಪ್ರಜ್ಞೆಯೇ ಮರು ನಿರ್ಮಾಣಕ್ಕೆ ಆಧಾರವಾಗಿರಬೇಕು.

ಆರ್ಥಿಕತೆಯಲ್ಲಿ ಸಾಮಾಜಿಕ ಉದ್ದಿಮೆಗಳು ಪ್ರಧಾನ ಪಾತ್ರ ವಹಿಸಲು ಆರಂಭಿಸಿದ ನಂತರ ಅದರ ಯಶಸ್ಸು ನಮಗೆ ಅರಿವಾಗುತ್ತದೆ. ಉದ್ಯಮಿಗಳ ಸಂಖ್ಯೆಯಲ್ಲಿ ಏರಿಕೆ ಕಾಣಿಸುತ್ತದೆ. ಆಗ ಅದೇ ಉದ್ಯಮಿಗಳು ಎರಡೂ ಬಗೆಯ (ವೈಯಕ್ತಿಕ ಮತ್ತು ಸಾಮಾಜಿಕ) ಉದ್ದಿಮೆಗಳನ್ನು ಮುನ್ನಡೆಸುತ್ತಾರೆ. ಇದು ಸಾಮಾಜಿಕ ಮತ್ತು ಪಾರಿಸರಿಕ ಪ್ರಜ್ಞೆ ಆಧರಿಸಿದ ಆರ್ಥಿಕತೆಯೊಂದು ಆರಂಭವಾಗುವುದರ ಮುನ್ಸೂಚನೆಯಾಗಿರುತ್ತದೆ.

ಸರ್ಕಾರಗಳ ನೀತಿಗಳು ಸಾಮಾಜಿಕ ಉದ್ದಿಮೆಗಳನ್ನು ಗುರುತಿಸಲು, ಪ್ರೋತ್ಸಾಹಿಸಲು ಶುರು ಮಾಡಿದರೆ ಈ ಐತಿಹಾಸಿಕ ಸಂದರ್ಭವನ್ನು ಗುರುತಿಸಿ, ಅದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಹೂಡಿಕೆದಾರರು ಮುಂದೆ ಬರುತ್ತಾರೆ. ಸಾಮಾಜಿಕ ಉದ್ಯಮಿಗಳನ್ನು ಸಣ್ಣಮಟ್ಟದ ಸಮಾಜ ಸೇವಕರು ಎಂದು ನಾವು ತಿಳಿದುಕೊಳ್ಳಬಾರದು. ಇದೊಂದು ಜಾಗತಿಕ ಮಟ್ಟದ ವ್ಯವಸ್ಥೆಯಾಗಿದೆ. ಇದರಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಉದ್ದಿಮೆಗಳನ್ನು ನಿರ್ವಹಿಸಿದ ಅನುಭವವಿರುವ ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ಸಾಮಾಜಿಕ ವ್ಯಾಪಾರ ನಿಧಿಗಳು, ಹಲವು ಬುದ್ಧಿವಂತ ಸಿಇಒಗಳು, ಕಾರ್ಪೊರೇಟ್ ಸಂಸ್ಥೆಗಳು, ಪ್ರತಿಷ್ಠಾನಗಳು, ಟ್ರಸ್ಟ್‌ಗಳು ಅದರಭಾಗವಾಗಿರುತ್ತಾರೆ.

ಒಮ್ಮೆ ಈ ಪರಿಕಲ್ಪನೆ ಮತ್ತು ಪ್ರಯತ್ನಗಳು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದರೆ ವೈಯಕ್ತಿಕ ಲಾಭವನ್ನೇ ದೃಷ್ಟಿಯಾಗಿರಿಸಿಕೊಂಡ ಹಲವು ಉದ್ಯಮಿಗಳೂ ಅದರಲ್ಲಿ ಸಕ್ರಿಯ ಪಾತ್ರ ನಿರ್ವಹಿಸಲುಮುಂದೆ ಬರುತ್ತಾರೆ. ತಮ್ಮಲ್ಲಿರುವ ಈವರೆಗೂ ಬೆಳಕಿಗೆ ಬರದ ವಿಚಾರಗಳನ್ನು ಅನುಷ್ಠಾನಕ್ಕೆ ತಂದು ಸಂಕಷ್ಟ ಸಮಯದಲ್ಲಿ ಸಮಾಜಕ್ಕೆ ನೆರವಾಗುತ್ತಾರೆ.

ಔಷಧ ಸಿಂಪಡಿಸುವ ಡ್ರೋಣ್

ಜನರು ಜನ್ಮತಃ ಉದ್ಯಮಿಗಳು, ಉದ್ಯೋಗಾಕಾಂಕ್ಷಿಗಳಲ್ಲ...

ಮರು ನಿರ್ಮಾಣ ಚಟುವಟಿಕೆಗಳು ಸರ್ಕಾರ ಮತ್ತು ಜನರ ನಡುವೆ ಇರುವ ಸಾಂಪ್ರದಾಯಿಕ ವಿಭಜನೆಯನ್ನೂ ಮುರಿಯಬೇಕು.

ಜನರು ಕೆಲಸ ಮಾಡಿ ತಮ್ಮ ಕುಟುಂಬಗಳನ್ನು ಪೋಷಿಸಬೇಕು, ಸರ್ಕಾರಕ್ಕ ತೆರಿಗೆ ಕಟ್ಟಬೇಕು. ಸರ್ಕಾರಗಳು ಸಮುದಾಯಿಕ ಹೊಣೆಗಾರಿಕೆಯಾದ ಹಮಾಮಾನ ಬದಲಾವಣೆ, ಉದ್ಯೋಗ, ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನಂಥ ಕ್ಷೇತ್ರಗಳ ಕಡೆಗೆ ಗಮನ ಕೊಡಬೇಕು ಎಂಬುದು ಪ್ರಸ್ತುತ ಚಾಲ್ತಿಯಲ್ಲಿರುವ ವ್ಯವಸ್ಥೆಯ ಸಿದ್ಧಾಂತ. ಸಾಮುದಾಯಿಕ ಹೊಣೆಗಾರಿಕೆಯಲ್ಲಿ ಸರ್ಕಾರೇತರ ಸಂಸ್ಥೆಗಳೂ ಅಲ್ಪಸ್ವಲ್ಪ ಜವಾಬ್ದಾರಿ ಹೊತ್ತುಕೊಳ್ಳುತ್ತಿವೆಯಾದರೂ ಅದರ ಪ್ರಮಾಣ ಕಡಿಮೆ.

ಮರು ನಿರ್ಮಾಣ ಯೋಜನೆಗಳು ಎಲ್ಲ ಜನರೂ ಮುಂದೆ ಬಂದು ಸಾಮಾಜಿಕ ಉದ್ದಿಮೆಗಳ ಮೂಲಕ ತಮ್ಮ ಪ್ರತಿಭೆ ತೋರಿಸಲು ಅವಕಾಶ ಕಲ್ಪಿಸಿಕೊಡಬೇಕು. ಈ ಪ್ರಯತ್ನದಲ್ಲಿ ಎಷ್ಟು ಮೊತ್ತದ ಹಣ ಚಲಾವಣೆಯಾಗುತ್ತದೆ ಎನ್ನುವುದಕ್ಕಿಂತ ಎಷ್ಟು ಜನರು ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ ಎನ್ನುವುದನ್ನು ಆಧರಿಸಿದೆ. ಇಂಥ ಸಣ್ಣಸಣ್ಣ ಪ್ರಯತ್ನಗಳ ಹೆಚ್ಚಿನ ಸಂಖ್ಯೆಯಲ್ಲಿ ಅರಂಭವಾದಾಗ ಅದು ದೊಡ್ಡಮಟ್ಟದ ರಾಷ್ಟ್ರೀಯ ಕಾರ್ಯವೇ ಆಗುತ್ತದೆ.

ಆರ್ಥಿಕತೆ ಕುಸಿದ ನಂತರ ಉದ್ಭವಿಸಿರುವ ನಿರುದ್ಯೋಗ ಸಮಸ್ಯೆಯತ್ತ ಸಾಮಾಜಿಕ ಉದ್ದಿಮೆಗಳು ತಕ್ಷಣ ಗಮನ ಹರಿಸಬಲ್ಲವು. ಸಣ್ಣ ಉದ್ದಿಮೆಗಳು ನಿರುದ್ಯೋಗಿಗಳಿಗಾಗಿ ಉದ್ಯೋಗ ಸೃಷ್ಟಿಸಬಲ್ಲವು. ನಿರುದ್ಯೋಗಿಗಳನ್ನು ಉದ್ಯಮಿಗಳನ್ನಾಗಿ ಪರಿವರ್ತಿಸಬಲ್ಲದು. ಜನರು ಜನ್ಮತಃ ಉದ್ಯಮಶೀಲರು, ಉದ್ಯೋಗಾಕಾಂಕ್ಷಿಗಳಲ್ಲ ಎಂಬುದನ್ನು ಈ ಮೂಲಕ ನಿರೂಪಿಸಬಲ್ಲದು. ಸರ್ಕಾರಿ ವ್ಯವಸ್ಥೆಯೊಂದಿಗೆ ಸಾಮಾಜಿಕ ಉದ್ದಿಮೆಗಳು ಕೈಜೋಡಿಸಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನು ರೂಪಿಸಬಲ್ಲದು.

ಕೋವಿಡ್–19ರಿಂದ ಉಂಟಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸರ್ಕಾರಗಳು ಸರಿಯಾಗಿ ಬಳಸಿಕೊಂಡರೆ ಈ ಹಿಂದೆ ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ ಚಟುವಟಿಕೆಗಳು ಆರಂಭವಾಗುತ್ತವೆ. ಇದು ರಾಷ್ಟ್ರೀಯ ನಾಯಕತ್ವಕ್ಕೂ ಸವಾಲು. ಈವರೆಗೆ ನಮಗೆ ಗೊತ್ತೇ ಇರದ ರೀತಿಯಲ್ಲಿ ಸಮಾಜ ಮರುಹುಟ್ಟು ಪಡೆಯಲಿದೆ. ಯುವಜನರು, ಮಧ್ಯವಯಸ್ಕರು, ವೃದ್ಧರು, ಪುರುಷರು ಮತ್ತು ಮಹಿಳೆಯರಿಗೆ ಈ ಪುನರ್‌ ನಿರ್ಮಾಣ ಚಟುವಟಿಕೆಯಲ್ಲಿ ಪಾಲಿದೆ.

ಬಚ್ಚಿಟ್ಟುಕೊಳ್ಳಲು ನಮಗೆ ಜಾಗವಿಲ್ಲ

ಈಗ ನಾವು ಸಾಮಾಜಿಕ ಮತ್ತು ಪಾರಿಸರಿಕ ಪ್ರಜ್ಞೆಯಿಂದ ಸರಿಯಾದ ಯೋಜನೆಗಳನ್ನು ರೂಪಿಸದಿದ್ದರೆ, ಕೋವಿಡ್–19 ಹುಟ್ಟುಹಾಕಿರುವ ಸಂಕಷ್ಟಕ್ಕಿಂತ ಹಲವು ಪಟ್ಟು ಭೀಕರವಾಗಿರುವ ಪರಿಸ್ಥಿತಿ ನಿರ್ಮಾಣವಾಗಲಿದೆ

ಕೊರೊನಾ ವೈರಸ್ ಸೋಂಕಿನಿಂದ ತಪ್ಪಿಸಿಕೊಳ್ಳಲು ನಾವು ಮನೆಗಳಲ್ಲಿ ಅಡಗಿಕೊಳ್ಳಬಹುದು. ಆದರೆ ಹದಗೆಡುತ್ತಿರುವ ಜಾಗತಿಕ ಸಮಸ್ಯೆಗಳತ್ತ ಗಮನ ಕೊಡದಿದ್ದರೆ ಪ್ರಕೃತಿ ಮಾತೆ ಮತ್ತು ಸಿಟ್ಟಿಗೆದ್ದ ನಾಗರಿಕರಿಂದ ಅಡಗಿಕೊಳ್ಳಲು ನಮಗೆ ಎಲ್ಲಿಯೂ ಸ್ಥಳ ಸಿಗುವುದಿಲ್ಲ.

(ಪ್ರಸ್ತಾವನೆ ಮತ್ತು ಮೂಲಪಠ್ಯದ ಕನ್ನಡ ಅನುವಾದ: ಡಿ.ಎಂ.ಘನಶ್ಯಾಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT