ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಶಿಕ್ಷಣ: ಹೊಸ ಶಕೆಗೆ ಭೂಮಿಕೆ

ಮಹತ್ವದ ಬದಲಾವಣೆಗೆ ದಾರಿ ತೋರಬಲ್ಲ ಕರಡು ಶಿಕ್ಷಣ ನೀತಿ
Last Updated 4 ಮಾರ್ಚ್ 2020, 19:53 IST
ಅಕ್ಷರ ಗಾತ್ರ
ADVERTISEMENT
""

ಡಾ.ಕೆ. ಕಸ್ತೂರಿರಂಗನ್ ನೇತೃತ್ವದ ಸಮಿತಿಯು ರಾಷ್ಟ್ರೀಯ ಶಿಕ್ಷಣಕ್ಕೆ ಸಂಬಂಧಿಸಿದ ಕರಡು ನೀತಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ 2019ರ ಮೇ 31ರಂದು ಸಲ್ಲಿಸಿರುವುದು ನಮಗೆಲ್ಲ ತಿಳಿದಿದೆ. ಸರಿಸುಮಾರು ಐದು ವರ್ಷಗಳ ಸಮಾಲೋಚನೆ, ಸಲಹೆ ಸ್ವೀಕಾರ, ಸಾರ್ವಜನಿಕರ ಜೊತೆ ಚರ್ಚೆ, ಸಂಪನ್ಮೂಲ ಸಂಸ್ಥೆಗಳಿಂದ ಪಡೆದ ಸಲಹೆಗಳು… ಇವೆಲ್ಲದರ ಅಂತಿಮ ರೂಪ ಈ ಕರಡು ನೀತಿ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಪ್ರಕಟಿಸಿದ್ದಾರೆ ಕೂಡ. ಇದು ಹೊಸ ನೀತಿಯೊಂದರ ಶಕೆಗೆ ಭೂಮಿಕೆ ಸಿದ್ಧಪಡಿಸಿಕೊಟ್ಟಿದೆ. ಹಾಗಾಗಿ, ಈ ಕರಡು ನೀತಿಯ ಮುಖ್ಯಾಂಶಗಳನ್ನು ಅರ್ಥ ಮಾಡಿಕೊಳ್ಳಬೇಕಿರುವುದು ಬಹುಮುಖ್ಯ.

2016-17ನೇ ಸಾಲಿನ ವರದಿಯೊಂದರ ಅನ್ವಯ ದೇಶದಲ್ಲಿ14,67,680ಪ್ರಾಥಮಿಕ ಶಾಲೆಗಳಿವೆ. ಈ ಪೈಕಿ ಶೇಕಡ 73ರಷ್ಟು ಸರ್ಕಾರಿ, ಶೇ 5.8ರಷ್ಟು ಅನುದಾನಿತ, ಶೇ 19ರಷ್ಟು ಖಾಸಗಿ ಮತ್ತು ಶೇ 2ರಷ್ಟು ಮಾನ್ಯತೆ ಇಲ್ಲದವು. ಈ ಎಲ್ಲ ಶಾಲೆಗಳ ಪೈಕಿ ಶೇ 85ರಷ್ಟು ಗ್ರಾಮೀಣ ಪ್ರದೇಶದಲ್ಲಿವೆ. ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 83 ಲಕ್ಷ ಶಿಕ್ಷಕರಿದ್ದು, ಅವರಲ್ಲಿ ಶೇ 58ರಷ್ಟು ಜನ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರೌಢಶಿಕ್ಷಣದ ಹಂತದಲ್ಲಿ, 2,60,155 ಶಾಲೆಗಳಿವೆ. ಇವುಗಳಲ್ಲಿ ಶೇ 41.13ರಷ್ಟು ಸರ್ಕಾರಿ, ಶೇ 40.25ರಷ್ಟು ಖಾಸಗಿ ಮತ್ತು ಶೇ 16.88ರಷ್ಟು ಅನುದಾನಿತ ಶಾಲೆಗಳು. ಶೇ 1.3ರಷ್ಟು ಮಾನ್ಯತೆ ಹೊಂದಿಲ್ಲ. ಇವುಗಳಲ್ಲಿ ಶೇ 70ರಷ್ಟು ಗ್ರಾಮೀಣ ಪ್ರದೇಶಗಳಲ್ಲಿವೆ.

3ರಿಂದ 6 ವರ್ಷ ವಯಸ್ಸಿನ ಮಕ್ಕಳಿಗಾಗಿ ಬಾಲ್ಯದ ರಕ್ಷಣೆ ಹಾಗೂ ಶಿಕ್ಷಣದ ವಿಸ್ತರಣೆಗೆ ಈ ನೀತಿ ಆದ್ಯತೆ ನೀಡಿದೆ. 3ರಿಂದ 6 ವರ್ಷ ವಯಸ್ಸಿನ ಮಕ್ಕಳ ಅರಿವಿನ ಮಟ್ಟ ಹೆಚ್ಚಿಸುವ ಉದ್ದೇಶದ ಇದು ಶಿಕ್ಷಕರು ಹಾಗೂ ಪಾಲಕರಿಬ್ಬರನ್ನೂ ಉದ್ದೇಶಿಸಿ ರೂಪುಗೊಂಡಿದೆ. ಕಲಿಕಾ ಸ್ನೇಹಿ ವಾತಾವರಣ ರೂಪಿಸುವುದು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಕರನ್ನು ಇನ್ನಷ್ಟು ವೃತ್ತಿಪರರನ್ನಾಗಿಸುವ ಕೆಲಸವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಲಾಯ ಮಾಡಲಿದೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣವನ್ನು 3ರಿಂದ 6 ವರ್ಷ ವಯಸ್ಸಿನ ನಡುವಿನ ಎಲ್ಲ ಮಕ್ಕಳಿಗೂ ವಿಸ್ತರಿಸಲಾಗುತ್ತದೆ.

ಭಾಷೆ ಮತ್ತು ಗಣಿತದ ಕಲಿಕೆಯಲ್ಲಿ ಬಹುದೊಡ್ಡ ಸಮಸ್ಯೆಯಿದೆ ಎಂಬುದನ್ನು ಗುರುತಿಸಿ, 1ರಿಂದ 5ನೆಯ ತರಗತಿವರೆಗಿನ ಮಕ್ಕಳು ಸುಲಲಿತವಾಗಿ ಓದಲು, ಅಂಕಿಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡಲು ಹೆಚ್ಚಿನ ಆದ್ಯತೆಯನ್ನು ಈ ನೀತಿ ನೀಡಿದೆ. ಸಾಕ್ಷರತೆಯ ಪ್ರಾಥಮಿಕ ಕೌಶಲಗಳನ್ನು ಕಲಿಸಲು ಹಾಗೂ ಗಣಿತಶಾಸ್ತ್ರದ ಮೂಲಭೂತ ಅಂಶಗಳನ್ನು ಕಲಿಸಲು ಅನುವಾಗುವಂತೆ ಶಿಕ್ಷಕರ ಶಿಕ್ಷಣ ವಿಧಾನವನ್ನು ಮರುವಿನ್ಯಾಸಗೊಳಿಸಲಾಗುತ್ತದೆ. ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆಯನ್ನುಖಾತರಿಪಡಿಸಲು ಸಾಮಾಜಿಕ ಕಾರ್ಯಕರ್ತರನ್ನು ಹಾಗೂ ಕೌನ್ಸೆಲರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಶಾಲಾ ಶಿಕ್ಷಣದ ಪಠ್ಯಕ್ರಮ ಹಾಗೂ ಬೋಧನಾ ವಿಧಾನವನ್ನು ಸಮಗ್ರ ಅಭಿವೃದ್ಧಿಗೆ ಪೂರಕ ಆಗುವಂತೆ, 21ನೆಯ ಶತಮಾನಕ್ಕೆ ಅಗತ್ಯವಾದ ಕೌಶಲಗಳಾದ ವಿಮರ್ಶಾತ್ಮಕ ಆಲೋಚನಾ ಕ್ರಮ, ಸೃಜನಶೀಲತೆ, ವೈಜ್ಞಾನಿಕ ಮನೋಭಾವ, ಸಂವಹನ ಕಲೆ, ಸಮನ್ವಯ, ಬಹುಭಾಷಾ ಪ್ರಾವೀಣ್ಯ, ಡಿಜಿಟಲ್ ಸಾಕ್ಷರತೆ ಹೆಚ್ಚಿಸಲು ಅನುಕೂಲ ಆಗುವಂತೆ ಬದಲಾವಣೆ ಮಾಡಲಾಗುತ್ತದೆ. ಪಠ್ಯ ಚಟುವಟಿಕೆಗಳು, ಪಠ್ಯಕ್ಕೆ ಪೂರಕವಾದ ಚಟುವಟಿಕೆಗಳು ಹಾಗೂ ಪಠ್ಯೇತರ ಚಟುವಟಿಕೆಗಳು ಎಂಬ ಕಟ್ಟುನಿಟ್ಟಿನ ಪ್ರತ್ಯೇಕತೆ ಇರದ, ವಿಜ್ಞಾನ ಮತ್ತು ಕಲಾ ವಿಷಯ ಎನ್ನುವ ಕಟ್ಟಿನಿಟ್ಟಿನ ಪ್ರತ್ಯೇಕತೆ ಕೂಡ ಇರದ ಪಠ್ಯಕ್ರಮವನ್ನು ರೂಪಿಸಲಾಗುತ್ತದೆ.

ಶಿಕ್ಷಣದ ಮಾರ್ಗದರ್ಶಕರಾಗಿ ಶಿಕ್ಷಕರು ಹೊಂದಿರುವ ಮಹತ್ವದ ಪಾತ್ರವನ್ನು ಕರಡು ಶಿಕ್ಷಣ ನೀತಿಯು ಗುರುತಿಸಿದೆ. ಪ್ರತಿಭೆಯನ್ನು ಆಧರಿಸಿದ ವಿದ್ಯಾರ್ಥಿವೇತನ, ಪ್ರಕ್ರಿಯೆ ಆಧರಿಸಿದ ನೇಮಕ ವ್ಯವಸ್ಥೆ, ಅರೆ-ಬೋಧಕರನ್ನು ಸೇವೆಯಲ್ಲಿ ಮುಂದುವರಿಸದೆ ಇರುವುದು, ವೃತ್ತಿ ಕೌಶಲಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸುವುದು, ಅಗತ್ಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಕಲ್ಪಿಸುವುದು, ಭಾರತೀಯ ಭಾಷೆಗಳಲ್ಲಿ ಕಲಿಕಾ ಸಾಮಗ್ರಿಗಳನ್ನು ಒದಗಿಸುವುದು… ಇವೆಲ್ಲ ಕರಡು ಶಿಕ್ಷಣ ನೀತಿಯಲ್ಲಿ ಇವೆ. ನಾಲ್ಕು ವರ್ಷಗಳ ಅವಧಿಯ ಬಿ.ಎಡ್ ಪದವಿ ಹೊಂದಿದ್ದರೆ ಮಾತ್ರ ಶಿಕ್ಷಕರಾಗಿ ನೇಮಕವಾಗಲು ಅರ್ಹರು ಎಂಬ ಕಡ್ಡಾಯ ನಿಯಮ ಜಾರಿಗೆ ಬರುತ್ತದೆ. ಶಿಕ್ಷಕರನ್ನು ಗುರಿಯಾಗಿ ಇಟ್ಟುಕೊಂಡು, ಅವರ ವೃತ್ತಿ ಕೌಶಲಗಳನ್ನು ನಿರಂತರವಾಗಿ ಹೆಚ್ಚಿಸುವ ಕಾರ್ಯಕ್ರಮಗಳನ್ನು ಕೂಡ ಜಾರಿಗೆ ತರಲಾಗುತ್ತದೆ.

ಕಲಿಕೆಯಲ್ಲಿ, ಬೆಳವಣಿಗೆಯಲ್ಲಿ ಮತ್ತು ಪಾಲ್ಗೊಳ್ಳುವಿಕೆಯಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು ಕರಡು ನೀತಿಯ ಗುರಿ. ಇದನ್ನು ಸಾಧಿಸಲು ಈ ನೀತಿಯು ಕಡಿಮೆ ಪ್ರಾತಿನಿಧ್ಯ ಹೊಂದಿರುವ ವರ್ಗಗಳಿಗೆ ಸೇರಿದ ಮಕ್ಕಳಿಗೆ ಹೆಚ್ಚಿನ ಗಮನ ನೀಡುವುದು ಹಾಗೂ ಅವರಿಗೆ ಬೆಂಬಲ ನೀಡುವ ಉದ್ದೇಶ ಹೊಂದಿದೆ. ಹಾಗೆಯೇ, ಹಿಂದುಳಿದ ಪ್ರದೇಶಗಳಲ್ಲಿ ವಿಶೇಷ ಶಿಕ್ಷಣ ವಲಯಗಳನ್ನು ಸ್ಥಾಪಿಸುವುದು, ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ದತ್ತಾಂಶವೊಂದನ್ನು ಹೊಂದುವುದು, ರಾಷ್ಟ್ರೀಯ ನಿಧಿಯೊಂದನ್ನು ಸ್ಥಾಪಿಸಿ ಅದರ ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವುದು ಈ ನೀತಿಯಲ್ಲಿ ಪ್ರಸ್ತಾಪ ಆಗಿವೆ. ಲಿಂಗ ಸಮಾನತೆಯನ್ನು ಖಾತರಿಪಡಿಸುವುದು, ಆದಿವಾಸಿ, ಹಿಂದುಳಿದ ವರ್ಗಗಳ, ನಗರವಾಸಿ ಬಡವರ, ವಿಶೇಷ ಕಾಳಜಿ ಬಯಸುವ ಮಕ್ಕಳ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕಾಗಿ ಹಲವು ಸೌಲಭ್ಯಗಳನ್ನು ಒದಗಿಸುವುದು ಕೂಡ ನೀತಿಯಲ್ಲಿ ಇದೆ.

ಕೊಠಾರಿ ಆಯೋಗದ ಶಿಫಾರಸಿನಲ್ಲಿ ಉಲ್ಲೇಖವಾಗಿದ್ದ ಮಾದರಿಯಲ್ಲೇ ಶಾಲಾ ಸಮುಚ್ಚಯಗಳನ್ನು ರೂಪಿಸಬೇಕು ಎಂದು ಕರಡು ನೀತಿಯು ಶಿಫಾರಸು ಮಾಡಿದೆ. ಇದರಿಂದಾಗಿ ಸಂಪನ್ಮೂಲಗಳ ಹಂಚಿಕೆ ಸಾಧ್ಯವಾಗುತ್ತದೆ. ಹಾಗೆಯೇ, ಶಾಲಾ ಆಡಳಿತ ಇನ್ನಷ್ಟು ಸ್ಥಳೀಯ, ಪರಿಣಾಮಕಾರಿ ಮತ್ತು ದಕ್ಷವಾಗುತ್ತದೆ. ಇಂತಹ ಅರೆ-ಸ್ವಾಯತ್ತ ವ್ಯವಸ್ಥೆಯ ಪರಿಣಾಮವಾಗಿ ಶಿಕ್ಷಕರು ಹಾಗೂ ಪ್ರಾಂಶುಪಾಲರ ಸಮುದಾಯ, ಶೈಕ್ಷಣಿಕ ಸೌಲಭ್ಯಗಳ ಗುಚ್ಛ ಲಭ್ಯವಾಗುತ್ತದೆ. ಪ್ರತಿ ಶಾಲಾ ಸಮುಚ್ಚಯಕ್ಕೂ ಒಂದೊಂದು ‘ಶಿಕ್ಷಕರ ಅಭಿವೃದ್ಧಿ ಯೋಜನೆ’ ಇರುತ್ತದೆ.

ಶಾಲಾ ಸಮುಚ್ಚಯಗಳಲ್ಲಿ ವಿಷಯವಾರು ಶಿಕ್ಷಕರು, ಕ್ರೀಡೆ, ಸಂಗೀತ ಮತ್ತು ಕಲಾ ಶಿಕ್ಷಕರು, ಪ್ರಯೋಗಾಲಯಗಳು, ಮಾಹಿತಿ ಮತ್ತು ಸಂವಹನ ಸಾಧನಗಳು, ಆಟೋಟ ಪರಿಕರಗಳ ಲಭ್ಯತೆಯು ಅವುಗಳ ಪರಿಣಾಮಕಾರಿ ಬಳಕೆಗೆ ದಾರಿ ಮಾಡಿಕೊಡುತ್ತವೆ. ಇಂತಹ ಸೌಲಭ್ಯಗಳು ಪ್ರತೀ ಶಾಲೆಯಲ್ಲಿ ಲಭ್ಯವಿಲ್ಲದಿದ್ದರೂ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಈ ಮಾದರಿಯ ಕಾರಣದಿಂದಾಗಿ ಒಟ್ಟಾರೆಯಾಗಿ ಒಳ್ಳೆಯ ಶೈಕ್ಷಣಿಕ ವಾತಾವರಣವು ಶಾಲಾ ಸಮುಚ್ಚಯಗಳಲ್ಲಿ ನಿರ್ಮಾಣ ಆಗುತ್ತದೆ. ಒಂದು ಸಮುಚ್ಚಯದಲ್ಲಿ ಎಷ್ಟು ಶಾಲೆಗಳು ಇರಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ತೀರ್ಮಾನ ಮಾಡುತ್ತವೆ.

ಶಾಲಾ ಶಿಕ್ಷಣ ವ್ಯವಸ್ಥೆಗೆ ಶಕ್ತಿ ನೀಡಲು, ಶಿಕ್ಷಣದಲ್ಲಿ ಸುಧಾರಣೆ ತರಲು ಒಂದಿಷ್ಟು ನಿಯಂತ್ರಣ ಕ್ರಮಗಳು ಬೇಕು ಎಂದು ಕರಡು ನೀತಿ ಹೇಳುತ್ತದೆ. ಅರೆ-ನ್ಯಾಯಿಕ ಮಾನ್ಯತೆ ಹೊಂದಿರುವ ರಾಜ್ಯಮಟ್ಟದ ‘ರಾಜ್ಯ ಶಾಲಾ ನಿಯಂತ್ರಣ ಪ್ರಾಧಿಕಾರ’ ಸ್ಥಾಪಿಸಲಾಗುತ್ತದೆ. ನಿಯಂತ್ರಣ ಕ್ರಮಗಳನ್ನು ಈಗಿನ ‘ಇನ್‌ಸ್ಪೆಕ್ಟರ್‌’ಗಳ ಮೂಲಕ ಪರಿಶೀಲಿಸುವ ವ್ಯವಸ್ಥೆ ಇರುವುದಿಲ್ಲ. ಬದಲಿಗೆ, ಶಾಲೆಗಳಿಗೆ ಸಂಬಂಧಿಸಿದ ಎಲ್ಲ ಅಗತ್ಯ ಮಾಹಿತಿ ಸಾರ್ವಜನಿಕ ಅವಗಾಹನೆಗೆ ಲಭ್ಯವಿರುವುದರ ಕಾರಣ ಪಾಲಕರೇ ನಿಯಂತ್ರಕರಂತೆ ಕೆಲಸ ಮಾಡುತ್ತಾರೆ. ಖಾಸಗಿಯವರು ದಾನ-ದತ್ತಿ ಮೂಲಕ ಶಾಲೆಗಳನ್ನು ನಡೆಸುವುದನ್ನು ಪ್ರೋತ್ಸಾಹಿಸಲಾಗುತ್ತದೆ.

ಪ್ರೊ.ಎಂ.ಕೆ. ಶ್ರೀಧರ್

ಲೇಖಕ: ಬೆಂಗಳೂರಿನ ಸೆಂಟರ್‌ ಫಾರ್‌ ಎಜುಕೇಷನಲ್‌ ಅಂಡ್‌ ಸೋಷಿಯಲ್‌ ಸ್ಟಡೀಸ್‌ನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT