ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಬೇಡವಾದ ‘ಸುಂದರಿ’

ದೇಶದ ಮೊದಲ ಅಂತರರಾಜ್ಯ ಹುಲಿ ಸ್ಥಳಾಂತರ ಯೋಜನೆ ಮುಗ್ಗರಿಸಿದ್ದೇಕೆ?
Last Updated 14 ಜೂನ್ 2020, 21:41 IST
ಅಕ್ಷರ ಗಾತ್ರ

ನಮ್ಮ ದೇಶದ ವಿವಿಧ ರಾಜ್ಯಗಳ ನಡುವೆ ಗಡಿ ಸಮಸ್ಯೆ, ನದಿ ನೀರು ಹಂಚಿಕೆ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿವಾದ, ವೈಮನಸ್ಸು ಇರುವುದು ಎಲ್ಲರಿಗೂ ತಿಳಿದ ವಿಷಯ. ಈ ಪಟ್ಟಿಗೆ ಈಗ ಇನ್ನೊಂದು ವಿಷಯವೂ ಸೇರಿದೆ. ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳ ನಡುವೆ ಒಂದೂವರೆ ವರ್ಷದಿಂದ ವಿವಾದಕ್ಕೆ ಕಾರಣವಾಗಿರುವುದು ‘ಸುಂದರಿ’ ಎಂಬ ಐದು ವರ್ಷದ ಹೆಣ್ಣು ಹುಲಿ.

ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂಕಿ ಅಂಶಗಳಂತೆ, 2014ರ ಸುಮಾರಿಗೆ ಒಡಿಶಾದಲ್ಲಿನ ಹುಲಿಗಳ ಸಂಖ್ಯೆ ಬರೀ 28ಕ್ಕೆ ಇಳಿದಾಗ ತೀವ್ರ ಕಳವಳ ಪ್ರಾರಂಭವಾಯಿತು. ವನ್ಯಜೀವಿ ತಜ್ಞರ ಅಭಿಪ್ರಾಯದಂತೆ, ಒಡಿಶಾದ ಅರಣ್ಯಗಳಲ್ಲಿ ಕನಿಷ್ಠಪಕ್ಷ 100 ಹುಲಿಗಳಿದ್ದಲ್ಲಿ ಮಾತ್ರ, ಅಲ್ಲಿ ದೀರ್ಘಕಾಲದಲ್ಲಿ ಅಂತಃಪ್ರಜನನಕ್ಕೆ (ಇನ್‍ಬ್ರೀಡಿಂಗ್) ಒಳಗಾಗದ, ಸತ್ವಯುತವಾದ, ಆರೋಗ್ಯಪೂರ್ಣ ಹುಲಿ ಸಂಕುಲ ಇರುವುದು ಸಾಧ್ಯ. ಹಾಗಾದರೆ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ? ಅರಣ್ಯನಾಶ, ಕಳ್ಳಬೇಟೆ ತಡೆ, ಅರಣ್ಯ ಉತ್ಪನ್ನಗಳ ಮಿತಿಮೀರಿದ ಸಂಗ್ರಹಕ್ಕೆ ಕಡಿವಾಣ, ಹುಲಿಗೆ ಆಹಾರವಾಗುವ ಬಲಿಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಮುಂತಾದ ಸಂರಕ್ಷಣಾ ಕ್ರಮಗಳಿಂದ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಬಹುದು.

ಆದರೆ, ಇವು ಒಂದೆರಡು ವರ್ಷಗಳಲ್ಲಿ ಫಲ ನೀಡುವ ಕ್ರಮಗಳಲ್ಲ. ಹೀಗಾಗಿ, ಈ ಕ್ರಮಗಳ ಜೊತೆಗೆ ಅಧಿಕ ಸಂಖ್ಯೆಯ ಹುಲಿಗಳಿದ್ದು, ಆಹಾರ, ವಾಸಕ್ಷೇತ್ರ (ಹೋಮ್‍ರೇಂಜ್), ಸರಹದ್ದುಗಳಿಗೆ (ಟೆರಿಟರಿ) ತೀವ್ರ ಸ್ಪರ್ಧೆ, ಒತ್ತಡಗಳಿರುವ ಸಂರಕ್ಷಿತ ಪ್ರದೇಶಗಳಿಂದ ಆಯ್ದ ಹುಲಿಗಳನ್ನು, ಈ ಸಮಸ್ಯೆಗಳಿಂದ ಮುಕ್ತವಾಗಿರುವ ಅಥವಾ ಕಡಿಮೆ ಸಮಸ್ಯೆಗಳಿರುವ ಒಡಿಶಾದಂತಹ ರಾಜ್ಯಗಳಿಗೆ ಸ್ಥಳಾಂತರಿಸಿದರೆ? ಈ ಚಿಂತನೆಯ ಫಲವಾಗಿ ಮೂಡಿಬಂದದ್ದೇ ಅಂತರರಾಜ್ಯ ಹುಲಿ ಸ್ಥಳಾಂತರ ಯೋಜನೆ. ಈ ಯೋಜನೆಗೆ ಅನೇಕ ವನ್ಯಜೀವಿ ತಜ್ಞರಿಂದ ವಿರೋಧ ವ್ಯಕ್ತವಾದರೂ 2018ರ ಸುಮಾರಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಸ್ಥಳಾಂತರಕ್ಕೆ ಬೇಕಾದ ಮಾರ್ಗದರ್ಶಿ ಸೂತ್ರಗಳನ್ನೂ ಕ್ರಮಬದ್ಧ ವಿಧಿ ವಿಧಾನಗಳನ್ನೂ ರೂಪಿಸಿತು. ಡೆಹ್ರಾಡೂನ್‍ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆಯು ತಾಂತ್ರಿಕ ಸಲಹೆಗಳನ್ನು ನೀಡಿತು.

ದೇಶದ ಮೊದಲ ಅಂತರರಾಜ್ಯ ಹುಲಿ ಸ್ಥಳಾಂತರ ಯೋಜನೆಯಡಿ ಮೂರು ಗಂಡು, ಮೂರು ಹೆಣ್ಣು ಹುಲಿಗಳನ್ನು ಒಡಿಶಾದ ಸತ್ಕೋಸಿಯಾ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಆದರೆ ಅಂತಹ ಹುಲಿಗಳನ್ನು ಆಯ್ಕೆ ಮಾಡುವುದು ಹೇಗೆ? ಹುಲಿಯ ಮರಿಗೆ 18ರಿಂದ 24 ತಿಂಗಳಾಗಿರುವಾಗ, ಅದು ತಾಯಿಯಿಂದ ಬೇರೆಯಾಗಿ, ಸ್ವತಂತ್ರವಾಗಿ ತನ್ನದೇ ಆದ ವಾಸಕ್ಷೇತ್ರ, ಸರಹದ್ದುಗಳನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಈ ರೀತಿ ಜನ್ಮಸ್ಥಳದಿಂದ ಚದುರಿ, ದೂರ ಹೋಗಿ, ತಾತ್ಕಾಲಿಕ ಅಲೆಮಾರಿಯಾಗಿ, ಸ್ವತಂತ್ರ ವಾಸಕ್ಷೇತ್ರವನ್ನು ಸ್ಥಾಪಿಸುವ ಪ್ರಯತ್ನ ಪ್ರಾರಂಭಿಸಿರುವ ಹುಲಿ ಮರಿಗಳು ಸ್ಥಳಾಂತರಕ್ಕೆ ಸೂಕ್ತ ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯ.

ಅಂತರರಾಜ್ಯ ಹುಲಿ ಸ್ಥಳಾಂತರ ಯೋಜನೆಯಡಿ ಕಾನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ ಮಹಾವೀರ ಎಂಬ ಮೂರು ವರ್ಷದ ಗಂಡುಹುಲಿ ಮತ್ತು ಬಾಂಧವ್‍ಗಡ ಸಂರಕ್ಷಿತ ಪ್ರದೇಶದಿಂದ ಮೂರು ವರ್ಷದ ‘ಸುಂದರಿ’ ಹೆಸರಿನ ಹೆಣ್ಣು ಹುಲಿಯನ್ನು ಒಂದು ವಾರದ ಅಂತರದಲ್ಲಿ, 600 ಕಿ.ಮೀ. ದೂರದ ಸತ್ಕೋಸಿಯಾ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಈ ಕೆಲಸ ಅತ್ಯಂತ ಕಟ್ಟುನಿಟ್ಟಾದ ವೈಜ್ಞಾನಿಕ ವಿಧಿವಿಧಾನಗಳಿಗೆ ಅನುಸಾರವಾಗಿ ನಡೆಯಿತು.

ಒಡಿಶಾದ ಮಹಾನದಿಯ ಅಂಚಿನ ಕಮರಿ, ಕಣಿವೆಗಳಲ್ಲಿ ಹಬ್ಬಿರುವ ಸತ್ಕೋಸಿಯಾ, 523 ಚ.ಕಿ.ಮೀ.ಗಳಷ್ಟು ವಿಸ್ತೀರ್ಣದ ಕೇಂದ್ರ ವಲಯವನ್ನು ಹೊಂದಿರುವ ಹುಲಿ ಸಂರಕ್ಷಣಾ ಪ್ರದೇಶ. ಮಹಾವೀರ ಮತ್ತು ಸುಂದರಿಯನ್ನು ಕರೆತರುವ ಮುನ್ನ ಈ ಕೇಂದ್ರ ವಲಯದಲ್ಲಿದ್ದ 78 ಬುಡಕಟ್ಟು ಕುಟುಂಬಗಳನ್ನು ಅರಣ್ಯದ ಅಂಚಿಗೆ ಸ್ಥಳಾಂತರಿಸಲಾಗಿತ್ತು. ಅರಣ್ಯದೊಳಗೆ ಮತ್ತು ಸುತ್ತಮುತ್ತಲಿನ 102 ಹಳ್ಳಿಗಳ ಜನರ ವಿರೋಧದ ನಡುವೆಯೇ 2018ರ ಜುಲೈ 6ರಂದು ಮಹಾವೀರ ಮತ್ತು ಆಗಸ್ಟ್ 17ರಂದು ಸುಂದರಿಯನ್ನು ಹುಲಿ ಸಂರಕ್ಷಿತ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಬಿಡಲಾಯಿತು. ರೇಡಿಯೊ ಕಾಲರ್ ತೊಡಿಸಿದ್ದ ಈ ಎರಡೂ ಹುಲಿಗಳನ್ನು ನಿರಂತರವಾಗಿ ಗಮನಿಸುವ ಕೆಲಸ ಪ್ರಾರಂಭವಾಯಿತು. ಒಡಿಶಾದ ಮುಖ್ಯಮಂತ್ರಿ ಈ ಹೊಸ ಯೋಜನೆ ಕಾರ್ಯಗತಗೊಂಡ ರೀತಿಯನ್ನು ಶ್ಲಾಘಿಸಿದರು.

2018ರ ಸೆ. 13ರಂದು, ಸತ್ಕೋಸಿಯಾ ಸಂರಕ್ಷಿತ ಪ್ರದೇಶದ ಕೇಂದ್ರ ವಲಯದಲ್ಲಿ 35 ವರ್ಷದ ಮಹಿಳೆಯ ಮೃತ ಶರೀರ ಗೋಚರಿಸಿತು. ಸುತ್ತಮತ್ತಲ ಹಳ್ಳಿಯಜನ ಸುಂದರಿಯ ವಿರುದ್ಧ ಸಿಡಿದೆದ್ದು ಪ್ರತಿಭಟಿಸಿದರು. ಮಹಿಳೆಯ ಸಾವಿಗೆ ಸುಂದರಿ ಕಾರಣವಲ್ಲ ಎಂಬು ದನ್ನು ಅರಣ್ಯ ಇಲಾಖೆ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು ಆಧಾರಸಹಿತವಾಗಿ ರುಜುವಾತು ಮಾಡಿದರೂ ಪ್ರತಿಭಟನೆಯ ಕಾವು ಇಳಿಯಲಿಲ್ಲ. ಅ. 21ರಂದು, 65 ವರ್ಷದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ. ಸಾವು ಹುಲಿಯಿಂದಲೇ ಸಂಭವಿಸಿದೆ ಎಂಬುದನ್ನು ಶವಪರೀಕ್ಷೆ ಖಚಿತಪಡಿಸಿದರೂ ಅದು ಸುಂದರಿಯ ಕೃತ್ಯವೆಂಬುದಕ್ಕೆ ಯಾವ ಆಧಾರವೂ ಇರಲಿಲ್ಲ.

ಆದರೆ ಜನ ಆ ಸಾಕ್ಷ್ಯಾಧಾರಿತ ವಾದವನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಪ್ರತಿಭಟನೆ ಕೈಮೀರಿ ಹಿಂಸಾಚಾರಕ್ಕೆ ಇಳಿದಾಗ, ಎರಡು ವಾರಗಳ ಸತತ ಪ್ರಯತ್ನದ ನಂತರ ನ. 6ರಂದು ಸುಂದರಿಯನ್ನು ಸೆರೆಹಿಡಿಯಲಾಯಿತು. ಸತ್ಕೋಸಿಯಾದ ರೈಗುಡ ಎಂಬ ಪ್ರದೇಶದಲ್ಲಿ ವಿಶೇಷವಾಗಿ ಕಲ್ಪಿಸಿರುವ ಸಹಜ ಸೀಮಿತ ಆವರಣವೊಂದರಲ್ಲಿ ಈಗ ಸುಂದರಿಯನ್ನು ಇರಿಸಲಾಗಿದೆ. ಈ ಹುಲಿಯನ್ನು ತಡಮಾಡದೇ ಮಧ್ಯಪ್ರದೇಶಕ್ಕೆ ವಾಪಸು ಕಳುಹಿಸಬೇಕೆಂದು, ಅದಕ್ಕಾಗಿ ರಚಿಸಿದ ಸಮಿತಿ ಶಿಫಾರಸು ಮಾಡಿತು. ಆದರೆ ಮಧ್ಯಪ್ರದೇಶದ ಅರಣ್ಯ ಇಲಾಖೆಯು ಸುಂದರಿಯನ್ನು ಹಿಂದೆ ಪಡೆಯಲು ಸಾರಾ ಸಗಟಾಗಿ ನಿರಾಕರಿಸಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗದರ್ಶಿ ಸೂತ್ರಗಳಲ್ಲಿ ಅದಕ್ಕೆ ಅವಕಾಶವೇ ಇಲ್ಲ ಎಂಬುದು ಮಧ್ಯಪ್ರದೇಶದ ವಾದ.

ಯಾವ ರಾಜ್ಯದ ಅರಣ್ಯ ಇಲಾಖೆಗೂ ಈ ಹುಲಿ ಬೇಡವಾಗಿರುವುದರಿಂದ, ಮಧ್ಯಪ್ರದೇಶ ಮತ್ತು ಒಡಿಶಾ ಈಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮೆಟ್ಟಿಲೇರಿವೆ. ಈ ಮಧ್ಯೆ, ಸುಂದರಿಗಿಂತ ಒಂದು ವಾರ ಮುಂಚೆ ಕಾನ್ಹಾದಿಂದ ಸತ್ಕೋಸಿಯಾಗೆ ಬಂದಿದ್ದ ಮಹಾವೀರ, ಕಳ್ಳಬೇಟೆಗೆ ಬಲಿಯಾಗಿದೆ. ಒಂದು ಹುಲಿ ಸತ್ತು ಮತ್ತೊಂದು ಬಂಧನದಲ್ಲಿ ಇರುವುದರಿಂದ, ದೇಶದ ಮೊತ್ತಮೊದಲ ಅಂತರರಾಜ್ಯ ಹುಲಿ ಸ್ಥಳಾಂತರ ಯೋಜನೆ ಸ್ಥಗಿತಗೊಂಡಿದೆ.

ಪ್ರಥಮ ಪ್ರಯತ್ನದಲ್ಲೇ ಈ ಯೋಜನೆ ಮುಗ್ಗರಿಸಿದ್ದು ಯಾಕೆ? ಯಾವ ಹಂತದಲ್ಲೂ ಅಲ್ಲಿನ ಸ್ಥಳೀಯ ಸಮುದಾಯದೊಡನೆ ಸಮಾಲೋಚನೆ ನಡೆಸಿರಲಿಲ್ಲ. 2014ರ ನಂತರ ಸತ್ಕೋಸಿಯಾದ ಕೇಂದ್ರ ವಲಯದಲ್ಲಿ ಬಲಿಪ್ರಾಣಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದ್ದರಿಂದ ಹುಲಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಆದರೆ ಬಲಿಪ್ರಾಣಿಗಳ ದಟ್ಟಣೆ ಏರಿದಂತೆ ಹುಲಿಗಳ ಸಂಖ್ಯೆಯೂ ನಿರಂತರವಾಗಿ ಏರುವುದಿಲ್ಲ. ಹುಲಿಗಳಲ್ಲಿ ಪ್ರಬಲವಾದ, ಸಹಜವಾದ ಸಾಮಾಜಿಕ ಅಂತರದ ವ್ಯವಸ್ಥೆ ಇದೆ ಎಂಬುದನ್ನೇ ಯೋಜನೆ ಮರೆತಂತಿದೆ ಎಂಬ ಟೀಕೆ ಇದೆ. ಸ್ಥಳಾಂತರಿಸಿದ ಹುಲಿಗಳು ಬಲಿಪ್ರಾಣಿಗಳ ದಟ್ಟಣೆಯಿರುವ ಕೇಂದ್ರ ವಲಯದಲ್ಲೇ ಇರುತ್ತವೆಂಬ ನಿರೀಕ್ಷೆಯೂ ಸರಿಯಿರಲಿಲ್ಲ. ಬೆದೆಗೆ ಬಂದ ಸುಂದರಿ, ಸಂಗಾತಿಯನ್ನರಸಿ ಅರಣ್ಯದಂಚಿಗೆ ಬಂದ ದಾಖಲೆಗಳಿವೆ.

ಮೂರೇ ಜೊತೆ ಹುಲಿಗಳಿಂದ ಸತ್ವಯುತವಾದ ಹುಲಿಸಂಕುಲವೊಂದನ್ನು ಬೆಳೆಸುವ ಪರಿಕಲ್ಪನೆಯಲ್ಲಿಯೇ ದೋಷವಿದೆ ಎಂಬುದು ಅನೇಕ ತಜ್ಞರ ನಿಲುವು. ಸುಂದರಿಯ ಭವಿಷ್ಯದ ಬಗ್ಗೆ, ಅಂತರರಾಜ್ಯ ಸ್ಥಳಾಂತರ ಯೋಜನೆಯ ಭವಿಷ್ಯದ ಬಗ್ಗೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವಾಗ ಇಂತಹ ಹಲವಾರು ಪ್ರಶ್ನೆಗಳನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಬೇಕು ಎಂಬುದು ದೇಶದ ಎಲ್ಲ ವನ್ಯಜೀವಿ ವಿಜ್ಞಾನಿಗಳ, ಆಸಕ್ತರ ಒತ್ತಾಯದ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT