ಪಂಪ ಕನ್ನಡದ ಶ್ರೇಷ್ಠ ಕವಿ. ಸಾವಿರ ವರ್ಷಗಳ ಹಿಂದೆ ಬರೆದ ಆತನ ಕೃತಿಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಮಹಾನ್ ಲೇಖಕರು ಯಾವಾಗಲೂ ತಮ್ಮ ಕೃತಿಗಳಲ್ಲಿನ ಸಮಕಾಲೀನತೆಯಿಂದ ಪ್ರತೀ ಪೀಳಿಗೆಗೂ ಆಪ್ತರಾಗುತ್ತಾರೆ. ಪಂಪ ಬರೆದ ಪ್ರಮುಖ ಕೃತಿ ವಿಕ್ರಮಾರ್ಜುನ ವಿಜಯ. ಅದನ್ನು ಪಂಪಭಾರತ ಎಂದೂ ಕರೆಯುತ್ತಾರೆ. ಅದರಲ್ಲಿ ಮಹಾಭಾರತ ಯುದ್ಧದ ಪ್ರಸಂಗ ಬರುತ್ತದೆ. ಕೌರವರ ಕಡೆ ಭೀಷ್ಮ, ದ್ರೋಣ, ಕರ್ಣ ಮುಂತಾದ ವೀರಾಧಿವೀರರಿದ್ದಾರೆ. ದುರ್ಯೋಧನ ಹಿರಿಯರಾದ ಭೀಷ್ಮರಿಗೆ ಸೇನಾಧಿಪತಿಯ ಪಟ್ಟವನ್ನು ಕಟ್ಟುತ್ತಾನೆ. ಜಾತಿಯ ಕಾರಣದಿಂದ ಪಾಂಡವರಿಂದ ಅವಮಾನ ಅನುಭವಿಸಿದ್ದ ಕರ್ಣ, ಯುದ್ಧದಲ್ಲಿ ಸೇನೆಯ ನೇತೃತ್ವ ವಹಿಸಿ ಅವರನ್ನು ಮಣ್ಣುಮುಕ್ಕಿಸಿ ಕೌರವನ ಋಣವನ್ನು ತೀರಿಸಬೇಕೆಂದಿರುತ್ತಾನೆ. ವೀರಾಧಿವೀರನಾಗಿದ್ದರೂ ತನ್ನ ಕುಲದ ಕಾರಣದಿಂದ ಪ್ರತೀ ಸಂದರ್ಭದಲ್ಲೂ ತಲೆತಗ್ಗಿಸಬೇಕಾಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಕಾತರನಾಗಿರುತ್ತಾನೆ. ಈಗ ವಯೋವೃದ್ಧರಾದ ಭೀಷ್ಮರಿಗೆ ಗೆಳೆಯ ಪಟ್ಟ ಕಟ್ಟಿದಾಗ ಕರ್ಣನಿಗೆ ಭಾರೀ ಕೋಪವೇ ಬರುತ್ತದೆ.

ಆಗ ಆತ ತಡೆಯಲಾಗದೇ ಈ ಹಣ್ಣುಹಣ್ಣು ಮುದುಕರಿಗೆ ಸೇನಾಧಿಪತ್ಯ ಕೊಟ್ಟುಬಿಟ್ಟೆಯಲ್ಲಾ ಎಂದು ಕೌರವನನ್ನು ಕೇಳುತ್ತಾನೆ. ಕರ್ಣನು ಭೀಷ್ಮನನ್ನು ಮೂದಲಿಸಿದ್ದನ್ನು ಕೇಳಿ ದ್ರೋಣನಿಗೆ ಸಿಟ್ಟು ಬರುತ್ತದೆ. ಆಗ ಅವರು ಕರ್ಣನನ್ನು ಉದ್ದೇಶಿಸಿ ‘ನಿನ್ನ ನಾಲಗೆ ಕುಲವನ್ನು ಹೇಳುತ್ತಿದೆ’ ಅಂದುಬಿಡುತ್ತಾರೆ. ಈಗ ಕರ್ಣನ ಬಾಯಲ್ಲಿ ಪಂಪ ಹೇಳಿಸಿರುವ ಮಾತುಗಳು ಅದ್ಭುತವಾದವು. ‘ಕುಲ ಕುಲ ಎಂದು ಮಾತಿಗೆ ಮುಂಚೆ ಏಕೆ ಹೇಳುತ್ತೀರಾ, ನಿಮ್ಮ ಕುಲವೇನಾದರೂ ಶತ್ರುವನ್ನು ಹಿಂಬಾಲಿಸಿ ಹೋಗಿ ಸಾಯಿಸುತ್ತದೆಯೇ? ಕುಲ ಅನ್ನುವುದು ಹುಟ್ಟಿನಿಂದ ಬರುವುದಲ್ಲ. ಛಲ ಅನ್ನುವುದು ಕುಲ, ಅಭಿಮಾನ ಅಂದರೆ ಕುಲ, ಶೌರ್ಯವೆಂದರೆ ಕುಲ’ ಎನ್ನುತ್ತಾನೆ ಕರ್ಣ.

ಒಬ್ಬ ವ್ಯಕ್ತಿಯನ್ನು ಜಾತಿಯಿಂದ ಗುರುತಿಸದೇ ಯೋಗ್ಯತೆಯಿಂದ ಗುರುತಿಸಬೇಕೆಂಬ ಪಂಪನ ಮಾತುಗಳು ಅದೆಷ್ಟು ಸೂಕ್ತವಾದವು. ಆದರೆ ನಾವು? ಅಂತಹ ಪ್ರತಿಭಾವಂತ, ದೇಶಕ್ಕೆ ಕೀರ್ತಿ ತಂದ ಅಂಬೇಡ್ಕರ್ ಅವರನ್ನೇ ಜಾತಿಯ ಹೆಸರಿನಲ್ಲಿ ಅವಮಾನಿಸಿದ ಸಮಾಜ ನಮ್ಮದು. ಇಂದಿಗೂ ಈ ಜಾತಿಯ ಕಬಂಧಬಾಹುಗಳು ನಮ್ಮನ್ನು ಆವರಿಸಿವೆ.

ಸಮಸಮಾಜ ನಿರ್ಮಾಣವಾಗಬೇಕು, ಜಾತಿ ಧರ್ಮದ ಹೆಸರಿನಲ್ಲಿ ಕಂದಕಗಳು ಸೃಷ್ಟಿಯಾಗಬಾರದೆಂದು ಮಹಾನ್ ವ್ಯಕ್ತಿಗಳೆಲ್ಲ ಕನಸು ಕಂಡರು, ಅದಕ್ಕಾಗಿ ಶ್ರಮಿಸಿದರು. ನಾವು ಮಾತ್ರ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಜಾತಿಯ ಕೂಪದೊಳಗೆ ಬಿದ್ದು ಒದ್ದಾಡುತ್ತಿದ್ದೇವೆ. ಚಂದ್ರನ ಮೇಲೆ ಹೆಜ್ಜೆ ಇಟ್ಟರೂ ಮಂಗಳಯಾನವನ್ನು ಯಶಸ್ವಿಯಾಗಿಸಿದರೂ ಜಾತೀಯತೆಯನ್ನು ಮಾತ್ರ ಬಿಡಲಾರೆವು. ಇತರ ಜಾತಿಗಳೆಡೆಗಿನ ಅಸಹನೆಯನ್ನು ತೊರೆಯಲಾರೆವು. ಮನುಷ್ಯ ಜಾತಿ ತಾನೊಂದೆ ವಲಂ ಎಂದಿದ್ದ ಪಂಪನ ಮಾತುಗಳು ನಮ್ಮೆದೆಯ ಆಳಕ್ಕಿಳಿಯುವುದು ಯಾವಾಗ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.