ಊರಿನಲ್ಲಿ ಹಬ್ಬದ ಆಚರಣೆಗೆ ಸಿದ್ಧತೆಗಳು ಶುರುವಾದವು. ಹರೆಯದ ಯುವಕರೇ ತುಂಬಿದ ಸಭೆಯಲ್ಲಿ ಹಬ್ಬಕ್ಕೆ ಬೇಕಾದ ತೋರಣ, ಮೈಕು, ಸಾಲುದೀಪ, ಶಾಮಿಯಾನ, ಸಂಗೀತ, ನೃತ್ಯ, ಆಟೋಟಗಳ ಸ್ಪರ್ಧೆ, ನಾಟಕ ಪ್ರದರ್ಶನ, ಮೆರವಣಿಗೆ ಮುಂತಾಗಿ ಹಬ್ಬದ ಸಾಂಸ್ಕೃತಿಕ ಸ್ವರೂಪ ಹೇಗಿರಬೇಕು ಎಂಬ ಚರ್ಚೆ ನಡೆದು ಹಲವರಿಗೆ ಹಲವು ಬಗೆಯ ಜವಾಬ್ದಾರಿಗಳನ್ನು ನಿಗದಿಪಡಿಸಲಾಯಿತು. ಕೊನೆಯ ದಿನ ಊರಿನ ಜನರಿಗೆ ಭರ್ಜರಿ ಹೋಳಿಗೆ ಭೋಜನದ ವ್ಯವಸ್ಥೆ ಮಾಡಬೇಕೆಂದು ನಿರ್ಧಾರವಾಯಿತು. ಊರಿನ ಜನರಿಂದ ಅವರವರ ಶಕ್ತ್ಯಾನುಸಾರ ಹಣದ ರೂಪದಲ್ಲಿ ದೇಣಿಗೆಯನ್ನು ಪಡೆದು ಸೂಕ್ತ ಲೆಕ್ಕಾಚಾರ ನಿರ್ವಹಣೆಗೂ ವ್ಯವಸ್ಥೆಯಾಯಿತು. ಅಂತೂ ಅದ್ದೂರಿಯಾಗಿ ಹಬ್ಬ ಆಚರಿಸಿ ಜನರಲ್ಲಿ ಹೊಸ ಬಗೆಯ ಚೈತನ್ಯ ತುಂಬುವ ಆಶಯದೊಂದಿಗೆ ಊರು ಸಿಂಗಾರಗೊಳ್ಳತೊಡಗಿತು. ಹಿರಿಯರು ಎನ್ನಿಸಿಕೊಂಡ ಕೆಲವರು ಈ ಹುಡುಗರ ಉತ್ಸಾಹವನ್ನು ಮೆಚ್ಚಿಕೊಂಡರೆ ಮತ್ತೆ ಕೆಲವರು ಹಬ್ಬ ಸುಸೂತ್ರವಾಗಿ ಮುಗಿದರೆ ಸಾಕು ಅಂತ ಕಾಯತೊಡಗಿದರು.

ಹುರುಪಿನ ಓಡಾಟಗಳೆಲ್ಲ ಶುರುವಾದಂತೆ ಹುಡುಗರ ಗುಂಪಿನ ಒಳಗೇ ಸಣ್ಣ ಮಟ್ಟದ ಬಿರುಕೊಂದು ಕಾಣಿಸಿಕೊಂಡಿತು. ಯಾವುದೋ ಪಕ್ಷದವರೊಬ್ಬರಿಂದ ದೊಡ್ಡ ಮೊತ್ತವನ್ನು ವಸೂಲಿ ಮಾಡಿ ಅವರ ಕಟೌಟು ಮತ್ತು ಫ್ಲೆಕ್ಸ್ ಹಾಕುವ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯ ಪಕ್ಷ, ಜಾತಿ, ಧರ್ಮಗಳನ್ನೆಲ್ಲಾ ಆವರಿಸಿಕೊಂಡು ಸಾಂಸ್ಕೃತಿಕ ವಾತಾವರಣ ವಿಷಮಯವಾಗತೊಡಗಿತು. ಕೊನೆಯ ದಿನದ ಹೊತ್ತಿಗೆ ಅದು ವಿಕೋಪಕ್ಕೆ ತಿರುಗಿ ಮಾಧ್ಯಮಗಳ ಕಿವಿಗೆ ಬಿದ್ದು ಜಿಲ್ಲಾಡಳಿತದ ಮಧ್ಯಪ್ರವೇಶದಿಂದ ನಿಷೇಧಾಜ್ಞೆ ಜಾರಿಯಾಗಿ ಇಡೀ ಊರು ಪೊಲೀಸರ ಗಸ್ತಿನಲ್ಲಿ ಸ್ತಬ್ಧವಾಗಿಬಿಟ್ಟಿತು. ಹಬ್ಬಕ್ಕೆ ಅಂತ ಎಲ್ಲೆಲ್ಲಿಂದಲೋ ಬಂದವರು ಇನ್ನೆಂದೂ ಬರುವುದಿಲ್ಲ ಎಂಬ ಅಸಮಾಧಾನದಿಂದ ವಾಪಸ್ಸಾದರು. ಸುತ್ತಮುತ್ತಲಿನ ಹಳ್ಳಿಗಳಿಗೆಲ್ಲ ಆದರ್ಶದಂತಿದ್ದ ಊರಿನ ಸಾಂಸ್ಕೃತಿಕ ಪ್ರಜ್ಞೆಗೆ ಇದೊಂದು ಘಟನೆಯಿಂದ ಕಳಂಕ ತಟ್ಟಿದಂತಾಯಿತು. ಹಬ್ಬ ಮುಗಿಯಲಿ ನೋಡೋಣ ಎಂದು ಕಾದವರ ಆತಂಕ ನಿಜವಾಗಿಬಿಟ್ಟಿತು. ವಿನೋದ ವ್ಯಂಗ್ಯಗಳಿಂದ ಸ್ನೇಹಮಯವಾಗಿದ್ದ ಮುಖಗಳು ಬಿಗಿದುಕೊಂಡವು.

ಹಬ್ಬಗಳು ನಮ್ಮ ಹಳ್ಳಿಗಳ ಜೀವಂತಿಕೆಯ ಸಂಕೇತಗಳು. ದುಡಿಯುವವರ ಆಸರ ಬೇಸರ ಕಳೆದು ಹೊಸ ಚೈತನ್ಯ ತುಂಬುವ ಪ್ರತಿಭಾ ಸಂಪನ್ನ ಸಂಭ್ರಮಗಳು. ಅವು ಎಲ್ಲರನ್ನೂ ಒಳಗೊಳ್ಳುವ ಸಾಮೂಹಿಕ ಉತ್ಸವಗಳು. ಹಳ್ಳಿಗರ ದೈವಭಕ್ತಿ ಪ್ರಕಟಗೊಳ್ಳುವುದೇ ಹಿರಿತನದ ನೈತಿಕ ಪ್ರಭೆಯಲ್ಲಿ. ಪಾರದರ್ಶಕತೆ ಮತ್ತು ಸಾಮರಸ್ಯ ಹಳ್ಳಿಯ ಸಾಮಾಜಿಕ ಆರ್ಥಿಕ ಸದೃಢತೆಯನ್ನು ಕಾಪಾಡುವ ಜೀವನ ಮೌಲ್ಯಗಳು. ಯಾವ್ಯಾವುದೋ ಜಂಜಾಟದಲ್ಲಿ ಊರುಕೇರಿ ಮರೆತು ಎಲ್ಲೆಲ್ಲೋ ಕಾಲ ತಳ್ಳುವವರು ವರ್ಷಕ್ಕೊಮ್ಮೆ ಬಂದು ತಮ್ಮವರೊಂದಿಗೆ ಕುಳಿತು ಉಣ್ಣುವ ಸಡಗರದಲ್ಲಿ ಮಿಂದೇಳುವ ಕ್ಷಣಗಳು ಮನುಷ್ಯ ಸಂಬಂಧಗಳ ನವೀಕರಣಕ್ಕೆ, ಬಾಂಧವ್ಯ ಗಟ್ಟಿಯಾಗುವುದಕ್ಕೆ ಕಾರಣವಾಗುತ್ತವೆ. ಹೊಸ ಬಟ್ಟೆ, ಹಬ್ಬದೂಟವನ್ನು ಮೀರಿದ ಮಾನವೀಯ ನೆನಪುಗಳು ಚೈತನ್ಯ ತುಂಬುತ್ತವೆ.

ವರ್ಷದುದ್ದಕ್ಕೂ ದೇವರ ಸಹವಾಸಕ್ಕೆ ಬರದಿರುವ ಕೆಲವರಿಗೆ ಹಬ್ಬ ಬಂತೆಂದರೆ ಇದ್ದಕ್ಕಿದ್ದಂತೆ ದೈವಭಕ್ತಿ ಉಕ್ಕಿ ಹರಿಯುತ್ತದೆ. ಇಂಥವರನ್ನು ಹದ್ದುಬಸ್ತಿನಲ್ಲಿಡಲು ಹಿರಿತನದ ಹೊಣೆಗಾರಿಕೆಯಿಂದ ಹಿಂದೆ ಸರಿದವರು ಅವರ ದಿಢೀರ್ ಹುರುಪಿಗೆ ವಿವೇಕದ ಲಗಾಮು ಹಾಕಲು ಹಿಂದೆ ಬೀಳಬಾರದು. ನ್ಯಾಯವಲ್ಲದ ಮಾರ್ಗದಲ್ಲಿ ಸಂಪಾದಿಸಿದ ಯಾರದ್ದೋ ದುಡ್ಡು ಬಹುಜನರ ನೆಮ್ಮದಿಯನ್ನು ಕಸಿದುಕೊಳ್ಳಲು ಬಿಡಬಾರದು. ಅನೈತಿಕ ಸಂಪತ್ತಿನಿಂದ ದೈವಶ್ರದ್ಧೆಯೂ ಹಾಳು. ಜನರ ಶಾಂತಿಗೂ ಭಂಗ. ಹಬ್ಬ ಎಲ್ಲರದ್ದು. ಸಂಭ್ರಮವೂ ಎಲ್ಲರದ್ದಾಗಬೇಕು. ಯಾರೋ ಒಬ್ಬರನ್ನು ಮೆರೆಸುವುದಕ್ಕಾಗಿ ಊರು ಮೂರಾಬಟ್ಟೆಯಾಗಬಾರದು. ಕುಡಿದು ಕುಪ್ಪಳಿಸುವ ಕರಡಿ ಕುಣಿತದಲ್ಲಿ ಹಬ್ಬಗಳ ಸಾಂಸ್ಕೃತಿಕ ಚಹರೆ ಕಳೆಗುಂದಬಾರದು.

ಹಾಡು, ಕುಣಿತ, ಆಟೋಟಗಳು ನಮ್ಮ ಶ್ರಮಮೂಲ ಸಂಸ್ಕೃತಿಯ ಉತ್ಪನ್ನಗಳು. ಸಡಗರಗಳನ್ನು ಬೆಸೆಯುವ ಅವುಗಳ ಪ್ರದರ್ಶನಕ್ಕೆ ಅಪಮಾರ್ಗಿಗಳ ಪ್ರಾಯೋಜಕತ್ವ ಬೇಕೇ? ನಮ್ಮ ಹಬ್ಬಗಳ ಸಂಭ್ರಮ ನಮ್ಮೊಳಗಿನ ವಿವೇಕವನ್ನು ಎಚ್ಚರಿಸಿ ಹೊಣೆಗಾರಿಕೆಯನ್ನು ಹೆಚ್ಚಿಸಬೇಕು. ಪ್ರಾಯೋಜನೆಯ ಆಕರ್ಷಣೆಗೆ ಒಳಗಾಗಿ ಹುಡುಗರು ಸಗಟು ವ್ಯಾಪಾರದ ಸರಕುಗಳಂತಾಗುವುದರಿಂದ ದೂರ ನಿಲ್ಲಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಹಬ್ಬಗಳು ಮತಬಿತ್ತನೆಯ ಸುಗ್ಗಿಮೂಲಗಳಾಗುವ ಅಪಾಯವನ್ನು ಎಲ್ಲರೂ ಸೇರಿ ತಡೆದು ಕೂಡಿಬಾಳುವ ಸ್ವರ್ಗ ಸುಖದಲ್ಲಿ ಒಂದಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.