ಪ್ರವಾದಿಯವರು ಸಮಾಜದ ಓರೆಕೋರೆಗಳನ್ನು ತಿದ್ದುವ ತಮ್ಮ ನಿತ್ಯದ ಕಾಯಕದಲ್ಲಿ ತೊಡಗಿದ್ದರು. ಅವರೊಂದಿಗೆ ನೂರಾರು ಜನ ಕೈಜೋಡಿಸುತ್ತಿದ್ದರು. ನಿನ್ನೆ ಬಂದವರು ಇಂದು ಬರುತ್ತಿರಲಿಲ್ಲ. ಇಂದು ಬಂದವರು ನಾಳೆ ಬರುತ್ತಿರಲಿಲ್ಲ. ಪ್ರವಾದಿಯವರು ಬಂದವರನ್ನೆಲ್ಲಾ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರ ಮನೆಯಲ್ಲಿ ಯಾರು ಯಾರು ಇದ್ದಾರೆ, ಅವರ ವಯಸ್ಸು, ಆದಾಯ ಮುಂತಾದುವನ್ನು ಸೂಕ್ಷ್ಮವಾಗಿ ಕೇಳಿ ಅವರ ಅಗತ್ಯ ತಮಗಿಂತ ಸಂಸಾರಕ್ಕಿದೆ ಎಂಬುದನ್ನು ಗ್ರಹಿಸುತ್ತಿದ್ದರು. ಸಂಸಾರದೊಂದಿಗೆ ಅವರ ಉಪಸ್ಥಿತಿಯ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಹಾಗಾಗಿ ಪ್ರವಾದಿಯವರ ಸಮಾಜಮುಖಿ ಚಟುವಟಿಕೆಗಳಲ್ಲಿ ದಿನದಿನವೂ ಹೊಸಬರು ಬಂದು ಸೇರಿಕೊಳ್ಳುತ್ತಿದ್ದರು. ಇದು ಕಾಲ ಋತುಗಳ ಭೇದವಿಲ್ಲದೆ ನಿರಂತರವಾಗಿ ನಡೆಯುತ್ತಿತ್ತು.

ಹೀಗೆ ಒಂದು ದಿನ ಹದಿಹರೆಯದ ತರುಣನೊಬ್ಬ ಪ್ರವಾದಿಯವರ ಪ್ರಭಾವಕ್ಕೆ ಒಳಗಾಗಿ ಅವರ ಬಳಿಗೆ ಬಂದ. ಎಂದಿನಂತೆ ಮುಗುಳ್ನಗುತ್ತ ಪ್ರಸನ್ನವದನರಾಗಿ ಆ ಯುವಕನನ್ನು ಬರಮಾಡಿಕೊಂಡರು. ಅವನ ಪೂರ್ವಾಪರ ವಿಚಾರಿಸಿದರು. ಅವನ ಮನೆಯಲ್ಲಿ ವಯಸ್ಸಾದ ತಾಯಿ ತಂದೆ ಇದ್ದರು. ದಿನನಿತ್ಯದ ಹೊಟ್ಟೆಪಾಡಿಗೆ ತಾವೇ ದುಡಿದು ತರುವ ಶಕ್ತಿ ಅವರ ಮೈಯಲ್ಲಿ ಇರಲಿಲ್ಲ. ಅವರು ತಮ್ಮ ಮಗನ ದುಡಿಮೆ ಮತ್ತು ಆರೈಕೆಯನ್ನು ಅವಲಂಬಿಸಿದ್ದರು. ಈ ಹುಡುಗನೂ ಸಾಕಷ್ಟು ಮುತುವರ್ಜಿಯಿಂದ ತಾಯಿ ತಂದೆಯ ಆರೈಕೆಯ ಹೊಣೆ ಹೊತ್ತಿದ್ದ. ಈ ನಡುವೆ ಯಾರೋ ದೊಡ್ಡವರು ಸಿಕ್ಕರು. ಹುಡುಗನಿಗೆ ಧರ್ಮ, ದೇವರು, ಸ್ವರ್ಗ ಮುಂತಾಗಿ ಪ್ರವಚನ ನೀಡಿದರು. ‘ಬೆಟ್ಟದ ಮೇಲೆ ಹುಟ್ಟಿದ ಮರಕ್ಕೆ ಯಾರು ನೀರೆರೆಯುತ್ತಾರೆ? ಬಂಡೆಗಳ ಸಂದಿಗೊಂದಿಯಲ್ಲಿರುವ ಕಪ್ಪೆಗಳಿಗೆ ಆಹಾರ ತಂದಿಕ್ಕುವವರಾರು? ತನ್ನ ಸೃಷ್ಟಿಯನ್ನು ದೇವರು ಹಸಿವು ನೀರಡಿಕೆ ಬಾಧಿಸದ ಹಾಗೆ ನೋಡಿಕೊಳ್ಳುತ್ತಾನೆ. ಆ ದೇವರ ಕೆಲಸ ಮಾಡುತ್ತಾ ಭಕ್ತಿ ಕಾರ್ಯಗಳಲ್ಲಿ ತೊಡಗಿದರೆ ನಿನ್ನ ತಾಯಿ ತಂದೆಗೆ ದೇವರು ಸ್ವರ್ಗದಲ್ಲಿ ಜಾಗ ಕಲ್ಪಿಸುತ್ತಾನೆ’ ಎಂದೆಲ್ಲ ಹೇಳಿದರು. ಹುಡುಗ ಇದರಿಂದ ಪ್ರಭಾವಿತನಾದ. ಪ್ರವಾದಿಯವರ ಬಳಿ ಬಂದು ನಿಮ್ಮ ಧರ್ಮಕಾರ್ಯಗಳಲ್ಲಿ ಇನ್ನು ಮುಂದೆ ತಾನೂ ಜೊತೆಗೂಡುವುದಾಗಿ ನಿವೇದಿಸಿಕೊಂಡ.

ಪ್ರವಾದಿಯವರು ತರುಣನ ಮೈದಡವಿ ಹೇಳಿದರು: ‘ನಮ್ಮೊಂದಿಗೆ ಧರ್ಮದ ಕೆಲಸಕ್ಕೆ ನೂರಾರು ಜನ ಬಂದು ಸೇರುತ್ತಾರೆ. ಅವರಿಗೆ ಸಂಸಾರಗಳಿವೆ. ತಾಯಿ ತಂದೆ, ಹೆಂಡತಿ ಮಕ್ಕಳು ಇದ್ದಾರೆ. ತಾನಿಲ್ಲದಿದ್ದರೂ ಸಂಸಾರ ಸುಸೂತ್ರವಾಗಿ ನಡೆಯುತ್ತದೆ ಅನ್ನುವ ವಿಶ್ವಾಸವಿದ್ದವರನ್ನು ಮಾತ್ರ ನಾವು ಈ ಕಾರ್ಯಕ್ಕೆ ಒಪ್ಪಿಸಿಕೊಳ್ಳುತ್ತೇವೆ. ನಿನ್ನ ಮನೆಗೆ, ನಿನ್ನ ತಂದೆ ತಾಯಿಗೆ ನಿನ್ನ ಅವಶ್ಯಕತೆ ಇದೆ. ಹೆತ್ತವರನ್ನು ಕಡೆಯವರೆಗೂ ಕಣ್ಣ ರೆಪ್ಪೆಯ ಹಾಗೆ ನೋಡಿಕೊಳ್ಳುವುದು ನಿನ್ನ ಧರ್ಮ. ನಿನ್ನಿಂದ ಮಾತ್ರ ಇದು ಸಾಧ್ಯ. ಬೇರೆ ಯಾರೂ ನಿನ್ನ ಸ್ಥಾನವನ್ನು ತುಂಬಲಾರರು. ನೀನು ಮನೆಗೆ ಹೊರಡು’. ಹೀಗೆ ಹೇಳಿ ತರುಣನನ್ನು ಮನೆಗೆ ಕಳಿಸಿಕೊಡುತ್ತಾರೆ.

ಇವತ್ತು ನಾವೇನು ಕಾಣುತ್ತಿದ್ದೇವೆ? ಒಂದೋ ಅತಿಯಾದ ಲೌಕಿಕ ವ್ಯಾಮೋಹ ಅಥವಾ ಹುಸಿ ಧಾರ್ಮಿಕ ಅತಿರೇಕಗಳು ನಮ್ಮನ್ನು ಆವರಿಸಿವೆ. ಬೆಳಗಾದರೆ ಸಿರಿವಂತನಾಗಬೇಕು, ಒಳ್ಳೆಯದೆಲ್ಲವೂ ನನಗೇ ಬೇಕು ಎನ್ನುವ ಧಾವಂತ ಒಂದು ಕಡೆ. ತಾನೇ ಮೇಲು, ತನ್ನ ಧರ್ಮವೇ ಶ್ರೇಷ್ಠ ಎಂಬ ಅಹಮಿಕೆ ಇನ್ನೊಂದು ಕಡೆ. ಇದರಿಂದ ನಿಜವಾದ ಧರ್ಮದ ತಿಳಿವಳಿಕೆ ಮರೆಯಾಗುತ್ತಿದೆ. ನಮ್ಮ ಜೀವ, ನಮ್ಮ ಬದುಕು ಭುವನದ ಭಾಗ್ಯ. ಇದಕ್ಕೆ ಕಾರಣಕರ್ತರಾದ ತಂದೆ ತಾಯಿ ಸ್ವರ್ಗದ ಸ್ವಾರ್ಥಿಗಳಾಗದೇ ಮಕ್ಕಳನ್ನು ಉಳಿಸಿ ಬೆಳೆಸಿದ್ದಾರೆ. ಅವರ ಮುಪ್ಪು ಹರೆಯದ ಮಕ್ಕಳ ಅವಗಣನೆಗೆ ತುತ್ತಾಗಿ ಸವೆಯುತ್ತಿದೆ. ಹೆತ್ತವರ ಪಾಲನೆಯ ಹೊಣೆಗಾರಿಕೆಯು ಧರ್ಮ ತಿಳಿವಳಿಕೆಗಾಗಿ ಗುಂಪು ಕಟ್ಟಿಕೊಂಡು ಊರೂರು ದೇಶದೇಶಗಳನ್ನು ಅಲೆಯುವುದಕ್ಕಿಂತ ದೊಡ್ಡದು. ಮರಣಾನಂತರದ ಸ್ವರ್ಗದ ಬಯಕೆ ಜೀವಿತಾವಧಿಯ ಯಾರ ನರಕಕ್ಕೂ ಕಾರಣವಾಗಬಾರದು. ತಾಯಿಯ ಪಾದದಡಿಯಲ್ಲಿ ಸ್ವರ್ಗವಿದೆ, ಗಡುಸಾದ ದನಿಯಲ್ಲಿ ತಂದೆ ತಾಯಿಗೆ ಉತ್ತರಿಸುವಷ್ಟೂ ಕಠೋರವಾಗಬಾರದು. ಪ್ರವಾದಿಯವರ ಈ ನುಡಿಹಣತೆ ಧರ್ಮದಾರಿಯಲ್ಲಿ ನಡೆಯುವ ಪ್ರತಿ ಹೆಜ್ಜೆಗೂ ಬೆಳಕಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.