ಒಂದೂರಲ್ಲಿ ಒಬ್ಬ ವ್ಯಕ್ತಿಯಿದ್ದ. ಅವನದ್ದೊಂದು ಗುಣ ಏನೆಂದರೆ ಯಾರೇ ಸಿಕ್ಕಿದರೂ ಅವರಿಗೆ ನಮಸ್ಕಾರ ಹೇಳಿ, ‘ಹೇಗಿದ್ದೀರಿ’ ಎಂದು ಕುಶಲ ವಿಚಾರಿಸುವುದು. ಆದರೆ ಅದೇ ಊರಲ್ಲಿ ಇನ್ನೊಬ್ಬ ವಿಚಿತ್ರ ವ್ಯಕ್ತಿಯಿದ್ದ. ಈ ಎಲ್ಲರಿಗೂ ನಮಸ್ಕಾರ ಹೇಳುವವನು ಇದ್ದಾನಲ್ಲ, ಅವನೇನಾದರೂ ಸಿಕ್ಕಿ ನಮಸ್ಕಾರ ಎಂದರೆ ಇವನು ಕೆಟ್ಟ ಪದಗಳಿಂದ ಬಯ್ಯುತ್ತಿದ್ದ. ಪ್ರತೀ ಬಾರಿಯೂ ಹಾಗೆಯೇ ಆಗುತ್ತಿತ್ತು. ಒಮ್ಮೆ ಯಾರೋ ಊರಿನವರೇ ಈ ವ್ಯಕ್ತಿಗೆ ಹೇಳಿದರು, ‘ಅಲ್ಲ ಮಾರಾಯ, ನೀನು ನೋಡಿದರೆ ಯಾವಾಗಲೂ ಅವನಿಗೆ ನಮಸ್ಕಾರ ಅನ್ನುತ್ತೀಯಾ. ಆದರೆ, ಅವನು ಪ್ರತೀ ಸಲ ಕೆಟ್ಟ ಮಾತನ್ನೇ ಆಡುತ್ತಾನೆ. ಬಿಟ್ಟು ಬಿಡು. ಅವನಿಗೆ ನಮಸ್ಕಾರ ಮಾಡುವುದೇಕೆ’. ಆಗ ಆ ವ್ಯಕ್ತಿ ಕೊಟ್ಟ ಉತ್ತರ ಬಹು ಸುಂದರವಾದದ್ದು. ಅವನೆಂದ, ‘ನೀವು ಹೇಳುವುದೇನೋ ಸರಿ. ಆದರೆ ನನಗೋಸ್ಕರ ಅವನು ತನ್ನ ಕೆಟ್ಟ ಸ್ವಭಾವವನ್ನೇ ಬಿಡಲು ತಯಾರಿಲ್ಲ ಅಂದ ಮೇಲೆ ನಾನು ಅವನಿಗೋಸ್ಕರ ನನ್ನ ಒಳ್ಳೆಯ ಸ್ವಭಾವವನ್ನು ಯಾಕೆ ಬಿಡಲಿ?’

ಎಂತಹ ಉತ್ತರ... ಈ ಉತ್ತರ ಬಹಳ ಸರಳವಾದದ್ದು. ಆದರೆ, ಇದರ ಅರ್ಥ ತುಂಬಾ ದೊಡ್ಡದು. ನಾವು ಏನನ್ನಾದರೂ ಸಾಧಿಸಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಲೇ ಇರುತ್ತೇವೆ. ಒಳ್ಳೆಯ ಸ್ವಭಾವವನ್ನು ಅಳವಡಿಸಿಕೊಳ್ಳಬೇಕೆಂದು ಕಷ್ಟಪಡುತ್ತಿರುತ್ತೇವೆ. ಮಾಡಿದ ತಪ್ಪನ್ನು ಸುಧಾರಿಸಿಕೊಳ್ಳಬೇಕೆಂದು ಬದಲಾಗಲು ಯತ್ನಿಸುತ್ತಿರುತ್ತೇವೆ. ಆದರೆ, ಕೆಲವೊಮ್ಮೆ ಅದಕ್ಕೆ ನಮ್ಮ ಸುತ್ತಲಿನವರ ಪ್ರತಿಕ್ರಿಯೆ ಅಷ್ಟು ಸ್ವಾಗತಾರ್ಹವಾಗಿರುವುದಿಲ್ಲ. ಯಾಕೆಂದರೆ ಜಗತ್ತು ನಾವು ನಿರೀಕ್ಷಿಸುವ ಹಾಗೆ ನಮ್ಮೊಂದಿಗೆ ನಡೆದುಕೊಳ್ಳುವುದಿಲ್ಲ. ಹಾಗೆಂದು ಅದಕ್ಕಾಗಿ ಕೋಪಿಸಿಕೊಂಡು ಅಥವಾ ಮನನೊಂದು ನಮ್ಮ ಪ್ರಯತ್ನ ಬಿಡಬಾರದು. ಉದಾಹರಣೆಗೆ: ನಾವು ನಮ್ಮನ್ನು ನಾವೇನು ಸಾಧಿಸಬಹುದು ಎಂಬುದರ ಮೇಲೆ ಅಳೆಯುತ್ತಿರುತ್ತೇವೆ. ನಾವೇನು ಸಾಧಿಸಿದ್ದೇವೆ ಎಂಬುದರ ಮೇಲೆ ನಮ್ಮನ್ನು ಜಗತ್ತು ಅಳೆಯುತ್ತದೆ. ಹಾಗಾಗಿ ನಮ್ಮ ಬಗ್ಗೆ ನಾವು ಅಂದುಕೊಂಡಿರುವ ಅಭಿಪ್ರಾಯದ ಮೇಲೆ ಜಗತ್ತು ನಮ್ಮನ್ನು ನಡೆಸಿಕೊಳ್ಳಬೇಕೆಂದು ಯೋಚಿಸಬಾರದು.

ಹಾಗಾಗಿ, ಯಾರೇನೇ ಪ್ರತಿಕ್ರಿಯೆ ನೀಡಿದರೂ ತಣ್ಣಗೆ ಅದನ್ನು ಸ್ವೀಕರಿಸಿ ಅದರಲ್ಲಿ ಹುರುಳಿಲ್ಲದಿದ್ದರೆ ಬಿಡುವುದು, ಏನಾದರೂ ಸುಧಾರಿಸಿಕೊಳ್ಳುವ ಅಂಶವಿದ್ದರೆ ಸ್ವೀಕರಿಸುವುದು ಇಷ್ಟೇ ಮಾಡಬೇಕೇ ವಿನಾ ಯಾರೋ ಏನೋ ಅಂದರೆಂದು ಪ್ರಯತ್ನವನ್ನೇ ಬಿಟ್ಟು ಬಿಡುವುದು, ಅವಮಾನಿತರಾಗಿ ಆತ್ಮಹತ್ಯೆಯಂತಹ ತೀರ್ಮಾನ ಕೈಗೊಳ್ಳುವುದು ಮೂರ್ಖತನ. ದೃಢ ನಿರ್ಧಾರದ ಮನುಷ್ಯರು ಇಲ್ಲದೇ ಹೋದರೆ ಈ ಜಗತ್ತು ಈಗಿರುವುದಕ್ಕಿಂತ ಸಾವಿರಾರು ವರ್ಷ ಹಿಂದಿರುತ್ತಿತ್ತು, ಮನುಷ್ಯ ಸಾಧಿಸಿದ ಅದ್ಭುತಗಳು ಕನಸಾಗಿಯೇ ಉಳಿಯುತ್ತಿದ್ದವು. ತಾಳ್ಮೆ ಮತ್ತು ವಿವೇಚನೆಯಿರುವ ವ್ಯಕ್ತಿಗಳು ಜಗತ್ತನ್ನೇ ಆಳುತ್ತಾರೆ. ಅವರು ಬೇರೆ ಯಾರಿಗೋಸ್ಕರವೋ ತಾನು ನಡೆಯುತ್ತಿರುವ ಯೋಗ್ಯ ದಾರಿಯನ್ನು ಬಿಟ್ಟು ಹೋಗುವುದಿಲ್ಲ. ಕಷ್ಟವಾದರೂ ಅದರಲ್ಲೇ ಮುನ್ನಡೆಯುತ್ತಾರೆ. ಇತರರಿಗೆ ಅರ್ಹ ಮಾದರಿಯಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.