ಅಕ್ಷರಲೋಕದ ಚರಿತ್ರೆಯೇ ಇಲ್ಲದ ಸಮುದಾಯದಲ್ಲಿ ಆಕಸ್ಮಿಕವಾಗಿ ಸಿಕ್ಕ ಅವಕಾಶವೊಂದನ್ನು ಬಳಸಿಕೊಂಡ ಯುವಕನೊಬ್ಬ ಉನ್ನತ ಶಿಕ್ಷಣ ಪಡೆದ. ತಾನು ಪಡೆದ ಶಿಕ್ಷಣ ಅರಿವಾಗಿ, ಅರಿವು ಆಲೋಚನೆಯಾಗಿ ರೂಪುಗೊಳ್ಳುತ್ತಾ ಹೋದಂತೆ ಅವನಿಗೆ ಇತಿಹಾಸ, ಸಂಸ್ಕೃತಿ ಮತ್ತು ವರ್ತಮಾನ ಕುರಿತಂತೆ ಕೆಲವು ಪ್ರಶ್ನೆಗಳು ಹುಟ್ಟತೊಡಗಿದವು. ತನ್ನ ಜನಾಂಗದಲ್ಲಿ ತಾನೇ ಮೊದಲ ಪದವೀಧರನೆಂಬ ಹೆಮ್ಮೆ ಇದ್ದರೂ ಉಳಿದವರು ಯಾಕೆ ಯಾರೂ ಶಾಲೆಯ ಮೆಟ್ಟಿಲು ಹತ್ತಲಾಗಿಲ್ಲ? ತನ್ನ ಸಮುದಾಯ ಯಾಕಿಷ್ಟು ಹಿಂದುಳಿದಿದೆ? ಇದಕ್ಕೆಲ್ಲಾ ಯಾರು ಕಾರಣ ಎಂದು ಯೋಚಿಸತೊಡಗಿದ. ತನ್ನ ಇಡೀ ಜನಾಂಗದಲ್ಲಿ ಮೊಟ್ಟಮೊದಲು ತನಗೆ ಹೀಗೆ ಆಲೋಚಿಸುವುದು ಸಾಧ್ಯವಾಗಿದ್ದು ತಾನು ಪಡೆದ ಶಿಕ್ಷಣದಿಂದಲೇ ಎಂದು ಅರಿವಾಗಿ ಸಂತೋಷಪಟ್ಟ. ತನ್ನಲ್ಲಿ ಹುಟ್ಟುವ ಪ್ರಶ್ನೆಗಳಿಗೆ ತನ್ನ ಸಮುದಾಯದ ಯಾರಿಂದಾದರೂ ಸಮಂಜಸವಾದ ಉತ್ತರ ಸಿಗಬಹುದು ಎಂದು ಅಲೆದಾಡಿದ. ಅವರೆಲ್ಲ ನಿಡುಗಾಲದ ನೋವು ತಿಂದು ಸುಸ್ತಾದವರಂತೆ ಕಂಡರು. ಕೊನೆಗೆ ತಮ್ಮೆಲ್ಲರ ಮುಗಿಯದ ಯಾತನೆಗೆ ತಮ್ಮನ್ನು ಆಳುವ ರಾಜನೇ ಕಾರಣ, ಅವನನ್ನು ಮುಗಿಸದ ಹೊರತು ನಮ್ಮ ಜನರ ವಿಮೋಚನೆ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದ.

ಒಂದು ದಿನ ಖಡ್ಗ ಹಿಡಿದು ಕುದುರೆ ಹತ್ತಿ ಅರಮನೆಯತ್ತ ಧಾವಿಸಿದ. ಅರಮನೆಗೆ ಮೂರೇ ಮೂರು ಮೆಟ್ಟಿಲುಗಳಿದ್ದವು. ಕುದುರೆಯಿಂದ ಇಳಿದವನೇ ಮೆಟ್ಟಿಲು ಹತ್ತಲು ಹೋಗುತ್ತಿದ್ದಂತೆ ‘ನಿಲ್ಲು’ ಎಂಬ ಧ್ವನಿ ಕೇಳಿ ನಿಂತ. ‘ಒಳಗೆ ಹೋಗಬೇಕಾದರೆ ಒಂದೊಂದು ಮೆಟ್ಟಿಲಿಗೂ ನಾನು ಕೇಳಿದ್ದನ್ನು ನೀನು ಕೊಡಬೇಕು’ ಎಂದಿತು ಆ ಧ್ವನಿ. ರಾಜನನ್ನು ಕೊಂದು ತನ್ನವರನ್ನು ಉದ್ಧರಿಸಬೇಕೆಂಬ ಹುಮ್ಮಸ್ಸಿನಲ್ಲಿದ್ದ ಯುವಕ ‘ಆಗಲಿ’ ಎಂದ. ಮೊದಲ ಮೆಟ್ಟಿಲಿಗೆ ಕಣ್ಣುಗಳನ್ನು, ಎರಡನೆಯ ಮೆಟ್ಟಿಲಿಗೆ ನಾಲಿಗೆಯನ್ನು, ಮೂರನೆಯ ಮೆಟ್ಟಿಲಿಗೆ ಹೃದಯವನ್ನು ಆ ಧ್ವನಿ ಕೇಳುತ್ತದೆ. ಯುವಕ ಆ ಧ್ವನಿ ಕೇಳಿದ್ದನ್ನು ಕೊಡುತ್ತಾ ಅರಮನೆಯೊಳಗೆ ಕಾಲಿಡುತ್ತಿದ್ದಂತೆ ಅವನಿಗೆ ಅರಮನೆ ಸುಂದರವಾಗಿ ಕಾಣುತ್ತದೆ. ಅಲ್ಲಿರುವವರೆಲ್ಲರೂ ಎಷ್ಟು ಒಳ್ಳೆಯವರು ಅಂದುಕೊಳ್ಳುತ್ತಾನೆ. ತನ್ನ ಸಮುದಾಯದ ಜನರೊಂದಿಗೆ ತಾನೂ ಹಾಡುತ್ತ ಕುಣಿಯುತ್ತ ಸುಖ ಸಂತೋಷ ಅನುಭವಿಸುತ್ತಿರುವಂತೆ ಭಾಸವಾಗುತ್ತದೆ.

ಆಧುನಿಕ ಶಿಕ್ಷಣ ಅಪಾರ ಅವಕಾಶ, ಅನುಕೂಲಗಳನ್ನು ಒದಗಿಸಿರುವುದು ನಿಜ. ಆದರೆ, ಶಿಕ್ಷಣದ ಮೂಲಕ ದಕ್ಕಿಸಿಕೊಂಡ ಜ್ಞಾನವನ್ನು ವ್ಯಕ್ತಿಗತ ಲೌಕಿಕ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿರುವುದರಿಂದ ಆ ಜ್ಞಾನ ಮನುಷ್ಯ ಸಮಾಜದ ಆತ್ಯಂತಿಕ ಮೌಲ್ಯಗಳ ಭಾಗವಾಗಿದೆ ಎನಿಸುವುದಿಲ್ಲ. ಸಮಾಜದಲ್ಲಿನ ಬಡತನ, ಹಸಿವು, ನೋವು, ಅಪಮಾನ, ಅಸಹಾಯಕತೆಗಳನ್ನು ನೋಡಲು ಕಣ್ಣುಗಳು, ಪ್ರಶ್ನಿಸಲು ನಾಲಿಗೆ, ಅರಿಯಲು ಹೃದಯ ಬೇಕಾಗಿದೆ. ಈ ಮೂರನ್ನೂ ಕಳೆದುಕೊಂಡು ನೋವನ್ನು ನಲಿವಿನಂತೆಯೂ, ಅಪಮಾನವನ್ನು ಸಮ್ಮಾನದಂತೆಯೂ ಭಾವಿಸುವ ವಿಪರೀತ ಸಂವೇದನೆಗಳ ಆತಂಕವನ್ನು ಡಿಜಿಟಲ್ ಯುಗದಲ್ಲಿ ಕಾಣುತ್ತಿದ್ದೇವೆ. ಕಣ್ಣು, ನಾಲಿಗೆ, ಹೃದಯಗಳನ್ನು ಮರಗಟ್ಟಿಸಿಕೊಂಡ ಸಮಾಜದಲ್ಲಿ ಮೌನ ಬಂಗಾರದಂತೆ ಕಾಣುವ ಬದಲು ಗಂಟಲಿನಿಂದ ಧ್ವನಿಮೂಲವನ್ನೇ ಕಿತ್ತುಕೊಂಡ ಕ್ರೌರ್ಯ ಕಾಣತೊಡಗಿದೆ. ಸಮಯಸಾಧಕ ಜಾಣರ ಅತಿಯಾದ ಮಾತುಗಳು, ಸ್ವರಕ್ಷಣೆಯ ಬಟ್ಟಲಲ್ಲಿ ಅಡಗಿ ಬೆಚ್ಚಗೆ ಕುಳಿತವರ ಅನಗತ್ಯ ಮೌನ ಏಕಕಾಲಕ್ಕೆ ಸಮಾನ ಅಪಾಯಕಾರಿ. ನಾವು ಕಲಿಯುತ್ತಿರುವ ಶಿಕ್ಷಣಕ್ಕೆ ಮಾನವೀಯ ಸ್ಪಂದನೆಯ ಗುಣವಿದ್ದರೆ ಮಾತ್ರ ಅದಕ್ಕೊಂದು ಮೌಲ್ಯ. ಇಲ್ಲದಿದ್ದರೆ ಅದೊಂದು ಕಾಗದದ ತುಣುಕು ಅಷ್ಟೇ.

‘ಮಡದಿ ಕಾಯಿಸಿಟ್ಟ ಹಾಲಿನ ಮಡಕೆಯಲ್ಲಿ ಹಲ್ಲಿ ಬಿದ್ದು ಸತ್ತಿದೆ. ಮಡಕೆ ಒಡೆಯುವಂತಿಲ್ಲ, ಮಡದಿಗೆ ಹೊಡೆಯುವಂತಿಲ್ಲ, ಹಾಲು ಕುಡಿಯುವಂತಿಲ್ಲ’. ಇಂತಹ ಪರಿಸ್ಥಿತಿಯಲ್ಲಿ ಕಣ್ಣು, ನಾಲಿಗೆ ಮತ್ತು ಎದೆಮಿಡಿತಗಳನ್ನು ಸದಾ ಎಚ್ಚರದಲ್ಲಿಟ್ಟುಕೊಳ್ಳುವುದು ಹೃದಯವಂತ ಸಮಾಜದ ಲಕ್ಷಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.