ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಜಗಕೆ ಬುದ್ದಿ ಕಲಿಸಲು ಹೊರಟು...

Published 21 ಮೇ 2024, 22:30 IST
Last Updated 21 ಮೇ 2024, 22:30 IST
ಅಕ್ಷರ ಗಾತ್ರ

ಇವರು ಒಳ್ಳೆ ಮೇಷ್ಟ್ರಾಗಿ ಹೆಸರು ಮಾಡಿದ್ದರು. ಮಕ್ಕಳು ಇವರ ಪಾಠ ಇಷ್ಟಪಡುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಧಾರಳ ಗುಣವೂ ಇವರಿಗಿತ್ತು. ಆದರೆ, ತಮ್ಮ ಬಗ್ಗೆ ತಾವೇ ರೇಜಿಗೆ ಬರುವಷ್ಟು ಪ್ರಶಂಸೆ ಮಾಡಿಕೊಳ್ಳುವ ಚಾಳಿ ಇವರಲ್ಲಿತ್ತು. ಚಾಡಿ ಹೇಳುವುದು ಮತ್ತು ಕೇಳುವುದು ಎರಡೂ ಇವರಿಗಿದ್ದ ಶ್ರೇಷ್ಠ ಚಟಗಳು. ಇಬ್ಬರ ನಡುವೆ ತಂದು ಹಾಕುವುದನ್ನು ಯಾವತ್ತೂ ತಪ್ಪಿಸುತ್ತಿರಲಿಲ್ಲ. ಅಕಸ್ಮಾತ್ ಸಿಕ್ಕಿ ಬಿದ್ದರೆ ಎಲ್ಲಾ ದೇವರ ಮೇಲೆ ಆಣೆ‌ ಪ್ರಮಾಣ ಮಾಡಿ ನುಣುಚಿಕೊಳ್ಳುತ್ತಿದ್ದರು. ಯಾರನ್ನೂ ನಂಬುತ್ತಿರಲಿಲ್ಲ, ಯಾವುದನ್ನೂ ಒಪ್ಪುತ್ತಿರಲಿಲ್ಲ. ಎಲ್ಲರಲ್ಲೂ ಏನಾದರೊಂದು ಐಬು ಹುಡುಕುತ್ತಿದ್ದರು. ಸ್ನೇಹಿತರು ಎಂದು ಇದ್ದ ಕೆಲವರನ್ನು ದೂರ ಮಾಡಿಕೊಂಡರು.

ತಮಗೆ ತಾವೇ ವೈದ್ಯ ಪದ್ಧತಿ ಮಾಡಿಕೊಳ್ಳುವ ಮತ್ತೊಂದು ಶೋಕಿ ಅವರಿಗಿತ್ತು. ಅವರ ಮನೆಗೆ ಹೋದರೆ ಥರಾವರಿ ಔಷಧಿಗಳ ಘಾಟು ಮೂಗಿಗೆ ಬಡಿಯುತ್ತಿತ್ತು. ಎಲ್ಲೆಲ್ಲಿಂದಲೋ ಅನೇಕ ರೋಗಗಳ ಮುದ್ದು ತರಿಸಿ ಜೋಪಾನ ಮಾಡುತ್ತಿದ್ದರು. ಅನೇಕರಿಗೆ ಚಿಕಿತ್ಸೆ ಕೊಟ್ಟು ವಾಸಿ ಮಾಡಿದ್ದೇನೆಂದು ತುತ್ತೂರಿ ಊದುತ್ತಿದ್ದರು. ಎಲ್ಲಾ ಮಾಹಿತಿಗೂ ಇಂಟರ್‌ನೆಟ್‌ ಅವಲಂಬಿಸಿದ್ದರು. ಹೊಸ ತಂತ್ರಜ್ಞಾನದ ಉಪಕರಣಗಳ ನಂಬುತ್ತಿದ್ದರು. ತಾನು ಮಾಡಿದ್ದೇ ಸರಿ ಎಂಬ ಹಟ ಸಾಧಿಸಿಯೇ ತೃಪ್ತರಾಗುತ್ತಿದ್ದರು. ಹೆಂಡತಿ ಕಡೆಯ ಆಸ್ತಿಯ ವಿಚಾರದಲ್ಲಿ ಮೂಗು ತೂರಿಸಿದರು. ಸಂಬಂಧಿಕರು ಇವರ ಹೆಸರಲ್ಲಿ ಅನೇಕ ಮೂಗರ್ಜಿ ಬರೆದು ಸರಿಯಾಗಿ ಸಿಕ್ಕಿಸಿ ಹಾಕಿದರು. ಅವರಿಗೆಲ್ಲಾ ಬುದ್ಧಿ ಕಲಿಸಲು ಹೊರಟು ಬದುಕಲ್ಲಿ ಅನೇಕ ಸಮಸ್ಯೆಗಳ ತಲೆ ಮೇಲೆ ಎಳೆದುಕೊಂಡರು. ಚೆನ್ನಾಗಿ ಬಾಳಬಹುದಾಗಿದ್ದ ಬದುಕನ್ನು ಸಂಕೀರ್ಣ ಮಾಡಿಕೊಂಡರು. ತುಂಬಾ ಬುದ್ಧಿವಂತರಾಗಿದ್ದ ಅವರು ಜೀವನವನ್ನು ನೋಡುವ ವಿಧಾನ ತೀರಾ ವಿಭಿನ್ನವಾಗಿತ್ತು.

ಬರೀ ಗೋಜಲುಗಳಲ್ಲೇ ವೃತ್ತಿ ಮುಗಿಸಿದ ಅವರೀಗ ಒಂಟಿತನದಲ್ಲಿದ್ದಾರೆ. ಮೊನ್ನೆ ಸಿಕ್ಕಾಗ ತಾನು ತುಂಬಾ ಸುಖವಾಗಿದ್ದೇನೆ ಎಂದು ಹಸಿಸುಳ್ಳು ಹೇಳಿದರು. ಅವರ ಕಣ್ಣುಗಳು, ದೇಹ, ಮಾತು ಸತ್ಯ ಹೇಳುತ್ತಿದ್ದವು. ತಮ್ಮ ಎಲ್ಲಾ ಕಾಯಿಲೆಗಳ ಸಂಪೂರ್ಣ ವಾಸಿ ಮಾಡಿಕೊಂಡಿದ್ದೇನೆ ಎಂದರು. ಆದರೆ ಅವರ ಬಗಲಲ್ಲಿದ್ದ ಫೈಲು ಬೇರೆ ಬೇರೆ ಆಸ್ಪತ್ರೆಗಳ ವೈದ್ಯರ ವಿವರ ತೋರಿಸುತ್ತಿತ್ತು. ಹತಾಶರಾಗಿದ್ದರೂ ಸೋತಿದ್ದರೂ ಇಲ್ಲ ಎಂದು ವಾದಿಸಿದರು. ನಿಜ ಹೇಳುವ, ಮನಸ್ಸಿನೊಳಗಿನ ಕಸವ ಕಿತ್ತು ಬಿಸುಡುವ ವಿವೇಕ ಅವರಿಗೆ ಇರಲೇ ಇಲ್ಲ.

ತನಗೆ ತೊಂದರೆ ಕೊಟ್ಟವರ ದೊಡ್ಡ ಪಟ್ಟಿ ಕೈಯಲ್ಲಿ ಇಟ್ಟುಕೊಂಡೇ ಓಡಾಡುತ್ತಿದ್ದಾರೆ. ಇನ್ನೂ ತಾನು ಯಾರುಯಾರಿಗೆ ಬುದ್ದಿ ಕಲಿಸುವವನಿದ್ದೇನೆಂದು ಮಾಹಿತಿ ಕೊಟ್ಟರು. ಚಮಚ ಹಿಡಿದು ನೆಟ್ಟಗೆ ತಿಂಡಿಯನ್ನು ಬಾಯೊಳಗೆ ಕಳಿಸುವ ಚೈತನ್ಯವೂ ಇಲ್ಲದ ಇವರ ಶತ್ರುಗಳ ಸಂಹಾರವಾಗಲು ಕನಿಷ್ಠ ಒಂದು ಸಾವಿರ ವರ್ಷವಾದರೂ ಬೇಕಾಗಬಹುದು.

ಬದುಕು ಎಷ್ಟು ದುರಂತಗಳನ್ನು ಕೊಟ್ಟರೂ ಮನುಷ್ಯನೇಕೆ ಪಾಠ ಕಲಿಯುವುದಿಲ್ಲ. ತನ್ನ ತಪ್ಪನ್ನು ಯಾಕೆ ಒಪ್ಪಿಕೊಳ್ಳದೆ ಹಟ ಮಾಡುತ್ತಾನೆ. ಮತ್ತೊಬ್ಬರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂಬ ಜಿದ್ದೇ ಅರ್ಥವಿಲ್ಲದ್ದು. ಹಿತ ಚಿಂತಕರಿಂದಲೂ ಬುದ್ದಿ ಕೇಳದಷ್ಟು ಮೂರ್ಖತನ ಬೆಳೆಸಿಕೊಂಡವರಿಗೆ ಯಾರು ಹೇಳಬಲ್ಲರು? ಮನುಷ್ಯ ಪ್ರೀತಿಯ ನಿಜ ಅರ್ಥವೇ ತಿಳಿಯದ ಅವಿವೇಕತನಕ್ಕೆ ಯಾರು ಏನು
ಹೇಳಲಾದೀತು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT