ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಅಪ್ಪಟ ಮನುಷ್ಯರು ಬೇಕಾಗಿದ್ದಾರೆ

Published 22 ಮೇ 2024, 22:30 IST
Last Updated 22 ಮೇ 2024, 22:30 IST
ಅಕ್ಷರ ಗಾತ್ರ

ಹಣ ಅಧಿಕಾರ ಮನುಷ್ಯನನ್ನು ಬದಲಾಯಿಸಿಬಿಡುತ್ತದೆ ಎನ್ನುತ್ತಾರೆ. ಆದರೆ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಪೂರ್ತಿಯಾಗಿ ಬದಲಾಗಿಬಿಡುವುದು ಅಸಾಧ್ಯ. ನಿಜ ಹೇಳಬೇಕೆಂದರೆ ಅವನೊಳಗೆ ಸುಪ್ತವಾಗಿ ಅಡಗಿದ್ದ ಸ್ವಭಾವವೇ ಒಂದು ಹಂತದಲ್ಲಿ ನಿರ್ಭಿಡೆಯಿಂದ ಗೋಚರಿಸಲು ಶುರುವಾಗುವುದು. ಅದು ಒಳ್ಳೆಯತನ ಇರಬಹುದು ಕೆಟ್ಟತನವೂ ಆಗಬಹುದು. ಮಾರ್ವೆಲ್‌ನವರ ಮೊದಲ ಸಿನಿಮಾ ʼಕ್ಯಾಪ್ಟನ್‌ ಅಮೆರಿಕ: ದ ಫಸ್ಟ್‌ ಅವೆಂಜರ್‌ʼ ಈ ವಿಚಾರವನ್ನೇ ಪ್ರತಿಪಾದಿಸುತ್ತದೆ. ಅದರಲ್ಲಿ ಸ್ಟೀವ್‌ ಎನ್ನುವ ಯುವಕನಿಗೆ ಸೇನೆಗೆ ಸೇರುವ ಅದಮ್ಯ ಹಂಬಲ. ಅದಕ್ಕೆ ಬೇಕಾದ ದೈಹಿಕ ಅರ್ಹತೆ ಇಲ್ಲದಿದ್ದರೂ ಐದು ನಗರಗಳಲ್ಲಿ ಪರೀಕ್ಷೆಗೆ ಹಾಜರಾಗಿರುತ್ತಾನೆ. ಅವನ ಆಸಕ್ತಿಯನ್ನು ನೋಡಿ ಆಯ್ಕೆ ಸಮಿತಿಯಲ್ಲಿದ್ದ ವೈದ್ಯ ‌ ಡಾ. ಅಬ್ರಹಾಂ ಎರ್ಸ್ಕಿನ್‌ ಆತನನ್ನು ಸೇನೆಗೆ ಸೇರಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಆತನನ್ನು ಅಪ್ರತಿಮ ಸೈನಿಕ‌ನನ್ನಾಗಿಸುವ (ಸುಪರ್‌ ಸೋಲ್ಜರ್) ಔಷಧಿಯನ್ನು ಕೊಡಲು ಆಯ್ಕೆ ಮಾಡಿಕೊಳ್ಳುತ್ತಾರೆ.

ಆದರೆ ಸೇನೆಯ ಕರ್ನಲ್‌ಗೆ ಪುರುಷತ್ವದ ಪ್ರತೀಕವಾಗಿರುವ ಬಲಿಷ್ಠ ಸೈನಿಕನೊಬ್ಬನನ್ನು ಆಯ್ಕೆ ಮಾಡಬೇಕೆಂದಿರುತ್ತದೆ. ಅಂಥವರಲ್ಲಿ ಮಾತ್ರ ಧೈರ್ಯ ಇರುತ್ತದೆಂಬುದು ಅವರ ನಂಬಿಕೆ. ಅದನ್ನು ಸಾಧಿಸಿ ತೋರಿಸಲು ಹಗುರಕ್ಕೆ ಒಂದು ನಕಲಿ ಗ್ರೆನೇಡನ್ನು ಸ್ಟೀವ್‌ ಇರುವಲ್ಲಿ ಉರುಳಿಸುತ್ತಾರೆ. ಉಳಿದವರೆಲ್ಲರೂ ತಮ್ಮ ಜೀವ ಉಳಿಸಿಕೊಳ್ಳಲು ಓಡಿದರೆ ಸ್ಟೀವ್‌ ಮಾತ್ರ ಗ್ರೆನೇಡ್‌ ಮೇಲೆ ಉರುಳಿ ಬಿದ್ದು ಬೇರೆಯವರಿಗೆ ತಪ್ಪಿಸಿಕೊಳ್ಳುವಂತೆ ಕೂಗುತ್ತಾನೆ. ಈ ಅಸಾಮಾನ್ಯ ಕೆಲಸ ಮಾಡುವುದರ ಮೂಲಕ ಸ್ಟೀವ್‌ ಪೌರುಷದ ಪರಿಭಾಷೆಯನ್ನೇ ಬದಲಾಯಿಸಿಬಿಡುತ್ತಾನೆ... ಮನುಷ್ಯ ರೂಪುಗೊಳ್ಳುವುದು ಅವನ ಎದೆಯಲ್ಲಿರುವ
ಕರುಣೆ ಪ್ರೀತಿಯಂತಹ ಭಾವನೆಗಳಿಂದ ಎಂದು ನಂಬಿದ ಡಾಕ್ಟರ್‌ ಎರ್ಸ್ಕಿನ್‌, ಸ್ಟೀವ್‌ ಮೇಲಿಟ್ಟಿದ್ದ ನಂಬಿಕೆ
ಹುಸಿಯಾಗುವುದಿಲ್ಲ.

ಸ್ಟೀವ್‌ ತನ್ನನ್ನೇ ಏಕೆ ಆಯ್ಕೆ ಮಾಡಿದ್ದೆಂದು ಕೇಳಿದಾಗ ‘ನಾನು ಕೊಡುವ ಔಷಧಿ ಮನುಷ್ಯನೊಳಗೆ ಏನಿದೆಯೋ ಅದನ್ನು ಹೆಚ್ಚಿಸುತ್ತದೆ. ಒಳ್ಳೆಯದು ಶ್ರೇಷ್ಠವಾಗುತ್ತದೆ ಕೆಟ್ಟದ್ದು ಪರಮ ನೀಚವಾಗುತ್ತದೆ. ಬಲಶಾಲಿ ಮನುಷ್ಯನಿಗೆ ಇನ್ನೂ ಹೆಚ್ಚಿನ ಅಧಿಕಾರ ಸಿಕ್ಕಿದರೆ ಆತ ಅದರ ಮೇಲಿನ ಗೌರವವನ್ನು ಕಳೆದುಕೊಳ್ಳುತ್ತಾನೆ. ಆದರೆ ದುರ್ಬಲನಿಗೆ ಶಕ್ತಿಯ ಬೆಲೆ ಗೊತ್ತಿರುತ್ತದೆ. ದುರ್ಬಲನಿಗೆ ಬಲಿಷ್ಠರಿಂದ ಅನುಭವಿಸಿದ ನೋವಿನ ಅರಿವಿದ್ದರೆ ಆತನಿಗೆ ಬೇರೆಯವರ ಮೇಲೆ ಸಹಾನುಭೂತಿ ಇರುತ್ತದೆ’
ಎನ್ನುತ್ತಾರೆ ಎರ್ಸ್ಕಿನ್.

ಅಷ್ಟೇ ಅಲ್ಲ, ‘ನಾಳೆ ನೀನು ಬಲಶಾಲಿಯಾದ ಮೇಲೆ ಪರಿಪೂರ್ಣ ಸೈನಿಕನಾಗಬೇಕೆಂದಿಲ್ಲ, ಆದರೆ ಈಗಿನಂತೆಯೇ ಒಬ್ಬ ಒಳ್ಳೆಯ ಮನುಷ್ಯನಾಗಿರು’ ಎನ್ನುತ್ತಾರೆ.

ಹಣ, ಅಧಿಕಾರ, ಅಂತಸ್ತುಗಳ ಶೋಕಿಯ ನಡುವೆ, ಒಳ್ಳೆಯತನದ ಮುಖವಾಡಗಳ ನಡುವೆ ಮನುಷ್ಯತ್ವವನ್ನು ಕಳೆದುಕೊಳ್ಳದ ಜತೆಗೇ ಸಣ್ಣತನವಿಲ್ಲದ ಅಪ್ಪಟ ಮನುಷ್ಯರನ್ನು ಗುರುತಿಸುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT