ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಹಸಿಗೋಡೆಯ ಮೇಲೆ ನೆಟ್ಟ ಹರಳು

Published 26 ಫೆಬ್ರುವರಿ 2024, 23:30 IST
Last Updated 26 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಅದೊಂದು ಪುಟ್ಟ ಹುಡುಗಿ;ಸೂಕ್ಷ್ಮ ಮನಸ್ಸಿನವಳು. ಶಾಲೆಯ ರಜೆ ಎಂದು ಪೇಟೆಯಿಂದ ಅಜ್ಜನ ಮನೆಗೆ ಬರುತ್ತಾಳೆ. ಅವಳಿಗೆ ಅಜ್ಜನ ಮನೆ ಎಂದರೆ ಸಂಭ್ರಮ. ಅಜ್ಜ ಮತ್ತು ಅಜ್ಜಿಯರಿಗೂ ಮೊಮ್ಮಗಳು ಅಂದರೆ ಅಷ್ಟೇ ಪ್ರೀತಿ. ಅವಳಿಗೆ ಬೇಕಾದ ತಿಂಡಿ ತಿನಿಸು ಮಾಡಿ ಅವಳನ್ನು ಖುಷಿಯಾಗಿರಿಸಿಕೊಳ್ಳುವ ಉತ್ಸಾಹ ಅವರದ್ದು. ಅವಳು ಬರುವ ಮೊದಲೇ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಅವಳಿಗೆ ಪೇಟೆಯಲ್ಲಿ ಇರುವ ಅನುಕೂಲಗಳನ್ನು ಇಲ್ಲಿ ಮಾಡಿಕೊಡಲಾಗದೆ ಹೋಗಬಹುದು ಆದರೆ ಯಾವ ತೊಂದರೆಯೂ ಆಗದಂತೆ ನೋಡುವ ಉದ್ದೇಶ ಅವರದ್ದು.

ಪುಟ್ಟ ಹುಡುಗಿ ಹಳ್ಳಿಗೆ ಬಂದವಳೇ ತೋಟ ಹೊಲ ಎಂದೆಲ್ಲಾ ಸುತ್ತಿಕೊಂಡು ಬರುತ್ತಾಳೆ. ತನ್ನ ಇಷ್ಟದ ತಿಂಡಿ ತಿನಿಸುಗಳನ್ನು ತಿಂದು ಅಜ್ಜ ಅಜ್ಜಿಯ ಜೊತೆ ಕಥೆ ಹೇಳುತ್ತಾ ರಾತ್ರಿ ಆರಾಮವಾಗಿ ಮಲಗಿ ಕನಸು ಕಾಣುತ್ತಾಳೆ.  

ಬೆಳಿಗ್ಗೆ ಹಕ್ಕಿಗಳ ಚಿಲಿಪಿಲಿ ಶಬ್ದದ ಜೊತೆ ಏಳುವ ಅವಳಿಗೆ ಒಂದು ದೃಶ್ಯ ಕಾಣುತ್ತದೆ. ಮನೆಯ ಬಾಗಿಲಲ್ಲಿ ಒಂದಿಷ್ಟು ಇರುವೆಗಳು ಎದ್ದಿರುತ್ತವೆ. ಅಜ್ಜ ಅವುಗಳಿಗೆ ಕೀಟನಾಟಕ ಹೊಡೆದು ಸಾಯಿಸುತ್ತಿರುತ್ತಾನೆ. ಅದನ್ನು ನೋಡಿದ ಹುಡುಗಿ ಜೋರಾಗಿ ಅಳಲಿಕ್ಕೆ ಶುರು ಮಾಡುತ್ತಾಳೆ. ಮನೆಯ ಜನರಿಗೆ ಇವಳ್ಯಾಕೆ ಅಳುತ್ತಿದ್ದಾಳೆ ಎನ್ನುವ ಆತಂಕ. ಅವಳು ಅಜ್ಜನ ಜೊತೆ ಜಗಳಕ್ಕೆ ನಿಲ್ಲುತ್ತಾಳೆ, ‘ಅಜ್ಜಾ ನೀನು ಈ ಇರುವೆಗಳನ್ನು ಯಾಕೆ ಸಾಯಿಸಿದೆ? ಅವು ನನ್ನ ಫ್ರೆಂಡ್ಸ್‌’ ಎಂದು.

ಅಜ್ಜ ‘ಮಗೂ ಅವು ನಿನ್ನ ಫ್ರೆಂಡ್ಸ್‌ ಹೇಗಾಗುತ್ತವೆ? ಕಚ್ಚಿದರೆ ನಿನ್ನ ಮೈಯ್ಯಲ್ಲಿ ಗಾಯಗಳಾಗುತ್ತವೆ. ನಿನಗೆ ತೊಂದರೆ ಆಗಬಾರ್ದು ಎಂದು ಸಾಯಿಸುತ್ತಿರುವೆ’ ಎನ್ನುತ್ತಾನೆ. ಅದನ್ನು ಕೇಳಿ ಇನ್ನಷ್ಟು ದುಃಖಿತಳಾದ ಹುಡುಗಿ, ‘ನಿನಗೆ ಗೊತ್ತಿಲ್ಲವೇ? ಈ ಇರುವೆಗಳು ಭೂಮಿಯ ಮಣ್ಣನ್ನು ಹಗುರಾಗಿಸುತ್ತವೆ. ಬೆಳೆ ಬರಲಿಕ್ಕೆ ಅನುಕೂಲ ಮಾಡುತ್ತವೆ. ನಮ್ಮ ಊಟಕ್ಕೆ ಅವು ದುಡಿಯುತ್ತವೆ. ಎಷ್ಟೋ ಕ್ರಿಮಿಕೀಟಗಳನ್ನು ತಿನ್ನುತ್ತವೆ. ಪ್ರಕೃತಿ ಯಾವುದನ್ನೂ ಸುಮ್ಮನೆ ಸೃಷ್ಟಿ ಮಾಡಿಲ್ಲ ಎಂದು ನಮ್ಮ ಪಾಠದಲ್ಲಿ ಹೇಳಿದೆ. ಹಾಗಿದ್ದೂ ನನಗೆ ಕಚ್ಚುತ್ತದೆ ಎಂದು ನೀನು ಅವುಗಳನ್ನು ಸಾಯಿಸಿಬಿಟ್ಟೆಯಲ್ಲಾ? ನಿನ್ನ ಈ ತಪ್ಪಿಗಾಗಿ ನಾನು ನಿನ್ನನ್ನು ಎಂದೂ ಕ್ಷಮಿಸಲ್ಲ’ ಎನ್ನುತ್ತಾಳೆ.

ಆಗ ಅಜ್ಜನಿಗೆ ತಾನು ತನ್ನ ಮೊಮ್ಮಗಳ ಬಗ್ಗೆ ಮಾತ್ರ ಯೋಚಿಸಿದರೆ ಅವಳು ಇಡೀ ಪ್ರಕೃತಿಯ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ. ಇದ್ಯಾವುದನ್ನೂ ಯೋಚಿಸದ ತಾನೆಷ್ಟು ಸ್ವಾರ್ಥಿ ಎನ್ನಿಸಿ ತನ್ನ ಬಗ್ಗೆ ನಾಚಿಕೆ ಎನ್ನಿಸುತ್ತದೆ. ಮಕ್ಕಳ ಮನಸ್ಸು ಹಸಿ ಗೋಡೆಯ ಹಾಗೆ. ಸಣ್ಣ ಸಂಗತಿಗಳೂ ಬಲವಾಗಿ ಅದರಲ್ಲಿ ಕಚ್ಚಿಕೊಳ್ಳುತ್ತವೆ. ಅದಕ್ಕೆ ಮಕ್ಕಳು ಅದ್ಭುತ ಅಲ್ಲವೆ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT