ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ನಾವು ಬಳಕೆದಾರರು, ಮಾಲೀಕರಲ್ಲ!

Published : 11 ಸೆಪ್ಟೆಂಬರ್ 2024, 22:20 IST
Last Updated : 11 ಸೆಪ್ಟೆಂಬರ್ 2024, 22:20 IST
ಫಾಲೋ ಮಾಡಿ
Comments

ನಾವು ಈ ಭೂಮಿಯ ಬಳಕೆದಾರರು ಅಷ್ಟೆ. ಮಾಲೀಕರಲ್ಲ. ಇದನ್ನು ಹ್ಯಾಂಗ್ ಬಳಸಬೇಕು ಅಂದರ ಈ ಜಗತ್ತು ಕೆಟ್ಟಿರಬಾರದು ಹಾಂಗ್ ಬಳಸಬೇಕು. ಜಗತ್ತು ಕೆಟ್ಟಿರಬಾರದು, ನಾವು ಸಂತೋಷ ಪಡೋದು ಬಿಟ್ಟಿರಬಾರದು ಹಾಂಗ್‌ ಇರಬೇಕು. ಇದು ಸೂತ್ರ. ದುಂಬಿಯೊಂದು ಸಾವಿರ ಹೂವುಗಳಿಂದ ಮಕರಂದ ಹೀರಿದರೂ ಒಂದು ಹೂವಾದರೂ ಕೆಟ್ಟೈತೇನು? ದುಂಬಿ ಮಕರಂದ ಹೀರೋದನ್ನು ಬಿಟ್ಟಿಲ್ಲ, ಹೂವು ಕೆಟ್ಟಿಲ್ಲ ಹಾಂಗ್ ನಾವು ಬದುಕಬೇಕು.

ನಾವು ಗುಡ್ಡ ನೋಡಿದರೆ ಪೂರಾ ಮುಗಸೇ ಬಿಡ್ತೇವಿ. ಒಬ್ಬನಿಗೆ ಗುಡ್ಡ ನೋಡಿ ಹಂಪಿ ಮಾಡಬೇಕು ಅನಸ್ತು, ಇನ್ನೊಬ್ಬನಿಗೆ ಕ್ರಶರ್ ಮೆಶಿನ್ ಹಾಕಬೇಕು ಅನಸ್ತು. ಇದು ಹ್ಯಾಂಗ್ ಅಂದರ ಆಕಳ ಕೆಚ್ಚಿಲಿಗೆ ಹತ್ತಿದ ಉಣ್ಣಿಯಂತೆ. ಉಣ್ಣಿ ಬರೀ ರಕ್ತ ಕುಡಿದು ಬದುಕತೈತಿ. ಅದಕ್ಕೆ ಹಾಲಿನ ರುಚಿನೇ ಗೊತ್ತಾಗಿಲ್ಲ. ನಮಗೂ ಹಾಂಗ.

ಮನುಷ್ಯ ದೇವರಿಗೆ ಒಂದು ಕಪ್ ನೀರು ಕೇಳಿದ. ಅವನು ಕೆರೆ, ಹೊಳೆ ಹಳ್ಳಗಳನ್ನೇ ನೀಡಿದ. ಮನುಷ್ಯ ತನ್ನ ಮನೆಯೊಳಗೆ ದೀಪ ಬೇಕು ಅಂದ. ಅದಕ್ಕೆ ದೇವರು ಎಂದೆಂದೂ ಆರದ ಸೂರ್ಯಚಂದ್ರರೆಂಬ ದೀಪಗಳನ್ನೇ ಹಚ್ಚಿಟ್ಟ. ಒಂದು ತುತ್ತು ಅನ್ನ ಬೇಕು ಅಂದಿದ್ದಕ್ಕೆ ಕೋಟಿ ಕೋಟಿ ವರ್ಷಗಳಿಂದ ಅನ್ನ ನೀಡುವ ಭೂಮಿ ಕೊಟ್ಟ. ಅದು ಇನ್ನೂ ದಣಿದಿಲ್ಲ. ಭೂಮಿ ತಾಯಿಯನ್ನೇ ತಂದಿಟ್ಟಾನಲ್ಲ ಆ ದೇವರು ಅವನಿಗೆ ನಾವೇನು ಮಾಡಬೇಕು?

ಭೂಮಿ ಎಷ್ಟೇ ಕೊಟ್ಟರೂ ನಮ್ಮ ಹಸಿವು ಇಂಗಿಲ್ಲ. ಎಷ್ಟೇ ಹೊಳೆ ಹರಿದರೂ ನಮ್ಮ ನೀರಡಿಕೆ ಕಡಿಮೆ ಆಗಿಲ್ಲ. ಎಷ್ಟೇ ಬೆಳಕಿದ್ದರೂ ನಾವು ಕತ್ತಲಿನಿಂದ ಹೊರಬಂದಿಲ್ಲ. ಈ ವಿಶ್ವ ಅತ್ಯಂತ ರಹಸ್ಯಮಯ. ವಿಶ್ವದ ಆಳ, ಅಗಲ, ಅಂತ್ಯವನ್ನು ಕಂಡುಕೊಳ್ಳಲು ಮನುಷ್ಯನ ಜೀವನ ಬಹಳ ಸಣ್ಣದು. ಎಷ್ಟು ಜನ ವಾಸ್ಕೊಡಗಾಮನಂತಹವರು, ಕೋಲಂಬಸ್‌ನಂತಹವರು ಜಲಯಾತ್ರಿಗಳು ಬಂದರೂ ಸಮುದ್ರದ ಆಳ ಅಗಲ ಅಳೆಯಲಿಕ್ಕಾಗ್ತದೇನು? ಎಷ್ಟು ಜನ ನೀಲ್ ಆರ್ಮಸ್ಟ್ರಾಂಗ್, ರಾಕೇಶ್ ಶರ್ಮಾ ಅವರಂಥವರು ಬಂದರೂ ಆಕಾಶದ ಆಳ ಅಗಲ ಅರಿಯಲಿಕ್ಕಾಗ್ತದೇನು? ಎಷ್ಟು ಜನ ನ್ಯೂಟನ್‌ನಂತಹ ಭೌತ ವಿಜ್ಞಾನಿಗಳು ಬಂದರೂ ಭೂಮಿಯ ಆಳ ಅಗಲ ತಿಳಿಯಲು ಸಾಧ್ಯವಿದೆಯೇನು?

ಒಂದು ಸಾಧಾರಣ ಉದಾಹರಣೆ ತಗೊಳ್ಳಿ. ಮನೆ ಮುಂದೆ ಕಸ ಹಾಕ್ತೀರಿ. ಆ ಕಸದ ಗುಂಡಿ ಒಂದು ತಿಪ್ಪೆಯಾಗ್ತದೆ. ತಿಪ್ಪೆಯ ಮಗ್ಗಲು ಹೋದರೆ ಹೊಲಸು ನಾರತೈತಿ ಅಂತ ಮೂಗು ಮುಚ್ಕೋತೀರಿ, ಅದನ್ನು ಮುಟ್ಟಿದರೆ ಹೊಲಸೈತಿ ಅಂತ ಕೈ ತೊಳಕೋತೀರಿ. ಯಾವುದನ್ನು ಮುಟ್ಟಿದರೆ ಕೈತೊಳಕೋತೀರಿ, ಯಾವುದರ ಮಗ್ಗಲು ಹೋದರೆ ಹೊಲಸು ನಾರತೈತಿ ಅಂತ ಮೂಗು ಮುಚ್ಚಕೋತೀರಿ ಅಂತಹ ತಿಪ್ಪೆಯ ಗರ್ಭದಿಂದಲೇ ಸುಗಂಧ ಸೂಸುವ ಹೂವು ಅರಳತೈತಲ್ಲ ಅದು ಸೃಷ್ಟಿಯ ವೈಚಿತ್ರ್ಯ.

ಪಂಚಭೂತಗಳಿಂದ ಜಗತ್ತು ನಿರ್ಮಾಣ ಆಗಿದೆ. ಮಣ್ಣು, ನೀರು, ಗಾಳಿ, ಅಗ್ನಿ, ಆಕಾಶದಿಂದ ಕೂಡಿದ ಈ ಜಗತ್ತನ್ನು ಬಳಸಬೇಕು. ಕೆಡಿಸಬಾರದು. ಈ ಜೀವ ಅದಲ್ಲ, ಅದು ಪೂರಾ ದಡ್ಡನೂ ಅಲ್ಲ, ಪೂರಾ ಶಾಣ್ಯಾನೂ ಅಲ್ಲ. ತಿಳಿವಳಿಕೆ ಇರುವಂಗೆ ಮಾತನಾಡತೈತಿ. ಆದರ ತಿಳಿವಳಿಕೆ ಇಲ್ಲ. ನಾವು ತಿಳಕೋಬೇಕು; ನಾವು ಮಾಲೀಕರಲ್ಲ, ತಿಳಿದು ಬಳಸಬೇಕು ಅಂಬೋದನ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT