ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ನಿರಂತರ ಅಭ್ಯಾಸವೇ ಪರಿಪೂರ್ಣತೆಯ ಏಕೈಕ ಮಾರ್ಗ

ಎಚ್.ಎಸ್.ನವೀನಕುಮಾರ್, ಹೊಸದುರ್ಗ
Published 21 ಜನವರಿ 2024, 20:51 IST
Last Updated 21 ಜನವರಿ 2024, 20:51 IST
ಅಕ್ಷರ ಗಾತ್ರ

ನನ್ನ ತಂದೆ ದಿವಂಗತ ಹೆಚ್ ಎಲ್ ಸುಬ್ರಹ್ಮಣ್ಯ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಎಚ್‌ಎಲ್‌ಎಸ್‌ ಎಂದೇ ಪ್ರಖ್ಯಾತರಾಗಿದ್ದ ಅವರು ಪ್ರಖರ ವಾಗ್ಮಿ, ಅದ್ಭುತ ನಾಟಕ ಕಲಾವಿದ ಹಾಗೂ ನಿರ್ದೇಶಕರಾಗಿದ್ದರು. ಅವರ ಪಾಠವನ್ನು ಕೇಳಲು  ಬೇರೆ ಭಾಷೆಯನ್ನು ಆಯ್ದುಕೊಂಡ ವಿದ್ಯಾರ್ಥಿಗಳು ಸಹಾ ತರಗತಿಗೆ ಬಂದು ಕೂರುತ್ತಿದ್ದರು. ರನ್ನನ ಗದಾಯುದ್ಧದಲ್ಲಿ ಸ್ವತಃ ತಾವೇ ದುರ್ಯೋಧನನಾಗುತ್ತಿದ್ದ, ಪಂಪ ಭಾರತದ ಪಾಠ ಮಾಡುವಾಗ ತಾವೇ ಕರ್ಣನಾಗುತ್ತಿದ್ದ ಅನನ್ಯ ತನ್ಮಯತೆ ಅವರ ಪಾಠದಲ್ಲಿರುತ್ತಿತ್ತು. ತರಗತಿ ಆರಂಭವಾಯ್ತೆಂದರೆ, ಪುಂಖಾನುಪುಂಖವಾಗಿ ಹರಿದು ಬರುತ್ತಿದ್ದ ಅವರ ಆಕರ್ಷಕ ಬೋಧನೆ, ಹಲವು ಉದಾಹರಣೆ, ನಿದರ್ಶನಗಳ ಜೊತೆಗೆ ಶೃಂಗೇರಿಯ ತುಂಗಾನದಿಯಂತೆ ನಿರರ್ಗಳವಾಗಿ ಪ್ರವಹಿಸುತ್ತಿತ್ತು. 

ಇಂತಹ ನನ್ನ ತಂದೆ ಪ್ರತಿನಿತ್ಯವೂ ತರಗತಿಗೆ ಹಿಂದಿನ ದಿನ ಪೂರ್ವ ತಯಾರಿಯನ್ನು ತಪ್ಪದೇ ಮಾಡಿಕೊಳ್ಳುತ್ತಿದ್ದರು. ಸತತವಾಗಿ ಹಲವಾರು ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದರೂ ಈ ಪ್ರಮಾಣದ ಪೂರ್ವ ತಯಾರಿ ಏಕೆ ಬೇಕೆಂದು ಆಗಾಗ ನನಗನಿಸುತ್ತಿತ್ತು. ಒಮ್ಮೆ ಪ್ರಥಮ ಪಿಯುಸಿಯ ಪ್ರಥಮ ತರಗತಿಗೆ ಪೂರ್ವ ತಯಾರಿ ಮಾಡುತ್ತಾ ಕುಳಿತಿದ್ದ ನನ್ನ ತಂದೆಯ ಬಳಿ ನಾನು ಕೇಳಿದೆ, ‘ಅಪ್ಪಾ ಸತತ ಮೂರು ದಶಕಗಳಿಂದ ಪಾಠ ಮಾಡುತ್ತಿರುವ ನಿಮಗೆ ಪ್ರಥಮ ಪಿಯುಸಿಯ ಮಕ್ಕಳ ಮೊದಲನೇ ತರಗತಿಗೆ ತಯಾರಿ ಮಾಡಿಕೊಳ್ಳುವ ಅಗತ್ಯವಿದೆಯೇ?’

ಆಗ ಅವರು ನೀಡಿದ ಉತ್ತರ ಬದುಕಿಗೆ ಬಹುದೊಡ್ಡ ಸಂದೇಶ ನೀಡುವಂತಿತ್ತು ‘ನಾವು ಯಾವುದೇ ಕೆಲಸವನ್ನಾಗಲಿ ಅದು ಎಷ್ಟೇ ಚಿಕ್ಕದಾಗಿರಲಿ ಪೂರ್ವ ತಯಾರಿ ಇಲ್ಲದೆ ಎಂದಿಗೂ ಮಾಡಬಾರದು. ನನ್ನ ಎದುರು ಕುಳಿತಿರುವ ವ್ಯಕ್ತಿಗಳು ವಿದ್ವಾಂಸರೇ ಇರಬಹುದು ಅಥವಾ ಈಗ ತಾನೇ ಹೈಸ್ಕೂಲಿನಿಂದ ಪಾಸಾಗಿ ಬಂದ ಮಕ್ಕಳೇ ಇರಬಹುದು. ನಾನು ನನ್ನ ಕೆಲಸವನ್ನು ಅಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡಬೇಕು. ಇದಕ್ಕೆ ಪೂರ್ವ ತಯಾರಿ ಅತ್ಯಗತ್ಯ’.

ಯಾವುದೇ ಕೆಲಸವನ್ನಾಗಲಿ, ಸರಿಯಾದ ಪೂರ್ವ ಸಿದ್ಧತೆಯೊಂದಿಗೆ  ಮಾಡಿದಾಗ ಮಾತ್ರ ನಾವು ಆ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯ. ‘ನನಗೆ ಕಸ ಗುಡಿಸುವ ಕೆಲಸ ಸಿಕ್ಕರೂ ನಾನು ಪ್ರಪಂಚದ ಅತ್ಯುತ್ತಮ ಕಸ ಗುಡಿಸುವವನಾಗಬೇಕು ಎನ್ನುವ ರೀತಿಯಲ್ಲಿ ಕೆಲಸ ಮಾಡಬೇಕು’ ಎನ್ನುತ್ತಾರೆ, ಮಹಾತ್ಮ ಗಾಂಧೀಜಿ.  ನಮ್ಮ ಕೆಲಸದ ಮೇಲೆ ಈ ಬಗೆಯ ತನ್ಮಯತೆ ಮೂಡುವುದು ಅದಕ್ಕೆ ಸೂಕ್ತವಾದ ಪೂರ್ವಸಿದ್ಧತೆ ಮಾಡಿಕೊಳ್ಳುವುದರಿಂದ. Practice Makes Man Perfect ಎಂಬ ಮಾತಿನಂತೆ  ನಿರಂತರ ಅಭ್ಯಾಸವೇ ಪರಿಪೂರ್ಣತೆಯ ಏಕೈಕ ಮಾರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT