ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ನಮ್ಮ ತಪ್ಪನ್ನು ನಾವೇ ಗುರುತಿಸೋಣ

Published 3 ಜೂನ್ 2024, 0:19 IST
Last Updated 3 ಜೂನ್ 2024, 0:19 IST
ಅಕ್ಷರ ಗಾತ್ರ

ಒಮ್ಮೆ ಒಬ್ಬ ವ್ಯಕ್ತಿ ಒಂದು ಹೊಸ ಸಮಸ್ಯೆಯೊಂದಿಗೆ ವೈದ್ಯರ ಬಳಿ ಹೋದ. ಅದೇನೆಂದರೆ ಅವನ ತೋರು ಬೆರಳಿನಿಂದ ಅವನ ದೇಹದ ಯಾವುದೇ ಭಾಗವನ್ನು ಮುಟ್ಟಿದರೆ ವಿಪರೀತವಾದ ನೋವಾಗುತ್ತಿತ್ತು. ಇಂತಹ ವಿಚಿತ್ರ ಸಮಸ್ಯೆಯೊಂದಿಗೆ ಬಂದ ರೋಗಿಗೆ ವೈದ್ಯರು ಎಲ್ಲ ಬಗೆಯ ತಪಾಸಣೆ ಮಾಡಿದರು. ರಕ್ತ ಪರೀಕ್ಷೆ, ವಿವಿಧ ಬಗೆಯ ಎಕ್ಸ್ ರೇ, ಹಲವು ರೀತಿಯ ಸ್ಕ್ಯಾನಿಂಗ್ ಎಲ್ಲವೂ ಮುಗಿದವು. ಎಲ್ಲಿಯೂ ಸಮಸ್ಯೆ ಇಲ್ಲ. ವೈದ್ಯರು ಸಹ ಇದ್ಯಾವ ಹೊಸಬಗೆಯ ಕಾಯಿಲೆ ಎಂದು ಆಶ್ಚರ್ಯಗೊಂಡರು. ಕೊನೆಗೆ ದೇಹದ ಪ್ರತಿ ಭಾಗವನ್ನೂ ಪರೀಕ್ಷಿಸುತ್ತಾ ಹೋದರು. ಆಗ ಅವನ ತೋರು ಬೆರಳಿನಲ್ಲಿದ್ದ ಹುಣ್ಣೊಂದು ಅವರಿಗೆ ಗೋಚರಿಸಿತು. ಆಗ ಈ ವ್ಯಕ್ತಿಯ ಸಮಸ್ಯೆ ಏನು ಎನ್ನುವುದು ವೈದ್ಯರಿಗೆ ಸ್ಪಷ್ಟವಾಯಿತು. ಹುಣ್ಣಿರುವ ತೋರು ಬೆರಳಿನಿಂದ ಆತ  ದೇಹದ ಯಾವುದೇ ಭಾಗವನ್ನು ಮುಟ್ಟಿದರೂ ನೋವಾಗುತ್ತಿದೆ. ಅಂದರೆ ಸಮಸ್ಯೆ ಇರುವುದು ಅವನ ತೋರು ಬೆರಳಿನಲ್ಲಿ ಮಾತ್ರ,ಇಡೀ ದೇಹದಲ್ಲಲ್ಲ.

ನಮ್ಮ ಬದುಕಿನಲ್ಲೂ ಅಷ್ಟೇ, ನಮ್ಮಲ್ಲಿರುವ ಕೊರತೆಯ ಬಗೆಗೆ ನಾವು ಗಮನ ಹರಿಸುವುದೇ ಇಲ್ಲ. ನಮ್ಮ ಸಮಸ್ಯೆಗೆ ಬೇರೆ ಯಾರೋ ಕಾರಣ ಎಂಬ ರೀತಿಯಲ್ಲಿಯೇ ಇರುತ್ತದೆ, ನಮ್ಮ ಚಿಂತನೆ. ‘ಸದಾ ಬೇರೆಯವರ ತಪ್ಪನ್ನೇ ಗುರುತಿಸುವುದನ್ನು ರೂಢಿ ಮಾಡಿಕೊಂಡವರಿಗೆ ತಮ್ಮ ತಪ್ಪಿನ ಅರಿವೇ ಆಗದು’ ಎನ್ನುತ್ತಾರೆ, ಮಹಾತ್ಮ ಗಾಂಧಿ. 

ಯಾವಾಗಲೂ ಇನ್ನೊಬ್ಬರ ಸಣ್ಣ ತಪ್ಪು ಸಹ ನಮಗೆ ದೊಡ್ಡದಾಗಿ ಕಾಣಿಸುತ್ತದೆ. ಆದರೆ ನಮ್ಮಲ್ಲಿರುವ ದೊಡ್ಡ ದೋಷ, ನಮ್ಮ ಗಮನಕ್ಕೆ ಬರುವುದೇ ಇಲ್ಲ. ಅದರ ಕುರಿತು ಯಾರಾದರೂ ನಮ್ಮ ಗಮನ ಸೆಳೆದಿದ್ದೇ ಆದರೆ ಅವರ ಮೇಲೇ ವಿಪರೀತ ಕೋಪ ಬಂದುಬಿಡುತ್ತದೆ. ‘ಬೈದು ಹೇಳುವವರು ಬದುಕಲಿಕ್ಕೆ ಹೇಳುತ್ತಾರೆ’ ಎನ್ನುವ ಗಾದೆ ಮಾತಿದೆ. ಈ ರೀತಿಯ ದೂಷಣೆಯ ಮಾತುಗಳಿಗೂ ಧನಾತ್ಮಕವಾಗಿ ಕಿವಿಗೊಟ್ಟಾಗ ನಮ್ಮ ತಪ್ಪುಗಳ ಅರಿವು ನಮಗೇ ಆಗುತ್ತದೆ. ಬೇರೆಯವರಲ್ಲಿರುವ ಸರಿ ತಪ್ಪುಗಳನ್ನು  ಗುರುತಿಸುವಂತೆಯೇ ನಮ್ಮಲ್ಲಿರುವ ಸರಿ ತಪ್ಪುಗಳತ್ತ ನಾವು ಬೆಳಕು ಬಿಟ್ಟುಕೊಂಡಾಗ ಮಾತ್ರ ಸುಧಾರಣೆ ಸಾಧ್ಯ. ಹೊಗಳಿಕೆಯ ಮಾತುಗಳು ಕಿವಿಗೇನೋ ಹಿತಕಾರಿ ಆದರೆ ನಮ್ಮ ಅಂತರಂಗದ ಬೆಳವಣಿಗೆಗೆ ಅಷ್ಟೇನೂ ಸಹಕಾರಿಯಲ್ಲ. ನನ್ನ ಅತ್ಯುತ್ತಮವಿನ್ನೂ ಬರಲಿಕ್ಕಿದೆ ಎಂಬ ಭಾವ ನಮ್ಮಲ್ಲಿ ಸದಾ ಇದ್ದಾಗ ನಾವು ಮಾಡುವ ಯಾವುದೇ ಕೆಲಸದಲ್ಲಿ ಆಗಿರಬಹುದಾದ ದೋಷ ನಮ್ಮ ಗಮನಕ್ಕೆ ಬಂದೇ ಬರುತ್ತದೆ. ಬದುಕೆಂಬುದು ದಿನನಿತ್ಯವೂ ನಾವು ಮಾಡುವ ತಪ್ಪುಗಳಿಂದ ಕಲಿಯಬಹುದಾದ ಹೊಸ ಪಾಠ.

‘ಎಡವದೆಯೇ ಮೈಗಾಯವಡೆಯದೆಯೆ ಮಗುವಾರು ನಡೆಯ ಕಲಿತವರು? ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈದಡವಿಕೊಳ್ಳುವವರೆಲ್ಲ -ಮಂಕುತಿಮ್ಮ’

ಹೇಗೆ ಮಗು ಚಿಕ್ಕದಿದ್ದಾಗ ಎದ್ದು ಬಿದ್ದು ಮೈಕೈ ಗಾಯ ಮಾಡಿಕೊಂಡು ನಡೆಯನ್ನು ಕಲಿಯುತ್ತದೆಯೋ ಹಾಗೆಯೇ ನಮ್ಮ ಬದುಕಿನಲ್ಲಿ ನಾವು ಸಹಾ ತಪ್ಪು ಮಾಡಿಯೇ ಪಾಠ ಕಲಿಯಬೇಕು. ಆದರೆ ಅತಿ ಮುಖ್ಯವಾಗಿ ಆ ತಪ್ಪು ಎಲ್ಲಿ ಆಗಿದೆ ಎಂದು ನಿಖರವಾಗಿ ಗುರುತಿಸುವ ಮನಃಸ್ಥಿತಿ ಸದಾ ನಮ್ಮಲ್ಲಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT