ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ದೀಪದ ಬೆಳಕು

Published 2 ಜುಲೈ 2024, 21:58 IST
Last Updated 2 ಜುಲೈ 2024, 21:58 IST
ಅಕ್ಷರ ಗಾತ್ರ

ಬುದ್ಧನ ಪ್ರೀತಿಯ ಸವಾರಿ ತನ್ನೂರಿಗೆ ಬಂದ ವಿಷಯ ತಿಳಿದು ಈಕೆ ಹೆಚ್ಚು ಪುಳಕಿತಳಾದಳು. ಅವನ ಈ ಮೊದಲು ಹತ್ತಿರದಿಂದ ಕಂಡಾಗಿನಿಂದ ಅವಳು ಅವನ ಆರಾಧಿಸುತ್ತಿದ್ದಳು. ರಾಜಗೃಹ ಊರಿನ ಜನ ಬುದ್ಧನ ಗುಣಗಾನ ಮಾಡುವುದು ಕೇಳಿ ಖುಷಿ ಪಡುತ್ತಿದ್ದಳು. ವೇಣುವನ ಎಂಬಲ್ಲಿ ಆತ ತನ್ನ ನೂರಾರು ಶಿಷ್ಯರೊಂದಿಗೆ ಬಂದು ತಂಗಿದ್ದ. ಅವನ ಜೀವಪ್ರೇಮದ ಸಂದೇಶ ಕೇಳಲು ಜನ ಹಿಂಡಾಗಿ ಬರತೊಡಗಿದರು. ದಿವ್ಯವಾದ ಉಡುಗೊರೆಗಳನ್ನು ಅವನಿಗೆ ಅರ್ಪಿಸುತ್ತಿದ್ದರು. ಎಲ್ಲರಂತೆ ತಾನು ಹೋಗಿ ಆತನ ಕಾಣುವ ಆಸೆ ಇಮ್ಮಡಿಯಾಗಿತ್ತು. ಆದರೆ ಬುದ್ಧನಿಗೆ ನಿವೇದಿಸಲು ತನ್ನ ಬಳಿ ಏನೂ ಇಲ್ಲವಲ್ಲ ಎಂದು ಯೋಚಿಸಿ ಆಕೆ ದುಃಖಿತಳಾದಳು. ಕೊನೆಗೆ ಒಂದು ಹಿಡಿ ಅನ್ನವನ್ನಾದರೂ ತಯಾರಿಸಿ ಬುದ್ಧನ ಕಡೆಯ ಒಬ್ಬ ಭಿಕ್ಷುವಿಗೆ ತಿನ್ನಿಸಿದರೆ ತನ್ನ ಜನ್ಮ ಸಾರ್ಥಕವಾಗಬಹುದು ಎಂದುಕೊಂಡಳು. ಮುಂಜಾನೆ ಎದ್ದು ಭಿಕ್ಷೆ ಬೇಡುತ್ತಾ ಪ್ರತಿ ಮನೆಗೂ ಹೋದಳು. ಇದರಿಂದ ಸಾಕಷ್ಟು ಅಕ್ಕಿ ಸಿಕ್ಕಿತು. ಮಧ್ಯಾಹ್ನದ ಹೊತ್ತಿಗೆ ತನ್ನ ಗುಡಿಸಲಿಗೆ ಬಂದು ಅನ್ನ ಬೇಯಿಸಿದಳು. ಸಂಜೆಯ ತನಕ ದಾರಿ ನೋಡುತ್ತಾ ಕೂತರೂ ಯಾವ ಭಿಕ್ಷುವೂ ಅತ್ತ ಕಡೆ ಸುಳಿಯಲಿಲ್ಲ. ಇದರಿಂದ ಆ ಬಡವಿಯ ಮನಸ್ಸಿಗೆ ತೀರಾ ವ್ಯಥೆಯಾಯಿತು.

ಬುದ್ಧನಿಗೆ ತನ್ನ ಸೇವೆ ಹೇಗೆ ಸಮರ್ಪಿಸುವುದೆಂದು ಆಕೆ ಮತ್ತೆ ಚಿಂತಿಸಿದಳು. ಅಕ್ಕಿಯ ಜೊತೆ ಜನರು ಕೊಟ್ಟ ಪುಡಿಗಾಸು ತನ್ನ ಗಂಟಲ್ಲಿರುವುದು ನೆನಪಿಗೆ ಬಂತು. ತಕ್ಷಣ ಎದ್ದವಳೆ ಪುಡಿಗಾಸು ಹಿಡಿದು ಅಂಗಡಿಗೆ ಹೋಗಿ ದೀಪದೆಣ್ಣೆ ಕೊಂಡಳು. ಬುದ್ದ ವಿಹಾರದಲ್ಲಿ ರಾತ್ರಿಗೆ ಸಾವಿರಾರು ಉರಿಯುವ ದೀಪಗಳು ಸಿದ್ಧವಾಗುತ್ತಿದ್ದವು. ಅಳುಕುತ್ತಲೇ ಯಾರಿಗೂ ಕಾಣದಂತೆ ಅಲ್ಲಿಗೆ ಹೋದಳು. ತಾನು ತಂದ ಎಳ್ಳೆಣ್ಣೆ ಅಲ್ಲಿನ ಯಾವ ಹಣತೆಯ ಒಡಲಿಗೂ ತಾಕುವಂತಿರಲಿಲ್ಲ. ನಾಚಿಕೆ ಎನಿಸಿತು. ಆದರೂ ಆಕೆ ಧೈರ್ಯವಾಗಿ ನಿಂತು ಪುಟಾಣಿ ಮುರುಕು ಮಣ್ಣಿನ ಹಣತೆ ಹುಡುಕಿದಳು. ತಾನು ತಂದಿದ್ದ ದೀಪದೆಣ್ಣೆ ಅದಕ್ಕೆ ಸುರಿದು ಬತ್ತಿ ಹತ್ತಿಸಿ, ಕ್ಷಣ ಹೊತ್ತು ನಿಂತಳು. ಮನಸ್ಸಿನಲ್ಲೇ ಬುದ್ಧನ ಆಶೀರ್ವಾದ ಬೇಡಿಕೊಂಡು ಹೊರಟು ಬಿಟ್ಟಳು.

ಆ ದಿನ ಸರೊತ್ತಿನಲ್ಲಿ ಬಲವಾದ ಗಾಳಿಯೊಂದು ಬೀಸಿತು. ವಾಯು ಅಬ್ಬರಕ್ಕೆ ಅಲ್ಲಿದ್ದ ಹಣತೆಗಳೆಲ್ಲಾ ಬತ್ತಿ ಹೋಗಿ ಕತ್ತಲಾವರಿಸಿತು. ಆದರೆ ಅಚ್ಚರಿ ಎಂಬಂತೆ ಆ ಬಡವಿ ಹಚ್ಚಿ ಹೋಗಿದ್ದ ಪುಟಾಣಿ ದೀಪ ಆರದೆ ತಾನೊಂದೇ ನಗುತ್ತಾ ನಿಂತಿತ್ತು. ಈ ಸೋಜಿಗವನ್ನು ಭಿಕ್ಷುಗಳು ಬುದ್ಧನಿಗೆ ತಲುಪಿಸಿ ‘ದೊಡ್ಡ ದೊಡ್ಡ ಸೊಡರುಗಳೇ ಗಾಳಿ ಹೊಡೆತಕ್ಕೆ ಶರಣಾಗಿ ನಂದಿ ಹೋದವು. ಆದರೆ ಅಲ್ಲೊಂದು ಪುಟ್ಟ ಹಣತೆ ಮಾತ್ರ ಆರದೆ ಇನ್ನೂ ಉರಿಯುತ್ತಿದೆ’ ಎಂದು ನುಡಿದರು.

ಅವರ ಮಾತು ಕೇಳಿ ಮುಗುಳ್ನಕ್ಕ ಬುದ್ಧ ‘ಆ ಹಣತೆ ಹಚ್ಚಿದವರ ಮನಸ್ಸು ಪರಿಶುದ್ಧವಾದುದ್ದು. ಅವರ ಪ್ರೀತಿ, ಗೌರವ, ಮಮಕಾರಗಳು ಬೆಲೆ ಕಟ್ಟಲಾಗದ ಅಮೂಲ್ಯ ಮೌಲ್ಯಗಳು. ಯಾವ ಅಪೇಕ್ಷೆಯೂ ಇಲ್ಲದೆ ನಿರ್ಮಲ ಮನಸ್ಸಿನಿಂದ ಹಚ್ಚಲಾದ ಇಂತಹ ಹಣತೆಗಳನ್ನು ಅಷ್ಟು ಸುಲಭಕ್ಕೆ ಆರಿಸಲಾಗದು. ಹೃದಯದಾಳದಿಂದ ಹುಟ್ಟುವ ನಿಜವಾದ ಬೆಳಕು ಎಂದಿಗೂ ಬತ್ತುವುದಿಲ್ಲ’ ಎಂದನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT