ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಮೂರ್ಖರೊಂದಿಗೆ ಬದುಕುವುದು

Published 3 ಜನವರಿ 2024, 0:45 IST
Last Updated 3 ಜನವರಿ 2024, 0:45 IST
ಅಕ್ಷರ ಗಾತ್ರ

ತನಗನ್ನಿಸಿದಂತೆ ಮಾತಾಡುವ, ಸರಿ ಎನಿಸಿದಂತೆ ಬದುಕುವ ಮನುಷ್ಯನನ್ನು ಮೂರ್ಖ ಎನ್ನಬಹುದೇ? ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳದೆ ತನಗೆ ತೋಚಿದ್ದೇ ಸರಿ ಎಂದು ಹಟ ಹಿಡಿಯುವ ದಡ್ಡನಿಗೆ ಮೂರ್ಖ ಎಂದು ಕರೆಯಬಹುದೇ?

ವಿಚಿತ್ರ ಹೆಡ್ಡತನ ಸಾಕಿಕೊಂಡಿರುವ ಇಂತಹವರಿಗೆ ತಮ್ಮ ಹೊರತು ಉಳಿದೆಲ್ಲವೂ ತಪ್ಪಾಗಿ ಕಾಣಿಸುತ್ತದೆ. ಇಲ್ಲದ್ದನ್ನು ಇದೆ ಎಂದೂ ಇರುವುದನ್ನು ಇಲ್ಲವೆಂದೂ ವಾದಿಸುವ ಚಾಳಿ ತುಸು ಜಾಸ್ತಿಯೇ ಇರುತ್ತದೆ. ಹೇಗಾದರೂ ಗೆಲ್ಲಬೇಕೆಂಬ ತುರುಸು ವರ್ತನೆ ಇವರಲ್ಲಿ ಸದಾ ಜಾಗೃತ.

ತಿಳಿದ ವ್ಯಕ್ತಿಯೂ ಒಮ್ಮೊಮ್ಮೆ ಕಡುಮೂರ್ಖನಾಗಿ ವರ್ತಿಸಬಲ್ಲ. ಕೊನೆಯ ಪಕ್ಷ ಅವನಿಗೆ ಆನಂತರವಾದರೂ ನಾನು ಹೀಗೆ ನಡಕೊಂಡಿದ್ದು, ಮಾತಾಡಿದ್ದು ತಪ್ಪು ಎಂದೆನಿಸಿದರೆ ಅದು ಒಳ್ಳೆಯದು. ಆದರೆ ತನ್ನ ವಿತಂಡವಾದವೇ ಸರಿ ಎಂದು ಭಂಡತನಕ್ಕೆ ಬೀಳುವ ವ್ಯಕ್ತಿಗೆ ಮೂರ್ಖ ಎನ್ನದೆ ಬೇರೆ ದಾರಿಯಿಲ್ಲ.

‘ಮೂರ್ಖನಿಂದ ದೂರವೇ ಇರು. ನಿನಗರಿವಿಲ್ಲದಂತೆ ಆತ ನಿನ್ನನ್ನು ಆಕ್ರಮಿಸಿಕೊಂಡು ಬಿಡುತ್ತಾನೆ. ನಿನ್ನೊಳಗಿರುವ ಅರಿಯುವ ಶಕ್ತಿಯನ್ನು ಕಿತ್ತೆಸೆದು ಹುಂಬುತನ, ಮೊಂಡಾಟ, ಮತ್ತೊಬ್ಬರ ಮಾತನ್ನು ಕೇಳಿಸಿಕೊಳ್ಳದ ಹಟಮಾರಿತನ ನಿನ್ನೊಳಗೆ ತುಂಬುತ್ತಾನೆ’ ಎಂದು ಅನೇಕ ತತ್ವಜ್ಞಾನಿಗಳು ಇಲ್ಲೀತನಕ ಹೇಳುತ್ತಲೇ ಬಂದಿದ್ದಾರೆ. ಮೂರ್ಖರ ಗೆಳೆತನ ಮಾಡಬೇಡಿ. ಮೂರ್ಖರೊಂದಿಗೆ ವಾದ ಮಾಡಬೇಡಿ ಎಂದಿದ್ದಾರೆ ನಮ್ಮ ಜನಪದರು.

ವ್ಯಕ್ತಿಯೊಬ್ಬ ಮೂರ್ಖನೋ ತಿಳಿವಳಿಕಸ್ತನೋ ಎಂದು ಅರ್ಥವಾಗಬೇಕಾದರೆ ಅವನ ಸಂಗ ಮಾಡಲೇಬೇಕಲ್ಲ. ಅನೇಕ ಗಂಡ ಹೆಂಡಿರು ಪರಸ್ಪರ ಆರೋಪ ಮಾಡುವಾಗ ಇಪ್ಪತ್ತೈದು ವರುಷ ಇವರ ಜೊತೆ ಸಂಸಾರ ಮಾಡಿದ ಮೇಲೆ ಇವರಿಷ್ಟು ಮೂರ್ಖರು ಎಂದು ಗೊತ್ತಾಯಿತು ಎನ್ನುತ್ತಾರೆ. ಜೊತೆಗೇ ಬದುಕುವ ವ್ಯಕ್ತಿಯೊಳಗಿನ ಈ ಹಕೀಕತ್ತು ಅರ್ಥಮಾಡಿಕೊಳ್ಳಲು ಇಷ್ಟು ಸುದೀರ್ಘ ಸಮಯ ಬೇಕಾಯಿತೆಂದರೆ...  ಇನ್ನೂ ಕೆಲವೇ ಗಂಟೆಗಳು ನಮ್ಮ ಜೊತೆ ಒಡನಾಡುವ ಸಹೋದ್ಯೋಗಿಗಳು, ಅಪರಿಚಿತರು, ಕೆಲ ಕ್ಷಣಗಳ ಪರಿಚಿತರ ಮನದಾಳದ ಮೂರ್ಖತೆ ಕಂಡು ಹಿಡಿಯಲು ಶತಮಾನಗಳೇ ಬೇಕಾಗಬಹುದು.

ಈ ಪ್ರಪಂಚವು ಮೂರ್ಖರಿಂದ ತುಂಬಿದೆ ನಿಜ. ಆದರೆ ನಾನು ಯಾವ ಮಟ್ಟದ ಮೂರ್ಖ ಎಂಬ ಅಳತೆಯೂ ನಡೆಯಬೇಕಲ್ಲವೇ? ಇನ್ನೊಬ್ಬರ ಹುಳಕು ಹುಡುಕಲು ಬಳಸುವ ಕಣ್ಣುಗಾಜನ್ನು ನನ್ನೊಳಗಿನ ಕೊಳಕುಗಳನ್ನೂ ಶೋಧಿಸುವ ಕೆಲಸಕ್ಕೂ ಬಳಸಬೇಕು. ನಿಮ್ಮ ಕಣ್ಣುಗಳನ್ನು ಮುಚ್ಚಿ ಹತ್ತು ಸೆಕೆಂಡು ನಿಮ್ಮ ಬಗ್ಗೆ ಯೋಚಿಸಿರಿ. ಕಣ್ಣನ್ನು ತೆರೆದ ಬಳಿಕ ನಿಮ್ಮ ಮನಸ್ಸು ಒಬ್ಬ ಮೂರ್ಖನ ಬಗ್ಗೆ ಆಲೋಚಿಸಿ ನಿನ್ನ ಅಮೂಲ್ಯ ಹತ್ತು ಕ್ಷಣಗಳನ್ನು ಅನ್ಯಾಯವಾಗಿ ಹಾಳುಮಾಡಿಕೊಂಡೆ ಎಂದು ಹೇಳುತ್ತದೆ. ಆಗ ಈ ಜಗತ್ತಿನ ಮೂರ್ಖ ಯಾರೆಂದು ನಿಮಗೂ ಅರ್ಥವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT