ನೀವು ಮಂದಿಗೆ ಮೋಸ ಮಾಡಿ ಹೋಳಿಗೆ ನೈವೇದ್ಯ ಮಾಡಿದರೂ ಅದು ದೇವರಿಗೆ ಪ್ರಿಯವಾಗುವುದಿಲ್ಲ. ಕಷ್ಟಪಟ್ಟು ಹೊಲದಾಗೆ ದುಡಿದು ಹುಲ್ಲು ತಂದಿಟ್ಟರೂ ದೇವರಿಗೆ ಪ್ರಿಯವಾಗುತ್ತದೆ ಎನ್ನುತ್ತಾನೆ ಶರಣ ನುಲಿಯ ಚಂದಯ್ಯ. ಕಾಯಕ ಸತ್ಯವಾಗಿರಬೇಕು. ಶುದ್ಧವಾಗಿರಬೇಕು. ಕಾಯಕ ಮುಕ್ತಿಗೆ ಸಾಧನ ಎನ್ನುವ ರೀತಿಯಲ್ಲಿ ಮಾಡುತ್ತಿರಬೇಕು. ಹಾಗಿದ್ದರೆ ಅದು ಚಂದೇಶ್ವರ ಲಿಂಗಕ್ಕೆ ನೈವೇದ್ಯ. ಇನ್ನೊಬ್ಬರಿಗೆ ಮೋಸಮಾಡಿ ಉಣ್ಣೋದಲ್ಲ. ಕಾಯಕದಿಂದ ಗಳಿಸಿದ್ದನ್ನು ಉಣ್ಣೋದು.
ನಮ್ಮಲ್ಲಿ ಮೂರು ರೀತಿಯ ಜನರಿದ್ದಾರೆ. ‘ನಮ್ಮಪ್ಪ ಜಗ್ಗಿ ಮಾಡಿಟ್ಟಾನ, ನಾನು ದುಡಿಯೋದೇ ಬೇಡ’ ಎಂದು ಹೇಳೋವ್ರದ್ದು ಒಂದು ಗುಂಪು. ಬೆಳಿಗ್ಗೆ ಎದ್ದು ತಕ್ಷಣ ಯಾರಿಗೆ ಮೋಸ ಮಾಡಿಗಳಿಸಬೇಕು ಅಂತ ಯೋಚನೆ ಮಾಡೋರದ್ದು ಒಂದು ಗುಂಪು. ಇನ್ನು ಕೆಲವರು ಕಾಯಕ ಮಾಡಿ ಉಣ್ಣುತ್ತಾರ. ನಮ್ಮ ಅಪ್ಪ, ಅಜ್ಜ ಮಾಡಿಟ್ಟಿದ್ದನ್ನು ನಾವು ಉಣ್ಣುತೀವಿ ಅಂದರ ಅದು ತಾಜಾ ಅಡುಗೆ ಅಲ್ಲ. ಹಳಸಿದ ಅಡುಗೆ. ನಾ ದುಡಿದಿದ್ದಲ್ಲ ಎಂಬ ಅರಿವಿರಬೇಕು. ಇನ್ನೊಬ್ಬರಿಗೆ ಮೋಸ ಮಾಡಿ ನಾ ಉಣತೀನಿ ಅಂದರ ಅದು ಇನ್ನೊಬ್ಬರ ಎಂಜಲು ಉಂಡಂಗ. ಕಾಯಕದಿಂದ ಬಂದಿದ್ದನ್ನು ಉಣ್ಣುತ್ತೀರಿ ಎಂದರೆ ಅದು ದೇವರು ನಮಗೆ ಕೊಟ್ಟ ಪ್ರಸಾದ.
ಮನುಷ್ಯ ದುಡಿದು ತಿನ್ನಬೇಕು. ಬೇಡಿ ತಿನ್ನೋದಲ್ಲ. ನಾವು ಎಲ್ಲಿ ಹೋದರೂ ಬೇಡೋದನ್ನ ಬಿಡೋದಿಲ್ಲ. ಹುಡುಗ ಎಂಎ ಮಾಡ್ಯಾನ, ಪಿಎಚ್ ಡಿ ಮಾಡ್ಯಾನ. ಆದರೂ, ಕನ್ಯಾ ನೋಡೋಕೆ ಹೋದಾಗ ಎಷ್ಟು ಕೊಡ್ತೀರಿ ಎಂದು ಬೇಡುತ್ತಾನ. ಪಾಪ ಆಕಿ ತನ್ನ ಮನಿ ಬಿಟ್ಟು ಇವನ ಮನೀಗೆ ಬರಾಕ ಹತ್ತೈತಿ. ಒಂದು ಹೆಣ್ಣು ಮಗಳನ್ನು ತನ್ನ ಮನೀಗೆ ಕರಕೊಂಡು ಬಂದು ಜ್ವಾಪಾನ ಮಾಡೋ ಯೋಗ್ಯತೆ ಇಲ್ಲ ಅಂದ್ರ ಹ್ಯಾಂಗ? ಓದ್ಯಾನ, ಎಲ್ಲಾ ಮಾಡ್ಯಾನ, ಆದರೂ ಬೇಡತಾನ. ತನ್ನ ತೋಳು ಬಲದ ಮ್ಯಾಲೆ ಅವಗ ನಂಬಿಕೆ ಇಲ್ಲ, ಮಾವ ಕೊಡೋ ವರದಕ್ಷಿಣೆ ಮೇಲೆ ನಂಬಿಕೆ ಇವಗ. ಮಾವ ಕೊಟ್ಟಿದ್ದು ಮನೆ ತನಕ, ಮಹದೇವ ಕೊಟ್ಟಿದ್ದು ಕೊನೆತನಕ ಎಂಬುದನ್ನು ತಿಳಕೋಬೇಕು ಮನುಷ್ಯ.
ದೇವರ ಗುಡಿಗೆ ಹೋದರೂ ಅಲ್ಲೂ ಬೇಡೋದು. ಒಂದು ರೂಪಾಯಿ ಹುಂಡಿಗೆ ದಕ್ಷಿಣೆ ಹಾಕಿ ಲಕ್ಷ ಲಕ್ಷ ಕೋಟಿ ಕೋಟಿ ಬೇಡ್ತಾರ. ಗುಡಿ ಹೊರಗೂ ಭಿಕ್ಷುಕರು ಇರ್ತಾರ. ಅವರು ಒಂದು, ಎರಡು ರೂಪಾಯಿ ಕೇಳ್ತಾರ. ಇವನೂ ಭಿಕ್ಷುಕನೆ ಅವರೂ ಭೀಕ್ಷುಕರೆ. ಇವ ಒಳಕ್ಕೆ ಲಕ್ಷ ಕೇಳ್ತಾನ. ಹೊರಗಡೆ ಇರುವ ಅವರು ಲೋಕಲ್ ಭಿಕ್ಷುಕರು, ಇವ ಇಂಟರ್ ನ್ಯಾಷನಲ್ ಭಿಕ್ಷುಕ. ಕಾರ್ಪೊರೇಟ್ ಭಿಕ್ಷುಕ ಅಂತನೂ ಕರೀಬಹುದು. ಎಲ್ಲರೂ ಭಿಕ್ಷುಕರೆ. ದೇವರು ಕೈ ಎದಕ್ಕ ಕೊಟ್ಟಾನ ದುಡುದು ಬದುಕು ಅಂತ ಕೊಟ್ಟಾನ. ಮನುಷ್ಯ ದುಡಿದ ಅಂದರ ಸಮೃದ್ಧಿ ಬರತೈತಿ. ದುಡಿಮೆಯಿಂದ ಚಿಂತೆಗಳು ದೂರವಾಗುತ್ತವೆ. ಮೈಮುರಿದು ದುಡಿಯೋ ಕೆಲಸಿಲ್ಲ ಅದಕ್ಕ ನಿದ್ದಿ ಬರಲಾಗದಷ್ಟು ಚಿಂತಿ ಕಾಡ್ತಾವ. ಹೊಲದಾಗ ವ್ಯವಸಾಯ ಮಾಡದಿದ್ದರ ಕಸ ಬೆಳೀತಾವ. ಹಾಗೇನೆ ಯಾವ ಮನಸ್ಸು, ಮೈ ದುಡಿಯೋದಿಲ್ಲ ಅಲ್ಲಿ ಚಿಂತಿ ಬರ್ತಾವ. ಅದಕ್ಕ ದುಡಕೋತ ಇರಬೇಕು. ಮಕ್ಕಳಿಗೆ ದುಡಿಯೋದ ಕಲಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.