ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಛಲವೊಂದಿದ್ದರೆ ಗೆಲುವು ನಿಶ್ಚಿತ

Published 8 ಮೇ 2024, 22:55 IST
Last Updated 8 ಮೇ 2024, 22:55 IST
ಅಕ್ಷರ ಗಾತ್ರ

ಹುಟ್ಟು ಕುರುಡನಾಗಿ ಆತ ಹುಟ್ಟಿದ್ದು ಆಂಧ್ರದ ಒಂದು ಸಾಧಾರಣ ಕುಟುಂಬದಲ್ಲಿ. ದಿನವೂ ನಾಲ್ಕು ಕಿಲೋಮೀಟರ್‌ ನಡೆದುಕೊಂಡೇ ಶಾಲೆಗೆ ಹೋಗಬೇಕು. ಕಣ್ಣಿಲ್ಲದ ಕಾರಣ ಶಾಲೆಯಲ್ಲಿ ಏಕಾಂಗಿ. ನಂತರ ಹೈದರಾಬಾದಿನ ವಿಶೇ಼ಷ ಶಾಲೆಗೆ ಸೇರಿಕೊಂಡ ಮೇಲೆ ಓದಿನಲ್ಲಿ ಮಾತ್ರವಲ್ಲ, ಚೆಸ್‌ ಮತ್ತು ಕ್ರಿಕೆಟ್‌ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿ ಸರ್ವಾಂಗೀಣ ಪ್ರಗತಿ ತೋರಿದ.

ಹತ್ತನೇ ತರಗತಿಯಲ್ಲಿ ತೊಂಬತ್ತು ಶೇಕಡಾ ಅಂಕ ಗಳಿಸಿದರೂ ವಿಜ್ಞಾನ ವಿಭಾಗಕ್ಕೆ ಸೇರಿಸಿಕೊಳ್ಳಲು ಯಾವ ಕಾಲೇಜೂ ಒಪ್ಪಲಿಲ್ಲ. ಕೋರ್ಟ್‌ ಮೊರೆ ಹೋದ ಆತ ಆರು ತಿಂಗಳ ನಂತರ ತನ್ನ ಪರವಾಗಿ ಬಂದ ತೀರ್ಪಿನಿಂದ ಕಾಲೇಜು ಸೇರಿಕೊಂಡ. ಹನ್ನೆರಡನೇ ತರಗತಿಯಲ್ಲಿ 98 ಶೇಕಡಾ ಅಂಕಗಳಿಸಿ ಮೊದಲ ಸ್ಥಾನ ಪಡೆದ.

ಐಐಟಿಯಲ್ಲಿ ಎಂಜಿನಿಯರಿಂಗ್‌ ಓದಬೇಕೆಂದರೆ ಕುರುಡುತನದ ಕಾರಣದಿಂದ ಪ್ರವೇಶಪರೀಕ್ಷೆಯ ಪ್ರವೇಶಪತ್ರವೇ ನಿರಾಕರಿಸಲ್ಪಟ್ಟಿತು. ಆದರೆ ಅವರ ಅರ್ಜಿಯನ್ನು ಮನ್ನಿಸಿದ ಎಂಐಟಿ, ಸ್ಟ್ಯಾನ್‌ಫೋರ್ಡ್‌, ಬರ್ಕ್‌ಲಿ ಸೇರಿದಂತೆ ಅಮೆರಿಕದ ನಾಲ್ಕು ಪ್ರತಿಷ್ಟಿತ ವಿದ್ಯಾಸಂಸ್ಥೆಗಳು ಪ್ರವೇಶ ನೀಡಿದವು. ಎಂಐಟಿಯ ಮೊದಲ ಅಂತಾರಾಷ್ಟ್ರೀಯ ಅಂಧ ವಿದ್ಯಾರ್ಥಿ ಅವರು. ಓದುತ್ತಿರುವಾಗಲೇ ದೊಡ್ಡಮೊತ್ತದ ಸಂಬಳವಿರುವ ಕೆಲಸದ ಆಫರ್‌ಗಳು ಬಂದವು. ಆದರೆ ಅವರಿಗೋ ತಾನು ಅಂಗವೈಕಲ್ಯದಿಂದ ಎದುರಿಸಿದ ಸಮಸ್ಯೆಗಳಿಂದ ಇತರರು ನರಳದಂತೆ ಪರಿಹಾರ ಕಂಡು ಹಿಡಿದು ಭಾರತದಲ್ಲಿಯೇ ಏನಾದರೂ ಮಾಡಬೇಕೆಂಬ ಛಲ.
ತನ್ನಂತೆಯೇ ದೈಹಿಕ ಸಮಸ್ಯೆ ಇರುವವರಿಗಾಗಿ ಅವರು ಹಲವಾರು ಯೋಜನೆಗಳನ್ನು ಶುರುಮಾಡಿದರು. ಬ್ರೈಲ್‌ ಲಿಪಿಯ ಮುದ್ರಣಾಲಯ ಪ್ರಾರಂಭಿಸಿದರು. ಹೈದರಾಬಾದಿನಲ್ಲಿ ಬೊಲಂಟ್‌ ಇಂಡಸ್ಟ್ರೀಸ್‌ ಸ್ಥಾಪಿಸಿ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಲು ಒತ್ತು ಕೊಟ್ಟರು. ದೈಹಿಕ ಸಮಸ್ಯೆ ಇರುವವರಿಗೇ ಉದ್ಯೋಗ ನೀಡಿದರು. 2017ರಲ್ಲಿ ಕಂಪನಿ ನೂರೈವತ್ತು ಕೋಟಿ ರೂಪಾಯಿ ವ್ಯವಹಾರ ನಡೆಸಿತು. ಅದೇ ವರ್ಷ ಫೋರ್ಬ್ಸ್‌ ನಿಯತಕಾಲಿಕ ಗುರುತಿಸಿದ ಮೂವತ್ತು ವರ್ಷದೊಳಗಿನ ಮೂವತ್ತು ಮಂದಿ
ಏಷ್ಯಾದ ಯುವ ಉದ್ಯಮಿಗಳಲ್ಲಿ ಇವರೂ ಒಬ್ಬರು.

ಈ ಅಸಾಮಾನ್ಯ ವ್ಯಕ್ತಿಯ ಹೆಸರು ಶ್ರೀಕಾಂತ್‌ ಬೊಲ್ಲಾ. ಬದುಕಿನಲ್ಲಿ ಹುಟ್ಟಿನಿಂದಲೇ ಸವಾಲುಗಳು ಇರಬಹುದು, ಯಾವುದೋ ಘಟ್ಟದಲ್ಲಿ ಬೇಕಾದರೂ ಬರಬಹುದು. ಧೃತಿಗೆಡದೇ ಅವುಗಳನ್ನು ನಿಭಾಯಿಸಿಕೊಂಡು ಹೇಗೆ ಮುಂದುವರಿಯಬಹುದು ಎನ್ನುವುದಕ್ಕೆ ಶ್ರೀಕಾಂತ್‌ ಅತ್ಯುತ್ತಮ ಉದಾಹರಣೆ. ಜಗತ್ತಿಗೆ ಒಳ್ಳೆಯದನ್ನು ಮಾಡ ಹೊರಟಾಗ ನಮಗೂ ಒಳ್ಳೆಯದೇ ಆಗುತ್ತದೆ ಎನ್ನುವ ಇವರ ಬಗ್ಗೆ ‘ಶ್ರೀಕಾಂತ್‌’ ಎಂಬ ಹೆಸರಿನ ಸಿನಿಮಾ ಕೂಡ ನಿರ್ಮಾಣವಾಗುತ್ತಿದ್ದು ಕಳೆದ ವಾರವಷ್ಟೇ ಟ್ರೇಲರ್‌
ಬಿಡುಗಡೆಯಾಗಿದೆ. ನಟ ರಾಜ್‌ಕುಮಾರ್‌ ರಾವ್‌ ಇವರ ಪಾತ್ರ ನಿರ್ವಹಿಸುತ್ತಿದ್ದಾರೆ. ‌ ನಿಜ, ದೃಷ್ಟಿ ಇಲ್ಲದವರು ವಿಕಲಚೇತನರಲ್ಲ, ದೃಷ್ಟಿ ಇದ್ದರೂ ದೂರದೃಷ್ಟಿ ಇಲ್ಲದವರೇ ವಿಕಲಚೇತನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT