ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಕೀಳರಿಮೆ ಕಿತ್ತು ಹಾಕಿ

Published 12 ಫೆಬ್ರುವರಿ 2024, 0:46 IST
Last Updated 12 ಫೆಬ್ರುವರಿ 2024, 0:46 IST
ಅಕ್ಷರ ಗಾತ್ರ

ವಿಕಾಸ ಒಳ್ಳೆಯ ಮಾತುಗಾರ. ಆದರೆ ಕಾಲೇಜಿನ ಸಭೆಗಳಲ್ಲಿ ಮಾತನಾಡಲು ಆತನಿಗೆ ಅಳಕು. ಬುದ್ಧಿವಂತಿಕೆಯಲ್ಲಿ, ವಿಷಯ ಸಂಗ್ರಹಣೆಯಲ್ಲಿ ಇವನಿಗಿಂತ ದುರ್ಬಲರಾದವರು ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸುತ್ತಿದ್ದರು. ವಿಕಾಸನನ್ನು ವೇದಿಕೆ ಏರದಂತೆ ಕಾಡುತ್ತಿದ್ದ ಮುಖ್ಯ ಸಮಸ್ಯೆ ಎಂದರೆ ಅವನಲ್ಲಿದ್ದ ಕೀಳರಿಮೆ ಅಥವಾ ಹಿಂಜರಿಕೆ. ತಾನು ಗ್ರಾಮೀಣ ಪ್ರದೇಶದ ಕನ್ನಡ ಶಾಲೆಯಲ್ಲಿ ಕಲಿತವನು, ಕಾನ್ವೆಂಟ್ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಸರಾಗವಾಗಿ ಮಾತಾಡುತ್ತಾರೆ, ನನಗದು ಸಾಧ್ಯವಾಗದು. ಅವರೆದುರು ಸ್ಪರ್ಧೆಗಿಳಿದರೆ ಎಲ್ಲಿ ಅವಮಾನಿತನಾಗುತ್ತೇನೋ ಎಂಬ ಅಳಕು ವಿಕಾಸನಿಗೆ. ಹಾಗೆಯೇ ಲಕ್ಷ್ಮಿಗೆ ಒಳ್ಳೆಯ ಕಂಠಸಿರಿ ಇದೆ. ಆದರೆ ತನಗಿಂತಲೂ ಚೆನ್ನಾಗಿ ಹಾಡುವವರಿದ್ದಾರೆ ಅವರೆದುರು ಸ್ಪರ್ಧಿಸಲಾರನೆಂಬ ಹಿಂಜರಿಕೆ ಅವಳದ್ದು. ಹೀಗಾಗಿ ಮನೆಯಲ್ಲಿ ಸುಶ್ರಾವ್ಯವಾಗಿ ಹಾಡುವ ಆಕೆ ಶಾಲೆಯ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಹೀಗಾಗಿ ಅವಳ ಪ್ರತಿಭೆ ಬೆಳಕಿಗೇ ಬರಲಿಲ್ಲ. ರಮೇಶನಿಗೆ ಉತ್ತರಗಳೆಲ್ಲವೂ ಗೊತ್ತಿದ್ದರೂ ಪರೀಕ್ಷೆ ಕುರಿತಾಗ ತಾನು ಬೇರೆಯವರಿಗಿಂತ ದಡ್ಡನೆಂಬ ಕೀಳರಿಮೆಯ ಭಾವ ಕಾಡಿ ಸರಿಯಾಗಿ ಬರುತ್ತಿದ್ದ ಉತ್ತರವನ್ನೂ ತಪ್ಪಾಗಿ ಬರೆದು ಕಡಿಮೆ ಅಂಕ ಗಳಿಸಿ ದುಃಖಿತನಾಗುತ್ತಿದ್ದ.

ನಮ್ಮ ವ್ಯಕ್ತಿತ್ವಕ್ಕೆ ಕಾಟ ಕೊಡುವ ಅತಿ ದೊಡ್ಡ ವೈರಸ್ ಎಂದರೆ ಕೀಳರಿಮೆ ಅಥವಾ ಹಿಂಜರಿಕೆ. ನಮಗೆ ಗೊತ್ತಿರುವ ವಿಷಯವನ್ನೂ ಗೊತ್ತಾಗಲು ಬಿಡದ ವೈರಸ್ಸೇ ಈ ಕೀಳರಿಮೆ. ಇದಕ್ಕೆ ಇಂಗ್ಲಿಷ್‌ನಲ್ಲಿ INFERIORITY COMPLEX ಎನ್ನುತ್ತಾರೆ. ಹೆಚ್ಚಾಗಿ ಬಾಲ್ಯದಲ್ಲಿ ಅಂಟಿಕೊಳ್ಳುವ ಈ ವೈರಸ್ಸು, ದೊಡ್ಡವರಾದ ಮೇಲೂ ಹಾಗೇ ಉಳಿದುಕೊಂಡರೆ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಧನೆ ಮಾಡದಂತೆ ಬಿಡದೆ ಕಾಡುತ್ತದೆ. ಎಲ್ಲಾ ವ್ಯಕ್ತಿಗಳಲ್ಲೂ ಸಾಮರ್ಥ್ಯ ಹಾಗೂ ದೌರ್ಬಲ್ಯಗಳೆರಡೂ ಇರುತ್ತವೆ. ಯಶಸ್ವೀ  ವ್ಯಕ್ತಿಗಳು ತಮ್ಮ ಸಾಮರ್ಥ್ಯದ ಕಡೆಗೆ ಗಮನ ಕೇಂದ್ರೀಕರಿಸಿ ಶ್ರಮಪಟ್ಟು ಸಾಧನೆಯ ಮೆಟ್ಟಿಲೇರುತ್ತಾರೆ. ಅದೇ ರೀತಿ ಅವರಿಗೆ ತಮ್ಮ ದೌರ್ಬಲ್ಯಗಳ ಅರಿವೂ ಇರುತ್ತದೆ. ಆದರೆ ಯಶಸ್ಸು ಪಡೆಯದೇ ಸದಾ ಕೊರಗುವವರು ತಮ್ಮ ದೌರ್ಬಲ್ಯಗಳನ್ನೇ ದೊಡ್ಡದಾಗಿಸಿಕೊಂಡು ಕೀಳರಿಮೆಗೆ ಒಳಗಾಗಿ ತಮ್ಮ ಸಾಮರ್ಥ್ಯಗಳೇನೆಂದು ಗುರುತಿಸಿಕೊಳ್ಳುವುದೇ ಇಲ್ಲ.

ಕೀಳರಿಮೆಗೆ ಮುಖ್ಯ ಕಾರಣವೆಂದರೆ ಸೋಲಿನ ಭಯ. ಸೋಲು ಎಂಬುದರ ಆಂಗ್ಲ ರೂಪವಾದ FAIL ಅನ್ನು First Attempt In Learning ಎಂದು ಧನಾತ್ಮಕವಾಗಿ ವಿಸ್ತರಿಸಬಹುದು. ಹೀಗಾಗಿ ವೈಫಲ್ಯದ ಕಥೆಗಳನ್ನು ಓದಿದರೆ ಯಶಸ್ಸಿನ ದಾರಿ ಖಂಡಿತ ಗೋಚರಿಸುತ್ತದೆ. ಅದೇ ರೀತಿ ದೈಹಿಕ ರೂಪ, ವೃತ್ತಿ ಅಂತಸ್ತುಗಳೂ ಕೀಳರಿಮೆಯ ಭಾವನೆಗೆ ಕಾರಣವಾಗುತ್ತವೆ. ಕೀಳರಿಮೆಯನ್ನು ಹೋಗಲಾಡಿಸಲು ಸೋಲಿಗೆಂದೂ ಅಂಜದ, ಸೋಲಿನಿಂದ ಕಲಿಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಿ ಅದರ ಮೇಲೆ ನಂಬಿಕೆಯಿರಿಸಿ ಪರಿಶ್ರಮ ಪಡಬೇಕು. ಬಸವಣ್ಣನವರು ಹೇಳಿದಂತೆ ‘ಕಾಯಕವೇ ಕೈಲಾಸ’ ಎಂದುಕೊಂಡು ನಾವು ಮಾಡುವ ಕೆಲಸ ಶ್ರೇಷ್ಠವಾದದ್ದೆಂದು ಅದನ್ನು ಸದಾ ಪ್ರೀತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT