ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು– 27: ಫಲದ ಅಪೇಕ್ಷೆ ಬೇಡ!

Published : 19 ಸೆಪ್ಟೆಂಬರ್ 2024, 23:57 IST
Last Updated : 19 ಸೆಪ್ಟೆಂಬರ್ 2024, 23:57 IST
ಫಾಲೋ ಮಾಡಿ
Comments

ದಕ್ಷಿಣ ಆಫ್ರಿಕಾ ದೇಶದಲ್ಲಿ ನೆಲ್ಸನ್ ಮಂಡೇಲ ಅಂತ ಒಬ್ಬರಿದ್ದರು. ಅವರನ್ನು ಕಪ್ಪು ಸೂರ್ಯ ಅಂತ ಕರೀತಿದ್ರು. ಕತ್ತಲಕೋಣೆಯಲ್ಲಿ ಅವರು 26 ವರ್ಷ ಇದ್ದರು. ಒಮ್ಮೆ ಅಬ್ದುಲ್ ಕಲಾಂ ಅವರು ಮಂಡೇಲ ಅವರಿಗೆ ‘ನೀವು 26 ವರ್ಷ ಜೈಲಿನಲ್ಲಿದ್ದಿರಿ. ಕತ್ತಲ ಕೋಣೆಯಲ್ಲಿ ಅಷ್ಟೊಂದು ವರ್ಷ ಕಳೆಯಲು ನಿಮಗೆ ಶಾಂತಿ, ತಾಳ್ಮೆ ಹೇಗೆ ಬಂತು’ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಮಂಡೇಲ, ‘ನಾನು ತಾಳ್ಮೆಯಿಂದ ಇರಲು ಸ್ಫೂರ್ತಿ ಬಂದಿದ್ದು ಭಾರತದಿಂದ. ನಿಮ್ಮ ಗಾಂಧೀಜಿಯಿಂದ ಅದನ್ನು ಕಲಿತೆ’ ಎಂದು ಉತ್ತರಿಸಿದರಂತೆ.

ನಮ್ಮ ದೇಶ, ನಮ್ಮ ಊರಿನ ಬಗ್ಗೆ ನಮಗೆ ಅಭಿಮಾನ ಇರಬೇಕು. ಸುಮ್ಮನೆ ಕೆಲಸ ಮಾಡಬೇಕು. ಫಲದ ಬಗ್ಗೆ ಆಲೋಚಿಸಬಾರದು. ಆದರೆ ನಮಗೆ ಯಾವಾಗಲೂ ಫಲದ ಮೇಲೇ ಕಣ್ಣು. ಕೆಲಸಕ್ಕೆ ಮೊದಲೇ ಫಲ ಕೇಳ್ತೀವಿ ನಾವು. ಈಗ ಪೂಜೆ ಮಾಡ್ತೇವೆ. ನೀರು ಹಾಕಿ ಪೂಜೆ ಮಾಡ್ತೀವಿ. ಹೂವು ಹಾಕಿ ಪೂಜೆ ಮಾಡ್ತೀವಿ. ನೈವೇದ್ಯ ಇಟ್ಟು ಪೂಜೆ ಮಾಡ್ತೀವಿ.

ಅಲ್ಲಮ ಪ್ರಭು ಅಂತಾರೆ, ‘ಮಜ್ಜನಕ್ಕೆರೆದು ಫಲವಬೇಡುವರಯ್ಯಾ ತಮಗೆಲ್ಲಿಯದೋ ಆ ಫಲವು ಸೀತಾಳಕ್ಕಲ್ಲದೆ’ ಎಂದು. ನೀರು ಹಾಕಿ ಪೂಜೆ ಮಾಡಿದರೆ ಫಲ ಬರತೈತಿ ಅಂದರೆ ಫಲ ಹೊಳೆಗೆ ಹೋಗಬೇಕು. ಯಾಕೆಂದರೆ ನೀರು ಹೊಳೆಯದ್ದು. ಹೂವು ಏರಿಸಿದರೆ ಫಲ ಸಿಗತೈತಿ ಎಂದರೆ ಫಲ ಬಳ್ಳಿಗೆ ಹೋಗಬೇಕು. ಯಾಕೆಂದರೆ ಹೂವು ಬಳ್ಳೀದು. ನೈವೇದ್ಯ ಇಟ್ಟರೆ ಫಲ ಸಿಗತೈತಿ ಅಂದರೆ ಅದು ನಮಗೆ ಬರಲ್ಲ. ಅದು ಬೆಳೆದ ಭೂಮಿ ತಾಯಿಗೆ ಹೋಗತೈತಿ. ಫಲ ಬೇಡೋದಲ್ಲ. ಅದಾಗಿಯೇ ಬರಬೇಕು. ಪಂಚಾಕ್ಷರಿ ಗವಾಯಿಗಳು ತಮಗೆ ಪ್ರಶಸ್ತಿ ಬರಲಿ ಅಂತ ಕೆಲಸ ಮಾಡಿದರೇನು? ತಮಗೆ ಕಣ್ಣಿಲ್ಲದಿದ್ದರೂ ಕಣ್ಣಿಲ್ಲದವರ ಸೇವೆ ಮಾಡಿದರು. ತಮ್ಮ ಕೆಲಸ ತಾವು ಮಾಡುತ್ತಾ ಹೋದರು. ಎಲ್ಲ ಪ್ರಶಸ್ತಿಗಳೂ ಅವರ ಪಾದಕ್ಕೆ ಬಂದು ಬಿದ್ದವು. ಯಾವ ಮನುಷ್ಯ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾನೋ ಅವನಿಗೆ ನಿಸರ್ಗ ಪೋಸ್ಟ್ ಕಾರ್ಡ್‌ನಂತೆ ಫಲವನ್ನು ಮುಟ್ಟಿಸಿ ಹೋಗತೈತಿ.

ಬಾಲಗಂಗಾಧರನಾಥ ತಿಲಕ ಅಂತಾ ಒಬ್ಬರಿದ್ದರು. ಅವರು ಸಣ್ಣವರಿದ್ದಾಗ ಶಾಲೆಯಲ್ಲಿ ಅವರ ಸ್ನೇಹಿತ ಶೇಂಗಾ ತಿಂದು ಸಿಪ್ಪೆ ಇವರ ಮುಂದೆ ಹಾಕಿದ. ಹೆಡ್ ಮಾಸ್ತರ್ ಬಂದು ನೋಡಿದಾಗ ತಿಲಕರ ಮುಂದೆ ಶೇಂಗಾ ಸಿಪ್ಪೆ ಇತ್ತು. ಇವರೇ ತಿಂದಿದ್ದಾರೆ ಎಂದು ಎರಡು ಏಟು ಹಾಕಿ ಮನೆಗೆ ಕಳಿಸಿದರು. ಮನೆಯಲ್ಲಿ ತಿಲಕರ ತಂದೆ ‘ಯಾಕ್ ಇಷ್ಟು ಬೇಗ ಬಂದಿ’ ಎಂದು ಕೇಳಿದರು. ಅದಕ್ಕೆ ಶಾಲೆಯಲ್ಲಿ ನಡೆದ ವಿಷಯ ತಿಳಿಸಿದರು ಬಾಲ ತಿಲಕ. ಮಗನನ್ನು ಶಾಲೆಗೆ ಕರೆದುಕೊಂಡು ಬಂದು ಮಾಸ್ತರ್ ಕೈಯಲ್ಲಿದ್ದ ಬಡಿಗೆ ತಗೊಂಡು ಮಗನಿಗೆ ಹೊಡೆದರು. ‘ಯಾಕ್ ಹೊಡೀತೀರಿ. ಅವ ತಪ್ಪು ಮಾಡಿಲ್ಲ ಅಂತಾನಲ್ಲ’ ಎಂದು ಮಾಸ್ತರ್ ಕೇಳಿದ್ದಕ್ಕೆ ತಿಲಕರ ತಂದೆ ‘ಅವ ಶೇಂಗಾ ತಿಂದಿಲ್ಲ ಅನ್ನೋದು ನನಗೆ ಗೊತ್ತದೆ. ಆದರೆ ಯಾರೇ ತಿನ್ನಲಿ. ಶಾಲೆ ನಮ್ಮದಲ್ವಾ ಇವ ಯಾಕೆ ಕಸ ತೆಗೆದಿಲ್ಲ ಎಂದು ಹೊಡ್ಯಾಕತ್ತೀನಿ’ ಎಂದರು. ಅದು ತಿಲಕರಿಗೆ ಪಾಠ ಆಯ್ತು. ಮುಂದೆ ತಿಲಕರು ತಮ್ಮ ಪಾಡಿಗೆ ತಾವು ದೇಶದ ಕೆಲಸ ಮಾಡಿದರು. ಅದಕ್ಕೇ ಅವರು ದೇಶದ ತಿಲಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT