ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ನಂಬಿಕೆ 

Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

ಶಾಲೆಗೆ ಬಂದ ತಾಯಿಗೆ ಮಗ ಮೂಲೆಯಲ್ಲಿ ಕೂತಿರುವುದು ಕಾಣುತ್ತದೆ. ಅವನಿಗೆ ಮಾತಾಡದಿರುವಂತೆ ತಾಕೀತು ಮಾಡಲಾಗಿತ್ತು. ಮಗನನ್ನು ಆಕೆ ಯಾವತ್ತು ಹಾಗೆ ನೋಡೇ ಇರಲಿಲ್ಲ. ತುಂಬಾ ಸಂಕಟ ಅನ್ನಿಸುತ್ತೆ. ‘ಅಂಥಾ ತಪ್ಪನ್ನು ನನ್ನ ಮಗ ಏನು ಮಾಡಿದ?’ ಎಂದು ಟೀಚರ್‌ರನ್ನು ಕೇಳಿದಳು. 

ಶಾಲೆಯಲ್ಲಿ ಮಗನ ಟೀಚರ್ ಹೇಳಿದರು, ‘ಎಡ್ಡಿಯನ್ನು ನೀವು ಹೇಗೆ ಬೆಳೆಸಿದ್ದೀರಿ? ಅವನಿಗೆ ನಾವು ಹೇಳಿಕೊಡುವುದನ್ನು ಕಲಿಯಬೇಕೆನ್ನುವುದೇ ಇಲ್ಲ. ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ನಮ್ಮನ್ನು ಪೇಚಿಗೆ ಸಿಗಿಸುತ್ತಾನೆ. ಮೊಟ್ಟೆಯ ಮೇಲೆ ನಾವು ಕಾವು ಕೂತರೆ ಯಾಕೆ ಮರಿಯಾಗಲ್ಲ, ಒಡೆದುಹೋಗುತ್ತದೆ ಎನ್ನುತ್ತಾನೆ. ಇವನಿಂದಾಗಿ ಎಲ್ಲ ಮಕ್ಕಳು ಹಾಳಾಗುತ್ತಿದ್ದಾರೆ, ಎಲ್ಲರಿಗೂ ಇವನು ತಮಾಷೆಯ ವಸ್ತುವಾಗಿದ್ದಾನೆ’ ಎಂದು.

ತಾಯಿಗೆ ಕೋಪ ಬರುತ್ತದೆ. ‘ನಿಮಗೆ ನನ್ನ ಮಗನ ಪ್ರಶ್ನೆಗೆ ಉತ್ತರ ಕೊಡಲಾಗಲಿಲ್ಲ ಎಂದರೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಿ. ಬದಲಿಗೆ ನನ್ನ ಮಗನದ್ದೇ ತಪ್ಪು ಎನ್ನಬೇಡಿ’ ಎನ್ನುತ್ತಾಳೆ. ಟೀಚರ್‌ಗೂ ಕೋಪ ಬರುತ್ತದೆ, ‘ಬಾಯಿಗೆ ಬಂದ ಪ್ರಶ್ನೆ ಕೇಳುವ ಮಗನಿಗೆ ಬುದ್ಧಿ ಹೇಳಲಾಗದಿದ್ದರೆ ನಿಮ್ಮ ಮಗನಿಗೆ ನೀವೇ ಪಾಠ ಹೇಳಿ. ನಿಮ್ಮ ಪಾಲಿಗೆ ಅವನು ಬುದ್ಧಿವಂತ ಅಲ್ಲವೇ? ಅವನಿಗೆ ನಮ್ಮ ಶಾಲೆಯ ಅಗತ್ಯ ಇಲ್ಲ’ ಎನ್ನುತ್ತಾರೆ.

ತಾಯಿಗೆ ತುಂಬಾ ನೋವಾಗುತ್ತದೆ. ಅವಳ ಒಳ ಮನಸ್ಸಿಗೆ ಗೊತ್ತು ತನ್ನ ಮಗನ ಪ್ರಶ್ನೆಗಳ್ಯಾವುವೂ ಉದ್ಧಟತನದಿಂದ ಬಂದದ್ದದಲ್ಲ ಎಂದು. ಒಂದು ನಿರ್ಧಾರಕ್ಕೆ ಬಂದ ತಾಯಿ ಟೀಚರ್‌ಗೆ ಹೇಳುತ್ತಾಳೆ, ‘ಗಾಳಿ ಹೊತ್ತುಬರುವ ಪುಟ್ಟ ಬೀಜದಲ್ಲಿ ವೃಕ್ಷವಾಗುವ ಶಕ್ತಿ ಇದೆಯೆಂದು ನೀವು ನಂಬಲಾರಿರಿ. ಈ ಪುಟ್ಟ ಹುಡುಗನ ಪ್ರಶ್ನೆಗೆ ದೊಡ್ಡದನ್ನು ಹುಡುಕುವ ತಾಕತ್ತಿದೆ ಎಂದು ನೀವು ಅಂದುಕೊಳ್ಳುವುದೂ ಇಲ್ಲ. ನನಗೆ ಗೊತ್ತು ನನ್ನ ಮಗ ಸುಮ್ಮನೆ ಹುಟ್ಟಿಬಂದಿಲ್ಲ.  ಅಸಾಧಾರಣವಾದದ್ದನ್ನು ಸಾಧಿಸುವ ಚೈತನ್ಯ ಅವನಲ್ಲಿದೆ. ನಿಮ್ಮ ಶಿಕ್ಷಣ ಅವನಿಗೆ ಬೇಡ. ಚರಿತ್ರೆಯಲ್ಲಿ ಮಗನಿಗೆ ಪಾಠ ಹೇಳಿದ ತಾಯಿಯಾಗಿ ನಾನು ಉಳಿಯುತ್ತೇನೆ, ಗಿಣಿಯ ಪಾಠ ಹೇಳುವ ನೀವಲ್ಲ’ ಎಂದು. 

ಮನೆಗೆ ಕರೆತಂದ ತಾಯಿ ಮಗನ ಪ್ರಶ್ನೆಗಳನ್ನು ಸಾವಧಾನವಾಗಿ ಕೇಳಿಸಿಕೊಳ್ಳುತ್ತಾಳೆ. ಉತ್ತರ ಹೇಳುತ್ತಾಳೆ. ಇಲ್ಲದಿದ್ದರೆ ಹುಡುಕುತ್ತಾಳೆ. ಅವನೊಳಗಿನ ಶಕ್ತಿಗೆ ಬಲವಾಗುತ್ತಾಳೆ. ಜಗತ್ತನ್ನೆ ಬದಲಿಸಿದ ಅವನ ಲೆಕ್ಕವಿರದಷ್ಟು ಸಂಶೋಧನೆಗೆ ದಾರಿ ಹಾಕಿಕೊಡುತ್ತಾಳೆ. ಆ ಹುಡುಗ ಬೇರೆ ಯಾರೂ ಅಲ್ಲ ಪ್ರಸಿದ್ಧ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್. ಮಗನೆಡೆಗಿನ ತಾಯಿಯ ನಂಬಿಕೆ ಕಡೆಗೂ ನಿಜವಾಗುತ್ತದೆ. ಅವನನ್ನು ರೂಪಿಸಿದ ತಾಯಿ ನ್ಯಾನ್ಸಿ ಸ್ಕಾಟಿಸ್ ಕೂಡಾ ಚರಿತ್ರೆಯಲ್ಲಿ ಅಜರಾಮರಳಾಗಿದ್ದಾಳೆ. 

ನಮ್ಮ ಮಕ್ಕಳನ್ನು ನಾವೇ ನಂಬಬೇಕಲ್ಲವೇ?! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT