ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಕೇಳದೇ ಸಲಹೆ ಕೊಡುವವರ ನಡುವೆ

Published 12 ಜೂನ್ 2024, 18:28 IST
Last Updated 12 ಜೂನ್ 2024, 18:28 IST
ಅಕ್ಷರ ಗಾತ್ರ

ನನ್ನ ಹಳೆಯ ವಿದ್ಯಾರ್ಥಿಯೊಬ್ಬ ಮೆಸೇಜ್‌ ಮಾಡಿ, “ಮೇಡಂ, ನನ್ನ ಕಸಿನ್‌ ಒಬ್ಬಳು ಬಹಳ ಗೊಂದಲದಲ್ಲಿದ್ದಾಳೆ, ಫ್ಯಾಶನ್‌ ಟೆಕ್ನಾಲಜಿಯಲ್ಲಿ ಪದವಿ ಪಡೆಯಬೇಕೆಂಬುದು ಅವಳ ಆಸೆ, ಆದರೆ ಕೆಲವರು ಏನೇನೋ ಹೇಳಿ ಅವಳನ್ನು ಧೃತಿಗೆಡಿಸುತ್ತಿದ್ದಾರೆ.


ನೀವು ಸ್ವಲ್ಪ ಮಾತಾಡಬಹುದಾ” ಎಂದ. ಪಿಯುಸಿ ವಿಜ್ಞಾನದಲ್ಲಾಕೆ ತೊಂಭತ್ತು ಶೇಕಡಾ ಅಂಕ ತೆಗೆದಿದ್ದಾಳೆ, ಸಂಬಂಧಿಸಿದಪರೀಕ್ಷೆಯ ಎರಡೂ ಹಂತಗಳಲ್ಲಿ ಪಾಸಾಗಿ ರಾಷ್ಟ್ರಮಟ್ಟದಲ್ಲೂ ಒಳ್ಳೆಯ ಶ್ರೇಣಿ ಪಡೆದಿದ್ದಾಳೆ. ಅಂತರ್ಜಾಲದಿಂದ ಆ ಕೋರ್ಸ್‌ ಬಗ್ಗೆ ಎಲ್ಲ ಮಾಹಿತಿ ಸಂಗ್ರಹಿಸಿದ್ದಾಳೆ. ಪೋಷಕರೂ ಒಪ್ಪಿ ಇನ್ನೇನು ಕೋರ್ಸಿಗೆ ಸೇರಬೇಕು ಅನ್ನುವಷ್ಟರಲ್ಲಿ ಸಂಬಂಧಿಕರು ಕೆಲವರು, “ಅಯ್ಯೋ ಅದೇನು ಕೋರ್ಸು ಅಂತ ಅದಕ್ಕೆ ಸೇರಿಸುತ್ತೀರಾ, ಅದೂ ಅಷ್ಟು ಖರ್ಚು ಮಾಡಿ! ಎಷ್ಟು ಓದಿದರೂ ಕೊನೆಗೆ
ಕತ್ತರಿ ಹಿಡಿಯುವುದೇ!” ಅಂದರಂತೆ. ತನ್ನಿಷ್ಟದ ಓದು ಓದಲು ಸಜ್ಜಾಗಿದ್ದ ಹುಡುಗಿ ಇಂತಹ ಅರ್ಧ ಜ್ಞಾನ ಹೊಂದಿದ ಮೂರ್ಖರ ಮಾತು ಕೇಳಿ ಬಹಳ ತಲೆ ಕೆಡಿಸಿಕೊಂಡಿದ್ದಳು, ಜತೆಗೆ ಮಗಳ ಆಸಕ್ತಿಗೆ ಸಂಪೂರ್ಣ ಸಹಕಾರ ನೀಡಿದ್ದ ತಂದೆತಾಯಿಯೂ! ಈ ಜನರ ವಿಚಿತ್ರ ಸ್ವಭಾವ ನಿಜಕ್ಕೂ ವಿಷಾದನೀಯ. ಯಾರಾದರೂ ಯಾವುದಾದರೂ ಹೊಸ ದಾರಿಯಲ್ಲಿ ಹೋಗುವಾಗ ಅವರನ್ನು ಎದೆಗುಂದಿಸುವುದರಲ್ಲಿ ಕೆಲವರದ್ದು ಎತ್ತಿದ ಕೈ. ಯಾವುದೇ ಕ್ಷೇತ್ರದ ಪರಿಣಿತರಾದರೂ ತಮ್ಮ ಅಭಿಪ್ರಾಯ ನೀಡುವಾಗ ಸ್ವಲ್ಪ ಯೋಚಿಸುತ್ತಾರೆ.

ತಮಾಷೆಯ ಸಂಗತಿಯೆಂದರೆ ತಮಗೆ ಮಾಹಿತಿಯೇ ಇರದ ವಿಷಯದ ಬಗ್ಗೆ ಕೇಳದೆಯೂ ತಮ್ಮ
ಅಭಿಪ್ರಾಯ ಕೊಡುವುದರಲ್ಲಿ ಕೆಲವರು ಮುಂದಿರುತ್ತಾರೆ! ಇಂತಹ ಸಂಬಂಧಿಕರು, ಸ್ನೇಹಿತರು ಮಗ್ಗುಲ ಮುಳ್ಳಿದ್ದಂತೆ! ಈ ಸಂಭಾಷಣೆಯಿಂದ ನೆನಪಾದ ಮತ್ತೊಂದು ವಿಚಾರವೆಂದರೆ ಭಾರತೀಯರು ಬಿಳಿ ಕಾಲರಿನ ಕೆಲಸಗಳಿಗೆ ಕೊಡುವ ಅತಿಯಾದ ಮಹತ್ವ. ಇಂತಹ ಮನಸ್ಥಿತಿಯಿಂದಲೇ ನಾವು ಕ್ಷಮತೆ ಇದ್ದರೂ ಅತ್ಯುನ್ನತ ಸಾಧನೆ ಮಾಡುವುದಕ್ಕೆ ಸಾಧ್ಯವಾಗದಿರುವುದು. ಇಂಥವರ ವರ್ಷದ ದುಡಿಮೆಯನ್ನು ಗಂಟೆಗಳಲ್ಲಿ ದುಡಿದು ಹಾಕುವ ಕತ್ತರಿ ಹಿಡಿವ ಡಿಸೈನರುಗಳಿದ್ದಾರೆ ಭಾರತದಲ್ಲಿಯೇ.


ಅದೇನೇ ಇರಲಿ, ಬೇರೆಯವರ ವಿಷಯದಲ್ಲಿ ವಿನಾಕಾರಣ ಮೂಗುತೂರಿಸುವ ಜನರಲ್ಲಿ ಒಂದು ಮನವಿ. ದಯವಿಟ್ಟು ನಿಮ್ಮ ಅರೆಬರೆ ಜ್ಞಾನವನ್ನು ಯಾರಿಗೂ ಹಂಚಬೇಡಿ ಮತ್ತು ದೈಹಿಕಶ್ರಮದ ಬಗೆಗಿನ ನಿಮ್ಮ ಪೂರ್ವಗ್ರಹವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ.


ಅಂದಹಾಗೆ ಆಯ್ದುಕೊಳ್ಳುವ ಕೋರ್ಸ್‌ ಯಾವುದೇ ಆಗಿರಲಿ ಓದುವಾಗ ಮತ್ತು ಓದಿನ ನಂತರ ಕೆಲ ವರ್ಷ ಶ್ರಮ ವಹಿಸಿದರೆ, ಆಸಕ್ತಿಯಿಂದ ವಿಚಾರಗಳನ್ನು ಕಲಿತರೆ ಯಾರೂ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದು, ಆರಾಮಾಗಿ ನಿನಗೆ ಬೇಕಾದದ್ದನ್ನು ಓದು ಎಂದು ಆ ಹುಡುಗಿಗೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT