ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು–35: ಹುಲ್ಲಿನ ಮೇಲೆ ಬಿದ್ದ ಇಬ್ಬನಿ ಹನಿ!

Published : 1 ಅಕ್ಟೋಬರ್ 2024, 23:30 IST
Last Updated : 1 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಒಬ್ಬ ಸಂತ ಒಂದು ದಾರಿ ಹಿಡಿದು ಹೋಗುತ್ತಿದ್ದ. ಆಗ ಚಳಿಗಾಲ. ಇನ್ನೂ ಸೂರ್ಯೋದಯ ಆಗಿರಲಿಲ್ಲ. ಅರುಣೋದಯ ಆಗಿತ್ತು ಅಷ್ಟೆ. ದಾರಿಯಲ್ಲಿ ಹುಲ್ಲು ಬೆಳೆದಿತ್ತು. ಅದರ ಮ್ಯಾಲೊಂದು ಇಬ್ಬನಿ ಹನಿ ಕುಂತಿತ್ತು. ಆಕಾಶದಿಂದ ಹರಡಿದ ಕೆಂಪು ಕಿರಣ ಆ ಇಬ್ಬನಿ ಮೇಲೆ ಬಿದ್ದಿತ್ತು. ಅದಕ್ಕೆ ಆ ಇಬ್ಬನಿ ಮುತ್ತಿನಂತೆ ಹೊಳೀತಿತ್ತು. ನೋಡುಗನಿಗೆ ಅದು ಅಸಲಿ ಮುತ್ತಿನಂತೆಯೇ ಕಾಣುತ್ತಿತ್ತು. ಆಗ ಗಾಳಿ ಬೀಸಿತು. ಇಬ್ಬನಿ ಹನಿ ಮಣ್ಣಿಗೆ ಬಿದ್ದು ಮಣ್ಣಾಗಿ ಹೋತು. ಇದನ್ನು ನೋಡಿದ ಸಂತನಿಗೆ ಜೀವನವೂ ಇಷ್ಟೇ ಅಂತ ಅನ್ನಿಸ್ತು. ದೇಹ ಎನ್ನುವ ಹುಲ್ಲಿನ ಮ್ಯಾಲ ಜೀವ ಎಂಬ ಹನಿ ಕುಂತೈತೆ. ಯಾವಾಗ ಕಾಲನೆಂಬ ಗಾಳಿ ಬೀಸತೈತಲ್ಲ, ಆಗ ಜೀವ ಕೆಳಕ್ಕೆ ಬೀಳತೈತಿ. ದೇಹ ಕೂಡ ಮಣ್ಣಲ್ಲಿ ಮಣ್ಣಾಗಿ ಹೋಗತೈತಿ. ಸಂತನಿಗೆ ಅಲ್ಲೇ ನಿತ್ಯದ ದರ್ಶನ ಆಗಿತ್ತು. ಸತ್ಯದ ಸಾಕ್ಷಾತ್ಕಾರ ಆಗಿತ್ತು. ನಾವೆಲ್ಲ ಹುಲ್ಲಿನ ಮೇಲೆ ಬಿದ್ದ ಇಬ್ಬನಿ ಹನಿ ಅಷ್ಟೆ.

ದಾರ್ಶನಿಕನಿಗೆ, ಜ್ಞಾನಿಗೆ, ಸಂತನಿಗೆ ಈ ಜಗತ್ತು ಒಂದು ಪ್ರಯೋಗ ಶಾಲೆ. ಪ್ರತಿಯೊಂದು ವಿಷಯ ಕೂಡಾ ಆತನಿಗೆ ಆಕರ. ವಿಶ್ವವೇ ಒಂದು ವಿಶ್ವವಿದ್ಯಾಲಯ. ಪ್ರತಿಯೊಂದು ಅಣುಅಣುವಿನಲ್ಲೂ ಅವ ಹೊಸ ಹೊಸ ವಿಷಯಗಳನ್ನು ಕಲೀತಾನೆ. ಅವನ ಗ್ರಂಥಾಲಯ ಅನ್ನೋದು ಎಲ್ಲೋ ಒಂದು ಕಟ್ಟಡದಲ್ಲಿ ಇಲ್ಲ. ಗ್ರಂಥಾಲಯ ಅವನ ಗ್ರಂಥಿಗಳಲ್ಲೇ ಇದೆ. ಎಲ್ಲರಿಂದಲೂ ಕಲೀತಾನೆ. ಜೀವನದ ಸತ್ಯದ ಸಾಕ್ಷಾತ್ಕಾರ ಅವನಿಗೆ ಎಲ್ಲದರಿಂದಲೂ ಆಗುತ್ತದೆ.

ಈ ಜೀವನ ನಾವು ಅಂದುಕೊಂಡಂಗ ನಡೆಯೋದಿಲ್ಲ. ಕಷ್ಟಗಳ ಸರಮಾಲೆ ಅದು. ಆದಿ ದುಃಖಗಳು, ವ್ಯಾಧಿ ದುಃಖಗಳು ಬರ್ತಾವ. ಶರೀರದ ದುಃಖಗಳೂ ಒಂದೇ ಎರಡೇ... ಆದರೂ ಒಂದು ಮಾತು ನೆನಪಿನಲ್ಲಿಡಬೇಕು ಈ ದುಃಖಗಳು ನಮಗೆ ಮಾತ್ರ ಬಂದಿಲ್ಲ. ಎಲ್ಲರಿಗೂ ದುಃಖ ಐತಿ. ಯಾರಿಗೆ ಜೀವನದಲ್ಲಿ ಕಷ್ಟ ಬಂದಿಲ್ಲ ಹೇಳಿ? ಎಲ್ಲರ ಜೀವನದಲ್ಲೂ ಕಷ್ಟಗಳು ಬಂದು ಹೋಗ್ಯಾವ. ಹೂವಿನ ಜೊತೆ ಮುಳ್ಳು ಅದ. ಹಾಗೆಯೇ ಜೀವನದಲ್ಲಿ ಸಂತೋಷದ ಜೊತೆಗೆ ಕಷ್ಟಗಳೂ ಬಂದಾವ. ಅದಕ್ಕೆ ನಾವು ಮಾಡುವುದು ಇಷ್ಟೇ; ಹೂವನ್ನು ಅರಿಯುವುದು ಮುಳ್ಳನ್ನು ಮರೆಯುವುದು. ಅದೇ ಜೀವನದ ಸಾಕ್ಷಾತ್ಕಾರ.

ಒಬ್ಬ ಗುರುಗಳತ್ರ ಬಂದು, ‘ಅಪ್ಪಾ ಬಾಳಾ ತ್ರಾಸಾಗೈತಿ’ ಅಂದ. ಅದಕ್ಕೆ ಗುರುಗಳು ‘ನಮಗೂ ಬಾಳಾ ತ್ರಾಸಾಗೈತಿ’ ಅಂದ್ರು. ‘ಯಾಕೆ ನಿಮಗೇನು ತ್ರಾಸು’ ಎಂದು ಕೇಳಿದ ಶಿಷ್ಯ. ‘ನಿಮ್ಮದು ತ್ರಾಸ ಕೇಳಿ ಕೇಳಿನೇ ನಮಗೆ ತ್ರಾಸಾಗೈತಿ. ಒಬ್ಬರಾ ಇಬ್ಬರಾ, ಬಂದೋರೆಲ್ಲಾ ಬರೀ ತ್ರಾಸ ಹೇಳ್ತಾರ. ಮಠಕ್ಕೆ ಬಂದ ಒಬ್ಬರಾದರೂ ನಾನು ಅರಾಂ ಇದೇನ್ರಿ ಅಂತಾರೇನು’ ಎಂದರು ಗುರುಗಳು. ಅದಕ್ಕೆ ಶಿಷ್ಯ, ‘ಏನ್ ಮಾಡೋದು ಕಷ್ಟಗಳಂತೂ ಬರ್ತಾವಲ್ಲ’ ಎಂದ. ಆಗ ‘ಚಿಂತಿಸದಿರು ಸುಖದುಃಖದೆಡೆಯೊಳು ನಿಂತು, ನೀನು ನಿಂತ ಜಾಗನೇ ಸುಖದುಃಖಗಳ ಮಿಶ್ರಣ. ಚಿಂತಿ ಮಾಡಾಕ ಹೋಗಬ್ಯಾಡ, ಮತ್ತ ನನಗ ಮಾತ್ರ ಕಷ್ಟ ಬಂದದೆ ಎಂದಕೋಬ್ಯಾಡ. ಯಾರಿಗೆ ಕಷ್ಟ ಬಂದಿಲ್ಲ? ಶ್ರೀರಾಮಗೆ ಕಷ್ಟ ಬಂದಿಲ್ಲೇನು? ಹರಿಶ್ಚಂದ್ರಗೆ ಬಂದಿಲ್ಲೇನು ಕಷ್ಟ? ಅವರಿಗೆ ಬಂದಷ್ಟು ಕಷ್ಟ ನಮಗೆ ಬಂದಾವೇನು? ಸುತ್ತಲೂ ಒಮ್ಮೆ ನೋಡು ಅಂದರು ಗುರುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT