ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಅತಿರೇಕದ ಪ್ರತಿಕ್ರಿಯೆ ಅಪಾಯಕಾರಿ

ನವೀನ ಕುಮಾರ್‌ ಹೊಸದುರ್ಗ
Published 29 ಏಪ್ರಿಲ್ 2024, 0:13 IST
Last Updated 29 ಏಪ್ರಿಲ್ 2024, 0:13 IST
ಅಕ್ಷರ ಗಾತ್ರ

ಬಹು ದೊಡ್ಡ ಸಂಸ್ಥೆಯ ಮುಖ್ಯಸ್ಥನೊಬ್ಬ ಕೋಪದಲ್ಲಿ ದೂರ್ವಾಸ ಮುನಿ ಎಂದೇ ಹೆಸರಾಗಿದ್ದ. ಜೊತೆಗೆ ತಾನೊಬ್ಬನೇ ಸರಿಯಾಗಿ ಕೆಲಸ ಮಾಡುವವನು, ತನ್ನ ಕೈ ಕೆಳಗಿನವರೆಲ್ಲ ಸೋಮಾರಿಗಳು, ಏನೂ ಕೆಲಸ ಮಾಡದೇ ಸುಮ್ಮನೆ ಸಂಬಳ ತೆಗೆದುಕೊಳ್ಳುತ್ತಾರೆ ಎನ್ನುವ ಭಾವ ಅವನಲ್ಲಿ. ಹೀಗಾಗಿ ಯಾವುದೇ ಸನ್ನಿವೇಶವಿರಲಿ ಅದಕ್ಕೆ ಅತಿಯಾಗಿ ಪ್ರತಿಕ್ರಿಯಿಸುತ್ತಿದ್ಧ. ವೃಥಾ ತನ್ನ ಸಹೋದ್ಯೋಗಿಗಳ ಮೇಲೆ ಕಂಡಾಪಟ್ಟೆ ರೇಗುತ್ತಿದ್ದ. ಇಂಗ್ಲೀಷಿನಲ್ಲಿ ಇದಕ್ಕೆ over reacting to the situation ಎನ್ನುತ್ತಾರೆ. ಕಚೇರಿ ಸಮಯದಲ್ಲಿ ಕಾರಿಡಾರ್‌ನಲ್ಲಿ ಯಾರಾದರೂ ಓಡಾಡುತ್ತಿದ್ದರಂತೂ ಈತನಿಗೆ ಕೆಂಡದಂಥ ಕೋಪ. ಆಗಾಗ ಏಕಾಏಕಿ ತನ್ನ ಚೇಂಬರ್ ನಿಂದ ಹೊರಗೆ ಬಂದು ಆ ರೀತಿಯ ವ್ಯಕ್ತಿಗಳು ಸಿಕ್ಕಿದರೆ ಅವರಿಗೆ ಶಿಕ್ಷೆ ಕೊಡುವುದು ಅವನ ಅಭ್ಯಾಸ.

ಒಮ್ಮೆ ಹೀಗಾಯಿತು... ಈ ದೂರ್ವಾಸ ಮುನಿ ತನ್ನ ಚೇಂಬರ್‌ನಿಂದ ಹೊರಗೆ ಬಂದ. ಅಲ್ಲಿ ನೋಡಿದರೆ ಒಬ್ಬ ವ್ಯಕ್ತಿ ಕಾರಿಡಾರ್‌ನಲ್ಲಿ ನಡೆದು ಬರುತ್ತಿದ್ದಾನೆ. ಇವನಿಗೆ ಇನ್ನಿಲ್ಲದ ಕೋಪ ಬಂದಿತು. ತಕ್ಷಣ ಅವನನ್ನು ಹತ್ತಿರಕ್ಕೆ ಕರೆದು ‘ಏಯ್.. .ನಾನು ಹೇಳಿರಲಿಲ್ಲವೇ, ಕಛೇರಿಯ ಸಮಯದಲ್ಲಿ ಸುಮ್ಮನೆ ಹೊರಗೆ ಅಡ್ಡಾಡ ಬಾರದೆಂದು? ಸೋಂಬೇರಿ, ಹೇಳು, ನಿನ್ನ ಸಂಬಳವೆಷ್ಟು?’ ಎಂದು ಗುಡುಗಿದ. ಆ ವ್ಯಕ್ತಿ ‘₹10,000 ಸಾರ್’ ಎಂದ. ಆಗ ನಮ್ಮ ದೂರ್ವಾಸ ‘ನಿನ್ನನ್ನು ಈ ಕ್ಷಣದಿಂದಲೇ ಕೆಲಸದಿಂದ ತೆಗೆದು ಹಾಕುತ್ತಿದ್ದೇನೆ. ನಮ್ಮ ಕಂಪನಿಯ ನಿಯಮದಂತೆ ನಿನಗೆ ಮೂರು ತಿಂಗಳ ಸಂಬಳ ಕೊಡ್ತಾ ಇದ್ದೀನಿ. ತಗೋ ಈ ₹30,000... ತಕ್ಷಣ ಇಲ್ಲಿಂದ ಹೊರಡು’ ಎಂದು ಆದೇಶಿಸಿದ. ₹30,000 ರೂಪಾಯಿಗಳನ್ನು ಅವನ ಕೈಲಿತ್ತ.

ಆ ವ್ಯಕ್ತಿ ಮುಗುಳ್ನಗುತ್ತಲೇ ಅದನ್ನು ಸ್ವೀಕರಿಸಿ ಅಲ್ಲಿಂದ ಹೊರಟ. ತಕ್ಷಣ ನಮ್ಮ ದೂರ್ವಾಸ, ತನ್ನ ಸೆಕ್ರೆಟರಿಯ ಬಳಿ ‘ಈ ವ್ಯಕ್ತಿ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ’ ಎಂದು ಪ್ರಶ್ನಿಸಿದ. ಆಗ ಸೆಕ್ರೆಟರಿ ‘ಯಾವ ವಿಭಾಗದಲ್ಲೂ ಇಲ್ಲ ಸರ್. ಅಂದ ಹಾಗೆ ಅವನು ನಮ್ಮ ಕಂಪನಿಯ ಕೆಲಸಗಾರನೇ ಅಲ್ಲ. ಅವನೊಬ್ಬ ಕೊರಿಯರ್ ಬಾಯ್. ನಾನು ಹೇಳೋಣ ಎಂದು ಬಾಯಿ ತೆರೆಯುವುದರ ಒಳಗೆ ನೀವು ನಿಮ್ಮ ಕೆಲಸ ಮುಗಿಸಿ ಬಿಟ್ಟಿದ್ದಿರಿ’ ಎಂದಾಗ ಕಚೇರಿ ಮುಖ್ಯಸ್ಥ ಪೆಚ್ಚಾದ.

ಈ ಥರದ ವ್ಯಕ್ತಿಗಳನ್ನು ನಾವು ನಮ್ಮ ಬದುಕಿನಲ್ಲಿ ನೋಡುತ್ತಿರುತ್ತೇವೆ. ಸಂದರ್ಭ ಏನೆಂದು ಅರ್ಥ ಮಾಡಿಕೊಳ್ಳದೇ ತಾಳ್ಮೆ ಕಳೆದುಕೊಂಡು ಅತಿರೇಕದಿಂದ ವರ್ತಿಸಿದರೆ ಇಂತಹ ಸನ್ನಿವೇಶ ಕಟ್ಟಿಟ್ಟ ಬುತ್ತಿ. ಅದಕ್ಕೆ ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂಬ ಗಾದೆ ಮಾತಿರುವುದು. ಕೆಲವೊಮ್ಮೆ ನಾವು ಕೇಳಿದ್ದು ನೋಡಿದ್ದು ಎಲ್ಲವೂ ಕೂಡ ಸುಳ್ಳಾಗಿರಬಹುದು. ನಿಧಾನಿಸಿ ಯೋಚಿಸಿದಾಗ ಮಾತ್ರ ನಿಜವೇನೆಂದು ಅರ್ಥವಾಗುತ್ತದೆ. ಹಾಗಾಗಿ ಯಾವುದೇ ಸನ್ನಿವೇಶಕ್ಕೆ ಅತಿರೇಕದ ಪ್ರತಿಕ್ರಿಯೆ ಎಂದಿಗೂ ಒಳ್ಳೆಯದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT