ಅಗ್ನಿರಾಜ ಮತ್ತು ವೀರಮತಿ ದಂಪತಿಗೆ ಆರು ಜನ ಹೆಣ್ಣುಮಕ್ಕಳು. ಅವರು ಬೆಳೆದಂತೆ ತಾರುಣ್ಯವೂ ಬೆಳೆದು ಹೆತ್ತವರಿಗೆ ತಮ್ಮ ಜವಾಬ್ದಾರಿಯನ್ನು ನೆನಪಿಸುವಂತಾಯ್ತು. ಒಂದು ದಿನ ಬೆಳಿಗ್ಗೆ ಯುವತಿಯರೆಲ್ಲರೂ ಒಟ್ಟಾಗಿ ಮಂದಿರಕ್ಕೆ ಹೊರಟು ತಂದೆ ತಾಯಿಯ ಆಶೀರ್ವಾದ ಪಡೆಯಲು ಬಂದರು. ಒಬ್ಬರಾದ ಮೇಲೊಬ್ಬರಂತೆ ಸಾಲಾಗಿ ಬಂದು ಮೊದಲು ತಾಯಿಗೂ ನಂತರ ತಂದೆಗೂ ಕಾಲಿಗೆರಗಿ ಮಂದಿರದತ್ತ ತೆರಳಿದರು. ಅಗ್ನಿರಾಜ ಮಕ್ಕಳನ್ನೆಲ್ಲ ಮನತುಂಬಿ ಹರಸಿ ಕಳಿಸುವಾಗ ತನ್ನ ಕಿರಿಯ ಮಗಳಾದ ಕೃತ್ತಿಕೆಯನ್ನು ವಿಶೇಷವಾಗಿ ಗಮನಿಸಿದ. ಅವನ ಮನಸ್ಸಿನಲ್ಲಿ ನಿರ್ಧಾರವೊಂದು ಮೊಳೆತು ತಡಮಾಡದೆ ಸಾಮಂತರು, ಮಾಂಡಲಿಕರು, ಮಂತ್ರಿ ಪರಿವಾರ ಮತ್ತು ಋಷಿಮುನಿಗಳನ್ನೆಲ್ಲಾ ಕರೆಸಿದ. ತನ್ನ ಆಳ್ವಿಕೆಗೆ ಒಳಪಟ್ಟ ರಾಜ್ಯದ ಯಾವುದೇ ಶ್ರೇಷ್ಠ ವಸ್ತು ಯಾರಿಗೆ ಸೇರತಕ್ಕದ್ದು ಎಂದು ಪ್ರಶ್ನಿಸಿದ. ಋಷಿಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ಒಕ್ಕೊರಲಿನಿಂದ ರಾಜನಾದವನಿಗೇ ಸೇರಬೇಕು ಎಂದರು. ವಸ್ತು ಯಾವುದು ಎಂದು ಸ್ಪಷ್ಟಪಡಿಸಿದರೆ ಹೇಳಬಹುದು ಎಂದು ಋಷಿಗಳು ತಿಳಿಸಿದರು. ತಕ್ಷಣ ರಾಜನಿಗೆ ಕೋಪ ಬಂತು. ‘ಈ ಋಷಿಗಳು ಎಂದೂ ಮಾತುಕತೆಗೆ ಒಡಂಬಡುವವರಲ್ಲ, ಇವರು ಅಧಿಕಪ್ರಸಂಗಿಗಳು, ಇವರನ್ನು ರಾಜ್ಯದಿಂದ ಹೊರಗೆ ಓಡಿಸಿ’ ಎಂದು ಆದೇಶಿಸಿದ. ತನ್ನ ಕೊನೆಯ ಮಗಳ ಸೌಂದರ್ಯಕ್ಕೆ ಮನಸೋತು ಅವಳನ್ನು ತಾನೇ ಮದುವೆಯಾದ ರಾಜನ ಈ ಕತೆ ವಡ್ಡಾರಾಧನೆ ಕೃತಿಯಲ್ಲಿದೆ.

ತಂದೆಯಾದವನು ಮಗಳನ್ನು ಮದುವೆಯಾಗಲು ತಳೆದ ಅನೈತಿಕ ನಿರ್ಧಾರ ಸರ್ವಾಧಿಕಾರಿಯ ಮನೋಧರ್ಮದ್ದು ಮಾತ್ರವಲ್ಲ, ಗಂಡುದರ್ಪದ್ದು ಕೂಡ. ಈ ಕತೆಯ ಆಶಯ ಬೇರೆಯೇ ಇದೆ. ಆದರೆ ನ್ಯಾಯ ನೀತಿ ಧರ್ಮದ ಸಮಾಜವನ್ನು ಕಾಪಾಡುವ ವಿಷಯದಲ್ಲಿ ರಾಜಿ ಒಲ್ಲದ ಋಷಿ ನಿಷ್ಠೆಯನ್ನು ಇಲ್ಲಿ ಕಾಣಬಹುದು. ಅಲ್ಲದೆ ಆಳುವವರ ನೀತಿಬಾಹಿರವೂ ಜನವಿರೋಧಿಯೂ ಆದ ನಿರ್ಧಾರಗಳನ್ನು ಪ್ರಶ್ನಿಸುವವರು ದೇಶಭ್ರಷ್ಟರಾಗುವ ವಿಚಿತ್ರವನ್ನೂ ನೋಡಬಹುದು. ಹೌದು, ಋಷಿ ಪರಂಪರೆಗೆ ಇಂಥ ಲೋಕ ನಿಷ್ಠುರ ಹೊಸದೇನೂ ಅಲ್ಲ. ಸರ್ವಾಧಿಕಾರ ಕೂಡ ಜನದ್ರೋಹದ ಪರಂಪರೆಯನ್ನೇ ಹೊಂದಿದೆ. ನ್ಯಾಯವಿದೂರವಾಗುತ್ತಿರುವ ಸಮಾಜದಲ್ಲಿ ಋಷಿನಿಷ್ಠೆ ಕುಸಿಯುತ್ತಿದೆ. ಆಳುವ ಕೆಲವರ ನಿರಂಕುಶ ಮನಃಸ್ಥಿತಿ ಜಾಗತಿಕವಾಗಿ ಸದ್ಯ ಗೆಲುವು ಪಡೆಯುತ್ತಿರುವಂತೆ ಕಾಣುತ್ತಿದೆ.

ಋಷಿಸದೃಶರಾಗಿ ಬದುಕಿದ ಹಲವರು ಸಾಮಾಜಿಕ ಬದಲಾವಣೆಯ ನಿರಂತರ ಮಾದರಿಗಳನ್ನು ಬಿಟ್ಟು ಹೋಗಿದ್ದಾರೆ. ಅಧ್ಯಾಪಕರು ತರಗತಿಗಳಲ್ಲಿ, ಪತ್ರಕರ್ತರು ಮಾಧ್ಯಮಗಳಲ್ಲಿ, ವಿಜ್ಞಾನಿಗಳು ಪ್ರಯೋಗಗಳಲ್ಲಿ, ದಾರ್ಶನಿಕರು ನಡೆನುಡಿಗಳಲ್ಲಿ ಸತ್ಯಪರ ಕ್ರಿಯಾಶೀಲತೆಯನ್ನು ಪ್ರತಿಷ್ಠಾಪಿಸುವ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ. ಇದು ಋಷಿನಿಷ್ಠೆ ವಿಸ್ತರಣೆಯಾಗುವುದಕ್ಕೆ ಅಗತ್ಯವಾದ ಕಾಲ. ಎಲ್ಲರ ಎಲ್ಲ ಬಗೆಯ ಅಹಂಕಾರಗಳ ಕುರಿತಾದ ಅಸಹನೆಯೇ ಆದ್ಯತೆಯಾಗಬೇಕಾದ ಹೊತ್ತಿದು. ಅಂದರೆ ಅನೈತಿಕವಾದುದರ ವಿರುದ್ಧ ಹುಟ್ಟಬೇಕಾದ ಪ್ರತಿರೋಧ. ಎಲ್ಲರೊಳಗೊಂದಾಗುವ ಸಾಮಾಜಿಕ ಮಮತೆಯ ಬೆಳಸನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಋಷಿ ಮೌಲ್ಯಗಳ ಭಾಗವಾಗಿದೆ. ಋಷಿಯಾಗುವುದೆಂದರೆ ಸಾಮಾಜಿಕ ಅನಿಷ್ಟಗಳು ಮತ್ತು ಅನೈತಿಕತೆಯ ವಿರುದ್ಧದ ಪ್ರಾತಿನಿಧಿಕ ಪ್ರಜ್ಞೆ. ಸದಾ ಸತ್ಯಪರ ದನಿಯ ಅನಾವರಣ. ಲೌಕಿಕ ಸುಖಭೋಗಗಳಿಂದ ದೂರವಿರುವುದು ಎಂಬುದು ಋಷಿಯ ಋತಪ್ರಜ್ಞೆಗೆ ಪೂರಕ ಅಷ್ಟೇ.

ತಿದ್ದುಪಡಿ: ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯ ‘ನುಡಿ ಬೆಳಗು’ ಅಂಕಣದಲ್ಲಿ ಪ್ರಕಟವಾಗಿರುವ ಲೇಖನ ದೀಪಾ ಹಿರೇಗುತ್ತಿ ಅವರದ್ದು. ದಾದಾಪೀರ್ ನವಿಲೇಹಾಳ್ ಅವರ ಹೆಸರಿನಲ್ಲಿ ತಪ್ಪಾಗಿ ಪ್ರಕಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.