ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಪ್ರತಿಕ್ರಿಯೆ ನೀಡದಿರುವ ಕಲೆ

Published 15 ಮೇ 2024, 23:20 IST
Last Updated 15 ಮೇ 2024, 23:20 IST
ಅಕ್ಷರ ಗಾತ್ರ

ವ್ಯಕ್ತಿಯೊಬ್ಬ ಬಹುಬೇಗ ಕೋಪಗೊಳ್ಳುತ್ತಿದ್ದ. ಪಕ್ಕದೂರಿನಲ್ಲಿದ್ದ, ಬಹಳ ತಾಳ್ಮೆಯುಳ್ಳವನೆಂದು ಹೆಸರಾಗಿದ್ದ ತನ್ನ ಸ್ನೇಹಿತನ ಬಳಿ ಈ ಸಮಸ್ಯೆಯನ್ನು ಹೇಳಿಕೊಳ್ಳಲು ಯೋಚಿಸಿದ. ಆದರೆ ಅದೇ ದಿನ ಆ ಸ್ನೇಹಿತನೇ ಇವನ ಮನೆಗೆ ಭೇಟಿ ನೀಡಿದ. ಊಟ ಮಾಡುವಾಗ ಒಂದು ಘಟನೆ ನಡೆಯಿತು. ಇವನಿಗೆ ಕೊಟ್ಟ ಪಾಯಸದ ಬಟ್ಟಲಿನಲ್ಲಿ ಅಕಾಸ್ಮಾತ್ತಾಗಿ ಒಂದು ನೊಣ ಬಿದ್ದುಬಿಟ್ಟಿತ್ತು. ಇವನಿಗೆ ಕೋಪ ಬಂದು ಕೆಲಸದವರ ಮೇಲೆ ರೇಗಾಡಿಬಿಟ್ಟ. ಅದಕ್ಕೆ ಸ್ನೇಹಿತ ಕೇಳಿದ, ‘ಬಿಡು ಮಾರಾಯ ಅದೊಂದು ನೊಣ ಅಷ್ಟೇ, ಚೆಲ್ಲಿದರೆ ಆಯಿತು’ ಎಂದು ಇನ್ನೊಂದು ಬಟ್ಟಲಿನಲ್ಲಿ ಪಾಯಸ ತರಲು ಸಹಾಯಕನಿಗೆ ಹೇಳಿದ. ಆದರೆ ಇವನು ಮುಖ ಕೆಂಪು ಮಾಡಿಕೊಂಡೇ ಇದ್ದ.

ಊಟವಾದ ಮೇಲೆ ಇವನು ಸ್ನೇಹಿತನಿಗೆ ಹೇಳಿದ ‘ಅಯ್ಯೋ ನನಗೆ ಸಿಟ್ಟು ತಡೆದುಕೊಳ್ಳಲೇ ಆಗುವುದಿಲ್ಲ ಮಾರಾಯ, ಆ ಸಣ್ಣ ನೊಣವೂ ಇಡೀ ದಿನ ನನ್ನ ಮೂಡ್‌ ಕೆಡಿಸಬಲ್ಲದು’. ಆ ಸ್ನೇಹಿತ ನಸುನಕ್ಕು ಹೇಳಿದ, ‘ನೋಡು ಇವತ್ತು ಸಮಸ್ಯೆಯನ್ನುಂಟು ಮಾಡಿದ್ದು ಪಾಯಸದಲ್ಲಿ ಬಿದ್ದ ನೊಣವಲ್ಲ, ಅದನ್ನು ನೋಡದೇ ಇದ್ದ ಕೆಲಸದವರೂ ಅಲ್ಲ. ಆ ಘಟನೆಗೆ ನೀನು ಪ್ರತಿಕ್ರಿಯಿಸಿದ ರೀತಿ. ನಿನಗೆ ನಿನ್ನ ಭಾವನೆಗಳ ಮೇಲೆ ನಿಯಂತ್ರಣವಿರಬೇಕೇ ಹೊರತು ಭಾವನೆಗಳೇ ನಿನ್ನನ್ನು ನಿಯಂತ್ರಿಸಬಾರದು. ಯಾವ ವಿಷಯಕ್ಕೂ ತಕ್ಷಣ ಪ್ರತಿಕ್ರಿಯಿಸುವ ಬದಲು ಕೆಲಕ್ಷಣ ಯೋಚನೆ ಮಾಡಬೇಕು, ಆದರೆ ಇದು ಒಂದೆರಡು ದಿನಗಳಲ್ಲಿ ಆಗುವಂತಹ ವಿಷಯವಲ್ಲ. ನಿಧಾನವಾಗಿ ಪ್ರಯತ್ನಿಸು’ ಎಂದ ಸ್ನೇಹಿತ.

ಈತ ಅಂದಿನಿಂದಲೇ ಪ್ರತಿಕ್ರಿಯಿಸುವ ಮುನ್ನ ಯೋಚಿಸಲು ಶುರು ಮಾಡಿದ. ಮೊದಮೊದಲು ಕಷ್ಟವಾದರೂ ಸವಾಲಿನ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸುವುದನ್ನು ಕ್ರಮೇಣ ಕಡಿಮೆ ಮಾಡಿದ. ವಾಗ್ವಾದಗಳಿಗೆ ಅವಕಾಶ ಕೊಡದೇ ಮೌನವಾಗುತ್ತಿದ್ದ. ಕೊನೆಯ ಮಾತು ತನ್ನದೇ ಆಗಬೇಕೆಂಬ ಅಹಂನಿಂದ ಹೊರಬಂದ.

ಇದರರ್ಥ ನಮ್ಮ ಭಾವನೆಗಳನ್ನು ತೋರಗೊಡದೇ ಇರುವುದಲ್ಲ. ಮನುಷ್ಯರಿಗೆ ಭಾವನೆಗಳು ಸಹಜ. ಘಟನೆಗಳಿಗೆ ಸ್ಪಂದಿಸುವುದು ಮುಖ್ಯ. ಸೂಕ್ತವಾದ ಸ್ಪಂದನೆಗೂ ತಕ್ಷಣದ ಪ್ರತಿಕ್ರಿಯೆಗೂ ವ್ಯತ್ಯಾಸವಿದೆ. ಸ್ಪಂದನೆಯಲ್ಲಿ ಯೋಚನೆ ಮಾಡಿ ಉತ್ತರ ನೀಡುತ್ತೇವೆ, ತಕ್ಷಣದ ಪ್ರತಿಕ್ರಿಯೆಯಲ್ಲಿ ಹಿಂದೆಮುಂದೆ ನೋಡದೇ ದುಡುಕುತ್ತೇವೆ. ಕೆಲವೊಮ್ಮೆ ಕೋಪದ ಕೈಯಲ್ಲೂ ಬುದ್ಧಿಯನ್ನು ಕೊಟ್ಟು ಬಿಡುತ್ತೇವೆ. ಇದರಿಂದ ನಮ್ಮ ಸಂಬಂಧಗಳು, ಮನಃಶಾಂತಿ ಎಲ್ಲವನ್ನೂ ಕಳೆದುಕೊಂಡುಬಿಡುತ್ತೇವೆ. ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಆತುರದಿಂದ ಎಡವುತ್ತೇವೆ. ನಿಜ, ಪ್ರತಿಕ್ರಿಯೆ ನೀಡುವುದು ಸುಲಭ, ಪ್ರತಿಕ್ರಿಯೆ ನೀಡದೇ ಇರುವುದು ಕಷ್ಟದ ಕೆಲಸ. ಏಕೆಂದರೆ ಭಾವನೆಗಳನ್ನು ನಿಯಂತ್ರಿಸುವುದೂ ಒಂದು ಕಲೆ. ಅದನ್ನು ತಾಳ್ಮೆಯಿಂದ ರೂಢಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT