ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಟೀಕೆಗಳನ್ನು ಮೀರಿ ಸಾಧಿಸಿದಾಕೆ

Published 29 ಮೇ 2024, 21:52 IST
Last Updated 29 ಮೇ 2024, 21:52 IST
ಅಕ್ಷರ ಗಾತ್ರ

ಇತ್ತೀಚೆಗೆ ನಡೆದ 77ನೇ ಕ್ಯಾನ್‌ ಚಲನಚಿತ್ರೋತ್ಸವದಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ನಡೆದ ಭಾರತದ ನ್ಯಾನ್ಸಿ ತ್ಯಾಗಿ ಗಮನ ಸೆಳೆದರು. ಕಾರಣ ಚಿತ್ರೋತ್ಸವದ ಇತಿಹಾಸದಲ್ಲೇ ಮೊದಲ ಬಾರಿ ಭಾರತೀಯರೊಬ್ಬರು ತಾವೇ ತಯಾರಿಸಿದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಸಾವಿರ ಮೀಟರ್‌ ಬಟ್ಟೆಯ, ಇಪ್ಪತ್ತು ಕೆಜಿ ತೂಕದ, ಒಂದು ತಿಂಗಳಲ್ಲಿ ನಿರ್ಮಿಸಿದ ತಮ್ಮದೇ ವಿನ್ಯಾಸದ ಉಡುಗೆಯಲ್ಲಿ ನೋಡುಗರ, ಛಾಯಾಚಿತ್ರಕಾರರ ಕಣ್ಮನ ಸೆಳೆದು ನ್ಯಾನ್ಸಿ ಇತಿಹಾಸ ನಿರ್ಮಿಸಿದರು.

ನ್ಯಾನ್ಸಿ ತ್ಯಾಗಿ ಸಾಮಾಜಿಕ ಜಾಲತಾಣದ ಓರ್ವ ಇನ್‌ಫ್ಲುಯೆನ್ಸರ್‌.‌ ಉತ್ತರಪ್ರದೇಶದ ಬರಾನ್ವಾದ ಈ ಹುಡುಗಿ ಯುಪಿಎಸ್‌ಸಿ ತಯಾರಿಗೆಂದು ದೆಹಲಿಗೆ ಬಂದಿದ್ದರೂ ಕೋವಿಡ್‌ ಲಾಕ್‌ಡೌನ್‌ ಆದಾಗ ಹಣ ಸಂಪಾದಿಸಲು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳನ್ನು ಮಾಡಲು ಶುರು ಮಾಡಿದರು. ತೆಳ್ಳಗಿದ್ದೀ, ಹಂಚಿಕಡ್ಡಿಯ ಹಾಗಿದ್ದೀ ಎಂದೆಲ್ಲ ಕಮೆಂಟಿಸುವ ಜನರಿಂದ ಬೇಸತ್ತರೂ ನ್ಯಾನ್ಸಿ ಎದೆಗುಂದಲಿಲ್ಲ.

ಸೆಲೆಬ್ರಿಟಿಗಳು ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಧರಿಸಿದ ದುಬಾರಿ ಡಿಸೈನರ್‌ ಉಡುಗೆಯನ್ನು ಅತಿ ಕಡಿಮೆ ಬೆಲೆಯ ಬಟ್ಟೆ,ವಸ್ತುಗಳಿಂದ ಮರುನಿರ್ಮಾಣ ಮಾಡಿ ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನ್ಯಾನ್ಸಿ ಹಂಚಿಕೊಳ್ಳುತ್ತಾರೆ. ವಿಡಿಯೊಗಳಲ್ಲಿ ಮೊದಲು ಸೆಲೆಬ್ರಿಟಿಗಳು ಧರಿಸಿದ ಬಟ್ಟೆಯ ಮೂಲ ಡಿಸೈನನ್ನು ತೋರಿಸುತ್ತಾರೆ. ನಂತರ ಅದಕ್ಕೆ ಬೇಕಾದ ಬಟ್ಟೆ ಇತ್ಯಾದಿಗಳನ್ನು ದೆಹಲಿಯ ಬೀದಿಗಳಲ್ಲಿ ತಾವು ಹುಡುಕುವುದನ್ನು, ತಂದ ಮೇಲೆ ಅವನ್ನು ಕತ್ತರಿಸಿ ಹೊಲಿಯುವುದನ್ನು ತೋರಿಸಿ ಕೊನೆಗೆ ಥೇಟ್‌ ಮೂಲ ವಿನ್ಯಾಸದಂತೆಯೇ ಕಾಣುವ ಉಡುಗೆಯನ್ನು ಪ್ರದರ್ಶಿಸುತ್ತಾರೆ. ಯೂಟ್ಯೂಬ್‌ ಮತ್ತು ಇನ್ಸ್‌ಟಾಗ್ರಾಮ್‌ ಎರಡರಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಆಕೆ ಇದೀಗ ಬ್ರುಟ್‌ ಇಂಡಿಯಾದ ತಂಡದ ಭಾಗವಾಗಿ ಕ್ಯಾನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.

ನೈಜ ಪ್ರತಿಭೆ ಜನರನ್ನು ಆಕರ್ಷಿಸುತ್ತದೆ ಎಂಬುದಕ್ಕೆ ನ್ಯಾನ್ಸಿ ಒಂದು ಉದಾಹರಣೆ ಮಾತ್ರ. ನಿಜ, ಪ್ರತಿಭೆ ಯಾರ ಆಸ್ತಿಯೂ ಅಲ್ಲ. ಅದು ಶ್ರಮ ಪಡುವವರಿಗೆ, ಏಕಾಗ್ರತೆಯಿಂದ ಹಿಡಿದ ಕೆಲಸವನ್ನು ಬಿಡದೇ ಮುನ್ನಡೆಯುವವರಿಗೆ ಒಲಿಯುತ್ತದೆ. ಆದರೆ ಹಳ್ಳಿಯ ಬಡ ಹುಡುಗಿಯ ಈ ಸಾಧನೆಯನ್ನು ಶ್ಲಾಘಿಸುವುದನ್ನು ಬಿಟ್ಟು ಕೆಲವರು ಆಕೆಗೆ ಇಂಗ್ಲಿಷ್‌ನಲ್ಲಿ ಮಾತಾಡಲು ಬರುವುದಿಲ್ಲ ಎಂಬುದನ್ನೇ ಟ್ರೋಲ್‌ ಮಾಡುತ್ತಿದ್ದಾರೆ. ಅಷ್ಟಕ್ಕೂ ಆಕೆ ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳನ್ನು ದುಭಾಷಿಯ ಸಹಾಯದಿಂದ ಕೇಳಿಕೊಂಡು ಹಿಂದಿಯಲ್ಲಿಯೇ ನಿರರ್ಗಳವಾಗಿ ಉತ್ತರಿಸುತ್ತಿದ್ದರು. ಟೀಕಿಸುವವರು ಇದ್ದಲ್ಲಿಯೇ ಇರುತ್ತಾರೆ, ಸಾಧಕರು ಮೌನವಾಗಿ ಮತ್ತೊಂದು ಸಾಧನೆಗೆ ತಯಾರಿ ನಡೆಸುತ್ತಿರುತ್ತಾರೆ. ಟೀಕೆಗೆ ಕುಗ್ಗದೇ ಪರಿಶ್ರಮದಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ನ್ಯಾನ್ಸಿಯ ಆತ್ಮವಿಶ್ವಾಸ ಹೆಣ್ಣುಮಕ್ಕಳಿಗೆ ಮಾದರಿಯಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT