ಕುವೆಂಪು ಅವರ ‘ಶ್ಮಶಾನ ಕುರುಕ್ಷೇತ್ರ’ ನಾಟಕದ ಒಂದು ದೃಶ್ಯ. ಮಹಾಭಾರತ ಯುದ್ಧ ಮುಗಿದ ರಾತ್ರಿ. ಬಹಳ ಮಂದಿ ಗೋಳಾಡುತ್ತ ಬಂದು ರಣರಂಗದಲ್ಲಿ ಬಿದ್ದಿರುವ ತಮ್ಮವರ ಶವಗಳನ್ನು ಹುಡುಕುತ್ತಿದ್ದಾರೆ. ಆಗ ಓರ್ವ ಕಿರಿಯ ವಯಸ್ಸಿನ ಮಹಿಳೆ ಮತ್ತು ಓರ್ವ ಮುದುಕಿ ಭೇಟಿಯಾಗುತ್ತಾರೆ. ಮಹಿಳೆ ತನ್ನ ಗಂಡನನ್ನು ಹುಡುಕಿಕೊಂಡು ಬಂದಿದ್ದರೆ, ಮುದುಕಿ ಮಗ ಸಿಗುವನೆಂಬ ಆಸೆಯಿಂದ ಬಂದಿರುತ್ತಾಳೆ. ಇಬ್ಬರೂ ಮಾತಾಡುತ್ತಾರೆ. ಮಹಿಳೆಯ ಗಂಡ ಪಾಂಡವರ ಪಕ್ಷದವನು, ಮುದುಕಿಯ ಮಗ ಕೌರವರ ಪಕ್ಷದವನು. ಇಬ್ಬರೂ ಅವರವರ ಮನೆಗೆ ಆಧಾರವಾಗಿದ್ದವರು. ಆಗ ಮಹಿಳೆ, ‘ನಿನ್ನ ಮಗನೆನ್ನ ಪತಿಗೆ ಪಗೆಯಾಗಿದ್ದನೇನ್?’ (ನಿನ್ನ ಮಗ ನನ್ನ ಪತಿಗೆ ಶತ್ರುವಾಗಿದ್ದನೇ?) ಎಂದು ಕೇಳುತ್ತಾಳೆ. ಆಗ ಮುದುಕಿ, ‘ಆರಿಗಾರು ಪಗೆ? ನಿನಗಾನ್ ಪಗೆಯೇ?’ (ಯಾರಿಗೆ ಯಾರು ಶತ್ರುಗಳು, ನಿನಗೆ ನಾನು ಶತ್ರುವೇ) ಎಂದು ಕೇಳುತ್ತಾಳೆ. ಮುಂದೆ ಹೋಗಿ ನೋಡಿದರೆ ಇಬ್ಬರು ಸೈನಿಕರು ಒಬ್ಬರನ್ನೊಬ್ಬರು ತಿವಿದುಕೊಂಡು ಸತ್ತಿದ್ದಾರೆ. ಅದನ್ನು ನೋಡಿ ಮಹಿಳೆ, ‘ಅಯ್ಯೋ ಅಜ್ಜೀ ನೋಡಿಲ್ಲಿ, ನನ್ನ ಪತಿಯನ್ ಈ ಪಾಪಿ ತಿವಿದು ಕೊಂದಿಹನ್, ಅಯ್ಯೋ’ ಎನ್ನುತ್ತಾಳೆ. ಮುದುಕಿ, ‘ಅಯ್ಯೋ ಅಯ್ಯೋ, ನನ್ನ ಮಗನನ್ ನಿನ್ನ ಪತಿ ತಿವಿದು ಕೊಂದಿಹನಲ್ಲಮ್ಮಾ! ಅಯ್ಯೋ ಪಾಂಡವರು ಹಾಳಾಗಲಿ’ ಎನ್ನುತ್ತಾಳೆ. ಮಹಿಳೆ, ‘ಅಯ್ಯೋ ಕೌರವರು ಹಾಳಾಗಲಿ’ ಎನ್ನುತ್ತಾಳೆ. ಇಬ್ಬರೂ ಹೊರಳಾಡಿ ಅಳತೊಡಗುತ್ತಾರೆ.

ಕುವೆಂಪು ಅವರು ಕೆಲವೇ ಮಾತುಗಳಲ್ಲಿ ಯುದ್ಧದ ಭೀಕರತೆಯನ್ನು, ಜನಸಾಮಾನ್ಯರ ಬದುಕಿನಲ್ಲಿ ಅದು ಉಂಟುಮಾಡುವ ಘೋರ ಪರಿಣಾಮಗಳನ್ನು ಬಹು ಪ್ರಭಾವಶಾಲಿಯಾಗಿ ಚಿತ್ರಿಸಿದ್ದಾರೆ. ಯುದ್ಧದಲ್ಲಿ ಯಾರು ಗೆದ್ದರೂ ಯಾರು ಸೋತರೂ ಅದು ಮಾಡುವುದು ಸರ್ವನಾಶವನ್ನೇ. ಗೆದ್ದವರು ಸೋತರು, ಸೋತವರು ಸತ್ತರು ಎಂದು ಹಿರಿಯ ಜೀವಗಳು ಹೇಳುವ ಮಾತುಗಳು ಗೆಲುವಿನ ಅರ್ಥಹೀನತೆಯನ್ನು ಹೇಳುತ್ತವೆ. ಜಗತ್ತಿನಲ್ಲಿ ಆದ ಎಷ್ಟೆಲ್ಲ ಯುದ್ಧಗಳಲ್ಲಿ ಸಾವು, ನೋವು ಉಂಡದ್ದು ಸಾಮಾನ್ಯ ಸೈನಿಕರು, ಅವರ ಕುಟುಂಬಗಳು ಮತ್ತು ಈ ಯುದ್ಧದ ಭೀಕರ ಪರಿಣಾಮಗಳನ್ನು ಅನುಭವಿಸುವವರು ಯುದ್ಧದಲ್ಲಿ ಯಾವ ಪಾತ್ರವನ್ನೂ ಹೊಂದಿರದ ಸಾಮಾನ್ಯ ಪ್ರಜೆಗಳು.

ಭೂಮಿಗಾಗಿ, ಧರ್ಮಕ್ಕಾಗಿ, ಕೊನೆಗೆ ಆಯುಧಗಳ ಮಾರಾಟಕ್ಕಾಗಿ ಶುರುವಾಗುವ ಯುದ್ಧಗಳು ಜಗತ್ತಿಗೆ ಮತ್ತಷ್ಟು ಅಶಾಂತಿಯನ್ನು ತುಂಬಿ ಹೋಗುತ್ತವೆ. ಯುದ್ಧ ಮುಗಿದರೂ ಯುದ್ಧದ ಪರಿಣಾಮಗಳು ಶಾಶ್ವತವಾಗಿರುತ್ತವೆ. ಅದು ಕಾಡುವುದು ಜನಸಾಮಾನ್ಯರನ್ನೇ. ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಯುದ್ಧಗಳು ದೇಶವೊಂದನ್ನು ಕಾಡುತ್ತವೆ. ಯುದ್ಧವನ್ನು ಗೆದ್ದರೂ ಸೋತರೂ ಆ ಕರಾಳ ನೆನಪುಗಳು ದುಃಸ್ವಪ್ನಗಳಾಗುತ್ತವೆ. ಆದರೂ ಇಂದು ಎಳೆಯ ಮನಸ್ಸುಗಳು ಯುದ್ಧದ ಉನ್ಮಾದಕ್ಕೆ ಒಳಗಾಗುತ್ತಿರುವುದು ಪ್ರಪಂಚದ ಎಲ್ಲ ಕಡೆಗಳಲ್ಲೂ ನಡೆಯುತ್ತಿರುವ ದುರಂತ. ಈಗಿನ ಜಗತ್ತಿಗೆ ಯುದ್ಧ ಬೇಕೇ ಎಂದು ಜಗತ್ತಿನ ಅಧಿಕಾರದ ಕೇಂದ್ರದಲ್ಲಿರುವ ಮುಂದಾಳುಗಳು ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಂಡರೆ ಸಿಗುವ ಉತ್ತರ ಬೇಡ ಎಂಬುದೇ ಆಗಿರುತ್ತದೆ. ಆದರೆ, ಆತ್ಮಸಾಕ್ಷಿಯಂತೆ ನಡೆಯುವವರಾದರೂ ಯಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.