ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

945 ಗ್ರಾ.ಪಂ.ಗಳಲ್ಲಷ್ಟೇ ಕಸ ನಿರ್ವಹಣೆ!

ನಿಷೇಧದ ನಂತರ ರಾಜ್ಯದಲ್ಲಿ 1,047 ಟನ್‌ ಪ್ಲಾಸ್ಟಿಕ್ ಸಂಗ್ರಹ
Last Updated 23 ಜನವರಿ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ 6,002 ಗ್ರಾಮ ಪಂಚಾಯಿತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿದ್ದರೂ, 945 ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಘನ ತ್ಯಾಜ್ಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

4,464 ಗ್ರಾಮ ಪಂಚಾಯಿತಿಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗೆ ಒಟ್ಟು ₹ 821.40 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಈಗಾಗಲೇ ₹ 205.35 ಕೋಟಿ ಬಿಡುಗಡೆ ಮಾಡಲಾಗಿದೆ. ಕಸ ನಿರ್ವಹಣೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ₹ 579.74 ಕೋಟಿ ನೀಡಲಾಗಿದೆ.

ಈವರೆಗೆ 3,464 ಗ್ರಾಮ ಪಂಚಾಯಿತಿಗಳ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಪೈಕಿ, 2,543 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ಘಟಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.‌

ವೈಜ್ಞಾನಿಕವಾಗಿ ದ್ರವ ತ್ಯಾಜ್ಯ ನಿರ್ವಹಣೆ ಅನುಷ್ಠಾನಗೊಳಿಸಲು ಪ್ರಾಯೋಗಿಕವಾಗಿ 16 ಘಟಕ ಸ್ಥಾಪಿಸಲು ಡಿಪಿಆರ್ ಸಿದ್ಧಪಡಿಸಲಾಗಿದೆ. ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ತ್ಯಾಜ್ಯ ಪುನರ್ ಬಳಕೆ, ಸೂಕ್ತ ವಿಂಗಡನೆ ಮತ್ತು ನಿರ್ವಹಣೆಗೆ ಅಗತ್ಯ ಇರುವ ಯಂತ್ರೋಪಕರಣಗಳನ್ನು ಒಳಗೊಂಡ 4 ಘಟಕಗಳನ್ನು ಪ್ರಾಯೋಗಿಕವಾಗಿ ಉಡುಪಿ, ರಾಮನಗರ, ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಉದ್ದೇಶಿಸಿದೆ.

‘ಗಾರ್ಡನ್‌ ಸಿಟಿ’ಗೆ ಕಳಂಕ ತಂದ ಕಸ

ಬೆಂಗಳೂರು: ಬೆಂಗಳೂರಿನ ‘ಉದ್ಯಾನ ನಗರಿ’ ಹೆಗ್ಗಳಿಕೆಗೆ ಕಸ ಕಳಂಕ ತಂದಿದೆ. ವಿದೇಶಿ ಪತ್ರಿಕೆಗಳೂ ಬೆಂಗಳೂರಿಗೆ ‘ಕಸದ ನಗರ’ ಎಂಬ ಹಣೆಪಟ್ಟಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿತ್ತು.

2012–14ರ ನಡುವೆ ನಗರದಲ್ಲಿ ಕಸ ವಿಲೇವಾರಿ ಅಯೋಮಯವಾಗಿತ್ತು. ಈಗಲೂ ಪರಿಸ್ಥಿತಿಯಲ್ಲಿ ಭಾರಿ ಸುಧಾರಣೆಗಳೇನೂ ಆಗಿಲ್ಲ.

ಕೇಂದ್ರ ಸರ್ಕಾರ ರೂಪಿಸಿರುವ ‘ಕಸ ನಿರ್ವಹಣೆ ಮಾರ್ಗಸೂಚಿ’ ಪ್ರಕಾರ ಭೂಭರ್ತಿ ಕೇಂದ್ರದಲ್ಲಿ ಮಿಶ್ರಕಸ ವಿಲೇ ಮಾಡುವಂತಿಲ್ಲ. ಬೆಂಗಳೂರಿನಲ್ಲಿ ಉತ್ಪಾದನೆಯಾಗುವ 4,000 ಟನ್‌ ಕಸದಲ್ಲಿ (ಸಗಟು ಕಸ ಹೊರತಾಗಿ) 3,000 ಟನ್‌ಗೂ ಅಧಿಕ ಮಿಶ್ರಕಸ ಭೂಭರ್ತಿ ಕೇಂದ್ರ ಸೇರುತ್ತಿದೆ.

ಮಂಡೂರಿನ ಕ್ವಾರಿಯಲ್ಲಿ ಕಸ ವಿಲೇವಾರಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಬಳಿಕ ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸಲು ಬಿಬಿಎಂಪಿ ಏಳು ಕಡೆ ಕಸ ಸಂಸ್ಕರಣಾ ಘಟಕ ಸ್ಥಾಪಿಸಿದೆ. ಈ ಘಟಕಗಳು ನಿತ್ಯ 2,300 ಟನ್‌ ಕಸ ಸಂಸ್ಕರಣೆ ಸಾಮರ್ಥ್ಯ ಹೊಂದಿವೆ. ಆದರೆ, ನಿತ್ಯ 1000 ಟನ್‌ ಕಸವೂ ಸಂಸ್ಕರಣೆಯಾಗುತ್ತಿಲ್ಲ. ಸ್ಥಳೀಯರ ವಿರೋಧದಿಂದ ಕೆಲವು ಘಟಕಗಳು ಪದೇ ಪದೇ ಮುಚ್ಚುತ್ತವೆ.

ಪ್ರಸ್ತುತ ಕಸ ಸಾಗಣೆಗೆ ₹ 430 ಕೋಟಿ ವ್ಯಯಿಸಲಾಗುತ್ತಿದೆ. ಕಸದ ನಿರ್ವಹಣೆ ವ್ಯವಸ್ಥೆ ಸರಿದಾ‌ರಿಗೆ ತರಲು ಇನ್ನೂ ₹ 1550 ಕೋಟಿ ಅನುದಾನದ ಅಗತ್ಯವಿದೆ ಎಂದು ಬಿಬಿಎಂಪಿ ಲೆಕ್ಕಾಚಾರ ಹಾಕಿದೆ.

ಮಿಶ್ರ ಕಸದಿಂದ ವಿದ್ಯುತ್‌ ಉತ್ಪಾದಿಸುವ ವಿಚಾರ ಎರಡು ದಶಕಗಳಿಂದ ಚರ್ಚೆಯಾಗುತ್ತಲೇ ಇದೆ. ವಿವಿಧ ಕಂಪನಿಗಳ ಜೊತೆ ಒಪ್ಪಂದಗಳ ಮೇಲೆ ಒಪ್ಪಂದಗಳು ನಡೆಯುತ್ತಿವೆ. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಹಸಿ ಕಸ ಮತ್ತು ಮಿಶ್ರ ಕಸ ವಿಲೇವಾರಿ ಸಮರ್ಪಕವಾಗಿ ಆಗದಿರುವುದು ಕಸ ನಿರ್ವಹಣೆಗೆ ಕಗ್ಗಂಟಾಗಿದೆ. ಈಗಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 33ರಷ್ಟು ಕಸವನ್ನು ಮಾತ್ರ ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಲಾಗುತ್ತಿದೆ.

ರಾಜ್ಯ ಸರ್ಕಾರ ‘ಬೆಂಗಳೂರು ಮಿಷನ್‌ 2022’ ಅಡಿ ಕಸಮುಕ್ತ ನಗರ ರೂಪಿಸಲು ಶುಭ್ರ ಬೆಂಗಳೂರು ಯೋಜನೆಗೆ ₹ 990 ಕೋಟಿ ಅನುದಾನ ಮೀಸಲಿಟ್ಟಿದೆ. ಆ ಬಳಿಕವಾದರೂ ಕಸ ನಿರ್ವಹಣೆ ವ್ಯವಸ್ಥೆ ಸರಿ ದಾರಿಗೆ ಬರಲಿದೆಯೋ ಕಾದುನೋಡಬೇಕು.

ರಾಜಧಾನಿಯ ತ್ಯಾಜ್ಯ ತಂದಿಟ್ಟ ಸಂಕಷ್ಟ

ಬೆಂಗಳೂರು ಅಂಚಿನಲ್ಲಿರುವ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ರಾಜಧಾನಿ ತ್ಯಾಜ್ಯವೇ ದೊಡ್ಡ ಸಂಕಷ್ಟ ತಂದೊಡ್ಡಿದೆ. ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಹೆಸರಿಗಷ್ಟೇ ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ.

ರಾಮನಗರ ಜಿಲ್ಲೆಯಲ್ಲಿ ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಜಾರಿಯಾಗಿದ್ದರೂ ತ್ಯಾಜ್ಯ ಸಂಸ್ಕರಣಾ ಘಟಕ ಇನ್ನೂ ನಿರ್ಮಾಣವಾಗಿಲ್ಲ. ನಿತ್ಯ ಸಂಗ್ರಹವಾಗುವ ಕಸ ನದಿ ದಂಡೆ ಸೇರುತ್ತಿದ್ದು, ಅಲ್ಲಲ್ಲಿ ಕಸ ಸುಡುವ ಪರಿಪಾಟವಿದೆ.

ಗುಡ್ಡ ಕರಗಿಸುವ ಸವಾಲು: ತುಮಕೂರು ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿಗೆ ಅಜ್ಜಗೊಂಡನಹಳ್ಳಿ ಬಳಿಯ ಘಟಕದಲ್ಲಿ ಸಂಗ್ರಹವಾಗಿರುವ ಬೃಹತ್ ಕಸದ ಗುಡ್ಡ ಕರಗಿಸುವುದೇ ಪಾಲಿಕೆಗೆ ದೊಡ್ಡ ಸವಾಲಾಗಿದೆ.

‘ನಾಲ್ಕು ವರ್ಷಗಳಿಂದ ಕಸ ಸಂಸ್ಕರಣೆ ಮಾಡಲಾಗುತ್ತಿದೆ. ಸರಾಸರಿ 75 ಸಾವಿರ ಟನ್ ಕಸ ಸಂಗ್ರಹವಿದೆ. ಯಂತ್ರಗಳು ನಿತ್ಯ 100 ಟನ್ ಕಸ ಸಂಸ್ಕರಣೆ ಮಾಡುತ್ತವೆ. 200 ಟನ್ ಕಸ ಸಂಸ್ಕರಣೆ ಯಂತ್ರ ಅಳವಡಿಸಲಾಗುತ್ತಿದೆ. ಇದರಿಂದ ನಾಲ್ಕೈದು ವರ್ಷಗಳಿಂದ ಸಂಗ್ರಹವಾದ ಕಸ ಕರಗಿಸಬಹುದು’ ಎನ್ನುತ್ತಾರೆ ಪಾಲಿಕೆ ಆಯುಕ್ತೆ ರೇಣುಕಾ.

ಕಸಮುಕ್ತ ಜಿಲ್ಲೆ ಕಡತಕ್ಕೆ ಸೀಮಿತ: ಕೋಲಾರ ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಷನ್‌ ಯೋಜನೆಗೆ ಗ್ರಹಣ ಹಿಡಿದಿದೆ. ಖಾಲಿ ನಿವೇಶನ, ಕೆರೆಯಂಗಳ, ಪಾಳು ಬಾವಿಗಳಲ್ಲಿ ರಾತ್ರೋರಾತ್ರಿ ಕಸ ಸುರಿಯಲಾಗುತ್ತಿದೆ. ಬಂಗಾರಪೇಟೆಯಲ್ಲಿ ಮಾತ್ರ ಭೂ ಭರ್ತಿ ಕೇಂದ್ರ, ವಿಲೇವಾರಿ ಮತ್ತು ಸಂಸ್ಕರಣಾ ಘಟಕವಿದೆ. ಸ್ವಚ್ಛ ಭಾರತ್‌ ಮಿಷನ್‌ ಅಡಿ 156 ಗ್ರಾ.ಪಂ.ಗಳ ಪೈಕಿ ಮೊದಲ ಹಂತದಲ್ಲಿ 100 ಗ್ರಾ.ಪಂ ವ್ಯಾಪ್ತಿಯಲ್ಲಿ ವಿಲೇವಾರಿ ಘಟಕ ಆರಂಭಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT