ಭಾನುವಾರ, ಆಗಸ್ಟ್ 14, 2022
19 °C
ಪರಿಶಿಷ್ಟರಿಗೆ ಸಿಗದ ‘ಭೂ ಒಡೆತನ’ * ಯೋಜನೆಗೆ ‘ಬಡತನ’ * ಭ್ರಷ್ಟರ ಜೇಬಿಗೆ ಧನ

ಒಳನೋಟ | ‘ಚೋಮ’ನ ಕನಸು: ಚೋರರಿಗೆ ನನಸು

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂರಹಿತ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಜಮೀನು ನೀಡಿ ಅವರಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಮಹತ್ವಾಕಾಂಕ್ಷಿ ‘ಭೂ ಒಡೆತನ ಯೋಜನೆ’ಯಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಫಲಾನುಭವಿಗಳ ಆಯ್ಕೆ, ಜಮೀನು ಖರೀದಿ, ಹಂಚಿಕೆ ಎಲ್ಲದರಲ್ಲೂ ‘ಕಾಂಚಾಣದ ಕುಣಿತ’ವೇ ಮೇಲುಗೈ ಸಾಧಿಸಿದೆ.

ಪರಿಶಿಷ್ಟ ಸಮುದಾಯಕ್ಕೆ ಸೇರಿದ ‘ಚೋಮ’ ತಾನೂ ಜಮೀನಿನ ಒಡೆತನ ಪಡೆಯಬೇಕೆಂಬ ಕನಸಿಗಾಗಿ ಹೋರಾಡಿದ ಕಥನ ‘ಚೋಮನ ದುಡಿ’ಯನ್ನು ಶಿವರಾಮ ಕಾರಂತರು ಬರೆದು ಹಲವು ದಶಕಗಳೆ ಕಳೆದಿದೆ. ಆಳು ಮಕ್ಕಳಿಗೆ ಭೂಮಿಯ ಉಳುಮೆ ಮಾಡುವ ಅವಕಾಶ ಇವತ್ತಿಗೂ ಸಿಕ್ಕಿಲ್ಲ. ವ್ಯವಸ್ಥೆಯ ದೋಷ, ಅಧಿಕಾರಿಗಳ ದಾಹ, ಹಿಂಬಾಲಕರಿಗೆ ಮೆಹನತ್ತು ಮಾಡುವ ರಾಜಕಾರಣಿಗಳ ಕಪಟತೆಯಿಂದ ಚೋಮನ ಮಕ್ಕಳು ಇನ್ನೂ ಭೂಮಿಯಿಂದ ವಂಚಿತರಾಗಿಯೇ ಇದ್ದಾರೆ. ಹಾಗೆಂದು, ಸರ್ಕಾರ ಇದಕ್ಕಾಗಿ ಖರ್ಚು ಮಾಡುವ ಅನುದಾನವೇನೂ ಕಡಿಮೆಯಾಗಿಲ್ಲ; ಭೂಮಿ ಮಾತ್ರ ದಕ್ಕಿಲ್ಲ. ಇದು ವ್ಯವಸ್ಥೆಯ ಕ್ರೌರ್ಯ.

ಕೆಲವು ವರ್ಷಗಳ ಹಿಂದೆ ವಾರ್ಷಿಕ ₹ 5 ಕೋಟಿಯಿಂದ ₹ 15 ಕೋಟಿಯ ಆಸುಪಾಸಿನಲ್ಲಿದ್ದ ಭೂ ಒಡೆತನ ಯೋಜನೆಯ ಅನುದಾನ ಈಗ ₹ 400 ಕೋಟಿಯಿಂದ ₹ 500 ಕೋಟಿ ದಾಟಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂರಹಿತರನ್ನು ಭೂ ಮಾಲೀಕರನ್ನಾಗಿ ಮಾಡುವ ಯೋಜನೆಯ ಮೂಲ ಆಶಯವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯವಸ್ಥಿತ ಜಾಲ ಸರ್ಕಾರ ಮತ್ತು ಫಲಾನುಭವಿಗಳನ್ನು ಏಕಕಾಲಕ್ಕೆ ವಂಚಿಸುತ್ತಿದೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿ ಮತ್ತು ಮೂವರು ಅಧಿಕಾರಿಗಳ ಮನೆಗಳ ಮೇಲೆ 2020ರ ಆಗಸ್ಟ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದಾಗ ಬರೋಬ್ಬರಿ ₹ 82.65 ಲಕ್ಷ ನಗದು ಪತ್ತೆಯಾಗಿತ್ತು. ಭೂ ಒಡೆತನ ಯೋಜನೆಯಡಿ ಹಂಚಿಕೆ ಮಾಡುವುದಕ್ಕಾಗಿ ನಿಗಮದಿಂದ ಖರೀದಿಸಿದ ಜಮೀನಿಗೆ ಹಣ ಪಾವತಿಸುವಾಗ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಈ ಪ್ರಕರಣ ಬಯಲಿಗೆಳೆದಿತ್ತು.

ಇದನ್ನೂ ಓದಿ... ಒಳನೋಟ: ಪಿಟಿಸಿಎಲ್ ಕಾಯ್ದೆ ಹಲ್ಲು ಕಿತ್ತ ಹಾವು

ಹಾವೇರಿಯಲ್ಲಿ ಐವರು ಮಹಿಳೆಯರಿಗೆ ಭೂ ಒಡೆತನ ಯೋಜನೆಯಡಿ ಮಂಜೂರಾಗಿರುವ ಜಮೀನಿನ ಹಕ್ಕು ವರ್ಗಾವಣೆ ಅಂತಿಮಗೊಳಿಸಲು ₹ 75ಸಾವಿರ ಲಂಚ ಪಡೆಯುತ್ತಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಯ ಮೂವರು ಸಿಬ್ಬಂದಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇವು ಎರಡು ಉದಾಹರಣೆಗಳಷ್ಟೆ. ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್‌, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂ ಒಡೆತನ ಯೋಜನೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿರುವ ಆರೋಪಗಳಿವೆ.

ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೀಮಿತವಾಗಿದ್ದ ‘ಭೂ ಒಡೆತನ ಯೋಜನೆ’ ಈಗ ಆದಿ ಜಾಂಬವ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಗೂ ವಿಸ್ತರಣೆಯಾಗಿದೆ.

ಕಳಪೆ ಜಮೀನು ನೀಡಿ ವಂಚನೆ: ಈ ಎಲ್ಲ ನಿಗಮಗಳಲ್ಲೂ ‘ಭೂ ಒಡೆತನ ಯೋಜನೆ’ಯಡಿ ಪ್ರತಿ ಫಲಾನುಭವಿಗೆ ₹ 15 ಲಕ್ಷ ವೆಚ್ಚದಲ್ಲಿ ತಲಾ ಎರಡು ಎಕರೆ ಜಮೀನು ಖರೀದಿಸಿ ಹಂಚಿಕೆ ಮಾಡಲು ಅವಕಾಶವಿದೆ. ಶೇಕಡ 50 ರಷ್ಟನ್ನು ಸಹಾಯಧನವಾಗಿ ನೀಡಿದರೆ, ಉಳಿದದ್ದನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ನಿಗಮವೇ ಒದಗಿಸುತ್ತಿದೆ. ₹ 15 ಲಕ್ಷದ ಮಿತಿಯಲ್ಲಿ ಜಮೀನಿನ ಮಾರ್ಗಸೂಚಿ ದರದ ಮೂರು ಪಟ್ಟು ದರ ನೀಡುವುದಕ್ಕೆ ಅವಕಾಶವಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ದಲ್ಲಾಳಿಗಳು ಮತ್ತು ಭ್ರಷ್ಟ ಅಧಿಕಾರಿಗಳ ಕೂಟ, ಕೃಷಿಗೆ ಯೋಗ್ಯವಲ್ಲದ ಜಮೀನನ್ನು ದುಬಾರಿ ಬೆಲೆಗೆ ಖರೀದಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

‘ಯೋಜನೆಗೆ ವಾರ್ಷಿಕ ಅನುದಾನ ನಿಗದಿಯಾಗುತ್ತಿದ್ದಂತೆ ದಲ್ಲಾಳಿಗಳು ಚುರುಕಾಗುತ್ತಾರೆ. ಕಡಿಮೆ ಬೆಲೆಯ ಜಮೀನು ಖರೀದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅದನ್ನೇ ಭೂ ಒಡೆತನ ಯೋಜನೆಯಡಿ ಹಂಚಿಕೆಗಾಗಿ ನಾಲ್ಕೈದು ಪಟ್ಟು ಹೆಚ್ಚು ಬೆಲೆಗೆ ನಿಗಮಗಳಿಗೆ ಮಾರಾಟ ಮಾಡುತ್ತಾರೆ’ ಎಂದು ಈ ಪ್ರಕ್ರಿಯೆಯ ಒಳ–ಹೊರಗನ್ನು ಬಲ್ಲ ದಲಿತ ಸಂಘಟನೆಗಳ ನಾಯಕರು ಹೇಳುತ್ತಾರೆ.

ದುಬಾರಿ ಬೆಲೆಗೆ ಬಂಜರು ಜಮೀನು ಖರೀದಿಸಿದ್ದ ಪ್ರಕರಣದಲ್ಲಿ ಹಂಚಿಕೊಂಡಿದ್ದ ಹಣವೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಬಳಿ ಪತ್ತೆಯಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ‘ನೇತಾರ’ನ ವೇಷದಲ್ಲಿರುವ ಮಧ್ಯವರ್ತಿಯೊಬ್ಬ ನೂರಾರು ಎಕರೆ ಜಮೀನನ್ನು ಕಡಿಮೆ ಬೆಲೆಗೆ ಖರೀದಿಸಿ ಈ ನಿಗಮಗಳಿಗೆ ಮಾರಿರುವ ಸಂಗತಿ ಸಮಾಜ ಕಲ್ಯಾಣ ಇಲಾಖೆಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ... ಒಳನೋಟ: 17 ವರ್ಷ ಕಳೆದರೂ ಬದಲಾಗದ ಖಾತೆ

ನಿಯಂತ್ರಿಸಲಾಗದ ಅಸಹಾಯಕರೇ ಹೆಚ್ಚು!
ಹಿಂದಿನ ಕೆಲವು ದಶಕಗಳ ಕಾಲ ‘ಭೂ ಒಡೆತನ ಯೋಜನೆ’ಯಲ್ಲಿ ಫಲಾನುಭವಿಗಳ ಆಯ್ಕೆ, ಜಮೀನು ಹಂಚಿಕೆ, ಹಣ ಪಾವತಿ ನಿಗೂಢವಾಗಿಯೇ ನಡೆಯುತ್ತಿತ್ತು. ಖರೀದಿ ಒಪ್ಪಂದಗಳ ಆಧಾರದಲ್ಲೇ ಪೂರ್ತಿ ಹಣ ಪಾವತಿ ಮಾಡಿದ ಪ್ರಕರಣಗಳೂ ನಡೆಯುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ನಿಗಮವೇ ನೇರವಾಗಿ ಜಮೀನು ಖರೀದಿಸಿ, ಹಂಚಿಕೆ ಮಾಡುತ್ತಿದೆ.

ಬದಲಾದ ವ್ಯವಸ್ಥೆಯನ್ನೂ ತಮಗೆ ಬೇಕಾದಂತೆ ಪಳಗಿಸಿಕೊಂಡಿರುವ ದಲ್ಲಾಳಿಗಳ ಕೂಟ, ಯೋಜನೆಯ ಲಾಭ ಅರ್ಹರನ್ನು ತಲುಪುವುದಕ್ಕೆ ಅಡ್ಡಗೋಡೆಯಂತೆ ನಿಂತಿದೆ. ದಲ್ಲಾಳಿಗಳು ಮತ್ತು ಅಧಿಕಾರಿಗಳು ಸೇರಿ ‘ಭೂ ಒಡೆತನ ಯೋಜನೆ’ಯ ಅನುದಾನವನ್ನು ಲೂಟಿ ಮಾಡುತ್ತಿದ್ದಾರೆ ಎಂಬುದನ್ನು ಸಮಾಜ ಕಲ್ಯಾಣ ಖಾತೆಯ ಸಚಿವರಾಗಿದ್ದವರೂ ಸೇರಿದಂತೆ ಅನೇಕ ಮುಖಂಡರು ಒಪ್ಪಿಕೊಳ್ಳುತ್ತಾರೆ. ಆದರೆ, ನಿಯಂತ್ರಣದ ವಿಚಾರದಲ್ಲಿ ಅಸಹಾಯಕತೆ ವ್ಯಕ್ತಪಡಿಸುವವರೇ ಹೆಚ್ಚು.

**
ದೊಡ್ಡಮಟ್ಟದ ಹೋರಾಟ
ದಲಿತ ಚಳವಳಿಯ ಹೋರಾಟ, ದೇವರಾಜ ಅರಸು ಮತ್ತು ಬಸವಲಿಂಗಪ್ಪ ಅವರ ಸಾಮಾಜಿಕ ಕಳಕಳಿಯ ಫಲವಾಗಿ ಜಾರಿಗೆ ಬಂದ ಪಿಟಿಸಿಎಲ್ ಕಾಯ್ದೆ ಈಗ ದುರ್ಬಲವಾಗಿದೆ. ಪರಿಶಿಷ್ಟ ಸಮುದಾಯದವರ ಭೂ ಒಡೆತನದ ಹಕ್ಕು ಉಳಿಸಲು ಇದ್ದ ಒಂದೇ ಒಂದು ಬಲಿಷ್ಠ ಕಾಯ್ದೆ ಇದು. ಕಾಯ್ದೆಗೆ ಸಮಗ್ರ ತಿದ್ದುಪಡಿ ಅಗತ್ಯವಿದ್ದು, ಈ ಸಂಬಂಧ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಎಲ್ಲಾ ಹಂತದ ಪ್ರಯತ್ನಗಳೂ ನಡೆದಿವೆ. ಸರ್ಕಾರದ ಗಮನ ಸೆಳೆಯಲು ದೊಡ್ಡಮಟ್ಟದ ಹೋರಾಟ ರೂಪಿಸಲು ಪ್ರಯತ್ನ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಬಳಿಕ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ಹೋರಾಟ ತೀವ್ರಗೊಳ್ಳಲಿದೆ.
-ಮಾವಳ್ಳಿ ಶಂಕರ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ

*
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಭೂ ಒಡೆತನ ಯೋಜನೆಯನ್ನು ಭಿಕ್ಷೆಯ ಅರ್ಥದಲ್ಲಿ ಕೇಳಬಾರದು. ಹಕ್ಕು ಎಂದು ಭಾವಿಸಿ ಪಡೆಯಬೇಕು.
–ಎಚ್‌. ಆಂಜನೇಯ, ಸಮಾಜ ಕಲ್ಯಾಣ ಖಾತೆಯ ಮಾಜಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು