ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ನೋಟ: ಶೇ 40ರಷ್ಟು ಲಂಚ -ಬಿಎಸ್‌ವೈ ಅವಧಿಯಲ್ಲೇ ಪ್ರಧಾನಿಗೆ ದೂರು

ಟೆಂಡರ್:
Last Updated 11 ಡಿಸೆಂಬರ್ 2021, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮನುಕುಲವನ್ನೇ ದಂಗು ಬಡಿಸಿದ್ದ ಕೊರೊನಾ ವೈರಾಣು ರೂಪಾಂತರಗೊಳ್ಳುತ್ತಾ ವಿಶ್ವವ್ಯವಸ್ಥೆಯನ್ನೇ ಮಲಗಿಸಿದಂತೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಟೆಂಡರ್‌ನಲ್ಲಿ ನಡೆಯುವ ಶೇಕಡ 40ರಷ್ಟು ಲಂಚದ ಸ್ವರೂಪವೂ ಬದಲಾವಣೆಗೊಳ್ಳುತ್ತಾ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ ಎಂಬ ಆರೋ‍ಪ ಕೇಳಿಬಂದಿದೆ.

ದಶಕದ ಹಿಂದೆ, ಕಮಿಷನ್‌ ಪಡೆದು ಟೆಂಡರ್ ಕೊಡಿಸಲು ಮಧ್ಯವರ್ತಿಗಳು ಇರುತ್ತಿದ್ದರು. ಸಚಿವರು–ಶಾಸಕರ ದೂರದ ಸಂಬಂಧಿಕರು ಅಥವಾ ಆಪ್ತರೂ ಈ ವ್ಯವಹಾರ ನಡೆಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಚಿವರು, ಶಾಸಕರೇ ನೇರವಾಗಿ ‘ಪರ್ಸೆಂಟೇಜ್‌’ಗೆ ಬೇಡಿಕೆ ಮಂಡಿಸಿ ಟೆಂಡರ್ ಕೊಡಿಸುವ ಮಧ್ಯವರ್ತಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಶೇ 10–20ರಷ್ಟಿದ್ದ ಲಂಚದ ಪ್ರಮಾಣ ಶೇ 40ಕ್ಕೆ ಏರಿತು. ಈಗ ಅದು ಬೇರೆ ಬೇರೆ ರೂಪವನ್ನು ಪಡೆದುಕೊಂಡಿದೆ ಎಂಬ ಚರ್ಚೆ ಅಧಿಕಾರಿಗಳ ವಲಯದಲ್ಲಿದೆ.

2018ರ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಿ ‘ಕಾಂಗ್ರೆಸ್ ಮುಕ್ತ ಭಾರತ’ದ ಕರೆ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯನವರ ಸರ್ಕಾರವನ್ನು ‘10 ಪರ್ಸೆಂಟ್ ಸರ್ಕಾರ, ಸೀದಾರೂಪಯ್ಯಾ’ ಎಂದು ಹಂಗಿಸಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗುತ್ತಿಗೆದಾರರು ಪ್ರಧಾನಿಗೇ ಬರೆದ ಪತ್ರ, ರಾಜ್ಯದಲ್ಲಿನ ಭ್ರಷ್ಟಾಚಾರದ ವಿಕಾರರೂಪವನ್ನು ಬಯಲಿಗೆ ತಂದಿದೆ.

‘ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದ ಮೇಲಷ್ಟೇ ಭ್ರಷ್ಟಾಚಾರ ಶುರುವಾಯಿತು ಎಂದೇನಲ್ಲ. ಅದಕ್ಕೂ ಹಿಂದಿನ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳ ಅವಧಿಯಲ್ಲಿ ಈ ಪ್ರಮಾಣ ಶೇ 15ರಿಂದ ಶೇ 20ರವರೆಗೆ ಇತ್ತು. ಬಿಲ್ ಪಾವತಿಯ ವೇಳೆ ಹಲವು ಹಂತಗಳಲ್ಲಷ್ಟೇ ನೀಡಬೇಕಿತ್ತು. ಈಗ ನಿರ್ದಿಷ್ಟ ಲೆಕ್ಕ ಶೀರ್ಷಿಕೆಯಡಿ ಮಂಜೂರಾದ ಅನುದಾನದ ಹಂಚಿಕೆಗೆ, ಕಾರ್ಯಾದೇಶ ನೀಡುವ ಮೊದಲೇ ಲಂಚ ಕೊಡಬೇಕಾಗಿದೆ’ ಎಂದು ಹೆಸರು ಹೇಳಲು ಬಯಸದ ಗುತ್ತಿಗೆದಾರರೊಬ್ಬರು ತಮ್ಮ ಪಾಡು ವಿವರಿಸುತ್ತಾರೆ.

ರೂಪಾಂತರ:ಶೇ 40ರಷ್ಟು ಲಂಚದ ಜತೆಗೆ ಹೊಸ ತಲೆಮಾರಿನ ರಾಜಕಾರಣಿಗಳು ಕಮಿಷನ್‌ ಪದ್ಧತಿಯಲ್ಲಿಯೇ ಕೆಲವು ಬದಲಾವಣೆಗಳನ್ನೂ ತಂದಿರುವುದು ಹೊಸ ವಿದ್ಯಮಾನ.

ಸಚಿವರು, ಶಾಸಕರು ತಮ್ಮ ಹತ್ತಿರದ ಸಂಬಂಧಿಗಳ ಹೆಸರಿಗೆ ಟೆಂಡರ್‌ ಕೊಡಿಸಿ, ಗುತ್ತಿಗೆ ನಿರ್ವಹಿಸುವುದು ಹೊಸದೇನಲ್ಲ. ₹842 ಕೋಟಿ ವೆಚ್ಚದ ಕೈಗಾರಿಕಾ ಉದ್ದೇಶದ ಯೋಜನೆಯೊಂದರ ಕಾಮಗಾರಿಯನ್ನು ಸಚಿವರೊಬ್ಬರು ಬೇನಾಮಿ ಹೆಸರಿನಲ್ಲಿ ನಡೆಸುತ್ತಿದ್ದಾರೆ ಎನ್ನುವುದು ಈಗ ದೊಡ್ಡ ಚರ್ಚೆಯ ವಿಷಯವೂ ಹೌದು. ಜನಪ್ರತಿನಿಧಿಗಳಿಗಿಂತ ತಾವೇನು ಕಮ್ಮಿ ಎಂಬ ಜಿದ್ದಿಗೆ ಬಿದ್ದ ಅಧಿಕಾರಿಗಳು ಸೋದರರು, ಸಂಬಂಧಿಗಳ ಹೆಸರಿನಲ್ಲಿ ಗುತ್ತಿಗೆ ಹಿಡಿಯುವುದು ಉಂಟು.

‘ಪಾಲುದಾರಿಕೆಯ ಹೊಸ ಪದ್ಧತಿ ಚಾಲ್ತಿಗೆ ಬಂದಿದೆ. ₹100 ಕೋಟಿ ಮೊತ್ತದ ಹೊಸ ಯೋಜನೆ, ಯಂತ್ರೋಪಕರಣಗಳ ಅಳವಡಿಕೆ ಅಥವಾ ಕಾಮಗಾರಿಯ ಟೆಂಡರ್‌ನಲ್ಲಿ ಬಿಡ್‌ ಸಲ್ಲಿಸುವ ಗುತ್ತಿಗೆದಾರರನ್ನು ಕರೆಯಿಸುವ ಸಚಿವರೊಬ್ಬರು ₹40 ಕೋಟಿ ಬಂಡವಾಳ ಹೂಡುವೆ, ಶೇ10ರಷ್ಟು ಅಂದರೆ ₹10 ಕೋಟಿ ನೀವು ಕಮೀಷನ್ ರೂಪದಲ್ಲಿ ನನ್ನ ಹೆಸರಿನಲ್ಲಿ ಹೂಡಿಕೆ ಮಾಡಿ. ಇಬ್ಬರಿಗೂ ಅರ್ಧದಷ್ಟು ಪಾಲು ಎಂಬ ಹೊಸ ಬಗೆಯ ಲಂಚದ ಪದ್ಧತಿಗೆ ಚಾಲನೆಯನ್ನೂ ಕೊಟ್ಟಿದ್ದಾರೆ’ ಎನ್ನುತ್ತಾರೆ ಗುತ್ತಿಗೆದಾರರು.

‘ಮೊದಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶೇ 5ರಿಂದ 8ರಷ್ಟು ಲಂಚ ಕೊಟ್ಟು ಪೂರೈಕೆ ಮಾಡುತ್ತಿದ್ದೆವು. ಈಗ ಸಚಿವರೇ ‘ಶೇ 30ರಷ್ಟು ನನಗೆ ಕೊಟ್ಟುಬಿಡಿ; ಜಿಲ್ಲಾ ಮಟ್ಟದ ಅಧಿಕಾರಿಗಳ ಉಸಾಬರಿಗೆ ಹೋಗಬೇಡಿ ಎಂದು ಹೇಳುತ್ತಿದ್ದಾರೆ’ ಎಂದು ಯಂತ್ರೋಪಕರಣಗಳ ತಯಾರಕರೊಬ್ಬರು ತಮ್ಮ ಅಳಲು ತೋಡಿಕೊಂಡರು.

‘ಹಿರಿಯ ಸಚಿವರೊಬ್ಬರು ಟೆಂಡರ್‌ ಅನುಮೋದನೆಗೂ ಮೊದಲು ಶೇ 15ರಷ್ಟು ಲಂಚ ನೀಡುವುದನ್ನು ಕಡ್ಡಾಯಗೊಳಿಸಿದ್ದಾರೆ. ಇನ್ನೊಬ್ಬ ಸಚಿವರು ಶೇ 10ರಷ್ಟು ನಿಗದಿಪಡಿಸಿದ್ದು, ತಾವೇ ನೇರವಾಗಿ ಗುತ್ತಿಗೆದಾರರಿಗೆ ಕರೆಮಾಡುತ್ತಾರೆ. ಗುತ್ತಿಗೆದಾರರಿಂದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಲಂಚ ಪಡೆಯುವುದು ಹೊಸದಲ್ಲ. ಆದರೆ, 2019ರಿಂದ ಲಂಚದ ಪ್ರಮಾಣ ದುಪ್ಪಟ್ಟಾಗಿದೆ’ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು.

‘ಕಪ್ಪುಹಣ’ದ ಮೂಲ ಪೆಟ್ರೋಲ್ ಬಂಕ್‌:

ಶೇ 40ರಷ್ಟು ಲಂಚ ನೀಡಲು ‘ಕಪ್ಪುಹಣ’ ಬಳಕೆಯಾಗುತ್ತದೆ. ₹100 ಕೋಟಿ ಕಾಮಗಾರಿ ಗುತ್ತಿಗೆ ಹಿಡಿಯಬೇಕಾದರೆ ₹40 ಕೋಟಿ ಲಂಚವಾಗಿ ನೀಡಬೇಕು. ಇಷ್ಟು ಬೃಹತ್ ಮೊತ್ತವನ್ನು ಬ್ಯಾಂಕ್‌ನಿಂದ ಪಡೆಯಲು ಆಗದು.

ಖಾತೆಯಲ್ಲಿರುವ ಮೊತ್ತ ಕಪ್ಪುಹಣವಾಗುವುದು ಹೀಗೆ; ನಗದು ವಹಿವಾಟು ಹೆಚ್ಚಾಗಿ ನಡೆಯುವ ಪೆಟ್ರೋಲ್ ಬಂಕ್ ಕಪ್ಪುಹಣದ ‘ಎಟಿಎಂ’ ಇದ್ದಂತೆ. ಗುತ್ತಿಗೆ ಹಿಡಿಯುವ ಬೇರೆ ಬೇರೆ ಹಂತದಲ್ಲಿ ಲಂಚ ನೀಡುವುದರಿಂದ ಒಟ್ಟಿಗೆ ಅಷ್ಟು ದೊಡ್ಡ ಮೊತ್ತ ಬೇಕಾಗದು. ಲಂಚ ಕೊಡಬೇಕಾದ ಪೂರ್ವದಲ್ಲಿ ₹10 ಲಕ್ಷ ಅಥವಾ ₹50 ಲಕ್ಷದ ಮೊತ್ತದ ಡೀಸೆಲ್ ಖರೀದಿಸಿದಂತೆ ಬಿಲ್ ಸೃಷ್ಟಿಸಿ, ಅದಕ್ಕೆ ಚೆಕ್ ಮೂಲಕ ಹಣ ಕೊಡುತ್ತಾರೆ. ಬಂಕ್ ಮಾಲೀಕರು ಜಿಎಸ್‌ಟಿ ಮೊತ್ತವನ್ನು ಕಟಾವು ಮಾಡಿಕೊಂಡು, ಉಳಿದ ಮೊತ್ತವನ್ನು ನಗದು ರೂಪದಲ್ಲಿ ಗುತ್ತಿಗೆದಾರನಿಗೆ ಯಾವಾಗ ಎಷ್ಟು ಬೇಕೋ ಅಷ್ಟು ಮೊತ್ತವನ್ನು ವಾಪಸ್ ಮಾಡುತ್ತಾರೆ.

ಇದೇ ಮಾದರಿಯೊಳಗೆ ಸಿಮೆಂಟ್, ಕಬ್ಬಿಣ ಮಾರಾಟಗಾರರ ಬಳಿಯೂ ವಸ್ತು ಖರೀದಿಸಿದಂತೆ ಕೃತಕ ಬಿಲ್ ಪಡೆದು, ಚೆಕ್‌ ಕೊಟ್ಟು ನಗದು ವಾಪಸ್ ಪಡೆಯುವ ವ್ಯವಸ್ಥೆಯೂ ಇದೆ.

ಮೂರು ಪತ್ರ ಮೂರು ಸಾಕ್ಷ್ಯ:

ರಾಜ್ಯದಲ್ಲಿ ಸಿವಿಲ್‌, ಎಲೆಕ್ಟ್ರಿಕ್‌ ಸೇರಿದಂತೆ ವಿವಿಧ ಬಗೆಯ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರು ಸದಸ್ಯರಾಗಿರುವ 52 ಅಸೋಸಿಯೇಷನ್‌ಗಳು ರಾಜ್ಯ ಗುತ್ತಿಗೆದಾರರ ಸಂಘದ ಸದಸ್ಯತ್ವ ಪಡೆದಿವೆ. ಈ ಸಂಘವು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ ಜುಲೈ 7ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಕಾಮಗಾರಿಯ ಶೇ 40ರಷ್ಟು ಮೊತ್ತ ಲಂಚಕ್ಕೆ ಹೋಗುತ್ತಿದೆ ಎಂದು ದೂರು ನೀಡಿತ್ತು. ನವೆಂಬರ್‌ 18ರಂದು ರಾಜ್ಯಪಾಲರನ್ನು ಭೇಟಿಯಾಗಿ ಮತ್ತೊಂದು ಅಹವಾಲನ್ನೂ ಸಲ್ಲಿಸಿತು. ಭ್ರಷ್ಟಾಚಾರ ಇಷ್ಟು ವ್ಯಾಪಕವಾಗಿ ಹರಡಿಕೊಂಡಿರುವ ಬಗ್ಗೆ ಗುತ್ತಿಗೆದಾರರೇ ಬಹಿರಂಗವಾಗಿ ಬೀದಿಗೆ ಬಂದಿದ್ದು ಇದು ಮೊದಲು.

2020ರ ನವೆಂಬರ್ 24ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಮಂಡ್ಯ ಜಿಲ್ಲೆ ಮದ್ದೂರಿನ ಆರ್.ಬಿ. ಬಸವೇಗೌಡ ಎಂಬುವರು ‘ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿಜಯೇಂದ್ರ ಹಾಗೂ ನಿಮ್ಮ ಕುಟುಂಬದ ಆಪ್ತ ಉಮೇಶ ಹೆಸರನ್ನು ದುರುಪಯೋಗ ಪಡಿಸಿಕೊಂಡು ಶೇ 8ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ಬಿಲ್ಲುಗಳನ್ನು ಪಾವತಿ ಮಾಡುತ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಿ’ ಎಂದು ಆಗ್ರಹಿಸಿದ್ದರು. ಈ ಪತ್ರವನ್ನು(ಎಫ್‌ಡಿ/433/ಎಫ್‌ಸಿ1/2020–ಪಿಎಬ್ಲ್ಯೂಎಫ್‌ಎಸ್‌ಸಿ–ಫೈನಾನ್ಸ್‌ ಸೆಕ್ರೆಟರಿ) ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿಯು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿದ್ದರು.

‘ಹಿಂದಿನ ಸರ್ಕಾರಕ್ಕಿಂತ ಬಿಜೆಪಿ ಸರ್ಕಾರದಲ್ಲಿ ಮೂರು ಪಟ್ಟು ಲಂಚ ಹೆಚ್ಚಳವಾಗಿರುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇವೆ. ಲಂಚದ ಕುರಿತು ಮಾರ್ಚ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಾಗಿದೆ. ಭ್ರಷ್ಟ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿಗೆ ನೀಡುತ್ತೇವೆ’ ಎಂದು ನವೆಂಬರ್ 30ರಂದು ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಹೇಳಿದ್ದರು. ಭ್ರಷ್ಟಾಚಾರ ಹೇಗೆ ನಡೆಯುತ್ತಿದೆ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದರು.

ಕನ್ಸಲ್ಟೆನ್ಸಿಯೇ ಅಕ್ರಮಗಳ ಹೆಬ್ಬಾಗಿಲು:

ಟೆಂಡರ್ ಅಕ್ರಮದ ದಾರಿ ತೆರೆದುಕೊಳ್ಳುವುದೇ ಸಮಾಲೋಚಕ ಸಂಸ್ಥೆಯ (ಕನ್ಸಲ್ಟೆನ್ಸಿ)ಮೂಲಕ. ಇಲಾಖೆಯ ಲೆಕ್ಕ ಶೀರ್ಷಿಕೆಯಡಿ ಸರ್ಕಾರ ಅನುದಾನವನ್ನು ಮಂಜೂರು ಮಾಡುತ್ತದೆ. ಒಟ್ಟು ಮೊತ್ತದಲ್ಲಿ ಯಾವ ಕಾಮಗಾರಿಗೆ ಎಷ್ಟು ಮೊತ್ತ ಹಂಚಿಕೆ ಮಾಡಬೇಕು ಎಂಬಲ್ಲಿಂದ ಶುರುವಾಗುತ್ತದೆ ಭ್ರಷ್ಟಾಚಾರ.

ಲೆಕ್ಕ ಶೀರ್ಷಿಕೆಯಡಿ ಇದ್ದ ಅನುದಾನದ ಪೈಕಿ ನಿರ್ದಿಷ್ಟ ಕಾಮಗಾರಿಗೆ ₹50 ಕೋಟಿಯೋ, ₹100 ಕೋಟಿಯೋ ಮೀಸಲಾಗಿಡಬೇಕೆಂದರೆ ಸಚಿವರಿಗೆ ಅಥವಾ ಅವರ ಆಪ್ತರಿಗೆ ಶೇ 10ರಷ್ಟು ಆರಂಭದಲ್ಲೇ ನೀಡಬೇಕು. ಅದಾದ ಬಳಿಕವೇ, ಇಲಾಖೆ ಹಂತದಲ್ಲಿ ಒಂದು ನಿರ್ದಿಷ್ಟ ಮೊತ್ತದ ಕಾಮಗಾರಿಯ ಸಮಗ್ರ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಸರ್ಕಾರದ ಕಾನೂನು ಪ್ರಕಾರ ₹1 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗೆ ಮೂರನೇ ಸಂಸ್ಥೆ(ಥರ್ಡ್ ಪಾರ್ಟಿ) ಡಿಪಿಆರ್ ಸಿದ್ಧಪಡಿಸುವ ಜತೆಗೆ ಕಾಮಗಾರಿ ಮೇಲುಸ್ತುವಾರಿಯನ್ನೂ ಮಾಡಬೇಕು. ಇದಕ್ಕಾಗಿ ಕಾಮಗಾರಿ ಒಟ್ಟು ಮೊತ್ತದಲ್ಲಿ ಶೇ 1ರಷ್ಟನ್ನು ಸರ್ಕಾರವೇ ಶುಲ್ಕ ರೂಪದಲ್ಲಿ ಪಾವತಿಸುತ್ತದೆ. ಅಂದರೆ ₹100 ಕೋಟಿ ಕಾಮಗಾರಿಯಾದರೆ ₹1 ಕೋಟಿ ಕೊಡಬೇಕು. ಈ ₹ 1 ಕೋಟಿಯಲ್ಲಿ ಶೇ 8ರಷ್ಟು ಅಂದರೆ, ₹8 ಲಕ್ಷವನ್ನು ಸಂಬಂಧಪಟ್ಟ ಅಧಿಕಾರಿಗೆ ಲಂಚವಾಗಿ ಸಮಾಲೋಚಕ ಸಂಸ್ಥೆ ನೀಡಬೇಕು.

ಡಿಪಿಆರ್ ಸಿದ್ಧಪಡಿಸಿದ ಬಳಿಕ ಆಯಾ ಇಲಾಖೆಗಳು ಆಸಕ್ತ ಗುತ್ತಿಗೆದಾರರಿಂದ ಬಿಡ್‌ಗಳನ್ನು ಆಹ್ವಾನಿಸುತ್ತವೆ. ಇ–ಪ್ರೊಕ್ಯೂರ್‌ಮೆಂಟ್ ಅಡಿ ಎಲ್ಲವೂ ನಡೆಯುವುದರಿಂದ ಪಾರದರ್ಶಕವಾಗಿ ಎಲ್ಲವೂ ನಡೆಯುತ್ತದೆ ಎಂದು ಬಿಂಬಿಸಲಾಗುತ್ತದೆ.

‘ಒಳ ವ್ಯವಹಾರ ಬೇರೆಯೇ ಇದೆ; ಟೆಂಡರ್ ಕೂಗುವ ಮೊದಲೇ ಇಲಾಖೆ ಮುಖ್ಯ ಎಂಜಿನಿಯರ್ ಅಥವಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಅಥವಾ ಸಚಿವರು ಅಥವಾ ಸರ್ಕಾರವನ್ನು ನಿಯಂತ್ರಣದಲ್ಲಿರುವ ಕುಟುಂಬಸ್ಥರು ಆಸಕ್ತ ಗುತ್ತಿಗೆದಾರರ ಜತೆ ನಿಯಮಬಾಹಿರವಾಗಿ ಸಮಾಲೋಚನೆ ನಡೆಸುತ್ತಾರೆ. ಎಲ್ಲರನ್ನೂ ಒಟ್ಟಿಗೆ ಕೂರಿಸಿ, ಯಾರಿಗೆ ಹೆಚ್ಚು ಆಸಕ್ತಿ ಇದೆ? ಕಮಿಷನ್ ಕೊಡಲು ಯಾರು ಆಸಕ್ತರಾಗಿದ್ದಾರೆ ಎಂಬುದನ್ನು ತಿಳಿದು ಹೊಂದಾಣಿಕೆಗೆ ಬರಲಾಗುತ್ತದೆ. ಅಲ್ಲಿದ್ದವರ ಪೈಕಿಯೇ ಒಬ್ಬರಿಗೆ ಟೆಂಡರ್‌ನಲ್ಲಿ ಅತಿ ಕಡಿಮೆ ಮೊತ್ತ(ಎಲ್‌–1) ನಮೂದಿಸಿ ಬಿಡ್ ಮಾಡಿ ಎಂದೂ, ಉಳಿದವರಿಗೆ ನೀವು ಜಾಸ್ತಿ ಮೊತ್ತ ನಮೂದಿಸಿ ಎಂದು ಸೂಚನೆ ನೀಡಲಾಗುತ್ತದೆ. ಈ ಟೆಂಡರ್‌ನಲ್ಲಿ ಎಲ್‌– 2 ಅಥವಾ ಎಲ್ –3 ಇದ್ದವರಿಗೆ ಮನವೊಲಿಸಿ, ಮತ್ತೊಂದು ಟೆಂಡರ್‌ನಲ್ಲಿ ಎಲ್‌–1 ಮಾಡಿಸಿ, ಟೆಂಡರ್ ಕೊಡಿಸಲಾಗುತ್ತದೆ. ಇ–ಪ್ರೊಕ್ಯೂರ್‌ಮೆಂಟ್‌ನಲ್ಲಿ ಟೆಂಡರ್ ದಾಖಲೆ ಅಪ್‌ಲೋಡ್ ಮಾಡುವ ಮೊದಲೇ ಈ ರೀತಿಯ ಹೊಂದಾಣಿಕೆ ನಡೆಯುತ್ತದೆ. 2019ರ ಈಚೆಗೆ ಪ್ರಭಾವಿಗಳ ಕುಟುಂಬದವರು, ಸಚಿವರೇ ಇಂತಹ ಮಾತುಕತೆ ನಡೆಸುವುದು ಚಾಲ್ತಿಗೆ ಬಂದಿದೆ’ ಎನ್ನುತ್ತಾರೆ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು.

‘ಇ–ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್‌ನಲ್ಲಿ ಬಿಡ್ ದಾಖಲೆ ಅಪ್ ಲೋಡ್ ಮಾಡುವ ಮೊದಲು ಯಾರಿಗೆ ಟೆಂಡರ್ ಎಂಬುದು ನಿಶ್ಚಯವಾಗಿರುತ್ತದೆ. ಒಂದು ವೇಳೆ ತೀವ್ರ ಪೈಪೋಟಿ ಇದ್ದರೆ, ತಾಂತ್ರಿಕ ಬಿಡ್‌ನಲ್ಲಿ ಅನರ್ಹಗೊಳಿಸಿ, ಆರ್ಥಿಕ ಬಿಡ್‌ಗೆ ಬಾರದಂತೆ ನೋಡಿಕೊಳ್ಳುವ ಕೈಚಳಕವೂ ನಡೆಯುತ್ತದೆ’ ಎಂದು ಅವರು ವಿವರಿಸುತ್ತಾರೆ.

ತಪ್ಪಾಗಿದ್ದರೆ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ

ಟೆಂಡರ್‌ಗಳಲ್ಲಿ ‘ಕಮಿಷನ್’ ಪಡೆಯಲಾಗುತ್ತಿದೆ ಎಂದು ಆಪಾದಿಸಿ ಗುತ್ತಿಗೆದಾರರ ಸಂಘವು ಪ್ರಧಾನಿಯವರಿಗೆ ಬರೆದಿರುವ ಪತ್ರ ಆಧಾರ ರಹಿತ. ರಾಜಕೀಯ ವ್ಯಕ್ತಿಗಳಿಂದ ಪ್ರೇರೇಪಿತವಾಗಿರುವ ಪತ್ರ. ಹಾಗಿದ್ದರೂ ಎಲ್ಲ ಟೆಂಡರ್‌ಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ಸಣ್ಣ ಲೋಪ ಕಂಡುಬಂದರೂ ಸಕ್ಷಮ ತನಿಖಾ ಸಂಸ್ಥೆಗಳಿಂದ ಸಮಗ್ರ ತನಿಖೆ ನಡೆಸಲಾಗುವುದು.

ನನ್ನ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮೊದಲೇ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ಭ್ರಷ್ಟಾಚಾರದ ಬಗ್ಗೆ ಯಾವುದೇ ಇಲಾಖೆಯ ಮುಖ್ಯಸ್ಥರಿಗೂ ಗುತ್ತಿಗೆದಾರರು ಈ ಹಿಂದೆ ದೂರು ಕೊಟ್ಟಿಲ್ಲ. ಭ್ರಷ್ಟಾಚಾರ ನಿಗ್ರಹ ದಳ ಅಥವಾ ಲೋಕಾಯುಕ್ತರಿಗೆ ದೂರು ದಾಖಲಿಸುವ ಅವಕಾಶ ಗುತ್ತಿಗೆದಾರರಿಗೆ ಇತ್ತು. ಈ ವ್ಯವಸ್ಥೆಯನ್ನು ಬಳಸಿಕೊಳ್ಳದೇ ಪ್ರಧಾನಿಯವರಿಗೆ ಪತ್ರ ಬರೆದಿದೆ. ಇದರ ಹಿಂದೆ ಸದುದ್ದೇಶವಿಲ್ಲ. ಆದರೂ 2013 ರಿಂದ ನನ್ನ ಸರ್ಕಾರದವರೆಗಿನ ಅವಧಿಯಲ್ಲಿ ಬರುವ ಎಲ್ಲ ಟೆಂಡರ್‌ಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗುವುದು. ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದಕ್ಕಾಗಿ ₹50 ಕೋಟಿಗಿಂತಲೂ ಹೆಚ್ಚು ಮೊತ್ತದ ಟೆಂಡರ್‌ಗಳನ್ನು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಪರಿಶೀಲಿಸಿ ಅನುಮೋದನೆ ನೀಡಲಿದೆ. ಯೋಜನೆಗಳ ಅಂದಾಜು ಪತ್ರ ಮತ್ತು ಟೆಂಡರ್‌ ನಿಯಮಾವಳಿಗಳು ಕೆಟಿಪಿಪಿ ಕಾಯ್ದೆಗೆ ಅನುಗುಣವಾಗಿ ಇರುವ ಬಗ್ಗೆ ಸಮಿತಿ ಪರಿಶೀಲಿಸಲಿದೆ. ಇದು ರಾಜ್ಯದಲ್ಲೇ ಐತಿಹಾಸಿಕ ಮತ್ತು ದಿಟ್ಟ ಹೆಜ್ಜೆ.

– ಬಸವರಾಜ ಬೊಮ್ಮಾಯಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT