ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಶುದ್ಧ ಕುಡಿಯುವ ನೀರು– ಏನಿದರ ‘ಧರ್ಮ’?

Last Updated 21 ನವೆಂಬರ್ 2020, 20:12 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ಲೀಟರ್‌ ನೀರಿನಲ್ಲಿ ಕರಗಿರುವ ಘನವಸ್ತುಗಳ ಪ್ರಮಾಣ 600 ಮಿಲಿಗ್ರಾಂನಷ್ಟು ಇದ್ದರೂ ಆ ನೀರನ್ನು ಕುಡಿಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ನೀರು ಅದಕ್ಕಿಂತಲೂ ಗಡಸು ಇದ್ದರೆ ಮಾತ್ರ ಅದು ಕುಡಿಯುವುದಕ್ಕೆ ಯೋಗ್ಯವಲ್ಲ. ಅಂತಹ ನೀರನ್ನು ಮಾತ್ರ ಹಿಮ್ಮುಖ ಅಭಿಸರಣೆ (ರಿವರ್ಸ್‌ ಆಸ್ಮೋಸಿಸ್‌) ತಂತ್ರಜ್ಞಾನ ಬಳಸಿ ಶುದ್ಧೀಕರಿಸುವ ಅಗತ್ಯವಿದೆ.

ಖನಿಜಾಂಶ ಕೊರತೆ ಅಪಾಯಕಾರಿ: ಆರ್‌ಒ ಉಪಕರಣಗಳು ಶುದ್ಧೀಕರಿಸಿದ ಪ್ರತಿ ಲೀಟರ್‌ ನೀರಿನಲ್ಲಿ ತಲಾ 150 ಮಿಲಿ ಗ್ರಾಂಗಳಷ್ಟಾದರೂ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಶ ಇರಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ನೀರಿನಲ್ಲಿ ಕರಗಿರುವ ಘನ ವಸ್ತುಗಳನ್ನು ಹೊರಗೆ ತೆಗೆಯುವಾಗ ಮನುಷ್ಯನ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂನಂತಹ ಖನಿಜಗಳೂ ನಷ್ಟವಾಗುತ್ತವೆ. ಇದರಿಂದ ಮಾನವ ದೇಹದಲ್ಲಿ ಈ ಖನಿಜಾಂಶಗಳ ಕೊರತೆ ಉಂಟಾಗುತ್ತದೆ ಎಂದು ತಜ್ಞರ ಸಮಿತಿಯು ಇತ್ತೀಚೆಗೆ ಹಸಿರು ನ್ಯಾಯ ಮಂಡಳಿಗೆ ನೀಡಿದ್ದ ವರದಿಯಲ್ಲಿ ಎಚ್ಚರಿಸಿದೆ.

ಈ ಎರಡೂ ಖನಿಜಾಂಶಗಳ ಕೊರತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಮೂಳೆ ಮತ್ತು ಹಲ್ಲುಗಳು ದುರ್ಬಲವಾಗುತ್ತವೆ. ಹೃದಯ ಬಡಿತದಲ್ಲಿ ಏರುಪೇರು, ಅಧಿಕ ರಕ್ತದೊತ್ತಡದ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಅವಶ್ಯಕತೆ ಇಲ್ಲದ ಕಡೆ ಆರ್‌ಒ ಘಟಕ ಸ್ಥಾಪಿಸಬಾರದು. ನೀರಿನಲ್ಲಿರುವ ಇತರೇ ಮಲಿನ ಪದಾರ್ಥಗಳನ್ನು ತೆಗೆದುಹಾಕಲು ಬೇರೆ ಶುದ್ಧೀಕರಣ ಉಪಕರಣಗಳ ಬಳಕೆಯನ್ನು ಉತ್ತೇಜಿಸ ಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ವಿಪರೀತ ನೀರು ವ್ಯರ್ಥ: ಭಾರತದಲ್ಲಿ ಮಾರಾಟವಾಗುತ್ತಿರುವ ಆರ್‌ಒ ಉಪಕ ರಣಗಳು ಬಳಸುವ ನೀರಿನಲ್ಲಿ ಶೇ 65-80ರಷ್ಟು ನೀರು ವ್ಯರ್ಥವಾಗುತ್ತದೆ. ಈ ವ್ಯರ್ಥ ನೀರಿನಲ್ಲಿ ಖನಿಜಾಂಶಗಳು ವಿಪರೀತ ಪ್ರಮಾಣದಲ್ಲಿ ಇರುತ್ತವೆ. ಈ ನೀರನ್ನು ಗಿಡಗಳಿಗೆ ಹಾಯಿಸಿದರೆ, ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ನೆಲಕ್ಕೆ ಬಿಟ್ಟರೆ, ಅದು ಅಂತರ್ಜಲವನ್ನು ಸೇರುತ್ತದೆ. ಇದರಿಂದ ಅಂತರ್ಜಲ ಕಲುಷಿತವಾಗುತ್ತದೆ. ಹೀಗಾಗಿ ಈ ನೀರಿನ ವಿಲೇವಾರಿಗೆ ಮುನ್ನ ಮರು ಸಂಸ್ಕರಣೆಗೆ ಒಳಪಡಿಸುವ ಹೊರಬಿಡುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಶುದ್ಧ ಕುಡಿಯುವ ನೀರಿನ ಮಾನದಂಡಗಳು

ಮಾನದಂಡ; ಸ್ವೀಕಾರಾರ್ಹ ಮಿತಿ; ಅನುಮತಿ ಇರುವ ಗರಿಷ್ಠ ಮಿತಿ

ಬಣ್ಣ; 5 ಎಚ್‌ಯು; 15 ಎಚ್‌ಯು

ವಾಸನೆ; ಒಪ್ಪತಕ್ಕಷ್ಟು; ಒಪ್ಪತಕ್ಕಷ್ಟು

ಪಿ.ಎಚ್‌ ಮೌಲ್ಯ; 6.5–8.5; ಯಾವುದೇ ವಿನಾಯಿತಿ ಇಲ್ಲ

ಕೆಸರಿನಂಶ, ಎನ್‌ಟಿಯು; 1; 5

ಒಟ್ಟು ಕ್ಷಾರೀಯತೆ ಕ್ಯಾಲ್ಸಿಯಂ ಕಾರ್ಬೋನೆಟ್‌ ರೂಪದಲ್ಲಿ ಮಿಲಿಗ್ರಾಂ/ ಲೀ; 200; 600

ಒಟ್ಟು ಕರಗಿದ ಘನವಸ್ತು ಮಿಲಿಗ್ರಾಂ/ ಲೀ; 500; 2000

ಒಟ್ಟು ಗಡಸುತನ ಕ್ಯಾಲ್ಸಿಯಂ ಕಾರ್ಬೋನೆಟ್‌ ರೂಪದಲ್ಲಿ ಮಿಲಿಗ್ರಾಂ/ ಲೀ; 200; 600

ಕ್ಯಾಲ್ಸಿಯಂ ಮಿಲಿ ಗ್ರಾಂ/ ಲೀ; 75; 200

ಮೆಗ್ನೀಷಿಯಂ ಮಿಲಿಗ್ರಾಂ/ ಲೀ; 30; 100

ಕ್ಲೋರೈಡ್‌ ಮಿಲಿಗ್ರಾಂ/ ಲೀ; 250; 1000

ಫ್ಲೋರೈಡ್‌ ಮಿಲಿಗ್ರಾಂ/ ಲೀ; 1; 1.5

ಸಲ್ಫೇಟ್‌ ಮಿಲಿಗ್ರಾಂ/ ಲೀ; 200; 400

ನೈಟ್ರೇಟ್‌ ಮಿಲಿಗ್ರಾಂ/ ಲೀ; 45; ವಿನಾಯಿತಿ ಇಲ್ಲ

ಕಬ್ಬಿಣ ಮಿಲಿಗ್ರಾಂ/ ಲೀ; 1; ವಿನಾಯಿತಿ ಇಲ್ಲ

ಆರ್ಸೆನಿಕ್‌ಮಿಲಿಗ್ರಾಂ/ ಲೀ; 0.01; ವಿನಾಯಿತಿ ಇಲ್ಲ

ಕೋಲಿಫಾರ್ಮ್‌/ 100 ಮಿ.ಲೀ; ಇರಬಾರದು; ಇರಬಾರದು

ಇ–ಕೊಲೈ; ಇರಬಾರದು; ಇರಬಾರದು

ನೀರಿನ ಗುಣಮಟ್ಟ– ಸ್ಥಳೀಯ ಸಂಸ್ಥೆಗಳದ್ದೇ ಜವಾಬ್ದಾರಿ’

‘ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಪೂರೈಸುವ ನೀರು ಗುಣಮಟ್ಟದಿಂದ ಕೂಡಿದೆಯೇ. ನೀರು ಶುದ್ಧೀಕರಿಸಿದ ಬಳಿಕವೂ ಅವುಗಳಲ್ಲಿ ಅಗತ್ಯವಾಗಿ ಇರಬೇಕಾದಷ್ಟು ಪ್ರಮಾಣದಲ್ಲಿ ಖನಿಜಾಂಶಗಳು ಇವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಆಯಾ ಸ್ಥಳೀಯ ಸಂಸ್ಥೆಯ ಜವಾಬ್ದಾರಿ. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಗಳೇ ರೂಪಿಸಿಕೊಳ್ಳಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶೀ ಎಲ್‌.ಕೆ.ಅತೀಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT