ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ‘ಎಲ್ಲೂ ಸಲ್ಲದ’ ಶೋಚನೀಯ ಸ್ಥಿತಿ

Last Updated 20 ಫೆಬ್ರುವರಿ 2021, 19:26 IST
ಅಕ್ಷರ ಗಾತ್ರ

ಬೆಳಗಾವಿ/ಬಾಗಲಕೋಟೆ:ಸಾಮಾಜಿಕ ಭದ್ರತೆ ಇಲ್ಲ. ನಮ್ಮವರು ತಮ್ಮವರೆನ್ನುವವರು ಇಲ್ಲದೆ ತೊಳಲಾಟ. ಹಲವು ಸಮಸ್ಯೆಗಳಿಂದ ಬಳಲುತ್ತಿರುವ ವಲಸೆ ಕಾರ್ಮಿಕರು ‘ಎಲ್ಲೂ ಸಲ್ಲದ’ ಅತಂತ್ರ ಸ್ಥಿತಿಯಲ್ಲಿದ್ದಾರೆ.

‘ಸ್ಥಳೀಯರಲ್ಲದವರು’ ಎನ್ನುವ ಮೂದಲಿಕೆಯ ಅವಮಾನ ಅನುಭವಿಸಬೇಕು. ಸ್ಥಳೀಯರು ಅವರನ್ನು ತಮ್ಮವರೆಂದು ಕಾಣುವುದೇ ಇಲ್ಲ. ಕಾರ್ಮಿಕ ಸಂಘಟನೆಗಳಿಂದಲೂ ಅವರಿಗೆ ಹೆಚ್ಚಿನ ಅನುಕೂಲಗಳು ಸಿಗುವುದು ಅಪರೂಪ. ಅವರಿಗೆ ಅಸ್ತಿತ್ವವಾಗಲಿ, ಪ್ರಾತಿನಿಧ್ಯವಾಗಲಿ ಇಲ್ಲ ಅದರಲ್ಲೂ ಹೊರ ರಾಜ್ಯಗಳ ಈ ಶ್ರಮಿಕರನ್ನು ಸ್ಥಳೀಯರು ‘ಸಂಶಯದ’ ಕಣ್ಣಿನಿಂದ ನೋಡುವುದು ತಪ್ಪಿಲ್ಲ.

‘ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ 11 ಇಲಾಖೆಗಳು ವಲಸೆ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎನ್ನುವುದು ನಿಯಮ. ಆದರೆ, ಅದು ಕಾಗದದಲ್ಲೇ ಉಳಿದಿದೆ. ವಲಸೆ ಕಾರ್ಮಿಕರ ಸುರಕ್ಷತೆಗೆ ಕ್ರಮವಿಲ್ಲ. ಕೆಲಸದ ಸ್ಥಳದಲ್ಲೇ ಮಿತ ಸವಲತ್ತಿನ ನಡುವೆಯೇ ನಿಕೃಷ್ಟ ಬದುಕು ಅವರದ್ದು. ಕಟ್ಟಡ ನಿರ್ಮಾಣ ಕ್ಷೇತ್ರದವರು ಸೇರಿದಂತೆ ಆ ಕಾರ್ಮಿಕರಿಗೆ ಕೆಲವು ಯೋಜನೆಗಳು ಇವೆಯಾದರೂ ಅವು ತಲುಪುವುದೇ ಇಲ್ಲ. ಆ ಅರಿವು ಕೂಡ ಆ ಶ್ರಮಿಕರಿಗೆ ಇರುವುದಿಲ್ಲ. ಆರೋಗ್ಯ ವಿಮೆಯ ಸೌಲಭ್ಯ ಎಲ್ಲರಿಗೂ ಸಿಗುವುದಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ವಿಷಾದದಿಂದ ಪ್ರತಿಕ್ರಿಯಿಸಿದರು.

‘ವಲಸೆ ಕಾರ್ಮಿಕರಿಗೆ ಕೆಲಸದ ಭದ್ರತೆ–ಸುರಕ್ಷತೆ ಒದಗಿಸುವಲ್ಲಿ ಸರ್ಕಾರದ ಪ್ರಯತ್ನ ಶೂನ್ಯ. ಕನಿಷ್ಠ ವೇತನವೂ ಸಿಗುವುದಿಲ್ಲ. ಇವುಗಳ ಪರಿಹಾರಕ್ಕೆ ಸ್ಪಂದಿಸಬೇಕಿದ್ದ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅನುದಾನವನ್ನೇ ಇಟ್ಟಿಲ್ಲ. ಕಾರ್ಮಿಕ ಸಂಘಟನೆಗಳ ಹೋರಾಟಕ್ಕೂ ಸರ್ಕಾರ ಮನ್ನಣೆ ನೀಡಿಲ್ಲ. ಇದರಿಂದ ವಲಸೆ ಕಾರ್ಮಿಕರ ಸಂಕಷ್ಟಗಳು ಜಾಸ್ತಿಯಾಗುವ ಸಾಧ್ಯತೆಯೇ ಹೆಚ್ಚಿದೆ’ ಎನ್ನುತ್ತಾರೆ ಬೆಳಗಾವಿಯ ವಕೀಲಎನ್.ಆರ್. ಲಾತೂರ.

‘ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ (ಐಸಿಡಿಎಸ್) ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಕಡಿತಗೊಳಿಸಲಾಗಿದೆ. ಪರಿಣಾಮ, ಪೌಷ್ಟಿಕ ಆಹಾರವಿಲ್ಲದೆ ನರಳುವ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ’ ಎಂಬುದು ಬೆಳಗಾವಿಯ ಕಾರ್ಮಿಕ ಮುಖಂಡಜಿ.ಎಂ. ಜೈನೆಖಾನ್ ಅವರ ಆತಂಕ.

ಕೆಲವರು ರೋಗ ವಾಹಕರು...
‘ದುಡಿಯಲು ಹೋಗುವ ಸ್ಥಳದಲ್ಲಿ ಸೊಳ್ಳೆ ಜನ್ಯ ಸಾಂಕ್ರಾಮಿಕಗಳಾದ ಆನೆಕಾಲು ರೋಗ (ಕಾಲು ಬಾವು), ವೃಷಣ ಬಾವು, ಮಲೇರಿಯಾ ರೋಗ ಪೀಡಿತರಾಗಿ ವಾಪಸ್ ಊರಿಗೆ ಮರಳುವವರು ಸೋಂಕು ವಾಹಕರಾಗಿಯೂ ಬದಲಾಗುತ್ತಾರೆ. ಇದು ಸರ್ವೇ ಸಾಮಾನ್ಯ ಎಂಬಂತಾಗಿದೆ’ ಎನ್ನುತ್ತಾರೆ ಬಾಗಲಕೋಟೆಜಿಲ್ಲಾ ಮಲೇರಿಯಾ ನಿಯಂತ್ರಣಅಧಿಕಾರಿ ಡಾ.ಜಯಶ್ರೀ ಎಮ್ಮಿ.

‘ದುಡಿಯಲು ಹೋದವರು ಜ್ವರ ಪೀಡಿತರಾಗುತ್ತಿದ್ದಂತೆಯೇ ಇರುವ ಜಾಗದಲ್ಲಿ ಚಿಕಿತ್ಸೆ ಪಡೆಯದೇ ಶುಶ್ರೂಷೆಗೆಂದು ಊರಿಗೆ ಮರಳುತ್ತಾರೆ. ಹೀಗೆ ಬಂದವರಿಗೆ ಕಚ್ಚಿದ ಸೊಳ್ಳೆ ಬೇರೆಯವರಿಗೂ ಕಚ್ಚುವುದರಿಂದ ಸ್ಥಳೀಯವಾಗಿ ಕಾಯಿಲೆ ಸಾಂಕ್ರಾಮಿಕವಾಗಿ ಬದಲಾಗುತ್ತದೆ. ದುಡಿಯಲು ಹೋಗುವವರಲ್ಲಿ ಹೆಣ್ಣು ಮಕ್ಕಳು ವೈಯಕ್ತಿಕ ಆರೋಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಹೀಗಾಗಿ ಬಹುತೇಕರು ರಕ್ತಹೀನತೆಯಿಂದ (ಅನಿಮಿಯಾ) ಬಳಲುತ್ತಾರೆ’ ಎಂದೂ ಅವರು ಹೇಳುತ್ತಾರೆ.

‘ಊರಲ್ಲಿ ಹೆಂಡತಿ–ಮಕ್ಕಳನ್ನು ಬಿಟ್ಟು ವರ್ಷಗಟ್ಟಲೇ ದುಡಿಯಲು ಗೋವಾ–ಮಂಗಳೂರು, ಬೆಂಗಳೂರು, ಮಹಾರಾಷ್ಟ್ರಕ್ಕೆ ಗುಳೆ ಹೋಗುವಗಂಡಸರ ಪೈಕಿ ಕೆಲವರು ತಮ್ಮ ಲೈಂಗಿಕ ಹಸಿವು ನೀಗಿಸಿಕೊಳ್ಳಲು ಅಲ್ಲಿ ವೇಶ್ಯೆಯರ ಸಂಪರ್ಕ ಬೆಳೆಸುತ್ತಾರೆ. ಈ ವೇಳೆ ಎಚ್‌ಐವಿ ಸೇರಿದಂತೆ ಬೇರೆ ಬೇರೆ ಸೋಂಕು ಹಚ್ಚಿಕೊಂಡು ಬಂದು ಊರಿನಲ್ಲಿ ಹೆಂಡತಿಗೂ ವರ್ಗಾಯಿಸುತ್ತಾರೆ. ಹೀಗಾಗಿ ಏಡ್ಸ್‌ನಂತಹ ಮಾರಕ ಕಾಯಿಲೆಗಳಿಗೆ ಬಹಳಷ್ಟು ಗ್ರಾಮೀಣ ಕುಟುಂಬಗಳು ಬಲಿಯಾಗಿವೆ’ ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನಲ್ಲಿ ರೀಚ್ ಸ್ವಯಂಸೇವಾ ಸಂಸ್ಥೆಯ ಸಮುದಾಯ ಸಂಘಟಕಿ ರೇಖಾ ಬಡಿಗೇರ ಹೇಳುತ್ತಾರೆ.

‘ವಲಸೆ ಕುಟುಂಬಗಳ ಮಕ್ಕಳ ಶೋಷಣೆಯೂ ಹೆಚ್ಚು. ರಕ್ತ ಸಂಬಂಧಗಳಲ್ಲಿಯೇ ವೈವಾಹಿಕ ನಂಟು ಬೆಳೆಸುವುದರಿಂದ ಮಕ್ಕಳು ಅಂಗವೈಕಲ್ಯ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳಿಂದ ಬಳಲುತ್ತವೆ’ ಎನ್ನುತ್ತಾರೆ ಬಾಗಲಕೋಟೆಯ ಮಕ್ಕಳ ಸಹಾಯವಾಣಿಯ ಶೈಲಜಾ ಕುಮಾರ್.

ಲೈಂಗಿಕ ರೋಗಗಳಿಗೆ ಹಾದಿ
‘ಊರಲ್ಲಿ ಹೆಂಡತಿ–ಮಕ್ಕಳನ್ನು ಬಿಟ್ಟು ವರ್ಷಗಟ್ಟಲೇ ದುಡಿಯಲು ಗೋವಾ–ಮಂಗಳೂರು, ಬೆಂಗಳೂರು, ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಗೆ ಗುಳೇ ಹೋಗುವ ಗಂಡಸರ ಪೈಕಿ ಕೆಲವರು ತಮ್ಮ ಲೈಂಗಿಕ ಹಸಿವು ನೀಗಿಸಿಕೊಳ್ಳಲು ಅಲ್ಲಿ ಬೇರೆ ಮಹಿಳೆಯರು ಇಲ್ಲವೇ ವೇಶ್ಯೆಯರ ಸಂಪರ್ಕ ಬೆಳೆಸುತ್ತಾರೆ. ಈ ವೇಳೆ ಎಚ್‌ಐವಿ ಸೇರಿದಂತೆ ಬೇರೆ ಬೇರೆ ಸೋಂಕುಗಳ ಹಚ್ಚಿಕೊಂಡು ಬಂದು ಊರಿನಲ್ಲಿ ಹೆಂಡತಿಗೂ ವರ್ಗಾಯಿಸುತ್ತಾರೆ. ಹೀಗಾಗಿ ಏಡ್ಸ್‌ನಂತಹ ಮಾರಕ ಕಾಯಿಲೆಗಳಿಗೆ ಬಹಳಷ್ಟು ಗ್ರಾಮೀಣ ಕುಟುಂಬಗಳು ಬಲಿಯಾಗಿವೆ’ ಎಂದು ಬಾದಾಮಿ ತಾಲ್ಲೂಕಿನಲ್ಲಿ ರೀಚ್ ಸ್ವಯಂಸೇವಾ ಸಂಸ್ಥೆಯ ಸಮುದಾಯ ಸಂಘಟಕಿ ರೇಖಾ ಬಡಿಗೇರ ಹೇಳುತ್ತಾರೆ.

ವೈಯಕ್ತಿಕ ಆರೋಗ್ಯ ನಿರ್ಲಕ್ಷ್ಯ
ದುಡಿಯಲು ಹೋಗುವ ಸ್ಥಳದಲ್ಲಿ ಸೊಳ್ಳೆ ಜನ್ಯ ಸಾಂಕ್ರಾಮಿಕಗಳಾದ ಆನೆಕಾಲು ರೋಗ (ಕಾಲು ಬಾವು), ವೃಷಣ ಬಾವು, ಮಲೇರಿಯಾ ರೋಗ ಪೀಡಿತರಾಗಿ ವಾಪಸ್ ಊರಿಗೆ ಮರಳುವವರು ಸೋಂಕು ವಾಹಕರಾಗಿಯೂ ಬದಲಾಗುತ್ತಾರೆ. ಇದು ಸರ್ವೇ ಸಾಮಾನ್ಯ ಎಂಬಂತಾಗಿದೆ. ದುಡಿಯಲು ಹೋಗುವವರಲ್ಲಿ ಹೆಣ್ಣು ಮಕ್ಕಳು ವೈಯಕ್ತಿಕ ಆರೋಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಹೀಗಾಗಿ ಬಹುತೇಕರು ರಕ್ತಹೀನತೆಯಿಂದ (ಅನಿಮಿಯಾ) ಬಳಲುತ್ತಾರೆ.
-ಡಾ.ಜಯಶ್ರೀ ಎಮ್ಮಿ,ಬಾಗಲಕೋಟೆ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ

**

ಸೋದರ ಮಾವ, ಸೋದರಳಿಯ ಹೀಗೆ ರಕ್ತ ಸಂಬಂಧಗಳಲ್ಲಿಯೇ ವೈವಾಹಿಕ ನಂಟು ಬೆಳೆಸುವುದರಿಂದ ಮಕ್ಕಳು ಅಂಗವೈಕಲ್ಯ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳಿಂದ ಬಳಲುತ್ತವೆ.
-ಶೈಲಜಾ ಕುಮಾರ್‌, ಮಕ್ಕಳ ಸಹಾಯವಾಣಿ, ಬಾಗಲಕೋಟೆ

**

ವಲಸೆ ಕಾರ್ಮಿಕರಲ್ಲಿ ಮಕ್ಕಳಿಗೆ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಉಪಾಹಾರ ಒದಗಿಸುವ ಹಾಗೂ ಆರೋಗ್ಯ ತಪಾಸಣೆಗೆ ಒಳಪಡಿಸುವ ಕಾರ್ಯಕ್ರಮವಿದೆ. ಅದು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು.


-ಶಶಿಕಲಾ ಜೊಲ್ಲೆ, ಸಚಿವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT